ಹುಬ್ಬಳ್ಳಿ: ಬದುಕಿನಲ್ಲಿ ಪಶ್ಚಾತ್ತಾಪ ಪಡುವ ದಿನಗಳು ಬರದಿರಬೇಕಾದರೆ ಸ್ವಾಮಿ ವಿವೇಕಾನಂದರ ತತ್ವಗಳ ಪಾಲನೆ ಅವಶ್ಯ. ಯುವಜನತೆ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಬೇಕೆಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ರಘುವೀರಾನಂದ ಸ್ವಾಮಿಜಿ ಹೇಳಿದರು.
ನಗರದ ಕಾಡಸಿದ್ಧೇಶ್ವರ ಕಲಾ ಹಾಗೂ ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ 154ನೇ ಜಯಂತಿ ಹಾಗೂ ಯುವ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮೌಲ್ಯಗಳು ಬದುಕಿನಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡಲು ಪೂರಕವಾಗುತ್ತವೆ.
ಮೌಲ್ಯಗಳಿಲ್ಲದ ಜೀವನ ಪಶುಗಳಿಗೆ ಸಮಾನ. ವಿವೇಕಾನಂದರ ಚಿಂತನೆ, ಬೋಧನೆಗಳು ವ್ಯಕ್ತಿಯ ಜೀವನದಲ್ಲಿ ಸ್ಫೂರ್ತಿ, ಉತ್ಸಾಹ ತುಂಬುತ್ತವೆ ಎಂದರು. ವಿವೇಕಾನಂದರು ಇಡೀ ಜಗತ್ತಿಗೆ 1500 ವರ್ಷಗಳಷ್ಟು ಕಾಲ ಸಾಕಾಗುವಂತಹ ಚಿಂತನೆಗಳನ್ನು ಬಿಟ್ಟು ಹೋಗಿದ್ದಾರೆ. ಇದರಿಂದ ಭಾರತ ವೈಚಾರಿಕವಾಗಿ ಶ್ರೀಮಂತವೆಂಬುದು ತಿಳಿಯುತ್ತದೆ.
ಸ್ವಾಮಿ ವಿವೇಕಾನಂದರ ತತ್ವಗಳು ಈಗಲೂ ಪ್ರಸ್ತುತ ಎಂದು ಹೇಳಿದರು. ಪ್ರಾಚಾರ್ಯ ಡಾ| ಬಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿ, ಸ್ವಾಮಿ ವಿವೇಕಾನಂದರ ಸಂದೇಶಗಳಾದ ತ್ಯಾಗ, ದೇಶಪ್ರೇಮ, ಸೇವೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಕಾಲೇಜ್ ವತಿಯಿಂದ ಸ್ವಾಮೀಜಿಗಳನ್ನು ಸನ್ಮಾನ ಮಾಡಲಾಯಿತು. ಈ ಮೊದಲು ಕಾಲೇಜಿನ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಪ್ರದರ್ಶನವನ್ನು ಅವರು ಉದ್ಘಾಟಿಸಿದರು.
ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಯುವ ಸಪ್ತಾಹದ ಅಂಗವಾಗಿ ಒಂದು ವಾರ ನಡೆದ ವಿವೇಕಾನಂದರ ಕುರಿತು ಪ್ರಬಂಧ ಸ್ಪರ್ಧೆಗಳ ವಿಜೇತರಿಗೆ ಸ್ವಾಮೀಜಿ ಬಹುಮಾನ ವಿತರಿಸಿದರು. ಕಾಲೇಜ್ ಒಕ್ಕೂಟದ ಅಧ್ಯಕ್ಷ ಡಾ| ಆರ್.ಎಫ್. ಇಂಚಲ, ಎನ್‌ಎಸ್ ಎಸ್ ಅಧಿಕಾರಿ ಪೊ| ವೈ.ಎನ್. ನಾಗೇಶ, ಗ್ರಂಥಪಾಲಕ ಬಿ.ಎಸ್. ಮಾಳವಾಡ, ಡಾ| ಆರ್.ವೈ. ಹರಕುಣಿ ಇದ್ದರು.