ಚಿಕ್ಕಮಗಳೂರು: ತಮ್ಮ ಕೆಲವು ಸಾಧನೆಗಳನ್ನು ತಿಳಿಸಲು ಸಮಯಾವಕಾಶ ನೀಡುವಂತೆ ಇಲ್ಲಿನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರಕ್ಕೆ ಪ್ರಧಾನಿ ಕಾರ್ಯಾಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ.
ಪ್ರಧಾನಿ ಕಾರ್ಯಾಲಯದಿಂದ ಚೈತ್ರಶ್ರೀ ಅವರಿಗೆ ದೂರವಾಣಿ ಕರೆ ಬಂದಿದ್ದು ,ಪ್ರಧಾನಿ ಭೇಟಿಗೆ ದಿನಾಂಕ ಹಾಗೂ ಸಮಯವನ್ನು ಶೀಘ್ರದಲ್ಲೇ ನಿಗದಿಪಡಿಸಲಾಗುವುದೆಂದು ತಿಳಿಸಲಾಗಿದೆ ಎಂದು ಚೈತ್ರಶ್ರೀ ಹೇಳಿದ್ದಾರೆ.
ಪರಿಶಿಷ್ಟ ಜಾತಿಯ ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ರಾಜ್ಯದ್ಲಲೇ ಮೊದಲ ಬಾರಿಗೆ ಜಿಪಂ ಅಧ್ಯಕ್ಷರಾಗಿರುವುದು ಹಾಗೂ ಅಧ್ಯಕ್ಷರಾದ ನಂತರ ಕೈಗೊಂಡ ಕೆಲಸಗಳ ಬಗ್ಗೆ ಪ್ರಧಾನಿಗಳಿಗೆ ಬರೆದ ಪತ್ರದಲ್ಲಿ ವಿವರಿಸಲಾಗಿತ್ತು. ಇಡೀ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತವಾಗಲು ಜಿಪಂನಿಂದ ಕೈಗೊಂಡ ಕಾರ್ಯಗಳು, ಸಾಂಕ್ರಾಮಿಕ ರೋಗ ತಡೆಗಟ್ಟಲು ಜಾಥಾ, ಜನಸಂಪರ್ಕ ಸಭೆ ಮತ್ತು ಗ್ರಾಮ ವಾಸ್ತವ್ಯ, ಸಂಸೆ ಗ್ರಾಪಂ ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶದ ಜೋಗಿ ಕುಂಬ್ರಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಆಯೋಜಿಸಿರುವ ಬಗ್ಗೆ ಪತ್ರದಲ್ಲಿ ವಿವರಿಸಲಾಗಿತ್ತು. ಈ ಕೆಲಸಗಳ ಬಗ್ಗೆ ಪ್ರಧಾನಿಯವರಿಗೆ ತಿಳಿಸಲು ಅವರ ಭೇಟಿಗೆ ಮನವಿ ಮಾಡಿ ಪತ್ರ ಬರೆಯಲಾಗಿತ್ತು.
ಈ ಮನವಿಗೆ ಪ್ರಧಾನಿ ಕಾರ್ಯಾಲಯದವರು ಸ್ಪಂದಿಸಿದ್ದು, ಭೇಟಿಗೆ ದಿನ ಹಾಗೂ ಸಮಯ ನಿಗದಿಗೊಳಿಸಿ ತಿಳಿಸಲಾಗುವುದು ಎಂದು ದೂರವಾಣಿ ಮೂಲಕ ಹೇಳಿದ್ದಾರೆಂದು ಚೈತ್ರಶ್ರೀ ತಿಳಿಸಿದ್ದಾರೆ.