ಹೊಸದಿಲ್ಲಿ: ಏರಿಕೆಯಾಗಿರುವ ಅಡುಗೆ ಎಣ್ಣೆಯ ಬೆಲೆ ಮುಂದಿನ ಒಂದು ವಾರದಲ್ಲಿ ಪ್ರತಿ ಲೀಟರ್ಗೆ 10 ರೂ.ಗಳಿಂದ 15 ರೂ. ವರೆಗೆ ಇಳಿಕೆಯಾಗಲಿದೆ. ಬೆಲೆ ಇಳಿಸಲು ಕ್ರಮ ಕೈಗೊಳ್ಳುವಂತೆ ಕಂಪೆನಿಗಳಿಗೆ ಕೇಂದ್ರ ಸರಕಾರ ಬುಧವಾರ ಸೂಚನೆ ನೀಡಿದೆ.
ಇದರ ಜತೆಗೆ ದೇಶಾದ್ಯಂತ ಒಂದೇ ರೀತಿಯ ಮಾರುಕಟ್ಟೆ ದರ ಇರುವಂತೆಯೂ ಮಾಡಬೇಕು ಎಂದು ಸೂಚಿಸಿದ್ದು, ಈ ಬಗ್ಗೆ ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಆದೇಶ ನೀಡಿದ್ದಾರೆ. ಜತೆಗೆ ಅಡುಗೆ ಎಣ್ಣೆ ಉತ್ಪಾದಕರ ಜತೆಗೆ ಶೀಘ್ರವೇ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.
ಕೇಂದ್ರ ಸರಕಾರದ ಈ ನಿರ್ಧಾರದಿಂದ ಅಡುಗೆ ಎಣ್ಣೆಯ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ದೇಶವಾಸಿಗಳಿಗೆ ನೆಮ್ಮದಿಯ ಸುದ್ದಿ ಸಿಕ್ಕಿದಂತಾಗಿದೆ. ಶೇ.60 ಪ್ರಮಾಣದ ಅಡುಗೆ ಎಣ್ಣೆ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಕಾರಣ ಸ್ವಲ್ಪ ಸಮಯದಿಂದ ಬೆಲೆ ಏರಿತ್ತು.