Advertisement
ಹಲವಾರು ಶತಮಾನಗಳ ಪರಕೀಯರ ಆಳ್ವಿಕೆ ಮತ್ತು ಶೋಷಣೆಯ ವಿರುದ್ಧ ನಿರಂತರ ಹೋರಾಟ ನಡೆಸಿ ಸ್ವಾತಂತ್ರ್ಯ ಪಡೆಯಲಾಗಿತ್ತು. ಭಾರತದಲ್ಲಿ ಪ್ರಜಾಪ್ರಭುತ್ವ ಪದ್ಧತಿಯ ಸರಕಾರದ ಸ್ಥಾಪನೆಯೇ ಹೋರಾಟದ ಪರಮ ಗುರಿಯಾಗಿತ್ತು. ಸಂವಿಧಾನ ರಚನಾ ನೇತಾರರು ನಮ್ಮ ದೇಶಕ್ಕೆ ಸಂಸದೀಯ ಪದ್ಧತಿಯ ಪ್ರಜಾಪ್ರಭುತ್ವ ಸರಕಾರವನ್ನು ದಯಪಾಲಿಸಿದರು.
ಅಮೆರಿಕದಲ್ಲಿ ಸಂವಿಧಾನವು ಕಾರ್ಯಾಂಗದ ಎಲ್ಲಾ ಅಧಿಕಾರವನ್ನು ಅಧ್ಯಕ್ಷನಿಗೆ ನೀಡಿದೆ. ಭಾರತದಲ್ಲಿ ಈ ಅಧಿಕಾರ ಕೇಂದ್ರ ಸಚಿವ ಸಂಪುಟಕ್ಕಿದೆ. ಭಾರತದ ರಾಷ್ಟ್ರಪತಿ ಹೆಸರಿಗೆ ಮಾತ್ರ ಪರಮಾಧಿಕಾರ ಹೊಂದಿದ್ದಾರೆ. ಎಲ್ಲಾ ಕಾರ್ಯ ಪ್ರಧಾನಿಯ ನೇತೃತ್ವದಲ್ಲಿಯೇ ನಡೆಯುವುದು.
Related Articles
Advertisement
ಸಂಸದೀಯ ಪದ್ಧತಿಯ ಸರಕಾರದಲ್ಲಿ ಮಂತ್ರಿಮಂಡಲವನ್ನು ಶಾಸಕಾಂಗ ಸುಲಭವಾಗಿ ರದ್ದುಗೊಳಿಸಲು ಅವಕಾಶವಿದೆ. ಹಲವಾರು ಸಂದರ್ಭಗಳಲ್ಲಿ ಮಂತ್ರಿಮಂಡಲವು ಕೆಳಮನೆಯ ವಿಶ್ವಾಸ ಕಳೆದುಕೊಂಡರೆ ಸ್ಥಿರ ಸರಕಾರ ಸಿಗದು. ಅಧ್ಯಕ್ಷೀಯ ಪದ್ಧತಿಯಲ್ಲಿ ಅವಧಿ ಪೂರ್ಣಗೊಳಿಸಲು ಶಾಸಕಾಂಗದ ಬೆಂಬಲ ಬೇಕಿಲ್ಲ. ಸಂಸದೀಯ ಸರಕಾರದಲ್ಲಿ ಪ್ರಧಾನಮಂತ್ರಿಯು ತನ್ನ ಪಕ್ಷದ ಶಾಸಕಾಂಗದವರನ್ನೇ ಸಚಿವರಾಗಿ ನೇಮಿಸಿಕೊಳ್ಳುತ್ತಾರೆ. ಅಧ್ಯಕ್ಷೀಯ ಪದ್ಧತಿಯಲ್ಲಿ ಕಾರ್ಯದರ್ಶಿಗಳು ಶಾಸಕಾಂಗದ ಸದಸ್ಯರಾಗಿರಬೇಕಾಗಿಲ್ಲ. ಇಲಾಖೆಯ ನಿರ್ವಹಣೆಗೆ ಬೇಕಾದ ಜ್ಞಾನ, ಪರಿಣತಿ ಹಾಗೂ ಸಾಮರ್ಥ್ಯ ಅವರಿಗಿದ್ದರೆ ಸಾಕು. ಇಂತಹ ಅರ್ಹ ವ್ಯಕ್ತಿಯನ್ನೇ ಕಾರ್ಯದರ್ಶಿಯಾಗಿ ನೇಮಿಸಲು ಅವಕಾಶವಿದೆ. ಇಂತಹ ಕಾರ್ಯದರ್ಶಿಗಳು ಶಾಸಕಾಂಗಕ್ಕೆ ಜವಾಬ್ದಾರರಲ್ಲ. ಇವರು ಅಧ್ಯಕ್ಷನ ಇಚ್ಛೆಗೆ ತಕ್ಕಂತೆ ಮುಂದುವರಿಯಬಹುದು.
ಅಧ್ಯಕ್ಷ ನೇರವಾಗಿ ಮತದಾರರಿಂದ ಅಯ್ಕೆಯಾಗುವುದರಿಂದ ರಾಷ್ಟ್ರದ ಎಲ್ಲಾ ಜನತೆಗೆ ಪ್ರತಿನಿಧಿ, ಹೊರತು ಯಾವುದೇ ಒಂದು ಮತ ಕ್ಷೇತ್ರಕ್ಕಲ್ಲ. ಅವನ ಆಡಳಿತದ ಬಗ್ಗೆ ಪ್ರತಿ ಮತದಾರನಿಗೆ ಪ್ರಶ್ನಿಸುವ ಹಕ್ಕಿದೆ. ಆತ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿದ್ದಲ್ಲಿ, ಜನತೆ ಆತನ ಸರಕಾರದ ಸಾಧನೆ, ಆಡಳಿತ ಕ್ರಮ ಮತ್ತು ಜನತೆಯೊಂದಿಗೆ ಸ್ಪಂದಿಸುವ ರೀತಿ ಇತ್ಯಾದಿಗಳನ್ನು ತೂಗಿನೋಡಿ ಮತ ನೀಡುವರು. ಈ ಎಲ್ಲ ಗುಣಲಕ್ಷಣಗಳನ್ನು ಅವಲೋಕಿಸಿದಾಗ ಅಧ್ಯಕ್ಷೀಯ ಸರಕಾರ ನಿರ್ದಿಷ್ಟ ಅವಧಿಯವರೆಗೆ ನೇರವಾಗಿ ಅಧಿಕಾರದಲ್ಲಿದ್ದು, ಸ್ಥಿರ ಆಡಳಿತ ನೀಡಲು ಸಮರ್ಥವಾಗಿದೆ ಎನ್ನುವುದು ಸ್ಪಷ್ಟ. ಅಧ್ಯಕ್ಷನಿಗಿರುವ ನಿರ್ದಿಷ್ಟ ಅಧಿಕಾರಾವಧಿ ಮತ್ತು ಶಾಸಕಾಂಗದ ನಿಯಂತ್ರಣದಿಂದ ತಕ್ಕಮಟ್ಟಿನ ಸ್ವಾತಂತ್ರ್ಯ ಹಾಗೂ ಆತನು ಸಂಸದೀಯ ಸರಕಾರದ ಪ್ರಧಾನ ಮಂತ್ರಿಗಿಂತ ಹೆಚ್ಚು ಬಲಿಷ್ಠವಾಗಿ, ಹೆಚ್ಚು ದಕ್ಷತೆಯಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ. ಸಂಸದೀಯ ಸರಕಾರದ ಪದ್ಧತಿಯಲ್ಲಿ ಮಂತ್ರಿಮಂಡಲಕ್ಕೆ ಕೆಳಮನೆಯಲ್ಲಿ ಸ್ಪಷ್ಟ ಬಹುಮತವಿಲ್ಲದಾಗ ಅಥವಾ ಪಕ್ಷಾಂತರ ಇಲ್ಲವೆ, ಬೇರಾವುದೇ ಕಾರಣದ ಮೂಲಕ ಬಹುಮತ ನಷ್ಟವಾದಾಗ ಉಂಟಾಗುವ ಅಸ್ಥಿರತೆ ಹಾಗೂ ಮೇಲಿಂದ ಮೇಲೆ ಚುನಾವಣೆಗಳನ್ನು ಎದುರಿಸುವುದು ಇತ್ಯಾದಿ ಸಮಸ್ಯೆಗಳು ಅಧ್ಯಕ್ಷೀಯ ಪದ್ಧತಿಯ ಸರಕಾರದಲ್ಲಿ ಕಾಣದು. ಅಧ್ಯಕ್ಷೀಯ ಸರಕಾರ ಮತ್ತು ಆ ಸರಕಾರಕ್ಕೆ ಬೇಕಾದ ಸಾಮಾಜಿಕ, ರಾಜಕೀಯ, ವಾತಾವರಣ ಹಾಗೂ ಜನತೆಯ ಮಾನಸಿಕ ಸ್ಥಿತಿಯು ಈ ಪದ್ಧತಿಯ ಸರಕಾರವು ಯಶಸ್ವಿಯಾಗಿ ಅಮೆರಿಕವು ಜಗತ್ತಿನಲ್ಲಿ ಅತ್ಯಂತ ಬಲಾಡ್ಯ ಹಾಗೂ ಶ್ರೀಮಂತ ರಾಷ್ಟ್ರವಾಗಲು ಸಾಧ್ಯವಾಗಿದೆ. ಹಲವಾರು ರಾಜ್ಯಗಳಲ್ಲಿ ಪ್ರಾದೇಶಿಕ ಭಾವನೆ ಬಲವಾಗಿ ಬೆಳೆಯುತ್ತಿದೆ. ಪ್ರಾದೇಶಿಕ ಪಕ್ಷಗಳು ತಮ್ಮ ಇತಿಮಿತಿಯನ್ನು ಅರಿಯದೆ ಎಲ್ಲಾ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಿ ಮತಗಳನ್ನು ವಿಭಜಿಸಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದ ಪರಿಸ್ಥಿತಿ ನಿರ್ಮಾಣ ಮಾಡುತ್ತಿವೆ. ಹೀಗಾಗಿ ಸರಕಾರ ರಚಿಸುವಲ್ಲಿ ಪ್ರಾದೇಶಿಕ ಪಕ್ಷಗಳ ಮಹತ್ವ ಹೆಚ್ಚು. ಅಂತಹ ಸರಕಾರ ದುರ್ಬಲವಾಗಿರುವುದರಿಂದ ಉತ್ತಮ ಆಡಳಿತ ನೀಡಲು ಸಾಧ್ಯವಾಗುವುದಿಲ್ಲ. ಪಕ್ಷಾಂತರವು ಭಾರತದ ಪ್ರಜಾಪ್ರಭುತ್ವಕ್ಕಂಟಿದ ದೊಡ್ಡ ಪಿಡಗು. ಶಾಸಕ/ಸಂಸದರು ತಮ್ಮ ಸ್ವಾರ್ಥ ತೀರಿಸಿಕೊಳ್ಳಲು ಅವಕಾಶ ಮಾಡಿಕೊಡುವ, ಆಮಿಷ ಒಡ್ಡುವ ರಾಜಕೀಯ ಪಕ್ಷಗಳಿಗೆ ಪಕ್ಷಾಂತರವಾಗಿ ನಿಷ್ಠೆಯನ್ನು ಕಳೆದುಕೊಳ್ಳುತ್ತಾರೆ. ಇದರಿಂದಾಗಿ ಅಧಿಕಾರಕ್ಕೆ ಬಂದ ಪಕ್ಷಗಳು ಪದೇಪದೇ ಬಹುಮತ ಕಳೆದುಕೊಂಡು ಅಧಿಕಾರವನ್ನು ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ದೇಶದಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಮತ ಹಂಚಿ ಹೋಗಿ ಆಯ್ಕೆಯಾದ ವ್ಯಕ್ತಿಗಿಂತ ಅವನ ವಿರುದ್ಧ ಸೋತ ಎಲ್ಲರ ಮತ ಹೆಚ್ಚು. ಮತದಾರರ ಆಶಯಕ್ಕೆ ವಿರುದ್ಧವಾಗಿ ಅಭ್ಯರ್ಥಿಯ ಆಯ್ಕೆ ಪ್ರಜಾಪ್ರಭುತ್ವದ ಅಣಕವೇ ಸರಿ. ಅಧ್ಯಕ್ಷೀಯ ಸರಕಾರವನ್ನು ಒಪ್ಪಿದಲ್ಲಿ ಬಹುಪಕ್ಷ ಪದ್ಧತಿ ಹೋಗಿ, ದ್ವಿಪಕ್ಷ ಬರುತ್ತದೆ. ಸಂಸದೀಯ ಸರಕಾರದಲ್ಲಿ ರಾಷ್ಟ್ರಪತಿ, ಪ್ರಧಾನಿ ಮತ್ತು ಸಚಿವರ ಸಂಬಳ,ಭತ್ಯೆ, ವಸತಿ, ರಕ್ಷಣೆ ಮುಂತಾದ ಸೌಲಭ್ಯಗಳಿಗೆ ಕೊಟ್ಯಂತರ ರೂಪಾಯಿ ಖರ್ಚು. ಅಮೆರಿಕದ ಅಧ್ಯಕ್ಷೀಯ ಸರಕಾರದಲ್ಲಿ ಕೇವಲ 12 ಇಲಾಖೆಯ ಕಾರ್ಯದರ್ಶಿಗಳ ಮೂಲಕ ಅಧ್ಯಕ್ಷರು ಬೃಹತ್ ರಾಷ್ಟ್ರದ ಎಲ್ಲಾ ಆಡಳಿತ ವ್ಯವಹಾರವನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಒಬ್ಬ ಪ್ರಧಾನಿ ಹಾಗೂ ಸಾಮಾನ್ಯವಾಗಿ ಸಚಿವ ಸಂಪುಟದಲ್ಲಿ 60-70 ಮಂತ್ರಿಗಳಿರುತ್ತಾರೆ. ಇದರಿಂದ ಆಡಳಿತ ವೆಚ್ಚ ಬಹಳ ಹೆಚ್ಚಾಗುತ್ತದೆ. ಸಂಸದೀಯ ಪದ್ಧತಿ ಸರಕಾರದಲ್ಲಿ ಮಂತ್ರಿಯಾಗಬೇಕಾದರೆ, ಉಭಯ ಸದನದಲ್ಲಿ ಆಳುವ ಪಕ್ಷದ ಸದಸ್ಯರಾಗಿರಲೇಬೇಕು. ಅಧ್ಯಕ್ಷೀಯ ಸರಕಾರದಲ್ಲಿ ಆಡಳಿತ ನಡೆಸಲು ಪರಿಣತರಾಗುವ ಸಮರ್ಥ ಮತ್ತು ದಕ್ಷನಾಗಿರುವ ಯಾವುದೇ ಸದನದ ಸದಸ್ಯರಲ್ಲದ ಯಾವುದೇ ದೇಶದ ಪ್ರಜೆಯನ್ನು ನೇಮಿಸಿಕೊಳ್ಳುವ ಅಧಿಕಾರವಿದೆ. ಚುನಾವಣೆ ಪ್ರಜಾಪ್ರಭುತ್ವದ ಜೀವಾಳ. ಆದರೂ ಮೇಲಿಂದ ಮೇಲೆ ಚುನಾವಣೆಗಳು ನಡೆಯುವುದರಿಂದ ಸರಕಾರದ ಬೊಕ್ಕಸಕ್ಕೆ ಭಾರ. ಪಕ್ಷಕ್ಕೂ, ಅಭ್ಯರ್ಥಿಗಳಿಗೂ ಕೋಟಿಗಟ್ಟಲೆ ಹಣ ಖರ್ಚು. ದೇಶದ ಆರ್ಥಿಕ ಮುಗ್ಗಟ್ಟಿಗೆ ದಾರಿ. ನಿರ್ದಿಷ್ಟ ಅವಧಿಗೆ ಮಾತ್ರ ಚುನಾವಣೆಗಳು ನಡೆಯುವ ಅಧ್ಯಕ್ಷೀಯ ಪದ್ಧತಿಯ ಸರಕಾರವೇ ಇಂದು ಭಾರತಕ್ಕೆ ಸೂಕ್ತ. ಭಾರತ ಒಂದು ಒಕ್ಕೂಟ ರಾಷ್ಟ್ರವಾಗಿರುವುದರಿಂದ ರಾಜ್ಯಗಳ ಮೇಲೆ ಕೇಂದ್ರದ ನಿಯಂತ್ರಣವಿದೆ. ರಾಜ್ಯದ ಆಡಳಿತ ವಿಫಲವೆಂದು ಸಾಬೀತಾದರೆ ಸಂವಿಧಾನದ 365ನೇ ವಿಧಿಯಂತೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಅಧಿಕಾರ ಕೇಂದ್ರಕ್ಕಿದೆ. ಅಧ್ಯಕ್ಷೀಯ ಸರಕಾರದಲ್ಲಿ ಒಕ್ಕೂಟ ವ್ಯವಸ್ಥೆಯಿದ್ದರೂ ರಾಜ್ಯ ಸರಕಾರವನ್ನು ರದ್ದುಪಡಿಸುವ ಅಧಿಕಾರ ಇಲ್ಲ. ರಾಷ್ಟ್ರದ ಒಕ್ಕೂಟ ಸ್ವರೂಪವನ್ನು ಕಾಪಾಡಲು ಹಾಗೂ ರಾಜ್ಯಗಳ ಸ್ವಾತಂತ್ರ್ಯ ಮತ್ತು ಸ್ವಾಯತ್ತೆ ಕಾಪಾಡಲು ಅಧ್ಯಕ್ಷೀಯ ಸರಕಾರವೇ ಹೆಚ್ಚು ಉಪಯುಕ್ತ. ಸಂಸದೀಯ ಸರಕಾರದಲ್ಲಿ ಮಂತ್ರಿಮಂಡಲವು ಸದಾ ಶಾಸಕಾಂಗದ ಬೆಂಬಲವನ್ನು ಅವಲಂಬಿಸಿ ಪ್ರತಿಯೊಂದು ವಿಷಯವನ್ನು ರಾಜಕೀಯ ಲಾಭನಷ್ಟದ ಆಧಾರದ ಮೇಲೆ ಇತ್ಯರ್ಥಪಡಿಸುವ ಸಾಧ್ಯತೆಗಳೇ ಹೆಚ್ಚಾಗಿರುವುದರಿಂದ ಇಂತಹ ಸರಕಾರಗಳಿಂದ ರಾಷ್ಟ್ರದ ಹಿತರಕ್ಷಣೆ ಸಾಧ್ಯವಾಗುವುದಿಲ್ಲ. ಭಾರತಕ್ಕೆ ಪ್ರಸ್ತುತ ಅಧ್ಯಕ್ಷೀಯ ಸರಕಾರ ಅತ್ಯವಶ್ಯಕ. ಈ ನಿಟ್ಟಿನಲ್ಲಿ ಜನ ಸಾಮಾನ್ಯರು, ರಾಷ್ಟದ ಹಿತಚಿಂತಕರು, ಸುಧಾರಣಾವಾದಿಗಳು ಹಾಗೂ ರಾಜಕೀಯ ಧುರೀಣರು ಮುಕ್ತವಾಗಿ ಚರ್ಚಿಸುವ ಅಗತ್ಯವಿದೆ. ಡಾ. ರಾಮ ಶಿರೂರು