ರಾಷ್ಟ್ರಪತಿಗಳ ಒಪ್ಪಿಗೆ ಅಗತ್ಯವಾಗಿದ್ದು, ದೆಹಲಿಗೆ ತೆರಳಿ ಅವರಿಗೆ ಈ ಕಾಯ್ದೆಯ ಅಗತ್ಯತೆ ಬಗ್ಗೆ ಮನವರಿಕೆ ಮಾಡಿ ಒಪ್ಪಿಗೆ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
Advertisement
“ವಾಸಿಸುವವನೇ ಮನೆಯೊಡೆಯ’ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿ ವಿಳಂಬವಾಗುತ್ತಿರುವ ಬಗ್ಗೆ ಶುಕ್ರವಾರ ಬಿಎಸ್ ಆರ್ ಕಾಂಗ್ರೆಸ್‌ನ ಪಿ.ರಾಜೀವ್ ನಿಲುವಳಿ ಸೂಚನೆ ಪ್ರಸ್ತಾಪ ಮಂಡಿಸಲು ಮುಂದಾದರು. ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ, ಈ ಭರವಸೆ ನೀಡಿದರು.
ವಾಸಿಸುವವರ ಮನೆಗಳನ್ನು ಸಕ್ರಮ ಮಾಡುವ ತಿದ್ದುಪಡಿ ವಿಧೇಯಕಕ್ಕೆ ಎರಡು ಸದನದಲ್ಲಿ ಅಂಗೀಕಾರ ದೊರೆತಿದ್ದು, ಈ ಹಂತದಲ್ಲಿ ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸುವುದು ಎಷ್ಟು ಸೂಕ್ತ? ಎಂದು ಪ್ರಶ್ನಿಸಿದರು.
Related Articles
Advertisement
ತಾಂತ್ರಿಕ ತೊಂದರೆ ಅಷ್ಟೆ: ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಕಾಯ್ದೆಗೆ ನಾವೇ ತಿದ್ದುಪಡಿ ತಂದು ಅದನ್ನು ಜಾರಿಗೊಳಿಸದಂತೆ ನಾವೇ ಸಂಚು ರೂಪಿಸುವ ಹುನ್ನಾರ ಮಾಡುವ ಅಗತ್ಯವೇನಿದೆ? ಸಣ್ಣ ತಾಂತ್ರಿಕ ತೊಂದರೆ ಇದೆ ಅಷ್ಟೇ. ಅದಕ್ಕಾಗಿ ಅಡ್ವೋಕೇಟ್ ಜನರಲ್ ಸಲಹೆ ಕೇಳಲಾಗಿದೆ. ರಾಷ್ಟ್ರಪತಿ ಒಪ್ಪಿಗೆಯೂ ಅಗತ್ಯವಾಗಿಬೇಕು. ಹೀಗಾಗಿ ಕಾಯ್ದೆ ಜಾರಿ ಒಂದು ತಿಂಗಳ ವಿಳಂಬವಾಗುತ್ತದೆ ಎಂದು ಹೇಳಿದರು. ಆದರೆ, ಇದಕ್ಕೆ ಸಮಾಧಾನಗೊಳ್ಳದ ಪ್ರತಿಪಕ್ಷಗಳ ಸದಸ್ಯರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ತಾಂಡಾಗಳು, ಗೊಲ್ಲರಹಟ್ಟಿಗಳು ಮತ್ತು ಇತರ ಆದಿವಾಸಿಗಳಿಗೆ
ಅನುಕೂಲವಾಗುವಂತೆ ವಾಸಿಸುವವನೇ ಮನೆಯೊಡೆಯ ಕಾಯ್ದೆ ಜಾರಿಗೊಳಿಸುತ್ತಿದ್ದೇವೆ. ಇದು ನಮ್ಮ ಪ್ರಣಾಳಿಕೆಯಲ್ಲಿನ ವಿಷಯವೇ ಆಗಿದೆ. ಇದನ್ನು ಕಾಂಗ್ರೆಸ್ ಸರ್ಕಾರವೇ ಜಾರಿಗೆ ತಂದಿದ್ದು, ಅಡ್ವೋಕೇಟ್ ಜನರಲ್ ಅವರು ರಾಷ್ಟ್ರಪತಿ ಒಪ್ಪಿಗೆ ಪಡೆಯಬೇಕು ಎನ್ನುವ ಸಲಹೆ ನೀಡಿದ್ದಾರೆ. ಇದರಲ್ಲಿ ಯಾವುದೇ ಹುನ್ನಾರ ಇಲ್ಲ.
ನಾನು ದೆಹಲಿಗೆ ಹೋದಾಗ ರಾಷ್ಟ್ರಪತಿಯವರನ್ನು ಭೇಟಿಯಾಗಿ ತಿದ್ದುಪಡಿ ತಂದಿರುವುದರ ಅಗತ್ಯವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಒಪ್ಪಿಗೆ ಪಡೆದುಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು. 14 ವಿಶೇಷ ವರ್ಗದವರಿಗೆ 69 ಸಾವಿರ ಮನೆ
ವಿಧಾನಪರಿಷತ್ತು: ಅಲೆಮಾರಿ, ಅರೆ ಅಲೆಮಾರಿ, ಮಂಗಳಮುಖೀಯರು, ಲೈಂಗಿಕ ಕಾರ್ಯಕರ್ತೆಯರು, ವಿಧವೆಯರು,
ದೇವದಾಸಿಯರು ಸೇರಿ 14 ವಿಶೇಷ ವರ್ಗದ ಜನರಿಗೆ ದೇವರಾಜ ಅರಸು ವಸತಿ ಯೋಜನೆಯಡಿ 2017-18ನೇ ಸಾಲಿನಲ್ಲಿ 69 ಸಾವಿರ ಮನೆಗಳ ನಿರ್ಮಿಸಿಕೊಡುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ಎಂ.ಕೃಷ್ಣಪ್ಪ ತಿಳಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಶುಕ್ರವಾರ ಕಾಂಗ್ರೆಸ್‌ನ ಜಯಮ್ಮ ಬಾಲರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಲೆಮಾರಿ, ಅರೆ ಅಲೆಮಾರಿ, ಮಂಗಳಮುಖೀಯರು, ಲೈಂಗಿಕ ಕಾರ್ಯಕರ್ತೆಯರು, ವಿಧವೆಯರು, ದೇವದಾಸಿಯರು, ನಿರ್ಗತಿಕರು, ಕುಷ್ಠರೋಗದಿಂದ ಗುಣಮುಖರಾದವರು, ಎಚ್‌ಐವಿ ಸೋಂಕಿತರು, ಜೀತ ವಿಮುಕ್ತರು, ಸಫಾಯಿ ಕರ್ಮಚಾರಿಗಳು, ದೌರ್ಜನ್ಯಕ್ಕೊಳಗಾದವರು, ಕೋಮು ಗಲಭೆ ಹಾಗೂ ಚಳವಳಿಗಳಿಂದ ಹಾನಿಗೊಳಗಾದವರು,
ವಿಶೇಷ ವೃತ್ತಿಪರ ಗುಂಪುಗಳು ಸೇರಿ 14 ವಿಶೇಷ ವರ್ಗಗಳಲ್ಲಿ ಹಂತ-ಹಂತವಾಗಿ ವಸತಿ ಸೌಕರ್ಯ ಕಲ್ಪಿಸಲು ಕ್ರಮ
ಕೈಗೊಳ್ಳಲಾಗುವುದು ಎಂದರು. ಅದರಂತೆ, ವಸತಿ ಇಲಾಖೆಯಿಂದ ದೇವರಾಜ ಅರಸು ವಸತಿ ಯೋಜನೆಯಡಿ ಈ ವರ್ಗಗಳಿಗೆ 69 ಸಾವಿರ ಮನೆಗಳ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಇದಲ್ಲದೆ, ಹಿಂದುಳಿದ ವರ್ಗಗಳ ಇಲಾಖೆಯಿಂದ ಈ ವರ್ಷ ಅಲೆಮಾರಿ ಮತ್ತು ಅರೆ ಅಲೆಮಾರಿ ವರ್ಗದ ಜನರಿಗೆ 1,666 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ 20 ಕೋಟಿ
ರೂ. ಅನುದಾನ ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.