ಕೆ.ಆರ್.ಪುರ: ಆಸ್ಪತ್ರೆಗೆ ಬಂದ ಮಹಿಳೆಯರ ಅರೆನಗ್ನ ಚಿತ್ರ ತೆಗೆಯುತ್ತಿದ್ದ ಡಿ ಗ್ರೂಪ್ ನೌಕರ ಕಿರಣ್‌ನ ಕುಕೃತ್ಯದಿಂದ ಸುದ್ದಿಯಾಗಿರುವ ಕೆ.ಆರ್.ಪುರದ ಸಾರ್ವಜನಿಕ ಆಸ್ಪತ್ರೆಗೆ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದು, ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದರು.
ತ್ತೀಚೆಗೆ ಚಿಕಿತ್ಸೆಗೆ ಬಂದಿದ್ದ ಮಹಿಳೆಯೊಬ್ಬರ ಅರೆನಗ್ನ ಚಿತ್ರೆ ಗೆಯುವಾಗ ಸಿಕ್ಕಿಬಿದ್ದಿದ್ದ ಆರೋಪಿ ಕಿರಣ್‌ನನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ಆಸ್ಪತ್ರೆಯಲ್ಲಿನ ಸುರಕ್ಷತಾ ವ್ಯವಸ್ಥೆಗಳ ಪರಿಶೀಲನೆಗಾಗಿ ದಿಢೀರ್ ಭೇಟಿ ನೀಡಿದ ಅಧ್ಯಕ್ಷೆ, ಆಸ್ಪತ್ರೆಯಲ್ಲಿನ ಅನೈರ್ಮಲ್ಯ, ಸಿಬ್ಬಂದಿ ಕೊರತೆ, ಶೌಚಾಲಯಗಳ ದುರಸ್ಥಿ ಕಂಡು ಕೆಂಡವಾದರು. “ಕಾಯಿಲೆ ವಾಸಿ ಮಾಡಿಕೊಳ್ಳಲು ಆಸ್ಪತ್ರೆಗೆ ಬರುತ್ತಾರೆ.
ಆದರೆ ಈ ಆಸ್ಪತ್ರೆಗೆ ಬರುವ ರೋಗಿಗಳು ಮತ್ತಷ್ಟು ಕಾಯಿಲೆ ಹಚ್ಚುಕೊಂಡು ಹೋಗುತ್ತಾರೆ. ಆಸ್ಪತ್ರೆಯೇ ರೋಗಗ್ರಸ್ತವಾಗಿದೆ,’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. “ಎಲ್ಲೆಂದರಲ್ಲಿ ನೆಲ ತೇವವಾಗಿದೆ, ಅಲ್ಲಲ್ಲೇ ನೀರು ನಿಂತಿದೆ, ಆಸ್ಪತ್ರೆಯಿಡೀ ಸೊಳ್ಳೆಗಳೇ ತುಂಬಿವೆ. ರೋಗಿಗಳು, ಅವರೊಟ್ಟಿಗೆ ಬಂಧವರ ಅನುಕೂಲಕ್ಕೆ ಅಳವಡಿಸಿರುವ ನೀರಿನ ಫಿಲ್ಟರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ.
ಫಿಲ್ಟರ್‌ನ ನಲ್ಲಿಗಳು ಕೂಡ ಕೊಳಕಾಗಿವೆ. ಆಸ್ಪತ್ರೆ ಇರಿಸಿಕೊಳ್ಳುವ ರೀತಿ ಇದೇನಾ?’ ಎಂದು ಆಕ್ರೋಶ ವ್ಯಕ್ತಪಡಿಸಿದ ನಾಗಲಕ್ಷ್ಮಿ ಬಾಯಿ, “ಬಚ್ಚಿಟ್ಟುಕೊಂಡು ಮಹಿಳೆಯರ ಅರೆನಗ್ನ ಚಿತ್ರ ತೆಗೆದ ನೌಕರನನ್ನು ಅಮಾನತು ಮಾಡಿದರೆ ಸಾಲದು, ಕೆಲಸದಿಂದಲೇ ಕಿತ್ತೆಸೆಯಬೇಕು. ಈ ನಿಟ್ಟಿನಲ್ಲಿ ಆಯೋಗದಿಂದಲೂ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಲಾಗುವುದು.
ಆಸ್ಪತ್ರೆಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮೊದಲು ಅವರ ವ್ಯಕ್ತಿತ್ವ, ನಡವಳಿಕೆ ಬಗ್ಗೆ ಕೂಲಂಕಷವಾಗಿ ಮಾಹಿತಿ ಪಡೆಯಬೇಕು. ಇಲ್ಲದಿದ್ದರೆ ಇಂಥ ಅವಘಡಗಳು ಹೆಚ್ಚಾಗುತ್ತವೆ,’ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆ ಗಮನಿಸಿದ ನಾಗಲಕ್ಷ್ಮಿ ಬಾಯಿ ಅವರು, ಸಿಬ್ಬಂದಿ ನೇಮಿಸಲು ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡುವುದಾಗಿ ತಿಳಿಸಿದರು.
ಗೋಡೌನ್ ಆದ ಬಾಣಂತಿಯರ ಕೊಠಡಿ: ಹೆರಿಗೆ ನಂತರ ಬಾಣಂತಿಯರು ವಿಶ್ರಾಂತಿ ಪಡೆದುಕೊಳ್ಳಲು ಮೀಸಲಿರಿಸಿರುವ ಕೊಠಡಿಯಲ್ಲಿ ಔಷಧದ ಬಾಕ್ಸ್‌ಗಳನ್ನು ಜೋಡಿಸಿಟ್ಟು, ಅದನ್ನು ಗೋಡೌನ್ ರೀತಿ ಬಳಸುತ್ತಿದ್ದುದನ್ನು ಕಂಡ ಅಧ್ಯಕ್ಷರು, “ಇಲ್ಲಿರುವ ಬಾಕ್ಸ್‌ಗಳ ಮೇಲೆ ಧೂಳು ಕುಳಿತಿದೆ. ಬಾಣಂತಿಯರು ಮತ್ತು ನವಜಾತ ಶಿಶುಗಳನ್ನು ಇರಿಸುವ ವಾರ್ಡ್‌ನಲ್ಲೂ ಕನಿಷ್ಠ ಸ್ವತ್ಛತೆ ಕಾಯ್ದುಕೊಂಡಿಲ್ಲ,’ ಎಂದು ಕೋಪಗೊಂಡರು.
ಇದೇ ವೇಳೆ ಮಹಿಳಾ ಒಳರೋಗಿಗಳ ವಿಭಾಗ ಮತ್ತು ವಿಶೇಷ ವಾರ್ಡ್‌ಗಳಲ್ಲಿದ್ದ ಹಾಸಿಗೆ, ಹೊದಿಕೆಗಳು ಕೊಳಕಾಗಿದ್ದವು. ಕೆಲವೆಡೆ ಶೌಚಾಲಯಗಳಿಗೆ ಬೀಗ ಹಾಕಲಾಗಿತ್ತು. ಇದರೊಂದಿಗೆ ಮಹಿಳೆಯರು ಮತ್ತು ಪುರುಷರನ್ನು ಒಂದೇ ವಾರ್ಡ್‌ನಲ್ಲಿ ಇರಿಸಿದ್ದು ಕಂಡು ಅಧ್ಯಕ್ಷರ ಕೋಪ ನೆತ್ತಿಗೇರಿತು.