Advertisement

ವಿದ್ಯುತ್‌ ದರ ಏರಿಕೆಯ ಶಾಕ್‌

11:01 AM Apr 12, 2017 | Harsha Rao |

ಸೇವೆಯ ಗುಣಮಟ್ಟ ಬದಲಾಗಿಯೇ ಇಲ್ಲ

Advertisement

ರಾಜ್ಯದಲ್ಲಿ ಭೀಕರ ಬರವಿದ್ದು ಜನರು ನೀರಿಗಾಗಿ ಪರಿತಪಿಸುತ್ತಿರುವ ಕಾಲದಲ್ಲಿ ವಿದ್ಯುತ್‌ ದರ ಏರಿಕೆಯ ಶಾಕ್‌ ಎದುರಾಗಿದೆ. ವಿದ್ಯುತ್‌ ದರ ಏರಿಕೆಯನ್ನು ಮಳೆಗಾಲ ಆರಂಭದ ತನಕ ವಿಳಂಬಿಸಿ ಅಷ್ಟರ ಮಟ್ಟಿಗಿನ ನೆಮ್ಮದಿಯನ್ನಾದರೂ ಜನರಿಗೆ ಒದಗಿಸಬಹುದಿತ್ತು.  ಆಳುವವರಿಗೆ ಜನರ ಸಮಸ್ಯೆ ಅರ್ಥವಾಗುವುದು ಯಾವಾಗ?

ವಿದ್ಯುತ್‌ ದರ ಏರಿಕೆ ಪ್ರತೀ ವರ್ಷ ಜನರು ಸಹಿಸಿಕೊಳ್ಳಲೇಬೇಕಾದ ಶಾಕ್‌ ಆಗಿಬಿಟ್ಟಿದೆ. ಪ್ರತೀ ವರ್ಷ ಮಾರ್ಚ್‌ನಲ್ಲಿ ದರ ಏರಿಕೆಯ ಪ್ರಕ್ರಿಯೆ ಶುರುವಾಗುತ್ತದೆ. ಏಪ್ರಿಲ್‌ 1ರಿಂದ ಹೊಸ ದರ ಅನ್ವಯವಾಗುತ್ತದೆ. ಈ ವರ್ಷವೂ ಈ ಪ್ರಕ್ರಿಯೆಯನ್ನು ಸರಕಾರ ಯಥಾವತ್ತಾಗಿ ಮುಂದುವರಿಸಿದೆ. 2016-17ನೇ ಸಾಲಿಗೆ ಅನ್ವಯವಾಗುವಂತೆ ಪ್ರತೀ ಯುನಿಟ್‌ಗೆ 48 ಪೈಸೆ ಹೆಚ್ಚಿಸಲಾಗಿದೆ. ಆದರೆ ಎಲ್ಲ 5 ಎಸ್ಕಾಂಗಳಲ್ಲಿ ಹೆಚ್ಚಳವಾಗುವ ದರವನ್ನು ಸರಿಯಾಗಿ ಲೆಕ್ಕ ಹಾಕಿದರೆ ಸರಾಸರಿ 58 ಪೈಸೆ ಅಥವಾ ಶೇ. 8ರಷ್ಟು ಹೆಚ್ಚಳವಾಗುತ್ತದೆ. ವಿವಿಧ ವರ್ಗಗಳಿಗೆ ಯುನಿಟ್‌ಗೆ 20 ಪೈಸೆಯಿಂದ ಹಿಡಿದು 55 ಪೈಸೆ ತನಕ ಹೆಚ್ಚಿಸಲಾಗಿದೆ.

ಎಸ್ಕಾಂಗಳು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗದ ಎದುರು ಪ್ರತೀ ಯುನಿಟ್‌ಗೆ 1.40 ರೂ. ಹೆಚ್ಚಿಸುವ ಪ್ರಸ್ತಾವ ಇಟ್ಟಿದ್ದವು. ಇದೇ ವೇಳೆ ದರ ಏರಿಕೆಯನ್ನು ವಿರೋಧಿಸಿ ಗ್ರಾಹಕರು ಆಯೋಗಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದರು. ಅತ್ತ ಎಸ್ಕಾಂಗಳಿಗೂ ನಷ್ಟವಾಗದಂತೆ ಇತ್ತ ಗ್ರಾಹಕರಿಗೂ ವಿಪರೀತವಾದ ಹೊರೆ ಬೀಳದಂತೆ  ದರ ಹೆಚ್ಚಳ ಮಾಡುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದೆ. ವಿದ್ಯುತ್‌ ದರ ಹೆಚ್ಚಳವಾಗುವುದು ಹೇಗೆ ಮಾಮೂಲು ಪ್ರಕ್ರಿಯೆಯೋ ಅದೇ ರೀತಿ ದರ ಹೆಚ್ಚಳವನ್ನು ವಿರೋಧಿಸಿ ವಿರೋಧ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವುದು ಕೂಡ ಮಾಮೂಲು. ಕೆಲವು ದಿನಗಳ ಬಳಿಕ ಪ್ರತಿಭಟನೆಯ ಕಾವು ಕಡಿಮೆಯಾಗುತ್ತದೆ. ಜನರು ಕೂಡ ಈ ಹೊರೆ ಅನಿವಾರ್ಯ ಕರ್ಮ ಎಂದು ಗೊಣಗುತ್ತಾ ಹೊಸ ದರಕ್ಕೆ ಹೊಂದಿಕೊಳ್ಳುತ್ತಾರೆ. ಹೀಗೆ ಎಲ್ಲವೂ ಯಥಾಸ್ಥಿತಿಗೆ ಬರುತ್ತದೆ. 

ವಿದ್ಯುತ್‌ ದರ ಏರಿಕೆಯಿಂದ ಅತಿ ಹೆಚ್ಚು ಕಷ್ಟವಾಗುವುದು ಮಧ್ಯಮ ವರ್ಗಕ್ಕೆ. ಬಡವರಿಗಾದರೆ ಸರಕಾರದ ಉಚಿತ ಭಾಗ್ಯಜ್ಯೋತಿಯಿದೆ. ಶ್ರೀಮಂತರಿಗೆ ಚಿಲ್ಲರೆ ಏರಿಕೆಗಳೆಲ್ಲ ದೊಡ್ಡ ಹೊರೆಯಾಗುವುದಿಲ್ಲ. ಕೃಷಿಕರಿಗೂ ಉಚಿತ ವಿದ್ಯುತ್‌ ಸಿಗುತ್ತದೆ. ಆದರೆ ಸೀಮಿತ ಆದಾಯದಲ್ಲಿ ತಿಂಗಳ ಮನೆವಾರ್ತೆ ಸರಿದೂಗಿಸುವ ಮಧ್ಯಮ ವರ್ಗದವರಿಗೆ ಕೆಲವು ರೂಪಾಯಿಗಳ ಏರಿಕೆಯೂ ಶಾಕ್‌ ಕೊಡುತ್ತದೆ.

Advertisement

ದರ ಹೆಚ್ಚಿಸಿದರೂ ಇಷ್ಟು ವರ್ಷಗಳಲ್ಲಿ ವಿದ್ಯುತ್‌ ಮಂಡಳಿ ನೀಡುವ ಸೇವೆಯಲ್ಲೇನೂ ಸುಧಾರಣೆಯಾಗಿಲ್ಲ. ಪವರ್‌ ಕಟ್‌, ಲೋಡ್‌ಶೆಡ್ಡಿಂಗ್‌ನಂತಹ ಮಾಮೂಲು ಸಮಸ್ಯೆಗಳನ್ನು ಸಹಿಸಿಕೊಳ್ಳಲೇಬೇಕು. ಈ ಬೇಸಿಗೆಯಲ್ಲಿ ಲೋಡ್‌ಶೆಡ್ಡಿಂಗ್‌ ಮಾಡುವುದಿಲ್ಲ ಎಂದು ಸಚಿವರು ಘೋಷಿಸಿದ್ದರೂ ವಾಸ್ತವ ಮಾತ್ರ ಭಿನ್ನವಾಗಿದೆ. ಆಗಾಗ ಹೇಳದೆ ಕೇಳದೆ ವಿದ್ಯುತ್‌ ಮಾಯವಾಗುತ್ತದೆ. ಮಳೆಗಾಲದಲ್ಲಂತೂ ತಾಸುಗಟ್ಟಲೆ ವಿದ್ಯುತ್‌ ಕೈಕೊಡುವುದು ಮಾಮೂಲು. ಪ್ರತೀ ವರ್ಷ ತಪ್ಪದೆ ದರ ಏರಿಸುವ ವಿದ್ಯುತ್‌ ಮಂಡಳಿ ಈ ಸಮಸ್ಯೆಗಳನ್ನು ಬಗೆಹರಿಸುವತ್ತಲೂ ಗಮನ ಹರಿಸಬೇಕು. ಹಣ ಕೊಟ್ಟು ಪಡೆಯುವ ಸೇವೆ ಸಮರ್ಪಕವಾಗಿರಬೇಕೆಂದು ಗ್ರಾಹಕ ಬಯಸುವುದರಲ್ಲಿ ತಪ್ಪಿಲ್ಲ. ಇದಕ್ಕೆ ಲೈನ್‌ಮ್ಯಾನ್‌ಗಳು ಇಲ್ಲ, ಎಂಜಿನಿಯರ್‌ ಇಲ್ಲ, ಸಾಮಗ್ರಿಗಳು ಇಲ್ಲ ಎಂದು ನೆಪ ಹೇಳುವುದು ಏಕೆ? ಅಗತ್ಯ ಸಿಬ್ಬಂದಿ ನೇಮಕ ಇಲಾಖೆಯ ಹೊಣೆಯಲ್ಲವೆ?

ವಿದ್ಯುತ್‌ ಸೋರಿಕೆ, ದುರ್ಬಳಕೆ, ಅಪವ್ಯಯ, ಪೋಲು ಇತ್ಯಾದಿ ಪುರಾತನ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ವಿತರಣೆಯಲ್ಲಾಗುತ್ತಿರುವ ವಿದ್ಯುತ್‌ ಸೋರಿಕೆಯನ್ನು ತಡೆಗಟ್ಟಿದರೆ ಕೊರತೆಯ ಅರ್ಧದಷ್ಟು ತುಂಬಿಸಿಕೊಳ್ಳಬಹುದು. ವಿದ್ಯುತ್‌ ಉಳಿಸಲು ಸರಕಾರ ಜಾರಿಗೆ ತಂದಿರುವ ಯೋಜನೆಗಳೆಲ್ಲ ಅಲ್ಪಾಯುಗಳು. ಇದಕ್ಕೆ ಉತ್ತಮ ಉದಾಹರಣೆ 
ಎಲ್‌ಇಡಿ ಬಲ್ಬ್ ವಿತರಣೆ. ವಿದ್ಯುತ್‌ ಉಳಿತಾಯ ಮಾಡುವ ಈ ಬಲ್ಬ್ ಗಳನ್ನು ಆರಂಭದಲ್ಲಿ ಸರಕಾರ ರಿಯಾಯಿತಿ ದರದಲ್ಲಿ ಪೂರೈಸಿತು. ಜನರೂ ಉತ್ಸಾಹದಿಂದ ಖರೀದಿಸಿದರು. ಆದರೆ ಈಗ ಅವುಗಳ ವಿತರಣೆ ಸ್ಥಗಿತಗೊಂಡಿದೆ. ಅದೇ ರೀತಿ ಸೋಲಾರ್‌ ವಿದ್ಯುತ್‌, ಪವನ ವಿದ್ಯುತ್‌ ಇತ್ಯಾದಿ ಅಸಾಂಪ್ರದಾಯಿಕ ವಿದ್ಯುತ್‌ ಮೂಲಗಳ ಬಳಕೆಗೆ ಉತ್ತೇಜನ ನೀಡುವ ಯೋಜನೆಗಳೆಲ್ಲ ಕುಂಟುತ್ತಿವೆ.  ರಾಜ್ಯದೆಲ್ಲೆಡೆ ಭೀಕರ ಬರ ಆವರಿಸಿದೆ. ನೀರಿಲ್ಲದೆ ಜನರು ತತ್ತರಿಸುತ್ತಿರುವ ಪರಿಸ್ಥಿತಿಯಲ್ಲಿ ವಿದ್ಯುತ್‌ ದರ ಏರಿಕೆಯ ಬಿಸಿ ತಟ್ಟಿದೆ. ಕನಿಷ್ಠ ಬೇಸಿಗೆ ಮುಗಿಯುವ ತನಕ ವಿದ್ಯುತ್‌ ದರ ಏರಿಕೆಯನ್ನು ತಡೆ ಹಿಡಿದು ಅಷ್ಟರಮಟ್ಟಿಗೆ ಜನರಿಗೆ ನೆಮ್ಮದಿಯನ್ನು ನೀಡಬಹುದಿತ್ತು. ಆದರೆ ಆಳುವವರಿಗೆ ಜನಸಾಮಾನ್ಯರ ಗೋಳು ಎಂದಾದರೂ ಅರ್ಥವಾಗಿದೆಯೇ?

Advertisement

Udayavani is now on Telegram. Click here to join our channel and stay updated with the latest news.

Next