Advertisement

ಕಾಡ್ಗಿಚ್ಚು ಸಂಭಾವ್ಯ ಪಟ್ಟಿಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ

03:50 AM Mar 02, 2017 | Team Udayavani |

ಬೆಂಗಳೂರು: ಕಾಡ್ಗಿಚ್ಚು ಸಂಭಾವ್ಯ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿರುವ ವಿಚಾರ ಕೇಂದ್ರ ಪರಿಸರ ಸಚಿವಾಲಯದ ಅಧ್ಯಯನದಲ್ಲಿ ಬಹಿರಂಗಗೊಂಡಿದೆ.

Advertisement

ಪರಿಸರ ಸಚಿವಾಲಯದ ಫಾರೆಸ್ಟ್‌ ಸರ್ವೆ ಆಫ್ ಇಂಡಿಯಾ ಸಂಸ್ಥೆಯು ಅಮೆರಿಕದ “ನಾಸಾ’ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಹಾಗೂ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್‌ ಸಹಯೋಗದಲ್ಲಿ ಭೌಗೋಳಿಕ, ಮಳೆ ಬೀಳುವ ಪ್ರಮಾಣ, ಅರಣ್ಯ ವಿಸ್ತೀರ್ಣ ಮತ್ತು ಸ್ವರೂಪ ಇವೆಲ್ಲವನ್ನೂ ಆಧರಿಸಿ ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. “ವಲೆ°ರೆಬಿಲಿಟಿ ಆಫ್ ಇಂಡಿಯಾಸ್‌ ಫಾರೆಸ್ಟ್‌ ಟು ಫೈರ್‌’ ಎಂಬ ಹೆಸರಿನಲ್ಲಿ ನಡೆಸಿದ ಈ ಅಧ್ಯಯನ ವರದಿಯನ್ನು ಫಾರೆಸ್ಟ್‌ ಸರ್ವೇ ಆಫ್ ಇಂಡಿಯಾ ಕಳೆದ ವಾರವಷ್ಟೇ
ಬಿಡುಗಡೆಗೊಳಿಸಿದೆ. ದೇಶದಲ್ಲಿ 2004ರಿಂದ 2011ರವರೆಗೆ ಸಂಭವಿಸಿದ ಕಾಡ್ಗಿಚ್ಚು ಬಗ್ಗೆ ನಾಸಾದ ಎರಡು ಉಪಗ್ರಹಗಳು ಸೆರೆ
ಹಿಡಿದಿರುವ ಮಾಹಿತಿ ಆಧರಿಸಿ ಈ ಅಧ್ಯಯನ ಕೈಗೊಳ್ಳಲಾಗಿದೆ. ಈ ವರದಿಯಲ್ಲಿ ಅತಿ ಹೆಚ್ಚು ಕಾಡ್ಗಿಚ್ಚು ಸಂಭವಿಸುವ ರಾಜ್ಯಗಳನ್ನು “ದುರ್ಬಲ’ ಎಂದು ಉಲ್ಲೇಖೀಸಲಾಗಿದೆ. ಈ ವರದಿಯಂತೆ ಇಡೀ ದೇಶದಲ್ಲಿ ಒಟ್ಟು ಕಾಡ್ಗಿಚ್ಚು ವ್ಯಾಪಿಸುವ 384 ಜಿಲ್ಲೆಗಳನ್ನು ಗುರುತಿಸಲಾಗಿದ್ದು ಕಾಡಿಗೆ ಬೆಂಕಿ ಬೀಳುವ ಅತಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ದಾಖಲಿಸುವ ಮೂಲಕ ದುರ್ಬಲ ರಾಜ್ಯಗಳ
ಪಟ್ಟಿಯಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ಉತ್ತರ ಪ್ರದೇಶ 2ನೇ ಮತ್ತು ಮಹಾರಾಷ್ಟ್ರ 3ನೇ ಸ್ಥಾನದಲ್ಲಿದೆ. ರಾಜ್ಯದ ಮಟ್ಟಿಗೆ ಆತಂಕದ ವಿಚಾರ ಎಂದರೆ ರಾಜ್ಯದ 23 ಜಿಲ್ಲೆಗಳ ಪೈಕಿ ಒಟ್ಟು 11 ಜಿಲ್ಲೆಗಳು ಕಾಡ್ಗಿಚ್ಚು ಉಂಟಾಗುವಲ್ಲಿ ಅತಿ ದುರ್ಬಲ ಜಿಲ್ಲೆಗಳೆಂದು ಗುರುತಿಸಲಾಗಿದೆ. ಉತ್ತರ ಕನ್ನಡ, ಉಡುಪಿ , ಶಿವಮೊಗ್ಗ, ಮೈಸೂರು, ತುಮಕೂರು, ಮಂಡ್ಯ, ಕೋಲಾರ, ಕೊಡಗು, ಹಾವೇರಿ, ಹಾಸನ, ಗುಲ್ಬರ್ಗ, ಗದಗ, ಧಾರವಾಡ, ದಾವಣಗೆರೆ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ, ಬಳ್ಳಾರಿ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಬಾಗಲಕೋಟೆ ಆ 23 ಜಿಲ್ಲೆಗಳು. ಅವುಗಳ ಪೈಕಿ ಬೆಳಗಾವಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಮಂಡ್ಯ, ಮೈಸೂರು, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ಬೆಂಕಿ ಕಾಣಿಸುವ ಅತಿ ದುರ್ಬಲ ಜಿಲ್ಲೆಗಳೆಂದು ಘೋಷಿಸಲಾಗಿದೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ 184 ಬೆಂಕಿ ಪ್ರಕರಣ ದಟ್ಟ ಅರಣ್ಯದಲ್ಲಿ, 5,776 ಪ್ರಕರಣ ಸಾಧಾರಣ ಅರಣ್ಯ ಪ್ರದೇಶದಲ್ಲಿ ಉಂಟಾಗಿರುವುದಾಗಿ ಅಧ್ಯಯನ ಹೇಳಿದೆ. ಅದೇ ರೀತಿ, ಶಿವಮೊಗ್ಗ ಅರಣ್ಯ ವ್ಯಾಪಿಯಲ್ಲಿ 205 ಪ್ರಕರಣ ದಟ್ಟ ಅರಣ್ಯದಲ್ಲಿ ಮತ್ತು
2808 ಕಾಡ್ಗಿಚ್ಚು ಸಾಧಾರಣ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ. ಇನ್ನು ಮೈಸೂರು ಜಿಲ್ಲೆಯಲ್ಲಿಯೂ ಶಿವಮೊಗ್ಗದಷ್ಟೇ ಕಾಡ್ಗಿಚ್ಚು ಘಟನೆಗಳಾಗಿವೆ. ಪಶ್ಚಿಮ ಘಟ್ಟ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 253 ಪ್ರಕರಣ ದಟ್ಟ ಅರಣ್ಯದಲ್ಲಿ ಮತ್ತು 1009 ಕಾಡ್ಗಿಚ್ಚು ಸಾಧಾರಣ ಅರಣ್ಯ ಪ್ರದೇಶದಲ್ಲಿ ಉಂಟಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ 587 ಬೆಂಕಿ ಪ್ರಕರಣ ದಟ್ಟ ಅರಣ್ಯದಲ್ಲಿ ಮತ್ತು 2428 ಪ್ರಕರಣ ಸಾಧಾರಣ ಅರಣ್ಯ ಪ್ರದೇಶದಲ್ಲಿ ಆಗಿವೆ. ಚಾಮರಾಜನಗರ ಜಿಲ್ಲೆಯಲ್ಲಿ 45 ಪ್ರಕರಣ ದಟ್ಟ ಕಾಡಿನಲ್ಲಿ 1043
ಪ್ರಕರಣ ಸಾಧಾರಣ ಅರಣ್ಯದಲ್ಲಿ ಉಂಟಾಗಿದೆ. ಅತಿ ದುರ್ಬಲ ಅರಣ್ಯ ಪ್ರದೇಶವಾಗಿರುವ ಬೆಳಗಾವಿ ಜಿಲ್ಲೆಯಲ್ಲಿಯೂ 17 ಕಾಡ್ಗಿಚ್ಚು ಪ್ರಕರಣ ದಟ್ಟ ಅರಣ್ಯ ಮತ್ತು 757 ಪ್ರಕರಣಗಳನ್ನು ಅಧ್ಯಯನದಲ್ಲಿ ಉಲ್ಲೇಖೀಸಲಾಗಿದೆ.

ಕಾಡ್ಗಿಚ್ಚು ಜೋರಾಗುತ್ತಿದೆ
ಈ ಬಾರಿ ಕಳೆದ ನವೆಂಬರ್‌-ಡಿಸೆಂಬರ್‌ನಲ್ಲೇ ಪಶ್ಚಿಮ ಘಟ್ಟದಲ್ಲಿ ಕಾಡ್ಗಿಚ್ಚು ಉಂಟಾಗಿದೆ. ರಾಜ್ಯದಲ್ಲಿ ಕಾಡ್ಗಿಚ್ಚು ಪ್ರಕರಣಗಳ ಕುರಿತಂತೆ ನಾಸಾದ ಉಪಗ್ರಹವು ಬುಧವಾರ ಬರೋಬ್ಬರಿ 606 ಕಾಡ್ಗಿಚ್ಚು ಸ್ಥಳಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಸಂದೇಶಗಳನ್ನು ರವಾನಿಸಿದೆ. ಈ ಸಂದೇಶಗಳಲ್ಲಿ ದಿನದಿಂದ ದಿನಕ್ಕೆ ಏರುಪೇರಾಗುತ್ತದೆ. ಉಪಗ್ರಹದ ಮಾಹಿತಿಯಂತೆ, ಭದ್ರಾವತಿ, ಸಾಗರ, ಶೆಟ್ಟಿಹಳ್ಳಿ, ಮಂಗಳೂರು, ಹಳಿಯಾಳ, ಕಾರವಾರ, ಯಲ್ಲಾಪುರ, ಕೊಪ್ಪ, ದಾಂಡೇಲಿ, ಬೆಳಗಾವಿ, ಹುಣಸೂರು ಅರಣ್ಯ ವಿಭಾಗದ
ವ್ಯಾಪ್ತಿಯಲ್ಲಿ ಬುಧವಾರ ಬೆಂಕಿ ಬಿದ್ದಿದೆ. ಇನ್ನು ಪಶ್ಚಿಮ ಘಟ್ಟದ ಕೊಪ್ಪಳ ಗುಡ್ಡ, ಕುದುರೆಮುಖ, ಚಾರ್ಮಾಡಿ, ಹೊರನಾಡು, ಮಲ್ಲಿಗೆ ಕಾನ, ಮೆಣಸಿನಹಾಡ್ಯ, ಕ್ಯಾತನಮಕ್ಕಿ ದಟ್ಟ ಅರಣ್ಯ ಪ್ರದೇಶ ಕೂಡ ಕಾಡ್ಗಿಚ್ಚಿಗೆ ಹೊತ್ತಿ ಉರಿಯುತ್ತಿದ್ದ ದೃಶ್ಯ ಕಾಣಿಸಿದೆ ಎಂದು ಬುಧವಾರ ಅಲ್ಲಿಗೆ ಚಾರಣ ಹೋದವರು “ಉದಯವಾಣಿ’ಗೆ ತಿಳಿಸಿದರು.

ಹೆಚ್ಚು ಅರಣ್ಯ ಪ್ರದೇಶವಿದ್ದರೂ ಪಟ್ಟಿಯಲ್ಲಿಲ್ಲ ಕೇರಳ ಅಧ್ಯಯನದ ಪ್ರಕಾರ, ದೇಶದಲ್ಲಿ ಏಳು ವರ್ಷಗಳ ಅವಧಿಯಲ್ಲಿ ಒಟ್ಟು 1,34,225 ತೀವ್ರ ಸ್ವರೂಪದ ಕಾಡ್ಗಿಚ್ಚು ಪ್ರಕರಣಗಳು ಸಂಭವಿಸಿವೆ. ಅವುಗಳಲ್ಲಿ 11,468 ಬೆಂಕಿ ಪ್ರಕರಣ ದಟ್ಟ ಅರಣ್ಯದಲ್ಲಿ
ಉಂಟಾದರೆ, 57,063 ಪ್ರಕರಣ ಸಾಧಾರಣ ಕಾಡು ಪ್ರದೇಶದಲ್ಲಿ ಮತ್ತು 53,779 ಪ್ರಕರಣಗಳು ಮುಕ್ತ ಅರಣ್ಯದಲ್ಲಿ ಮತ್ತು 11,335 ಬೆಂಕಿ ಘಟನೆಗಳು ಪೊದೆಗಳಲ್ಲಿ ಉಂಟಾಗಿದೆ. ಅಚ್ಚರಿಯೆಂದರೆ, ನೆರೆಯ ಕೇರಳದಲ್ಲಿ ಅರಣ್ಯ ಪ್ರದೇಶ ಜಾಸ್ತಿಯಿದ್ದರೂ, ಅಲ್ಲಿನ ಯಾವುದೇ ಜಿಲ್ಲೆ ಕೂಡ ಅತಿ ದುರ್ಬಲ ಕಾಡ್ಗಿಚ್ಚು ಪಟ್ಟಿಯಲ್ಲಿ ಇಲ್ಲ.

Advertisement

ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next