Advertisement

“ಬಡವರ ಕೆಲಸ ಮಾಡಲು ಹೃದಯ ಬೇಕು’

03:45 AM Jun 04, 2017 | Team Udayavani |

ಮೈಸೂರು: ರೈತರ ಸಾಲಮನ್ನಾ ವಿಚಾರದಲ್ಲಿ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಬಡವರ ಪರವಾಗಿ ಕೆಲಸ ಮಾಡಲು 56 ಇಂಚಿನ ಎದೆ ಬೇಕಿಲ್ಲ. ಹೃದಯ ಇರಬೇಕು ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್‌ ನೀಡಿದ್ದಾರೆ.

Advertisement

ರಾಜ್ಯ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ “ಕೊಟ್ಟ ಮಾತು-ದಿಟ್ಟ ಸಾಧನೆ’ ಮೈಸೂರು ವಿಭಾಗಮಟ್ಟದ ಸೌಲಭ್ಯ ವಿತರಣಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅರ್ಧ ಗಂಟೆಯಲ್ಲಿ ವಿಧಾನಸೌಧಕ್ಕೆ ತೆರಳಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ ಪ್ರಮುಖವಾಗಿದ್ದ ಆರು ಭರವಸೆ ಗಳನ್ನು ಈಡೇರಿಸಿದೆ. ಇದನ್ನೂ ಟೀಕೆ ಮಾಡಿದರು. ಹಣ ಎಲ್ಲಿಂದ ತರುತ್ತಾರೆ, ಯೋಜನೆಗಳನ್ನು ಪ್ರಕಟಿಸಲು ಇಷ್ಟೊಂದು ಅವಸರ ಏಕೆ ಎಂಬ ಪ್ರಶ್ನೆಗಳೂ ಕೇಳಿ ಬಂದವು. ಬಡವರ ಪರವಾದ ಕೆಲಸ ಮಾಡಲು ಅವಸರ ಇರಬೇಕು.

ಅನ್ನಭಾಗ್ಯಕ್ಕೂ ಕೆಲವರಿಂದ ಟೀಕೆ ಕೇಳಿ ಬಂತು. ಆದರೆ,ಅನ್ನಭಾಗ್ಯ ಯೋಜನೆಯಿಂದಾಗಿ ರಾಜ್ಯದಲ್ಲಿ ಸತತ ಎರಡು ವರ್ಷ ಬರಗಾಲ ಇದ್ದರೂ ಜನರು ಗುಳೆ ಹೋಗುವುದು ತಪ್ಪಿದೆ ಎಂದರು.

ಇದೇ ವೇಳೆ, ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಬಿಜೆಪಿಯವರು ಹೊರಗಡೆಯಿಂದ ಇಡ್ಲಿ, ದೋಸೆ ತರಿಸಿಕೊಂಡು ಪರಿಶಿಷ್ಟರ ಮನೆಯಲ್ಲಿ ತಿಂಡಿ ತಿಂದೋ ಎಂದು ಢೋಂಗಿತನ ತೋರುತ್ತಿದ್ದಾರೆ ಎಂದರು.

ಪ್ರಧಾನಿ ಬಳಿಗೆ ನಿಯೋಗ ಕರೆದೊಯ್ದಾಗ ತುಟಿ ಬಿಚ್ಚದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸದಾನಂದ ಗೌಡ ಅವರು ಇಲ್ಲಿ ಬಂದು ಮಾತನಾಡುತ್ತಾರೆ. ಬಿಜೆಪಿಯ 17 ಸಂಸದರು, ರಾಜ್ಯಸಭಾ ಸದಸ್ಯರು ಒಂದು ದಿನವೂ ಸಂಸತ್‌ನಲ್ಲಿ ಸಾಲಮನ್ನಾ ವಿಚಾರ ಪ್ರಸ್ತಾಪ ಮಾಡಿಲ್ಲ. ಕೇಂದ್ರ ಸರ್ಕಾರ ಮೊದಲಿಗೆ ಸಾಲ ಮನ್ನಾ ಮಾಡಲಿ. ಕೇಂದ್ರದಿಂದ ಸಾಲ ಮನ್ನಾ ಮಾಡುವ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಬಂದು ಮಾತನಾಡಲಿ. ತಕ್ಷಣ, ನಾನೂ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದರು.

Advertisement

ಕೂತ್ಕೊಂಡು ತಿಂತಾರಲ್ಲ ಅಂಬರೀಶ!
ವಿಧಾನಸಭೆಯಲ್ಲಿ ಬಿಜೆಪಿ ಶಾಸಕನೊಬ್ಬ ಉಚಿತವಾಗಿ ಅಕ್ಕಿ ಕೊಡುವುದರಿಂದ ಜನರು ಸೋಮಾರಿಗಳಾಗಿ ಬಿಡುತ್ತಾರೆ, ಯಾರೂ ಕೆಲಸಕ್ಕೆ ಬರುವುದಿಲ್ಲ ಎಂದು ಭಾಷಣ ಮಾಡಿದ್ದ. ಅದಕ್ಕೆ ಪ್ರತಿಕ್ರಿಯೆ ನೀಡಿದ ನಾನು “ಇಷ್ಟು ವರ್ಷ ಗೆಯ್ದಿರುವ ಅವರು ಒಂದಷ್ಟು ವರ್ಷ ಕುಳಿತು ಉಣ್ಣಲಿ’ ಎಂದು ಉತ್ತರ ನೀಡಿದ್ದೆ. ಅಂತಹ ಮಾತುಗಳನ್ನಾಡಿದ ಶಾಸಕನೀಗ ಇಲ್ಲ. ವಿಧಾನಸೌಧದಲ್ಲಿ ಹೇಳಿದರೆ ಅವರ್ಯಾರೂ ಕೇಳಲ್ಲ, ನಾವು ಯಾರಿಗೆ ಕೇಳಬೇಕು ಎಂದರು. ಮುಂದುವರಿದು, ವೇದಿಕೆಯಲ್ಲಿದ್ದ ಮಾಜಿ ಸಚಿವ ಅಂಬರೀಶ್‌ ಕಡೆಗೆ ಕೈ ತೋರಿಸಿ, ಕೂತ್ಕೊಂಡು ತಿಂತಾರಲ್ಲ ಅಂಬರೀಶ.. ಎಂದರು. ಇದರಿಂದ ವಿಚಲಿತರಾದ ಅಂಬರೀಶ್‌, “ನಾನು ಕುಳಿತುಕೊಂಡು ತಿನ್ನುವುದಿಲ್ಲ’ ಎಂದು ಕೈ ಅಲ್ಲಾಡಿಸಿದರು. “ಅಂಬರೀಶ ನಿನಗಲ್ಲ ಹೇಳಿದ್ದು, ಕೂತ್ಕೊಂಡು ತಿಂತಾರಲ್ಲ ಅವರಿಗೆ’ ಎನ್ನುತ್ತಾ ಆ ವಿಚಾರಕ್ಕೆ ತೆರೆ ಎಳೆದರು.

ಪೂಜೆ ವೈಯಕ್ತಿಕ ವಿಚಾರ: ಮುಖ್ಯಮಂತ್ರಿ
ಮಳೆಗಾಗಿ ಪೂಜೆ ಮಾಡಿದ ವಿಚಾರ ಸಚಿವ ಎಂ.ಬಿ ಪಾಟೀಲ್‌ ಅವರ ವೈಯಕ್ತಿಕ ನಂಬಿಕೆಗೆ ಬಿಟ್ಟದ್ದು. ಮೇಲಾಗಿ, ಅವರ ವೈಯಕ್ತಿಕ ಖರ್ಚಿನಲ್ಲಿ ಮಳೆಗಾಗಿ ಪೂಜೆ ಮಾಡಿಸಿದ್ದಾರೆ. ವೈಯಕ್ತಿಕ ನಂಬಿಕೆ ಬೇರೆ, ಸರ್ಕಾರದ ಕಾನೂನು ಬೇರೆ ಎಂಬುದು ನನ್ನ ಅಭಿಪ್ರಾಯ. ಇದೇ ಕಾರಣಕ್ಕಾಗಿ ರಾಜ್ಯ ಸರ್ಕಾರ ವîೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಆದರೆ, ನಂಬಿಕೆಗಳ ವಿರುದಟಛಿವಾಗಿ ನಮ್ಮ ಕಾನೂನು ಇರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಯತೀಂದ್ರ- ಬೋಸ್‌ ದರ್ಬಾರು!
ಮೈಸೂರು: ರಾಜ್ಯ ಸರ್ಕಾರದ 4 ವರ್ಷಗಳ ಸಾಧನೆಯ ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ ಪುತ್ರ ಡಾ.ಯತೀಂದ್ರ ಅವರು, ವರುಣ ವಿಧಾನಸಭಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷರ ಹೆಸರಿನಲ್ಲಿ ಮುಂದಿನ ಸಾಲಿನಲ್ಲಿ ಆಸೀನರಾದರು.

ಇದೇ ವೇಳೆ, ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿಲ್ಲದಿದ್ದರೂ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಪುತ್ರ ಎಂಬ ಕಾರಣಕ್ಕೆ ಸುನೀಲ್‌ ಬೋಸ್‌ ಕೂಡ ಮುಖ್ಯಮಂತ್ರಿ ಮತ್ತು ಮಂತ್ರಿಗಳು ಕುಳಿತಿದ್ದ ಮೊದಲ ಸಾಲಿನಲ್ಲಿ ಆಸೀನರಾದರು.ಮಾತ್ರವಲ್ಲ, ಆಗಾಗ್ಗೆ ಎದ್ದು ಮುಖ್ಯಮಂತ್ರಿಯವರ ಬಳಿಗೆ ಬಂದು ಪತ್ರಗಳಿಗೆ ಸಹಿ ಹಾಕಿಸಿಕೊಂಡು ಹೋಗುತ್ತಿದ್ದುದು ಕಂಡು ಬಂತು. ಆದರೆ, ಸಾಕಷ್ಟು ಜನ ಶಾಸಕರುಗಳು ಸ್ಥಳಾವಕಾಶ ದೊರೆಯದೆ ಎರಡನೇ ಸಾಲಿನಲ್ಲಿ ಕುಳಿತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next