Advertisement

ಎಲ್ಲರಿಗೂ ಗೆಲ್ಲುವ ತವಕ ಕಾವೇರಿದ ಚುನಾವಣಾ ಕಣ

06:00 AM Apr 01, 2018 | |

ಮತದಾರರನ್ನು ಸೆಳೆಯಲು ರೋಡ್‌ಶೋ, ಪ್ರಚಾರ ಭಾಷಣ ಎಲ್ಲ ಇದ್ದುದೇ. ಆದರೆ ಈ ದಿನಗಳಲ್ಲಿ ಪ್ರಚಾರಕ್ಕಿಂತ ಅಪಪ್ರಚಾರವೇ ಹೆಚ್ಚು. ಒಂದು ಪಕ್ಷದವರು ಇನ್ನೊಂದು ಪಕ್ಷದವರನ್ನು ಟೀಕಿಸುವುದೇ ಹೆಚ್ಚು. ಆರೋಪ-ಪ್ರತ್ಯಾರೋಪಗಳಿಗೋಸ್ಕರ ಡಿಜಿಟಲ್‌ ತಂತ್ರಜ್ಞಾನ ಪೂರ್ಣಪ್ರಮಾಣದಲ್ಲಿ ಬಳಕೆಯಾಗುತ್ತಿದೆ. 

Advertisement

ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿ ನೀತಿಸಂಹಿತೆ ಜಾರಿಗೊಂಡಿದೆ. ಆದರೆ ದಿನಾಂಕ ಘೋಷಣೆಗೂ ಮುನ್ನವೇ ಚುನಾವಣಾ ಕಣ ಕಾವೇರಿತ್ತು. ಬೇಸಿಗೆಯ ಬಿಸಿಲ ಧಗೆಯೊಂದಿಗೆ ಸ್ಪರ್ಧಿಸುವಂತೆ ಇನ್ನೂ ಒಂದೂವರೆ ತಿಂಗಳ ಕಾಲ ಇದೇ ಹವಾ ಮುಂದುವರಿಯಲಿದೆ. ಬಿಸಿಲ ಝಳದೊಂದಿಗೆ ಇದನ್ನೂ ಸಹಿಸಿಕೊಳ್ಳಬೇಕಿದೆ. ಇಷ್ಟರಲ್ಲೇ ಇಷ್ಟೊಂದು ಕಾವೇರಲು ಕಾರಣವಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಈ ಮೂರೂ ಪಕ್ಷಗಳಿಗೆ ಇದು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಷ್ಠೆಯ ಪ್ರಶ್ನೆ. ಗುರಿಯೊಂದೇ- ಗೆದ್ದು ಗದ್ದುಗೆಗೇರುವುದು. ಆದರೆ ಅವುಗಳ ಮುಂದಿರುವ ಸವಾಲು ಭಿನ್ನ, ಮನಸ್ಥಿತಿಯೂ ಭಿನ್ನ.

ಮೂರು ಪಕ್ಷ ಮೂರು ದಾರಿ
ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಮೇಲೆ ಕಣ್ಣಿಟ್ಟಿರುವ ಮೂರು ಪಕ್ಷಗಳಲ್ಲಿ ಒಂದು ಬಿಜೆಪಿ. 2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರದ ವರ್ಷ ಗಳಲ್ಲಿ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್‌, ಮಣಿಪುರ, ಅಸ್ಸಾಂ, ಉತ್ತರಾಖಂಡ ರಾಜ್ಯಗಳನ್ನು ಗೆದ್ದುಕೊಂಡಿತು. ಜೈತ್ರಯಾತ್ರೆ ಮುಂದುವ ರಿಸುತ್ತಾ ಈಶಾನ್ಯ ರಾಜ್ಯಗಳಾದ ತ್ರಿಪುರ, ನಾಗಾಲ್ಯಾಂಡ್‌, ಮೇಘಾಲಯಗಳಲ್ಲೂ ತನ್ನ ಆಧಿಪತ್ಯ ಸಾಧಿಸಿತು. ಕಾಂಗ್ರೆಸ್‌ ಮುಕ್ತ ಭಾರತದ ಕನಸು ಕಂಡಿತು. ಸತತ ಗೆಲುನಿಂದ ಬೀಗುತ್ತಿದ್ದ ಬಿಜೆಪಿ ಈ ಮಧ್ಯೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಲೋಕಸಭಾ ಕ್ಷೇತ್ರ ಗೋರಖ್‌ಪುರ ಉಪ ಚುನಾವಣೆಯಲ್ಲಿ ಸೋತು ಮುಖಭಂಗಕ್ಕೆ ಒಳಗಾಯಿತು. ಮೈಮರೆವಿನಿಂದ ಉಂಟಾದ ಈ ಅನಿರೀಕ್ಷಿತ ಆಘಾತದಿಂದ ಎಚ್ಚೆತ್ತ ಬಿಜೆಪಿ ಮತ್ತೆ ಮೈಕೊಡವಿ ನಿಂತಿದೆ. ಕಾಂಗ್ರೆಸ್‌ ವಿರುದ್ಧ ತೊಡೆತಟ್ಟಿದೆ. ಕಾಂಗ್ರೆಸ್‌ ಮುಕ್ತ ಕರ್ನಾಟಕ ನಿರ್ಮಾಣದ ಪಣ ತೊಟ್ಟಿದೆ. ಅದನ್ನೊಂದು ಸವಾಲಾಗಿ ಸ್ವೀಕರಿಸಿದೆ. 2014ರಲ್ಲಿ ಬಿಜೆಪಿ ಎದ್ದಂದಿನಿಂದ ಕಾಂಗ್ರೆಸ್‌ ಬಿದ್ದದ್ದೇ ಹೆಚ್ಚು. ಒಂದೊಂದೇ ರಾಜ್ಯವನ್ನು ಕಳಕೊಳ್ಳುತ್ತಾ ಸಾಗಿ ಇದೀಗ ಮೂರು ರಾಜ್ಯಗಳಷ್ಟೇ “ಕೈ’ಯಲ್ಲಿರುವುದು. ಒಂದು ಲೆಕ್ಕದಲ್ಲಿ ಅದೀಗ ಮುಳುಗುತ್ತಿರುವ ದೋಣಿ. ಕರ್ನಾಟಕವನ್ನೂ ಕಳಕೊಂಡರೆ ಅದು ಪೂರ್ತಿ ಮುಳುಗಿದಂತೆಯೇ. ಭಾರತದ ರಾಜಕೀಯದಲ್ಲಿ ಸುದೀರ್ಘ‌ ಇತಿಹಾಸವುಳ್ಳ ಪಕ್ಷಕ್ಕೆ ಇದು ಮರ್ಯಾದೆ ಪ್ರಶ್ನೆ. ಮುಂಬರುವ ವಿಧಾನಸಭಾ ಚುನಾವಣೆ ಕಾಂಗ್ರೆಸ್‌ ಪಕ್ಷದ ಪ್ರತಿಷ್ಠೆಗೊಂದು ಸವಾಲು. ಇನ್ನುಳಿದಂತೆ ಜೆಡಿಎಸ್‌, ಬಿಜೆಪಿ ಮತ್ತು ಕಾಂಗ್ರೆಸ್‌ನಷ್ಟು ದೊಡ್ಡದಲ್ಲ. ಆದರೆ ಪಕ್ಷದ ವರಿಷ್ಠ ಕುಮಾರ ಸ್ವಾಮಿಗಿರುವ ಅಧಿಕಾರದ ಕನಸು ದೊಡ್ಡದು. ಹೋಮ- ಹವನಾದಿಗಳನ್ನು ಮಾಡಿದ “ದಳ’ಪತಿಗಳು ಅದೃಷ್ಟವನ್ನೇ ಬಲವಾಗಿ ನಂಬಿದ್ದಾರೆ. ಮುಖ್ಯ ಮಂತ್ರಿಯಾಗುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಜೆಡಿಎಸ್‌ ಬಂಡಾಯ ಶಾಸಕರಾದ ಚೆಲುವರಾಯ ಸ್ವಾಮಿ, ಇಕ್ಬಾಲ್‌ ಅನ್ಸಾರಿ, ಜಮೀರ್‌ ಅಹ್ಮದ್‌ ಮೊದಲಾದವರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುತ್ತಿರುವುದು ಅಪ್ಪ-ಮಕ್ಕಳ ಪಕ್ಷವೆಂದೇ ಟೀಕೆಗೆ ಒಳಗಾಗಿರುವ ಆ ಪಕ್ಷದ ಪಾಲಿಗೆ ನುಂಗಲಾರದ ತುತ್ತೆನಿಸಿದೆ. ಇದೀಗ ಏನಕೇನ ಪಕ್ಷ ಗೆಲ್ಲಲೇಬೇಕಿದೆ. ಜೆಡಿಎಸ್‌ ಪಕ್ಷಕ್ಕಿದು ಅಳಿವು-ಉಳಿನ ಪ್ರಶ್ನೆ.

ಎಲ್ಲರೂ ಯಾತ್ರಾರ್ಥಿಗಳು
ಪುಣ್ಯ ಸಂಪಾದನೆಗಾಗಿ ಯಾತ್ರೆ ಕೈಗೊಳ್ಳುವುದಿದೆ. ಆದರೆ ಇತ್ತೀಚೆಗೆ ಮತ ಸಂಪಾದನೆಗಾಗಿ ರಾಜಕೀಯ ಪಕ್ಷದವರೂ ಯಾತ್ರೆ ಕೈಗೊಳ್ಳುತ್ತಾರೆ. ಒಂದು ಪಕ್ಷದವರದ್ದು ನವ ಕರ್ನಾಟಕ ಯಾತ್ರೆಯಾದರೆ ಇನ್ನೊಂದು ಪಕ್ಷದ್ದು ಜನಾಶೀರ್ವಾದ ಯಾತ್ರೆ. ಒಟ್ಟಿನಲ್ಲಿ ಎಲ್ಲರೂ ಯಾತ್ರಾರ್ಥಿಗಳು. ಮತದಾರರ ಮನವೊಲಿಕೆಗೆ ಇದೂ ಒಂದು ಉಪಕ್ರಮ. ಮಹದಾಯಿ ನೀರಿನ ಸಮಸ್ಯೆ ಸಂಬಂಧದಲ್ಲಾಗಲೀ, ಕಾವೇರಿ ಜಲ ವಿವಾದ ಸಂಬಂಧದಲ್ಲಾಗಲೀ ಊರೇ ಹೊತ್ತಿ ಉರಿದ‌ರೂ ಇತ್ತ ಕಣ್ಣೆತ್ತಿ ನೋಡದವರು ಈಗ ನಮ್ಮ ಮನೆಯಂಗಳದಲ್ಲೇ ಯಾತ್ರೆ ಹೆಸರಿನಲ್ಲಿ ಓಡಾಡುತ್ತಿದ್ದಾರೆ. ಈಗವರಿಗೆ ಬಿಡುವಿದೆ. ಓಡಾಟದ ಭರಾಟೆಯಲ್ಲಿ ಅವರಿಗೆ ಸದ್ಯ ರಾಜ್ಯದ ಅಭಿವೃದ್ಧಿ ಕಾರ್ಯಗಳತ್ತ ಚಿತ್ತ ಹರಿಸಲೂ ಆಗುತ್ತಿಲ್ಲ. ಆಡಳಿತ ಯಂತ್ರ “ಮತಯಂತ್ರ’ವಾಗಿ ಮಾರ್ಪಟ್ಟರೂ ಅಚ್ಚರಿಯಿಲ್ಲ.

ಆಮಿಷ,ಆಶ್ವಾಸನೆಗಳಲ್ಲೂ ಪೈಪೋಟಿ 
ಆಮಿಷ, ಆಶ್ವಾಸನೆಗಳನ್ನು ನೀಡಿ ಮತದಾರರ ಮನವೊಲಿಸುವುದಿದೆ. ಆದರೆ ಈ ವಿಚಾರದಲ್ಲೂ ಪಕ್ಷಗಳೊಳಗೆ ಪೈಪೋಟಿ ನಡೆದಿದೆ. ಕಾಂಗ್ರೆಸ್‌ ಒಂದು ಆಮಿಷ ನೀಡಿದರೆ ಜೆಡಿಎಸ್‌ ಇನ್ನೊಂದು ಆಶ್ವಾಸನೆ ನೀಡಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮುಂದೆ ಜಿಎಸ್‌ಟಿ ರದ್ದುಗೊಳಿಸುವ ಭರವಸೆ ನೀಡಿದರೆ ಜೆಡಿಎಸ್‌ ವರಿಷ್ಠ ದೇವೇಗೌಡರು ಶಾದಿ ಭಾಗ್ಯದಂತೆ ಎಲ್ಲಾ ವರ್ಗದವರಿಗೂ ತಾಳಿಭಾಗ್ಯದ ಭರವಸೆ ನೀಡಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳು ಮಾರ್ಚ್‌ ತಿಂಗಳು ಮುಗಿವ ಮುನ್ನವೇ ತೀವ್ರ ಜಲಕ್ಷಾಮದಿಂದ ಕಂಗೆಟ್ಟಿವೆ. ಅಚ್ಚರಿಯೆಂದರೆ ಕಣ್ಣೆದುರೇ ಇರುವ ಈ ಜ್ವಲಂತ ಸಮಸ್ಯೆ ಯಾರ ಕಣ್ಣಿಗೂ ಬಿದ್ದಿಲ್ಲ. ಈ ಬಗ್ಗೆ ಯಾರೂ ಮಾತನಾಡಿಲ್ಲ. ಈ ಸಮಸ್ಯೆಗೊಂದು ಶಾಶ್ವತ ಪರಿಹಾರದ ಭರವಸೆ ನೀಡಿಲ್ಲ. ಪ್ರಾಯಶಃ ಯಾವ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಈ ಬಗ್ಗೆ ಪ್ರಸ್ತಾಪ ಆಗುವುದಿಲ್ಲ. ಹಿಂದೆಲ್ಲಾ ಮತದಾರನ ಮನವೊಲಿಸಲು ಮತದಾನದ ಮುನ್ನಾ ದಿನ ಕದ್ದು ಮುಚ್ಚಿ ಸೀರೆ, ಸಾರಾಯಿ ಹಂಚುವುದಿತ್ತು. ಆದರೆ ಈಗ ಸೀಟು ಹಂಚಿಕೆ ಹಂತದಲ್ಲಿಯೇ ಟಿಕೆಟ್‌ ಆಕಾಂಕ್ಷಿಗಳ ಪರವಾಗಿ ಪಕ್ಷದ ಕಾರ್ಯಕರ್ತರು ಉಚಿತ ಕುಕ್ಕರ್‌ ವಿತರಣೆ ಮಾಡಿದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಹಂಚಲು ನೋಟುಗಳನ್ನು ಕೂಡಿಟ್ಟ ಪರಿಣಾಮ ಬ್ಯಾಂಕ್‌ಗಳಲ್ಲಿ ರೂ.2000ರ ನೋಟುಗಳ ಅಭಾವ ತಲೆದೋರಿದೆ ಎನ್ನಲಾಗಿದೆ. ಚುನಾವಣೆಗೆ ಇನ್ನೂ ಒಂದೂವರೆ ತಿಂಗಳು ಇದೆ.

Advertisement

ಅಪಪ್ರಚಾರವೆ ಹೆಚ್ಚು
ಮತದಾರರನ್ನು ಸೆಳೆಯಲು ರೋಡ್‌ಶೋ, ಪ್ರಚಾರ ಭಾಷಣ ಎಲ್ಲ ಇದ್ದುದೇ. ಆದರೆ ಈ ದಿನಗಳಲ್ಲಿ ಪ್ರಚಾರಕ್ಕಿಂತ ಅಪಪ್ರಚಾರವೇ ಹೆಚ್ಚು. ಒಂದು ಪಕ್ಷದವರು ಇನ್ನೊಂದು ಪಕ್ಷದವರನ್ನು ಟೀಕಿಸುವುದೇ ಹೆಚ್ಚು. ಪ್ರಧಾನಿ ಮೋದಿಯವರು ಕರ್ನಾಟಕದಲ್ಲಿ ಇರುವುದು ಪರ್ಸೆಂಟೇಜ್‌ ಸರಕಾರ ಎಂದರು. ರಾಹುಲ್‌ ಗಾಂಧಿಯವರು ಮೋದಿಯೊಬ್ಬ ಸುಳ್ಳುಗಾರರೆಂದರು. ಅವರು ಜೆಡಿಎಸ್‌ನ್ನು ಬಿಜೆಪಿಯ ಬಿ ಟೀಂ ಎಂದರೆ ದೇವೇಗೌಡರು ಕಾಂಗ್ರೆಸ್‌ ಪಕ್ಷವನ್ನೇ ಜೆಡಿಎಸ್‌ನ ಬಿ ಟೀಂ ಎಂದು ಎದುರೇಟು ನೀಡಿದರು. ವಿರೋಧವೆಂದರೆ ಹಾಗೇ ಮೊಸರಿನಲ್ಲೂ ಕಲ್ಲು ಹುಡುಕುವ ಪ್ರಯತ್ನ. ಆರೋಪ ಪ್ರತ್ಯಾರೋಪ ಇವೆಲ್ಲಾ ಸರ್ವೆà ಸಾಮಾನ್ಯ. ಒಬ್ಬರನ್ನೊಬ್ಬರು ಕಾಲೆಳೆಯುವ ಸಂದರ್ಭದಲ್ಲಿ ಮುಂದೆ ಸರಕಾರ ರಚನೆಗೆ ಬಹುಮತ ಸಿಗದೆ ಹೋದಾಗ ಸರ್ಕಾರ ರಚಿಸಲು ಕೈ ಜೋಡಿಸ ಬೇಕಾಗುತ್ತದೆ ಎಂಬುದನ್ನೂ ಮರೆ ತಿರುತ್ತಾರೆ. ಇದೀಗ ಆರೋಪ ಪ್ರತ್ಯಾರೋಪದಲ್ಲಿ ತೊಡಗಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ತೃತೀಯ ರಂಗ ರಚನೆ ಬಗ್ಗೆ ಚಿಂತನೆ ನಡೆಸಿರುವ ಪಕ್ಷಗಳು.

ತಂತ್ರಜ್ಞಾನದ ಬಳಕೆ
ಆರೋಪ-ಪ್ರತ್ಯಾರೋಪಗಳಿಗೋಸ್ಕರವಾದರೂ ಡಿಜಿಟಲ್‌ ತಂತ್ರಜ್ಞಾನ ಪೂರ್ಣಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಫೇಸ್‌ಬುಕ್‌, ಟ್ವಿಟರ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರಗಳು ಹರಿದಾಡುತ್ತಿವೆ.ಮೋದಿ ಸರಕಾರದ ಬಗ್ಗೆ ಅಪಪ್ರಚಾರ ಹಬ್ಬಿಸಲೆಂದೇ ಲಕ್ಷ ಲಕ್ಷ ವ್ಯಯಿಸಲಾಗುತ್ತದೆ ಎಂಬ ವದಂತಿಯಿದೆ. ಕೇಂಬ್ರಿಜ್‌ ಅನಾಲಿಟಿಕಾ ಸಂಸ್ಥೆಯು ಫೇಸ್‌ಬುಕ್‌ ಬಳಕೆದಾರರ ದತ್ತಾಂಶವನ್ನು ಕದ್ದಿದ್ದು ಅದರ ದುರ್ಬಳಕೆಯಾಗುವ ಆತಂಕವೂ ಇದೆ. ಅಪ ಪ್ರಚಾರವಷ್ಟೇ ಅಲ್ಲ, ಕಾಲೆಳೆಯುವ ಕಲೆ ಎಲ್ಲ ಪಕ್ಷದವರಿಗೂ ಕರಗತವಾಗಿದೆ. ಮಾಜಿ ಸಂಸದೆ ರಮ್ಯ ಟ್ವೀಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಡ್‌ ಸಿಕ್ಕಿರುವುದಾಗಿ ಟ್ವೀಟ್‌ ಮಾಡಿ ಕಾಲೆಳೆಯಲು ಪ್ರಯತ್ನಿಸಿದ್ದಾರೆ. ಪ್ರತಿಯಾಗಿ ಮಂಡ್ಯ ಬಿಜೆಪಿ ಕಾರ್ಯಕರ್ತರೊಬ್ಬರು ಸಿದ್ದರಾಮಯ್ಯನವರ ಅಭಿವೃದ್ದಿ ಕಾರ್ಡ್‌ ಬಿಡುಗಡೆ ಮಾಡಿ ಟಾಂಗ್‌ ಕೊಟ್ಟಿದ್ದಾರೆ.

ಒಂದು ಚುನಾವಣೆ ಇನ್ನೊಂದು ಚುನಾವಣೆ ಮೇಲೆ ಪ್ರಭಾವ ಬೀರಬಲ್ಲದು. ರಾಜ್ಯ ವಿಧಾನಸಭಾ ಚುನಾವಣೆ 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯೂ ಆಗಬಲ್ಲದು. ಹಾಗಾಗಿಯೇ ಚುನಾವಣೆಯಿಂದ ಚುನಾವಣೆಗೆ ಕಣ ಕಾವೇರುತ್ತಲೇ ಹೋಗುತ್ತದೆ. ಅಸ್ತಿತ್ವಕ್ಕಾಗಿ ಹೆಣಗಾಡುವಾಗ ಅಡ್ಡಹಾದಿಯೂ ಸೈ ಅನಿಸುತ್ತದೆ. ತಮ್ಮ ಉಳಿಗಾಗಿ ರಾಜಕೀಯ ಪಕ್ಷಗಳು ಯಾವ ಮಟ್ಟಕ್ಕಿಳಿದರೂ ಅಚ್ಚರಿಯಿಲ್ಲ ಅಲ್ಲವೆ?

ರಾಂ ಎಲ್ಲಂಗಳ 

Advertisement

Udayavani is now on Telegram. Click here to join our channel and stay updated with the latest news.

Next