Advertisement

ಅಪರಾಧ ತಡೆಗೂ ಇನ್ನು ಪೊಲೀಸ್‌- ಜನರ‌ ವಾಟ್ಸಪ್‌ ಗ್ರೂಪ್‌

03:45 AM Jul 05, 2017 | Harsha Rao |

ಬಜಪೆ: ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರನ್ನು ತೊಡಗಿಸಿಕೊಳ್ಳುವ ನೆಲೆಯಲ್ಲಿ ಬಜಪೆ ಪೊಲೀಸ್‌ ಠಾಣೆ ಸಾಮಾಜಿಕ ಮಾಧ್ಯಮ ಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು, ವಾಟ್ಸಪ್‌ ಗ್ರೂಪ್‌ ಅನ್ನು ರೂಪಿಸಿದೆ. ಪೊಲೀಸ್‌ ಹಾಗೂ ಸಾರ್ವಜನಿಕರೊಂದಿಗೆ ಒಳ್ಳೆಯ ಸಂಬಂಧ, ಮಾಹಿತಿ ವಿನಿಮಯ ಸಾಧ್ಯವಾಗಿಸುವ ನಿಟ್ಟಿನಲ್ಲಿ ಈಗಾಗಲೇ ಹೊಸ ಬೀಟ್‌ ಪದ್ಧತಿ ಜಾರಿಗೆ ಬಂದಿದೆ. ಇದಕ್ಕೆ ಪೂರಕವಾಗಿ ಬಜಪೆ ಪೊಲೀಸ್‌ ಠಾಣೆ ವ್ಯಾಪ್ತಿಯ ವಾಟ್ಸಪ್‌ ಗ್ರೂಪ್‌ ಸಿದ್ಧಗೊಂಡಿದೆ.ಠಾಣೆಯ ವ್ಯಾಪ್ತಿಯ 25 ಗ್ರಾಮಗಳಿಗೆ 47 ಬೀಟ್‌ಗಳನ್ನು ನಿಯೋಜಿಸಲಾಗಿದೆ. ಎಲ್ಲ ಸಿಬಂದಿಯನ್ನು ಹೊಂದಿಸಿಕೊಂಡು ಈ ಬೀಟ್‌ ಗಳನ್ನು ರೂಪಿಸಲಾಗಿದೆ. ಈಗ ಒಂದೊಂದು ಬೀಟ್‌ಗಳಿಗೂ ಪ್ರತ್ಯೇಕ ವಾಟ್ಸಪ್‌ ಗ್ರೂಪ್‌ ಮಾಡಲಾಗುತ್ತಿದೆ.

Advertisement

ಬಜಪೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಸುಮಾರು 92 ಸಾವಿರ ಮಂದಿ ಜನಸಂಖ್ಯೆ ಇದೆ. ಒಂದು ಬೀಟ್‌ನಲ್ಲಿ 50 ಮಂದಿ ಸದಸ್ಯರಿದ್ದು, ಅವರ ಪೋನ್‌, ವಿಳಾಸ, ಭಾವಚಿತ್ರವನ್ನು ಹೊಂದಿರುತ್ತದೆ. ಹೆಚ್ಚಿನೆಡೆ ಒಂದು ಗ್ರಾಮವನ್ನು ಎರಡು ಬೀಟ್‌ಗಳಾಗಿಯೂ ಮಾಡಲಾಗಿದೆ. ಪ್ರತಿ ಬೀಟ್‌ಗೂ ಪ್ರತ್ಯೇಕ ಪೊಲೀಸರಿದ್ದಾರೆ. ಅವರೇ ಆ ಬೀಟ್‌ನ ಅಧಿಕಾರಿಯೂ ಸಹ. ಇವರೇ ತಮ್ಮ ಬೀಟ್‌ನ ವಾಟ್ಸಪ್‌ ಗ್ರೂಪ್‌ ರಚಿಸಿ, ನಿರ್ವಹಿಸುವರು. ಅದರಂತೆ ಬಜಪೆಯಲ್ಲಿ 47 ಬೀಟ್‌ಗಳಿದ್ದು, 50 ಮಂದಿಯಂತೆ 2,350 ಮಂದಿಯ ಪ್ರತ್ಯೇಕ ಗ್ರೂಪ್‌ಗ್ಳು ಆಗುತ್ತಿವೆ. ಅಂತೆಯೇ ಮೂಲ್ಕಿ, ಮೂಡಬಿದಿರೆ, ಸುರತ್ಕಲ್‌, ಬಜಪೆ, ಪಣಂಬೂರು, ಕಾವೂರು ಪೊಲೀಸ್‌ ಠಾಣೆಯನ್ನು ಒಳಗೊಂಡ ಪಣಂಬೂರು ಉತ್ತರ ವಿಭಾಗದಲ್ಲೂ ಇಂಥದ್ದೇ ಗ್ರೂಪ್‌ಗಳನ್ನು ಮಾಡಲಾಗುತ್ತಿದೆ. ಒಂದು ಬೀಟ್‌ನಲ್ಲಿ ಹಾಕಲಾದ ಮೆಸೇಜ್‌(ಸಂದೇಶ) ಪಣಂಬೂರು ಉತ್ತರ ವಿಭಾಗದ ಎಲ್ಲ ಪೊಲೀಸ್‌ ಠಾಣೆಗಳಿಗೆ ತಿಳಿಯಲಿದೆ.ಇದರಿಂದ ಎಲ್ಲೇ ಅಪರಾಧ/ ಅಪಘಾತ ನಡೆದರೂ ಕ್ಷಣಾರ್ಧದಲ್ಲಿ ಎಲ್ಲರಿಗೂ ತಿಳಿಯಲಿದೆ. ಇದನ್ನು ಕಂಡು ಪೊಲೀಸರು ತತ್‌ ಕ್ಷಣ ಕ್ರಿಯಾಶೀಲವಾಗಲು ನೆರವಾಗಲಿದೆ. ಸುಳ್ಳು ಮೆಸೇಜ್‌ನ ಬಗ್ಗೆಯೂ ಪೊಲೀಸರಿಗೆ ತಿಳಿಸಬಹುದಾಗಿದೆ. ಸರ ಕಳ್ಳತನ, ಅಪಘಾತ ತಡೆ ಹಾಗೂ ತಕ್ಷಣ ಸ್ಪಂದನೆ,ತುರ್ತು ಸೇವೆ ಇತ್ಯಾದಿಗೆ ಈ ವಾಟ್ಸಪ್‌ ಗ್ರೂಪ್‌ ಬಳಕೆಯಾಗಲಿದೆ.

ಸಿಸಿ ಕೆಮರಾಗಿಂತಲೂ ಅನುಕೂಲ
ಒಂದು ಕಡೆ ಯಾವುದೇ ಘಟನೆ ನಡೆದರೆ ಪೊಲೀಸ್‌ ಸ್ನೇಹಿ ಮಂದಿ ಫೋಟೋ ಕ್ಲಿಕ್‌ ಮಾಡಿದಲ್ಲಿ ಅಪರಾಧ ಬಗ್ಗೆ ಮಾಹಿತಿ ಸಿಗಲಿದೆ. ನೋ ಪಾರ್ಕಿಂಗ್‌, ತ್ರಿಬಲ್‌ ರೈಡ್‌ಗಳನ್ನು ಮಾಡಿದರೂ ಈ ಗ್ರೂಪ್‌ನಲ್ಲಿ ಮಾಹಿತಿ ಹಂಚಿಕೊಳ್ಳಬಹುದಾಗಿದೆ. ಪೊಲೀಸ್‌ ನಾಕಾ ಬಂದಿಗೂ ಸುಲಭವಾಗಲಿದೆ.

ಮಾಹಿತಿ ಪುಸ್ತಕ
ಹೊಸ ಬೀಟ್‌ಗಳ ಮಾಹಿತಿ ಪುಸ್ತಕದಲ್ಲಿ ಬೀಟ್‌ ನಕಾಶೆ, ಸದಸ್ಯರ ಹೆಸರು- ವಿವರ, ರೌಡಿಗಳ ವಿವರ, ಗೂಂಡಾ ಕಾಯಿದೆಯಡಿ ಆರೋಪಿತರು. ಕಮ್ಯೂನಲ್‌ ಗೂಂಡಾಗಳು, ಪೂರ್ವ ಸಜೆ ಪಡೆದವರು, ಚುನಾಯಿತ ಪ್ರತಿನಿಧಿಗಳು, ಭದ್ರತೆಗೆ ಒಳಪಟ್ಟ ವ್ಯಕ್ತಿಗಳು, ಪ್ರಮುಖ ಧಾರ್ಮಿಕ ಮುಖಂಡರು, ದೇವಸ್ಥಾನ, ಚರ್ಚ್‌, ಮಸೀದಿಗಳು, ಸರಕಾರಿ ಕಚೇರಿಗಳು, ಬ್ಯಾಂಕ್‌ಗಳು, ಎಟಿಎಂಗಳು, ಮಾಲ್‌ಗ‌ಳು, ಗುಜರಿ ಅಂಗಡಿಗಳು, ಹಾಲ್‌ಗ‌ಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲನಿಗಳು, ಕಳವು ಮಾಲು ಸ್ವೀಕರಿಸುವವರು,ಅಭರಣ ಅಂಗಡಿಗಳು, ಲಾಡ್ಜುಗಳು, ಕಾಲೇಜುಗಳು, ರಸ್ತೆಗಳು, ಹಾಸ್ಟೆಲುಗಳು, ಸೈಬರ್‌ ಕೆಫೆಗಳು, ಕ್ಲಬ್‌ಗಳು, ಬಂದೂಕು ಲೈಸೆನ್ಸ್‌ ಹೊಂದಿರುವವರು, ಮಟ್ಕಾ ಆಡಿಸುವವರು, ಮಸಾಜು ಪಾರ್ಲರು ನಡೆಸುವವರು- ಹೀಗೆ ಒಟ್ಟು 78 ವಿಷಯಗಳ ಮಾಹಿತಿ ಕ್ರೋಡೀಕರಣವಾಗಿರಲಿದೆ. ತಿಂಗಳಿಗೆ ಮೂರು ಅಥವಾ ನಾಲ್ಕು ಬೀಟ್‌ ಸಭೆಗಳನ್ನು ನಡೆಸಬೇಕು. ಕ್ರಿಮಿನಲ್‌ ಪ್ರಕರಣ ಇದ್ದವರನ್ನು ಸದಸ್ಯರಾಗಿ ಮಾಡುವಂತಿಲ್ಲ. 

- ಸುಬ್ರಾಯ ನಾಯಕ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next