ಬೆಂಗಳೂರು: ನಾಪತ್ತೆಯಾಗಿ ತೆರೆದ ಬಾವಿಯಲ್ಲಿ ಶವವಾಗಿ ಪತ್ತೆಯಾದ ಮಡಿವಾಳ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಶಿವರಾಜ್ ಸುಳಿವು ಪತ್ತೆ ಹಚ್ಚಲು ಪೊಲೀಸರು, 250 ಸಿಸಿ ಕ್ಯಾಮೆರಾಗಳ ನೂರಾರು ದೃಶ್ಯಗಳನ್ನು ಪರಿಶೀಲಿಸಿದ್ದರು ಎಂದು ತಿಳಿದು ಬಂದಿದೆ.
ಶಿವರಾಜ್ ಅವರ ಮೃತದೇಹ ಸೋಮವಾರ ಜ್ಞಾನಭಾರತಿ ಆವರಣ ತೆರೆದ ಬಾವಿಯಲ್ಲಿ ಪತ್ತೆಯಾಗಿತ್ತು. ಜೂನ್ 25ರಂದು ಶಿವರಾಜ್ ಅವರು ನಾಪತ್ತೆಯಾಗಿದ್ದರು. ನಾಪತ್ತೆ ಪ್ರಕರಣ ದೂರು ದಾಖಲು ಮಾಡಿಕೊಂಡಿದ್ದ ಸುಬ್ರಮಣ್ಯಪುರ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದರು. ಮತ್ತೂಂದೆಡೆ ಮಡಿವಾಳ ಠಾಣೆ ಪೊಲೀಸರೂ ಶೋಧ ನಡೆಸಿದ್ದರು. ಅವರನ್ನು ಪತ್ತೆ ಮಾಡಲು ಹಲವು ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಲಾ ಗಿತ್ತು. ಆದರೂ ಸುಳಿವು ಸಿಕ್ಕಿರಲಿಲ್ಲ.
ಕೊನೆಯಲ್ಲಿ ಶಿವರಾಜ್ ಅವರು ಜ್ಞಾನಭಾರತಿ ಮೆಟ್ರೋ ನಿಲ್ದಾಣಕ್ಕೆ ಬಂದು ವಾಹನ ನಿಲುಗಡೆ ಸ್ಥಳದಲ್ಲಿ ಬೈಕ್ ನಿಲುಗಡೆ ಮಾಡಿದ್ದು ಕಾಣಿಸಿತ್ತು. ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿದ್ದು ಕಾಣಿಸಿತ್ತು. ನಂತರ ನೀರಿನ ಬಾಟಲಿ ಹಿಡಿದು ಬೆಂಗಳೂರು ವಿವಿ ಆವರಣದ ಒಳಗೆ ನಡೆದುಕೊಂಡು ತೆರಳಿದ್ದ ದೃಶ್ಯ ಮತ್ತೂಂದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಆಧರಿಸಿ ಸುತ್ತಮುತ್ತ ಹುಡುಕಾಟ ನಡೆಸಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದರು.
ಆರಂಭದಲ್ಲಿ ಶಿವರಾಜ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಅಲ್ಲದೆ, ಮೃತದೇಹ ಹೊರ ತೆಗೆದಾಗ ಕಲ್ಲು ಕಟ್ಟಿಕೊಂಡಿರುವುದು ಪತ್ತೆಯಾಗಿದೆ. ಹೀಗಾಗಿ ಇದೊಂದು ಆತ್ಮಹತ್ಯೆ ಎಂದು ನಿರ್ಧಾರಕ್ಕೆ ಬರಲಾಗಿದೆ. ಆದರೂ ಕೆಲವೊಂದು ಅನುಮಾನಗಳಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು