Advertisement

ನೂತನ ಮೈದಾನದಲ್ಲಿ ಪೊಲೀಸರ ಹದ್ದಿನ ಕಣ್ಣು

05:43 AM Mar 18, 2019 | Team Udayavani |

ಕಲಬುರಗಿ: ಲೋಕಸಭೆ ಚುನಾವಣಾ ಪ್ರಚಾರಕ್ಕಾಗಿ ಸೋಮವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರದ ನೂತನ ಮಹಾವಿದ್ಯಾಲಯದಲ್ಲಿ ಕಾಂಗ್ರೆಸ್‌ ಪರಿವರ್ತನಾ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರಚಾರ ಭಾಷಣ ಮಾಡಲಿದ್ದಾರೆ.

Advertisement

ರಾಹುಲ್‌ ಗಾಂಧಿ ಭಾಷಣ ಮಾಡುವ ನೂತನ ಮಹಾವಿದ್ಯಾಲಯದ ಮೈದಾನ ಸೇರಿದಂತೆ ಎಲ್ಲೆಡೆ ಭಾರಿ ಭದ್ರತೆ ಕೈಗೊಳ್ಳಲಾಗಿದ್ದು, ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಕೆಎಸ್‌ಆರ್‌ಪಿ 6, ಡಿಎಆರ್‌ ತುಕಡಿ ಐದು, 300 ಗೃಹ ರಕ್ಷಕ ದಳದ ಸಿಬ್ಬಂದಿ ಸೇರಿದಂತೆ ಸುಮಾರು 1,500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
 
ಐಜಿಪಿ ಮನೀಷ್‌ ಖರ್ಬೇಕರ್‌ ನೇತೃತ್ವದಲ್ಲಿ ನಾಲ್ವರು ಎಸ್‌ಪಿ ದರ್ಜೆ ಅಧಿಕಾರಿಗಳು, 12 ಜನ ಡಿವೈಎಸ್‌ಪಿಗಳು, 30 ಮಂದಿ ಇನ್ಸ್‌ಪೆಕ್ಟರ್‌ ಗಳು, 50 ಜನ ಪಿಎಸ್‌ಐಗಳು, 280 ಮಂದಿ ಪ್ರೊಬೇಷನರಿ ಪಿಎಸ್‌ಐಗಳು, 140 ಎಎಸ್‌ ಐಗಳನ್ನು ಒಳಗೊಂಡಂತೆ ಹಿರಿಯ ಪೊಲೀಸರು ಭದ್ರತೆ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ. ನೂತನ ಮಹಾವಿದ್ಯಾಲಯ ಮೈದಾನ ಹಾಗೂ ಮತ್ತಿತರ ಸೂಕ್ಷ್ಮ ಸ್ಥಳದಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ ಎಂದು ಎಸ್‌ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ತಿಳಿಸಿದ್ದಾರೆ. 

ವಿಮಾನ ಮೂಲಕ ನಗರದ ಹೊರವಲಯದ ವಿಮಾನ ನಿಲ್ದಾಣಕ್ಕೆ ರಾಹುಲ್‌ ಗಾಂಧಿ ಆಗಮಿಸುವರು. ಇದಕ್ಕೂ 20 ನಿಮಿಷ ಮುಂಚೆ ಅವರು ಬರುವ ಮಾರ್ಗದಲ್ಲಿ ಸಂಚಾರ ನಿಷೇಧಿಸಲಾಗಿರುತ್ತದೆ. ಅದೇ ರೀತಿ ಕಾರ್ಯಕ್ರಮ ಮುಗಿದ ಬಳಿಕ ತೆರಳುವ ಮಾರ್ಗದಲ್ಲಿ ಸಂಚಾರ ನಿಷೇಧ ಇರುತ್ತದೆ.
 
ಈ ಸಂದರ್ಭದಲ್ಲಿ ಹಲವು ರಸ್ತೆಗಳಲ್ಲಿ ಸಾರ್ವಜನಿಕರ ಹಾಗೂ ವಾಹನಗಳ ಸಂಚಾರ ಬದಲಾವಣೆ ಮಾಡಲಾಗಿದೆ. ಅನ್ನಪೂರ್ಣ ಕ್ರಾಸ್‌ನಿಂದ ಸೇಡಂ ರಿಂಗ್‌, ವಿಮಾನ ನಿಲ್ದಾಣದವರೆಗೆ ವಾಹನ ಸಂಚಾರ ನಿಷೇಧ ಇರುತ್ತದೆ ಎಂದು ತಿಳಿಸಿದರು. 

ವಿಮಾನದಲ್ಲಿ ಆಗಮನ
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಗರಕ್ಕೆ ಆಗಮಿಸಿ ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ತಮ್ಮ ನಿವಾಸದಲ್ಲಿ ರವಿವಾರ ಪಕ್ಷದ ಪ್ರಮಖರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿ ವಿಶೇಷ ವಿಮಾನದಲ್ಲಿ ನಗರದ ವಿಮಾನ ನಿಲ್ದಾಣಕ್ಕೆ ಬರಲು ಅನುಮತಿ ನೀಡಲಾಗಿದೆ. ಮಧ್ಯಾಹ್ನ 12:30ಕ್ಕೆ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ನಂತರ ಸಮಾವೇಶದ ಸ್ಥಳಕ್ಕೆ ಆಗಮಿಸಿ ಭಾಷಣ ಮಾಡಿ ಮಧ್ಯಾಹ್ನ 3 ಗಂಟೆಗೆ ವಿಮಾನದಲ್ಲೇ ಬೆಂಗಳೂರಿಗೆ ತೆರಳುವರು ಎಂದು ತಿಳಿಸಿದರು.

ನಂತರ ಖರ್ಗೆ ಅವರು ಸಮಾವೇಶ ನಡೆಯುವ ನೂತನ ಮಹಾವಿದ್ಯಾಲಯದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿವರಾದ ರಾಜಶೇಖರ ಪಾಟೀಲ, ಪ್ರಿಯಾಂಕ್‌ ಖರ್ಗೆ, ಶಾಸಕರಾದ ಎಂ.ವೈ. ಪಾಟೀಲ, ಡಾ| ಅಜಯಸಿಂಗ್‌, ಅರವಿಂದ ಅರಳಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಎನ್‌.ಡಿ. ಪಾಟೀಲ, ಯು.ಬಿ. ವೆಂಕಟೇಶ ಮುಂತಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next