Advertisement

ಪೊಲೀಸರ ಸ್ಪಂದನೆ ಪರಿತ್ಯಕ್ತ ವೃದ್ಧೆ ಸಹೋದರಿ ಮನೆಗೆ

09:40 AM Jul 29, 2018 | Team Udayavani |

ವೇಣೂರು: ಪತಿ ಹಾಗೂ ಪುತ್ರನಿಂದ ಪರಿತ್ಯಕ್ತಳಾಗಿ ಸಾರ್ವಜನಿಕ ಶೌಚಾಲಯದ ಸ್ನಾನಗೃಹವನ್ನೇ ಆವಾಸಸ್ಥಾನ ಮಾಡಿಕೊಂಡಿದ್ದ ವೃದ್ಧ ಮಹಿಳೆಯ ಸಂಕಷ್ಟಕ್ಕೆ ವೇಣೂರು ಪೊಲೀಸರು ಸ್ಪಂದಿಸಿದ್ದು, ತಾತ್ಕಾಲಿಕವಾಗಿ ಆಕೆಯ ಸಹೋದರಿಯ ಮನೆಯಲ್ಲಿ ಆಶ್ರಯದ ವ್ಯವಸ್ಥೆ ಮಾಡಿದ್ದಾರೆ.

Advertisement

ಕಳೆದೆರಡು ವರ್ಷಗಳಿಂದ ವೇಣೂರು ಮಹಾವೀರ ನಗರದ ಶೌಚಾಲಯದ ಸ್ನಾನ ಗೃಹದಲ್ಲಿ ವಾಸವಾಗಿರುವ ಸರಸ್ವತಿ (67) ಅವರು ಬಗ್ಗೆ ಉದಯವಾಣಿ ಶನಿವಾರ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಇದನ್ನು ಗಮನಿಸಿದ ವೇಣೂರು ಪೊಲೀಸರು ಕೂಡಲೇ ಆಕೆಯನ್ನು ಭೇಟಿಯಾಗಿ ವಿಚಾರಿಸಿದರು. ಕಳಸ ದಲ್ಲಿರುವ ಪತಿ ಹಾಗೂ ಪುತ್ರನಿಗೆ ವಿಪರೀತ ಕುಡಿತದ ಚಟವಿದ್ದು, ಗಲಾಟೆ ನಡೆಸುತ್ತಾರೆ. ಅದನ್ನು ತಾಳಲಾರದೆ ತಾನು ಇಲ್ಲಿ ಬಂದು ನೆಲೆಸಿದ್ದೇನೆ ಎಂದು ಸರಸ್ವತಿ ಹೇಳಿದರು. ವೇಣೂರಿನಲ್ಲಿಯೇ ನೆಲೆಸಿರುವ ಆಕೆಯ ಸಹೋದರಿ ಸುನಂದಾ ಅವರ ಮನವೊಲಿಸಿದ ಪೊಲೀಸರು ಸರಸ್ವತಿಗೆ ಅವರ ಮನೆಯಲ್ಲಿ ತಂಗುವ ವ್ಯವಸ್ಥೆ ಕಲ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಪತಿ ಹಾಗೂ ಪುತ್ರನನ್ನು ಕಳಸದಿಂದ ಕರೆಸಿ ವಿಚಾರಿಸಿ ಸರಸ್ವತಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಗ್ರಾ.ಪಂ.ನ್ನು ಸಂಪರ್ಕಿಸಿ ಸರಕಾರದಿಂದ ಲಭಿಸುವ ಸವಲತ್ತು ಒದಗಿಸು ವುದಾಗಿಯೂ ಭರವಸೆ ನೀಡಿದ್ದಾರೆ. 

ಮುಖಮಾಡದ ಜನಪ್ರತಿನಿಧಿಗಳು!
ಅನಾಥ ವೃದ್ಧೆಗೆ ಆಶ್ರಯ ನೀಡಲು ವೇಣೂರಿನ ಕೆಲವು ಸಮಾಜಸೇವಾ ಸಂಘಟನೆಗಳು, ಉದ್ಯಮಿಗಳು, ನಾಗರಿಕರು ಮುಂದೆ ಬಂದಿದ್ದಾರೆ. ಆದರೆ ಸಮಸ್ಯೆಗೆ ಸ್ಪಂದಿಸಬೇಕಾದ ಯಾವುದೇ ಜನಪ್ರತಿನಿಧಿಗಳಾಗಲಿ, ಇತರ ಇಲಾಖೆಗಳ ಅಧಿಕಾರಿಗಳಾಗಲಿ ಇತ್ತ ಭೇಟಿ ನೀಡದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next