Advertisement

ವಿಷ ಬೀಜ ಬಿತ್ತಿ ಮತ ವಿಭಜಿಸುವ ಷಡ್ಯಂತ್ರ

05:03 PM Nov 26, 2018 | Team Udayavani |

ಚಿತ್ರದುರ್ಗ: ದೇಶದಲ್ಲಿ ಕೋಮುವಾದಿಗಳು ಧರ್ಮ, ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಮತ ವಿಭಜಿಸುವ ಷಡ್ಯಂತ್ರ ಮಾಡುತ್ತಿದ್ದು ಎಚ್ಚರಿಕೆಯಿಂದ ಇರುವಂತೆ ಇಹ್ಸಾನ್‌ ಸಂಸ್ಥೆ ಬೆಂಗಳೂರಿನ ಅಧ್ಯಕ್ಷ ಎನ್‌.ಕೆ.ಎಂ. ಮೌಲನಾ ಶಾಪಿ ಸಹದಿ ಹೇಳಿದರು.

Advertisement

ಇಲ್ಲಿನ ಪತ್ರಕರ್ತರ ಭವನದಲ್ಲಿ ಕರ್ನಾಟಕ ಮುಸ್ಲಿಂ ಕಲ್ಚರಲ್‌ ಅಕಾಡೆಮಿಯಿಂದ ಭಾನುವಾರ ನಡೆದ ಅಬ್ದುಲ್‌ ನಜೀರ್‌ ಸಾಬ್‌ ಮತ್ತು ಗ್ರಾಮೀಣಾಭಿವೃದ್ಧಿ ಚಿಂತನೆಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣದ ಸಮ್ಮುಖ ವಹಿಸಿ ಮಾತನಾಡಿದರು. ಜಾತ್ಯತೀತ ದೇಶ ಭಾರತದಲ್ಲಿ ಸಂವಿಧಾನ ಬದಲಾವಣೆ ಮಾಡಲು ಹೊರಟಿರುವವರ ವಿರುದ್ಧ ಜಾಗೃತರಾಗಿ ಹೋರಾಡಲು ಒಗ್ಗಟ್ಟಾಗಬೇಕಿದೆ. ಅದಕ್ಕಾಗಿ 2019 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿಗಳಿಗೆ ತಕ್ಕಪಾಠ ಕಲಿಸಿ ಭಾರತವನ್ನು ಕಾಪಾಡಬೇಕಿದೆ ಎಂದರು.

ಮುಸ್ಲಿಂರಿಗೆ ನಾಯಕತ್ವದ ಕೊರತೆಯಿದೆ. ಸೂಕ್ತ ನಾಯಕತ್ವದ ಅಗತ್ಯವಿದೆ. ಚುನಾವಣೆ ದೃಷ್ಟಿಯಿಂದ ಧರ್ಮ, ಜಾತಿಗಳ ಮಧ್ಯ ಸಂಘರ್ಷ ಉಂಟು ಮಾಡುತ್ತಿರುವುದು ವಿಷಾದದ ಸಂಗತಿ. ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಎಲ್ಲರನ್ನು ನೆನಪಿಸಿಕೊಳ್ಳುತ್ತಾರೆ. ಕೋಮುವಾದಿಗಳ ವಿರುದ್ಧ ಇನ್ನಾದರೂ ಜಾಗೃತಗೊಂಡು ಚುನಾವಣೆಯಲ್ಲಿ ನೀಡುವ ಆಸೆ ಆಮಿಷಗಳಿಗೆ ಬಲಿಯಾಗದೆ ಅವರನ್ನು ಸೋಲಿಸಬೇಕು ಎಂದು ಕರೆ ನೀಡಿದರು.

ಯಾವ ಧರ್ಮವನ್ನು ಯಾರ ಮೇಲೂ ಬಲವಂತವಾಗಿ ಹೇರಬಾರದು. ಭಾವನೆಗಳಿಗೆ ವಿರುದ್ಧವಾಗಿ ಮಾತನಾಡಿದಾಗ ಸಂಘರ್ಷ, ಅಸಮಾನತೆ, ಅಶಾಂತಿಯುಂಟಾಗುತ್ತದೆ ಜಗತ್ತಿಗೆ ಶಾಂತಿ ಸಮಾನತೆಯ ಸಂದೇಶ ಸಾರಿದ ಪ್ರವಾದಿ ಮಹಮದ್‌ ಪೈಗಂಬರ್‌ ಅವರನ್ನು ವಿರೋಧಿಸುವವರು ಇದ್ದರು. ಅದೆ ರೀತಿ ಎಲ್ಲ ಧರ್ಮದ ಶರಣರು ದಾರ್ಶನಿಕರುಗಳು ಸಾಕಷ್ಟು ವಿರೋಧಗಳನ್ನು ಎದುರಿಸಿದ್ದರು. ಬಾಯಾರಿದ ಮನುಷ್ಯನಿಗೆ ನೀರು ಕೊಡುವುದಕ್ಕಿಂತ ದೊಡ್ಡ ಧರ್ಮ ಬೇರೆ ಯಾವುದು ಇಲ್ಲ. ಹಾಗಾಗಿ ನಜೀರ್‌
ಸಾಬ್‌ರವರ ಕನಸು ನನಸಾಗಬೇಕಾದರೆ ಅವರ ಚಿಂತನೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಅಭಿವೃದ್ಧಿಯ ಕಡೆ ಹೋಗಬೇಕು ಎಂದರು.

ದಲಿತ ಮುಖಂಡ ಮಾಡನಾಯಕನಹಳ್ಳಿ ರಂಗಪ್ಪ ಮಾತನಾಡಿ, ದುರ್ಗದಲ್ಲಿ ಧಾರ್ಮಿಕ ಮೆರವಣಿಗೆ ನೋಡಲು ಆಗುವುದಿಲ್ಲ. ಜನರಲ್ಲಿ ಭಯ ಹುಟ್ಟಿಸಿ ಮೆರವಣಿಗೆ ಮಾಡುವುದು ಯಾರಿಗೂ ಶೋಭೆಯಲ್ಲ. ಧರ್ಮ ಅವರವರ ವೈಯಕ್ತಿಕ ವಿಚಾರ. ಆದರೆ ಜಾತಿ ಧರ್ಮಗಳ ವಿರುದ್ಧ ಶಕ್ತಿ ಪ್ರದರ್ಶನ ಮಾಡಬಾರದು. ಧರ್ಮದ ಹೊರತಾಗಿ ಪ್ರಗತಿಪರವಾಗಿ ಆಲೋಚನೆ ಮಾಡುವವರು ದೇಶಕ್ಕೆ ಬೇಕಾಗಿದೆ ಎಂದು ಹೇಳಿದರು.

Advertisement

ದೇಶದಲ್ಲಿ 25 ರಿಂದ 30 ಕೋಟಿ ಮುಸ್ಲಿಂ ಜನಾಂಗದವರಿದ್ದಾರೆ. ಆದರೆ ನಾಯಕತ್ವದ ಕೊರತೆ ಇದೆ. ನಿಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣ ಸಾಚಾರ್‌ ವರದಿ ಇನ್ನು ಜಾರಿಯಾಗಿಲ್ಲ. ವರದಿ ಜಾರಿಯಾಗಲೂ ಪ್ರತಿಯೊಬ್ಬರೂ ಒಗ್ಗಟ್ಟಾಗಬೇಕು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನರೇನಹಳ್ಳಿ ಅರುಣ್‌ಕುಮಾರ್‌ ಮಾತನಾಡಿ, ನಜೀರ್‌ಸಾಬ್‌ ಜನರ ನೀರಿನ ದಾಹ ತೀರಿಸಿದ್ಧರಿಂದ ಅವರನ್ನು ನೀರ್‌ಸಾಬಿ ಎಂದೂ ಈಗಲೂ ಜನ ಅಭಿಮಾನದಿಂದ ಕರೆಯುತ್ತಿದ್ದಾರೆ. ಕೋಮುವಾದಿಗಳು ಜಾತಿ ಜಾತಿಗಳ ನಡುವೆ ಸಂಘರ್ಷವಿಟ್ಟು ಶಾಂತಿ ಕದಡುತ್ತಿದ್ದಾರೆ. ಟಿಪ್ಪು ಜಯಂತಿ ಮಾಡಿದರೆ
ದೊಡ್ಡ ಅನಾಹುತವೇ ಆಗುತ್ತೇನೋ ಎನ್ನುವ ರೀತಿಯಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ನಜೀರ್‌ಸಾಬ್‌, ಟಿಪ್ಪು ಸುಲ್ತಾನ್‌, ಅಬ್ದುಲ್‌ಕಲಾಂರವರ ಕೊಡುಗೆ ದೇಶಕ್ಕೆ ಅಪಾರ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದರು. 

ನ್ಯಾಯವಾದಿ ಬಿ.ಕೆ.ರಹಮತ್‌ವುಲ್ಲಾ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಪತ್ರಕರ್ತ ಸೈಯದ್‌ ಕನ್ನಡ ನಜೀರ್‌, ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂ.ಹನೀಫ್‌, ಕರ್ನಾಟಕ ಮುಸ್ಲಿಂ ಕಲ್ಚರಲ್‌ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್‌, ಜಾನಪದ ಹಾಡುಗಾರ ಹರೀಶ್‌ ಇದ್ಧರು.

Advertisement

Udayavani is now on Telegram. Click here to join our channel and stay updated with the latest news.

Next