Advertisement

ರಾತ್ರಿಯಿಡೀ ರಸ್ತೆಯಲ್ಲಿ ಬಿಡಿಸುತ್ತಿದ್ದ ಚಿತ್ತಾರವೇ ಅದ್ಭುತ!

12:15 AM Apr 15, 2024 | Team Udayavani |

ಬಂಟ್ವಾಳ: ಹಿಂದೆ ಚುನಾವಣೆ ಎಂದರೆ ಸಾಕು, ಹಗಲು ಹೊತ್ತಿನಲ್ಲಿ ಕೇದಗೆ (ತುಳುವಿನಲ್ಲಿ ಮುಂಡೇವು) ಗಿಡಗಳ ಪೊದೆಯಿಂದ ಬಿಳಲನ್ನು ಕಡಿದು ಅದನ್ನು ಜಜ್ಜಿ ಬ್ರಶ್‌ ತಯಾರಿಸಿ ಬಳಿಕ ರಾತ್ರಿಯಿಡೀ ಸುಣ್ಣದಿಂದ ರಸ್ತೆಯಲ್ಲಿ ನಮ್ಮ ಪಕ್ಷದ ಹೆಸರು, ಚಿಹ್ನೆ, ಅಭ್ಯರ್ಥಿಯ ಹೆಸರು ಬರೆಯುವ ಕೆಲಸ. ಇದು ಅಂದಿನ ಪ್ರಚಾರದ ಪ್ರಮುಖ ಕೆಲಸವಾಗಿತ್ತು ಎಂದು ಸುಮಾರು 25 ವರ್ಷಗಳ ಹಿಂದಿನ ಚುನಾವಣ ಪ್ರಚಾರದ ಕಾರ್ಯವೈಖರಿಯನ್ನು ಹಿರಿಯರಾದ ಕೈಯೂರು ನಾರಾಯಣ ಭಟ್‌ ಅವರು ನೆನಪಿಸುತ್ತಾರೆ.

Advertisement

ನಮ್ಮ ಕಾಲದಲ್ಲಿ ಪ್ರಚಾರಕ್ಕಾಗಿ ಪಕ್ಷದಿಂದ ಖರ್ಚಿಗೆ ದುಡ್ಡು ಬರುವ ಕ್ರಮವಿಲ್ಲ, ನಮ್ಮ ಕೈಯಲ್ಲಿ ಇದ್ದರೆ ಹಾಕಬೇಕು. ಇಲ್ಲದೇ ಇದ್ದರೆ ಯಾರಾದರೂ ಖರ್ಚಿಗೆ ಒಂದಷ್ಟು ಹಣವನ್ನು ನೀಡಿರುತ್ತಾರೆ. ಅದರಿಂದ ಸುಣ್ಣ ಖರೀದಿಸಿ ಊರಿಡೀ ಬರೆಯುವ ಕೆಲಸ ನಮ್ಮದಾಗಿತ್ತು. ಆಗಿನ ದಿನಗಳಲ್ಲಿ ರಾತ್ರಿ ವಾಹನ ಸಂಚಾರವಿರಲಿಲ್ಲ, ಹೀಗಾಗಿ ರಾತ್ರಿ ರಸ್ತೆಯಲ್ಲಿ ಬರೆದರೆ ಬೆಳಗ್ಗೆ ಸೂರ್ಯ ಮೇಲೇರುವ ವೇಳೆ ಒಣಗುತ್ತಿತ್ತು. ರಾತ್ರಿ ಬರೆಯಲು ಬೆಳಕಿನ ವ್ಯವಸ್ಥೆಗೆ ಚಿಮಿಣಿ, ಲಾಟನ್‌, ಗೆರಟೆಯಲ್ಲಿ ಇರಿಸಿದ ಕ್ಯಾಂಡಲ್‌ ಬಳಸುತ್ತಿದ್ದೆವು. ಒಂದಷ್ಟು ಹಣವಿದ್ದರೆ ಗ್ಯಾಸ್‌ಲೈಟ್‌ಗಳನ್ನು ಬಳಸಲಾಗುತ್ತಿತ್ತು.

ಜತೆಗೆ ಪೇಪರ್‌ಗಳಲ್ಲಿ ಬಣ್ಣದ ಪೆನ್ನುಗಳನ್ನು ಬಳಸಿ ನಾವೇ ಬರೆದು ಗೋಡೆಗಳಲ್ಲಿ ಅಂಟಿಸುವುದು ಕೂಡ ಒಂದು ರೀತಿಯ ಪ್ರಚಾರದ ಕ್ರಮವಾಗಿತ್ತು. ಇನ್ನು ರಸ್ತೆ ಬದಿಯ ದೊಡ್ಡ ದೊಡ್ಡ ಧರೆಗಳನ್ನು ಪಕ್ಷದ ಚಿಹ್ನೆಯ ರೀತಿ ಕೆತ್ತಿ ಅದಕ್ಕೆ ಸುಣ್ಣ ಬಳಿಯುವ ಕ್ರಮವೂ ಜೋರಾಗಿತ್ತು. ಜತೆಗೆ ತಂಗುದಾಣ, ಕೆಲವು ಕಟ್ಟಡದ ಗೋಡೆಗಳಲ್ಲೂ ಬರೆದು ಪ್ರಚಾರದ ಕಾರ್ಯ ನಡೆಯುತ್ತಿತ್ತು.

ಬ್ಯಾನರ್‌ಗಳಲ್ಲೇ ಸ್ಪರ್ಧೆ
ಹಿಂದೆ ಬಟ್ಟೆಗಳಲ್ಲಿ ಚಿತ್ರ ಬರೆದು ಅದನ್ನು ಬ್ಯಾನರ್‌ಗಳಾಗಿ ಉಪಯೋಗಿಸಲಾಗುತ್ತಿದ್ದು, ಇದು ಹಣವಿದ್ದವರು ಮಾಡುವ ಚುನಾವಣ ಪ್ರಚಾರವಾಗಿತ್ತು. ಒಬ್ಬರು ಬ್ಯಾನರ್‌ ಹಾಕಿದ್ದಾರೆ ಎಂದಾದರೆ ಅದರ ಪಕ್ಕದಲ್ಲೋ ಅಥವಾ ಅದಕ್ಕಿಂತ ಎತ್ತರದಲ್ಲೋ ಇನ್ನೊಂದು ಪಕ್ಷದ ಬ್ಯಾನರ್‌ ಹಾಕಲಾಗುತ್ತಿದ್ದು, ಬ್ಯಾನರ್‌ ಹಾಕುವುದರಲ್ಲೂ ಒಂದಷ್ಟು ಸ್ಪರ್ಧೆ ನಡೆಯುತ್ತಿತ್ತು. ಇನ್ನೂ ಒಂದಷ್ಟು ಹಣವಿದ್ದರೆ ಜೀಪ್‌ಗ್ಳಿಗೆ ಮೈಕ್‌ ಕಟ್ಟಿ ಪ್ರಚಾರ ಮಾಡಲಾಗುತ್ತಿತ್ತು. ಇಂತಹ ಪ್ರಚಾರಗಳಿಗೆ ಈಗಿನಂತೆ ಅನುಮತಿ ಪಡೆಯುವ ಕ್ರಮ ಇರಲಿಲ್ಲ.

ಪ್ರತೀ ಮನೆಯಲ್ಲೂ ಒಂದಷ್ಟು ಹೊತ್ತು ಮಾತು
ಈಗಿನ ಹಾಗೆ ಎಲ್ಲರಲ್ಲೂ ಫೋನ್‌ಗಳು, ಸಾಮಾಜಿಕ ಜಾಲತಾಣಗಳು ಇಲ್ಲದೇ ಇರುವುದರಿಂದ ಮನೆ ಮನೆ ಭೇಟಿಯೇ ಪ್ರಮುಖ ಪ್ರಚಾರವಾಗಿತ್ತು. ಈಗಿನ ಹಾಗೆ ಕರಪತ್ರವನ್ನು ಕೊಟ್ಟು ಮತ ಹಾಕಿ ಎಂದು ಹೇಳಿ ಹೊರಡುವ ಕ್ರಮವೂ ಇರಲಿಲ್ಲ. ಯಾವ ಪ್ರಚಾರವಿದ್ದರೂ ಬರೀ ಬಾಯಿ ಮಾತಿನಲ್ಲೇ ಇರುತ್ತಿತ್ತು. ಆ ಮನೆಯಲ್ಲಿ ಒಂದಷ್ಟು ಹೊತ್ತು ಕೂತು ಅವರ ಕಷ್ಟ ಸುಖಗಳನ್ನು ಕೇಳಿ ಬಳಿಕ ಮತ ಕೇಳುವ ಸಂಪ್ರದಾಯವಿತ್ತು. ಯಾರೋ ಹೇಳಿದ್ದಾರೆ ಎಂದು ಕಾಟಾಚಾರಕ್ಕೆ ಮನೆ ಭೇಟಿ ಮಾಡದೆ, ಭೇಟಿ ನೀಡಲೇಬೇಕು ಎಂಬ ಹಠದಿಂದಲೇ ಮತ ಬೇಟೆ ನಡೆಯುತ್ತಿತ್ತು. ಎಷ್ಟೋ ಮನೆಗಳಲ್ಲಿ ಬೈದು ಕಳುಹಿಸಿದ ಉದಾಹರಣೆಗಳು ಕೂಡ ಇದೆ.

Advertisement

ಅಂದು ನಮ್ಮ ಪಕ್ಷದ ವಿಚಾರ ಹೇಗಿತ್ತೆಂದರೆ ಯಾವ ಮನೆಗೆ ಭೇಟಿ ನೀಡಿದರೂ ಕನಿಷ್ಠ ಪಕ್ಷದಲ್ಲಿ ಅಲ್ಲಿ ನೀರಾದರೂ ಕುಡಿಯಬೇಕು ಎಂಬ ಕ್ರಮವಿತ್ತು. ಎಷ್ಟೇ ಕಷ್ಟವಾದರೂ ಅದನ್ನು ಚಾಚೂ ತಪ್ಪದೆ ಪಾಲನೆ ಮಾಡುತ್ತಿದ್ದೆವು. ಈಗಿನ ಹಾಗೆ ಪ್ರತಿ ಮನೆಗೂ ತೆರಳುವುದಕ್ಕೆ ರಸ್ತೆಗಳಿರಲಿಲ್ಲ, ಬದಲಾಗಿ ಗುಡ್ಡ, ಕಾಡು ಹತ್ತಿ ಇಳಿದು ಮನೆ ಭೇಟಿಯ ಕಾರ್ಯಗಳು ನಡೆಯುತ್ತಿದ್ದವು. ಈ ವೇಳೆ ತೋಡು, ಹೊಳೆ, ಕೆರೆಗಳ ನೀರೇ ನಮ್ಮ ಬಾಯಾರಿಕೆಯನ್ನು ನೀಗುತ್ತಿತ್ತು.

ಊಟ-ತಿಂಡಿ ಕೊಡುವ ತಾಕತ್ತು ಕೂಡ ಇರಲಿಲ್ಲ, ಹೋಗುವಾಗ ದಾರಿಯಲ್ಲಿ ಸಿಗುವ ಮಾವಿನ ಹಣ್ಣು, ಹಲಸಿನ ಹಣ್ಣು, ಗೇರು ಹಣ್ಣು ಮೊದಲಾದ ಹಣ್ಣುಗಳೇ ಆಹಾರವಾಗಿತ್ತು. ಕೆಲವು ಮನೆಯವರು ನೆಲಗಡಲೆ, ಕಲ್ಲುಸಕ್ಕರೆ, ಬೆಲ್ಲದಂತಹ ವಸ್ತು, ರಾಗಿ ಮಾಲ್ಟ್, ಹಾಲು ಬೆರೆಸದ ಕಣ್ಣ ಚಹಾ ನೀಡುತ್ತಿದ್ದು, ಅದೇ ನಮಗೆ ದೊಡ್ಡ ಗೌರವವಾಗಿತ್ತು ಎಂದು ಕೈಯೂರು ನಾರಾಯಣ ಭಟ್‌ ಅವರು ವಿವರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next