Advertisement

ದಾರ್ಶನಿಕರ ಚಿಂತನೆ ಭವಿಷ್ಯತ್ತಿಗೆ ಅಗತ್ಯ

06:23 PM Nov 23, 2021 | Team Udayavani |

ಬ್ಯಾಡಗಿ: ಭೌತಿಕ ಅಸ್ಪೃಶ್ಯತೆಯನ್ನು ಜೀವಂತವಾಗಿಟ್ಟದ್ದ ಪೌರೋಹಿತ್ಯಶಾಹಿ ವರ್ಗದ ಜನರು ಮಾನಸಿಕ ಭಯೋತ್ಪಾದನೆ ತುಂಬುವುದನ್ನು ಇಂದಿಗೂ ಬಿಟ್ಟಿಲ್ಲ. ಮೇಲು-ಕೀಳೆಂಬ ಸ್ಥರಗಳನ್ನು ದೂಷಿಸುವ ನಿಟ್ಟಿನಲ್ಲಿ ಯುವಕರಿಂದ ಚಿಂತನೆಗಳನ್ನು ಆಹ್ವಾನಿಸುತ್ತಿದ್ದೇವೆ. ಯಾರೂ ಸಹ ವ್ಯವಸ್ಥೆಯ ಭಾಗವಾಗದೇ ದಾರ್ಶನಿಕರ ಚಿಂತನೆಗಳನ್ನು ಭವಿಷತ್ತಿನ ದಿನಗಳಿಗೆ ಕೊಂಡೊಯ್ಯುವಂತಹ ಕಾರ್ಯ ಯುವಕರಿಂದ ಆಗಬೇಕಾಗಿದೆ. ವರ್ತಮಾನಕ್ಕಾದರೂ ಕನಕದಾಸರ ಚಿಂತನೆಗಳು ಸಂವಿಧಾನ ರೂಪದಲ್ಲಿ ಬರಲಿ ಎಂದು ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದ ಶ್ರೀಗಳು ಆಶಿಸಿದರು.

Advertisement

ತಾಲೂಕಿನ ಕಾಗಿನೆಲೆ ಗ್ರಾಮದ ಕನಕಗುರುಪೀಠದ ಆಶ್ರಯದಲ್ಲಿ ಭಕ್ತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೇಲು-ಕೀಳು ಬಡವ-ಶ್ರೀಮಂತ ಜಾತಿ-ಧರ್ಮ ಇನ್ನಿತರ ಸ್ಥರಗಳಿಂದ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಸ್ವತಃ ರಾಜನಾಗಿದ್ದ ಕನಕದಾಸರು ಯುದ್ಧ ಪರಂಪರೆಯಿಂದ ಸಮಾಜವನ್ನು ತಿದ್ದಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಕನಕದಾಸರು, ಖಡ್ಗ ಕೆಳಗಿಟ್ಟು ಮನುಷ್ಯರಾಗುವ ಪ್ರಯತ್ನಕ್ಕೆ ಮುಂದಾಗಿ ಯಶಸ್ವಿಯಾಗಿದ್ದಾರೆ. ವೈಭವೋಪೇತ ಜೀವನಕ್ಕೆ ಕೊನೆ ಹಾಡಿ ಅಲ್ಲಿನ ಜಿಜ್ಞಾಸೆಗಳು ರಕ್ತಸಿಕ್ತ ಪರಂಪರೆಗೆ ವಿದಾಯ ಹೇಳಿದ್ದಲ್ಲದೇ, ಸಮಾಜದಲ್ಲಿದ್ದ ಮೌಡ್ಯಗಳನ್ನು ತೊಡೆದು ಹಾಕುವುದರಲ್ಲಿ ಕಾರ್ಯೋನ್ಮುಖರಾಗಿ ಏಕಾಂಗಿ ಹೋರಾಟದ ಬದುಕು ನಡೆಸುವ ಮೂಲಕ ಯಶಸ್ಸನ್ನು ಕಂಡಿದ್ದಾರೆ ಎಂದರು.

ಅಧಿಕಾರದಲ್ಲಿದ್ದವರು ಮಾತ್ರ ನೆನಪು:
ಇಪ್ಪತ್ತೂಂದನೇ ಶತಮಾನದಲ್ಲೂ ಅಸಮಾನತೆ ಸಮಾಜ ಕಾಣುತ್ತಿರುವುದು ದುರದೃಷ್ಟಕರ ಸಂಗತಿ. ಭಕ್ತಶ್ರೇಷ್ಠ ಕನಕದಾಸರ ಸಾಮಾಜಿಕ ನ್ಯಾಯದ ಸಮೀಕರಣ ಸರ್ವಕಾಲಕ್ಕೂ ಅನ್ವಯವಾಗಲಿದೆ. ಅವರ ನುಡಿ ಗಳಲ್ಲಿ ಮಾನವೀಯ ಸಂದೇಶಗಳು ಸಮಾಜದ ಮೇಲೆ ಹೆಚ್ಚು ಬೆಳಕನ್ನು ಚೆಲ್ಲಿದ್ದು, ಇದರಿಂದ ದಾರ್ಶನಿಕರ ಸನ್ಮಾರ್ಗಗಳು ಪ್ರಸ್ತುತ ಸಮಾಜಕ್ಕೆ ಅವಶ್ಯವಿದೆ. ಇತ್ತೀಚೆಗೆ ಕೇವಲ ಅಧಿ  ಕಾರದಲ್ಲಿದ್ದವರನ್ನು ನೆನೆಸಿಕೊಳ್ಳಲಾಗುತ್ತಿದೆ. ಸಮಾಜದ
ಶ್ರೇಯೋಭಿವೃದ್ಧಿಗೆ ಶ್ರಮಿಸಿದ ದಾರ್ಶನಿಕರ ಮಾತುಗಳನ್ನು ಮರೆಯುತ್ತಿದ್ದಾರೆ. ಸಾಮಾಜಿಕ ನ್ಯಾಯದಡಿ ಶೋಷಿತರ ವರ್ಗದ ಜನರಿಗೆ ಅವರ ಸಂದೇಶಗಳು ಅವಶ್ಯವಿದೆ ಎಂದರು.

ಎಂದಿಗೂ ತೊಡೆ ತಟ್ಟಲಿಲ್ಲ: ತಮ್ಮ ಜೀವತದ ಅವಧಿಯಲ್ಲಿ ಮಡಿವಂತಿಕೆ ನಡೆಸುತ್ತಿದ್ದ ವರ್ಗದ ಜನರ ವಿರುದ್ಧ ಕನಕದಾಸರು ಎಂದಿಗೂ ತೊಡೆ ತಟ್ಟಲಿಲ್ಲ. ಬದಲಾಗಿ ಭಕ್ತಿಯಿಂದ ಕೃಷ್ಣನನ್ನು ಒಲಿಸಿಕೊಳ್ಳುವ ಮೂಲಕ ಅವರೆಲ್ಲರ ಆಚರಣೆಗಳಿಗೆ ಉತ್ತರ ನೀಡಿದ ಮಹಾನ್‌ ದಾರ್ಶನಿಕರಾಗಿದ್ದಾರೆ. ಅನ್ಯ ಜಾತಿ ಮತ್ತು ಧರ್ಮಿಯರನ್ನು ಗೌರವಿಸುವುದು. ಪ್ರೀತಿಸುವುದು ಅವರ ಉದ್ದೇಶವಾಗಿತ್ತು. ಆದರೆ, ಧಾರ್ಮಿಕ ಅಪ್ರಭುದ್ಧತೆ ತೋರುತ್ತಿರುವ ಸಮುದಾಯಗಳು
ಪರಸ್ಪರ ದ್ವೇಷ ಅಸೂಯೆ ಪ್ರದರ್ಶಿಸುತ್ತಿರುವುದು ವಿಷಾದಕರ ಸಂಗತಿ ಎಂದರು. ಇದಕ್ಕೂ ಮುನ್ನ ಗ್ರಾಮದೆಲ್ಲೆಡೆ ಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. ರೇವಣಸಿದ್ದೇಶ್ವರರ ಮೂರ್ತಿ ರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಆಯುಕ್ತ ಮಲ್ಲೇಶಪ್ಪ ಹೊರಪೇಟಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಪ್ರಾಚಾರ್ಯ ಬೀರಪ್ಪ ಸ್ವಾಗತಿಸಿ, ರವಿ ಆನವೇರಿ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next