Advertisement

CM ಸಲಹೆಗಾರರ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾ

10:08 PM Sep 07, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ, ಮಾಧ್ಯಮ ಸಲಹೆಗಾರ ಮತ್ತು ಮುಖ್ಯ ಸಲಹೆಗಾರರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

Advertisement

ಈ ಬಗ್ಗೆ ವಕೀಲ ಎಸ್‌. ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ| ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.

ಅರ್ಜಿದಾರ ವಕೀಲರು ಈ ಹಿಂದೆ ಅನೇಕ ಸಾರ್ವಜನಿಕ ಮಹತ್ವದ ವಿಷಯಗಳ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವುಗಳ ಪೈಕಿ ಬಹುತೇಕ ಅರ್ಜಿಗಳನ್ನು ನ್ಯಾಯಲಯ ಪ್ರಶಂಸಿಸಿದೆ. ಹಾಗಂತ ಪ್ರತಿ ಬಾರಿಯೂ ಅವರ ಅರ್ಜಿಗಳನ್ನು ಪರಿಗಣಿಸಬೇಕೆಂದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

ಜತೆಗೆ, ರಾಜ್ಯದ ಈಗಿನ ಶಾಸಕರ ಸಂಖ್ಯಾಬಲದ ಆಧಾರದಲ್ಲಿ 34 ಮಂದಿಗೆ ಸಚಿವ ಸಂಪುಟದಲ್ಲಿ ಅವಕಾಶ ಇರಬಹುದು. ಆದರೆ 34 ಮಂದಿಯನ್ನು ಹೊರತುಪಡಿಸಿ ಇತರರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಬಾರದು ಎಂಬ ನಿರ್ಬಂಧವೆಲ್ಲಿದೆ? ಒಂದೊಮ್ಮೆ ಕೊಟ್ಟರೂ ಅದರಲ್ಲಿ ತಪ್ಪೇನಿದೆ? ಸಂಪುಟದ ಸಚಿವರಲ್ಲದವರನ್ನು ಸಂಪುಟ ದರ್ಜೆ ಕೊಟ್ಟರೂ ನಿರ್ದಿಷ್ಟವಾಗಿ ಸಚಿವರಿಗೆ ಇರುವ ಅಧಿಕಾರ ಅವರಿಗೆ ಇರುವುದಿಲ್ಲ, ಅವರಿಗೆ ಸಚಿವರ ಹುದ್ದೆ ಅಥವಾ ಅಧಿಕಾರ ನೀಡುವುದಿಲ್ಲ. ಮೇಲಾಗಿ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನೇಮಕಗೊಂಡವರು ಸಂವಿಧಾನದಡಿ ನೇಮಕ ಆಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅರ್ಜಿ ವಜಾಗೊಳಿಸಿರುವುದಕ್ಕೆ ಸೂಕ್ತ ಕಾರಣಗಳನ್ನು ವಿವರವಾದ ಆದೇಶದಲ್ಲಿ ತಿಳಿಸಲಾಗುವುದು ಎಂದು ಹೇಳಿತು.

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾಗಿ ವಿಧಾನಪರಿಷತ್‌ ಸದಸ್ಯರಾದ ಕೆ. ಗೋವಿಂದರಾಜ್‌, ನಸೀರ್‌ ಅಹ್ಮದ್‌, ಮುಖ್ಯ ಸಲಹೆಗಾರರನ್ನಾಗಿ ಸುನೀಲ್‌ ಕನಗೋಳ ಹಾಗೂ ಮಾಧ್ಯಮ ಸಲಹೆಗಾರರನ್ನಾಗಿ ಕೆ.ವಿ. ಪ್ರಭಾಕರ್‌ ಅವರನ್ನು ಸಂಪುಟ ದರ್ಜೆ ಸಚಿವ ಸ್ಥಾನಮಾನದೊಂದಿಗೆ ನೇಮಕ ಮಾಡಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

Advertisement

ಮುಖ್ಯಮಂತ್ರಿಯವರ ವಿವಿಧ ಸಲಹೆಗಾರರನ್ನು ಸಂಪುಟ ದರ್ಜೆ ಸ್ಥಾನಮಾನ ನೀಡಿ ನೇಮಕ ಮಾಡಲಾಗಿದೆ. ಅವರಿಗೆ ನೀಡಲಾಗುವ ಸಂಬಳ, ಸಾರಿಗೆ, ವಸತಿ ಭತ್ಯೆ ಇತ್ಯಾದಿ ಖರ್ಚುಗಳು ರಾಜ್ಯದ ಬೊಕ್ಕಸದಿಂದ ವಿನಾ ಕಾರಣ ಭರಿಸುವಂತಾಗಿದೆ. ಇವೆಲ್ಲ ರಾಜಕೀಯ ನೇಮಕಾತಿ ಹಾಗೂ ಏಕಪಕ್ಷೀಯ ನಿರ್ಧಾರಗಳು.ಮುಖ್ಯಮಂತ್ರಿಗಳ ಕಚೇರಿ ಎಂಬುದು ಸಾರ್ವಜನಿಕ ಕಚೇರಿ. ಆದರೆ, ಇಲ್ಲೀಗ ಮುಖ್ಯಮಂತ್ರಿಗಳ ಬಂಧುಗಳು, ಅವರ ರಾಜಕೀಯ ಬೆಂಬಲಿಗರಿಗೆ ಆಸ್ಪದ ನೀಡಲಾಗಿದೆ. ಕಾನೂನಿನಲ್ಲಿ ಇಂತಹ ಹು¨ªೆಗಳನ್ನು ರೂಪಿಸಲು ಅವಕಾಶವಿಲ್ಲ. ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ. ಉತ್ತಮ ಆಡಳಿತ ನೀಡುವ ಮೂಲಭೂತ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ದೂರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next