Advertisement

ಮನೆಬೆಕ್ಕು ರಕ್ಷಣೆಗೆ ಪ್ರಾಣ ಅರ್ಪಿಸಿದ ಸಾಕು ನಾಯಿ

10:50 AM Jan 27, 2018 | |

ಮಂಗಳೂರು: ಹಾವು -ಬೆಕ್ಕುಗಳ ಕಾದಾಟ ನಾಯಿಯ ಪ್ರಾಣಕ್ಕೆ ಕುತ್ತು ತಂದ ವಿಲಕ್ಷಣ ಘಟನೆಯಿದು. ಮನೆಯ ಬೆಕ್ಕಿನ ಹಿಂದೆ ಬಿದ್ದ ಕಾಳಿಂಗ ಸರ್ಪದೊಂದಿಗೆ ಹೋರಾಟ ನಡೆಸಿದ ನಾಯಿ ತನ್ನ ಪ್ರಾಣವನ್ನು ಅರ್ಪಿಸಿದರೆ, ಬೆಕ್ಕು ಅಪಾಯದಿಂದ ಪಾರಾಯಿತು. ಈ ಅಪರೂಪದ ಘಟನೆ ನಡೆದಿರುವುದು ಸುಳ್ಯ ತಾಲೂಕಿನ ಬಂಟಮಲೆಯ ತಪ್ಪಲು ಉಬರಡ್ಕ ಸನಿಹ.

Advertisement

ಮಂಜಿಕಾನ ನಿವಾಸಿ ವೆಂಕಪ್ಪ ಗೌಡ ಅವರ ಮನೆಯಲ್ಲಿ ಸುಮಾರು ಎರಡು ವಾರ ಹಿಂದೆ ಈ ಘಟನೆ ನಡೆದಿದೆ. ಅಂದು ಸಂಜೆ ಸುಮಾರು 4ರ ಸಮಯ, ಮನೆಮಂದಿ ಮನೆಯೊಳಗೆ ಕೆಲಸದಲ್ಲಿ ತೊಡಗಿದ್ದರು. ಆ ಹೊತ್ತಿಗೆ 12ರಿಂದ 13 ಅಡಿ ಉದ್ದದ ಕಾಳಿಂಗ ಸರ್ಪ ಮನೆಯ ಮುಂಭಾಗದಲ್ಲಿ ಪ್ರತ್ಯಕ್ಷವಾಯಿತು. ಆಹಾರ ಹುಡುಕಿಕೊಂಡು ಬಂದ ಕಾಳಿಂಗದ ಕಣ್ಣಿಗೆ ಬಿದ್ದದ್ದು ಮನೆಯ ಕಿಟಕಿಯಲ್ಲಿ ಕುಳಿತಿದ್ದ ಬೆಕ್ಕು. “ಇಂದೆನಗೆ ಆಹಾರ ಸಿಕ್ಕಿತು’ ಎಂದುಕೊಂಡ ಅದು ಕಿಟಕಿಯ ಕಡೆಗೆ ಹರಿದುಬಂತು. ಅಪಾಯದ ಸೂಚನೆ ಸಿಕ್ಕಿದ ಬೆಕ್ಕು ಜೀವಭಯದಿಂದ ಮನೆಯೊಳಗೆ ಧಾವಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿತು. ಆದರೆ ಕಣ್ಣಿಗೆ ಬಿದ್ದ ತುತ್ತನ್ನು ಬಿಡಲೊಲ್ಲದ ಕಾಳಿಂಗ ಕಿಟಕಿಯ ಮೂಲಕ ಮನೆಯೊಳಗೆ ನುಗ್ಗಲಾರಂಭಿಸಿತು. ಇಷ್ಟರಲ್ಲಿ ಒಳಗಿದ್ದ ವೆಂಕಪ್ಪ ಗೌಡ ಮತ್ತು ಮನೆಯವರು ಕಿಟಕಿಯಿಂದ ಕಾಳಿಂಗ ಒಳಬರುತ್ತಿರುವುದನ್ನು ಕಂಡು ಭಯಗೊಂಡು ಏನೂ ತೋಚದೆ ಹೊರಕ್ಕೋಡಿದರು. ನಿರ್ಜನ ಮನೆಯೊಳಗೆ ಬೆಕ್ಕು ಮತ್ತು ಕಾಳಿಂಗ ಸರ್ಪದ ಓಡಾಟ ಜೋರಾಯಿತು.

ಟಾಮಿಯ ಪ್ರವೇಶ
ಇಷ್ಟು ಹೊತ್ತಿಗೆ ಅಂಗಳದಲ್ಲಿದ್ದ ನಾಯಿ ಟಾಮಿಗೆ ಮನೆ ಬೆಕ್ಕಿನ ಪ್ರಾಣ ಅಪಾಯದಲ್ಲಿರುವುದು ಅರಿವಾಯಿತೇನೋ, ಅದು ಮನೆಯೊಳಕ್ಕೆ ಧಾವಿಸಿತು. ಕಾಳಿಂಗನ ಮೇಲೆ ದಾಳಿ ಮಾಡಿತು, ಮನೆಯೆಲ್ಲ ಬೆಕ್ಕನ್ನು ಅಟ್ಟಾಡುತ್ತಿರುವ ಹಾವಿಗೆ ಕಚ್ಚಿತು. ತನಗೆ ಅನಿರೀಕ್ಷಿತ ವೈರಿಯೊಂದು ಎದುರಾದುದು ಕಾಳಿಂಗಕ್ಕೆ ಅರಿವಾಗಿ ಕಾದಾಟ ಕಾಳಿಂಗ ಮತ್ತು ನಾಯಿಗಳ ನಡುವೆ ಮುಂದುವರಿಯಿತು. ನಾಯಿ ಕಾಳಿಂಗವನ್ನು ಕಚ್ಚಿ ಗಾಯಗೊಳಿಸಿತಾದರೂ ಕೊನೆಗೂ ಕಾಳಿಂಗನ ಕಡಿತಕ್ಕೆ ಸಿಲುಕಿ, ವಿಷವೇರಿಸಿಕೊಂಡು ಮನೆಯಿಂದ ಹೊರಬಂದು ಕೆಲವೇ ನಿಮಿಷಗಳಲ್ಲಿ ನೆಲಕ್ಕುರುಳಿತು. ಅಷ್ಟರಲ್ಲಾಗಲೇ ಬೆಕ್ಕು ಮನೆಯ ಛಾವಣಿಯನ್ನೇರಿ ಪಾರಾಗಿತ್ತು.

ಗಾಯಾಳು ಕಾಳಿಂಗ ಪಿಲಿಕುಳಕ್ಕೆ
ಬೆಕ್ಕನ್ನು ಬೆನ್ನಟ್ಟಿ ಕಾಳಿಂಗ ಮನೆಯೊಳಗೆ ಸೇರಿಕೊಂಡ ಅಚ್ಚರಿಯ ಮತ್ತು ವಿಲಕ್ಷಣ ವಿದ್ಯಮಾನದಿಂದ ಆತಂಕಗೊಂಡ ಮನೆಮಂದಿ ಎಲ್ಲ ಕಿಟಕಿ ಬಾಗಿಲುಗಳನ್ನು ಮುಚ್ಚಿ ಹಾವು ಹೊರಗೆ ಬಾರದಂತೆ ಎಚ್ಚರಿಕೆ ವಹಿಸಿದರು. ಹಾವು ಹಿಡಿದು ಅನುಭವವಿರುವ ಶಿವಾನಂದ ಅವರಿಗೆ ಕೂಡಲೇ ಬರುವಂತೆ ಕರೆ ಮಾಡಿದರು. ಅರ್ಧ ತಾಸಿನೊಳಗೆ ಸ್ಥಳಕ್ಕೆ ಆಗಮಿಸಿದ ಶಿವಾನಂದ ಎಚ್ಚರಿಕೆಯಿಂದ ಮನೆಯೊಳಗೆ ಪ್ರವೇಶಿಸಿ, ಗಾಯಗೊಂಡು ಅಡುಗೆ ಕೋಣೆಯಲ್ಲಿ ಅವಿತಿದ್ದ ಕಾಳಿಂಗವನ್ನು ಜಾಣ್ಮೆಯಿಂದ ಹಿಡಿಯುವಲ್ಲಿ ಸಫಲರಾದರು. ಬಳಿಕ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ಪ್ರಮುಖರಿಗೆ ಕರೆ ಮಾಡಿ, ಕಾಳಿಂಗ ಸರ್ಪ ಹಿಡಿದಿರುವ ಬಗ್ಗೆ ಮತ್ತು ಅದಕ್ಕೆ ನಾಯಿ ಕಚ್ಚಿ ಗಾಯವಾಗಿರುವ ಬಗ್ಗೆ ತಿಳಿಸಿದರು. ಮಂಜಿಕಾನಕ್ಕೆ ಆಗಮಿಸಿದ ಪಿಲಿಕುಳದ ಸಿಬಂದಿ ಸರ್ಪವನ್ನು ಪಿಲಿಕುಳಕ್ಕೆ ತಂದಿದ್ದು, ಸದ್ಯ ಇಲ್ಲಿ ಹಾವಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುತ್ತಿದೆ.

ಹತ್ತಿರದಲ್ಲಿ ಪೂಮಲೆ ಕಾಡು ಇರುವುದರಿಂದ ಇಲ್ಲಿ ಕಾಳಿಂಗ ಸರ್ಪ ಕೆಲವೊಮ್ಮೆ ಗೋಚರಿಸುತ್ತದೆ. ಆದರೆ ಮನೆಯೊಳಗೆ ನುಗ್ಗಿ ನಾಯಿಯ ಸಾವಿಗೆ ಕಾರಣವಾದ ಘಟನೆ ನಮಗೆ ತುಂಬ ಬೇಸರ ತಂದಿದೆ. ಸದ್ಯ ಕಾಳಿಂಗನನ್ನು ಪಿಲಿಕುಳಕ್ಕೆ ಕೊಂಡೊಯ್ದಿದ್ದಾರೆ. ಅದನ್ನು ಮತ್ತೆ ಕಾಡಿನಲ್ಲಿ ಬಿಡದಂತೆ ಸಂಬಂಧಪಟ್ಟವರು ನೋಡಿಕೊಂಡರೆ ಉತ್ತಮ’. 
ಸುಭಾಶ್‌, ವೆಂಕಪ್ಪ ಗೌಡ ಅವರ ಪುತ್ರ 

Advertisement

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next