Advertisement
ಕುತ್ಯಾರಿನಲ್ಲಿ ಇತ್ತೀಚೆಗೆ ಜರಗಿದ ಸಹಸ್ರಮಾನ ನವಕುಂಡ ಮಹಾಗಣಪತ್ಯಢರ್ವಶೀರ್ಷ ಮಹಾಯಾಗದ ಸಾಂಸ್ಕೃತಿಕ ವೈಭವದ ಅಂಗವಾಗಿ ಪ್ರದರ್ಶನಗೊಂಡ ದಕ್ಷಯಜ್ಞ ಯಕ್ಷಗಾನ ಕಥಾಭಾಗವು ಯಕ್ಷ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
Related Articles
Advertisement
ಲ| ರವೀಂದ್ರ ಆಚಾರ್ಯ ಸಂಯೋಜನೆಯಲ್ಲಿ ಮೂಡಿಬಂದ ಈ ಕಥಾಭಾಗದಲ್ಲಿ ಈಶ್ವರನಾಗಿ ಸುಬ್ರಹ್ಮಣ್ಯ ಚಿಟ್ಟಾಣಿ ಅವರು ತಮ್ಮ ಸ್ಪಷ್ಟಮಾತು ಮತ್ತು ಗಂಭೀರ ನಡೆಯಿಂದ ಮನ ಗೆದ್ದರು. ದಾಕ್ಷಾಯಿಣಿಯಾಗಿ ಮಾಧವ ನಾಗೂರು ಮೋಹಕ ರೂಪ, ಲಾವಣ್ಯ, ಸ್ತ್ರೀಸಹಜ ಅಭಿನಯಗಳಿಂದ ಪ್ರೇಕ್ಷಕರನ್ನು ದಾಕ್ಷಾಯಿಣಿಯ ಅಂತರಂಗಕ್ಕೆ ಕರೆದೊಯ್ಯುವಲ್ಲಿ ಸಫಲರಾದರು.
ದಕ್ಷ ಪ್ರಜಾಪತಿಯಾಗಿ ಪ್ರಬುದ್ಧ ಅಭಿನಯ ನೀಡಿದ ಮಧೂರು ರಾಧಾಕೃಷ್ಣ ನಾವಡ ಅವರ ಆಕರ್ಷಕ ವೇಷಗಾರಿಕೆ, ಪರಿಶುದ್ಧವಾದ ಭಾಷೆ ಮೆಚ್ಚುಗೆಗೆ ಪಾತ್ರವಾಯಿತು. ವೀರಭದ್ರನಾಗಿ ಡಾ| ಸುನಿಲ್ ಮುಂಡ್ಕೂರು ಅವರು ಅಬ್ಬರಿಸಿ ಮೆರೆದರು.
ವೃದ್ಧ ಬ್ರಾಹ್ಮಣನಾಗಿ ಶ್ರೀಧರ ಭಟ್ ಕಾಸರಕೋಡು ಪಾತ್ರೋಚಿತ ಅಭಿನಯ ತೋರಿದರು. ಇವರ ಪ್ರಬುದ್ಧ ಹಾಸ್ಯ ಗಮನ ಸೆಳೆಯಿತು. ಬ್ರಾಹ್ಮಣನ ಹೆಂಡತಿಯಾಗಿ ಸಿದ್ಧಾಪುರ ಅಶೋಕ್ ಭಟ್ ದೊರಕಿದ ಸೀಮಿತ ಅವಕಾಶದಲ್ಲಿ ಮಿಂಚುವಲ್ಲಿ ಸಫಲರಾದರು. ದೇವೇಂದ್ರನಾಗಿ ಕುಳಿಮನೆ ನಾಗೇಶ್, ಅಗ್ನಿಯಾಗಿ ನವೀನ್ ಭಟ್, ವರುಣನಾಗಿ ಆದರ್ಶ್, ದಕ್ಷನ ಬಲಗಳಾಗಿ ಸುಧನ್ವ, ಸುಮನ್ಯು ಮುಂಡ್ಕೂರು ಸಹೋದರರು, ಮಾಣಿಗಳಾಗಿ ಶ್ರೀಧರ ಭಟ್ ಹಾಗೂ ರವೀಂದ್ರ ಆಚಾರ್ಯ ಅವರು ತಮ್ಮ ಪಾತ್ರಗಳಿಗೆ ಜೀವ ತುಂಬಿದರು.
ಕಂಚಿನ ಕಂಠದ ಹಾಡುಗಾರಿಕೆಯಿಂದ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರು ಪ್ರೇಕ್ಷಕರು ತಲೆದೂಗುವಂತೆ ಮಾಡಿದರು.ಮದ್ದಳೆಯಲ್ಲಿ ಸುನಿಲ್ ಭಂಡಾರಿ ಕಡತೋಕ, ಚೆಂಡೆಯಲ್ಲಿ ಹಾಲಾಡಿ ಸುಜನ್ ಕುಮಾರ್ ಹಾಗೂ ಗಣೇಶ್ ಭಟ್ ಮತ್ತು ಚಕ್ರತಾಳದಲ್ಲಿ ಸಚಿನ್ ಉದ್ಯಾವರ ಅವರು ಸಹಕರಿಸಿದರು.
ಅನಂತ ಮೂಡಿತ್ತಾಯ , ಶಿರ್ವ