Advertisement

ಉತ್ತರ ಕರ್ನಾಟಕ ಭಾಗದ ಜನರು ಮುಗ್ದರು: ಡಾ. ಚಂದ್ರಶೇಖರ ಕಂಬಾರ

01:30 PM Oct 17, 2021 | Team Udayavani |

ಬೆಂಗಳೂರು: ಉತ್ತರ ಕರ್ನಾಟಕ ಸಂಸ್ಕೃತಿ ಪ್ರತೀಕವಾಗಿರುವ ಬನ್ನಿ ಬಂಗಾರ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

Advertisement

ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಉತ್ತರ ಕರ್ನಾಟಕ ನಾಗರೀಕರ ಅಭಿವೃದ್ದಿ ಸಂಘದ ವತಿಯಿಂದ ಏರ್ಪಡಿಸಿದ್ದ ಬನ್ನಿ ಬಂಗಾರ ಮತ್ತು ಉತ್ತರ ಕರ್ನಾಟಕ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಜ್ಞಾನಪೀಠ ಪ್ರಶಸ್ತಿ ಪುರಕಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು, ನಾಡ ದೇವತೆಗೆ ಬನ್ನಿ ಅರ್ಪಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಸಂಗಮೇಶ ಬಾದವಾಡಗಿ ಅವರು ಬರೆದಿರುವ ‘ರೊಟ್ಟಿ ಪಂಚಮಿ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಬನ್ನಿ ಬಂಗಾರ ನಮ್ಮ ಉತ್ತರ ಕರ್ನಾಟಕ ಭಾಗದ ಸಂಸ್ಕೃತಿಯ ಹಬ್ಬ. ಉತ್ತರ ಕರ್ನಾಟಕ ಭಾಗದ ಜನರು ಮುಗ್ದರು, ಅವರಿಗೆ ಚಾಲಾಕಿತನ ಗೊತ್ತಿಲ್ಲ. ಅಲ್ಲಿನ ಸಂಸ್ಕೃತಿ ಸಾಕಷ್ಟು ಸಮೃದ್ದವಾಗಿದೆ. ಅಲ್ಲಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಎಲ್ಲರೂ ಒಟ್ಟಾಗಿ ಹಬ್ಬ ಆಚರಣೆ ಮಾಡುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

ಉತ್ತರ ಕರ್ನಾಕಟ ನಾಗರಿಕರ ಅಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಬಸವರಾಜ ದಿಂಡೂರು ಮಾತನಾಡಿ, ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಉತ್ತರ ಕರ್ನಾಟಕ ಭಾಗದ ಜನರು ಮೂವತ್ತು ವರ್ಷಗಳಿಂದ ಸಂಘಟನೆ ಮಾಡಿಕೊಂಡು ರೊಟ್ಟಿ ಪಂಚಮಿ, ಬನ್ನಿ ಬಂಗಾರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ.

ಉತ್ತರ ಕರ್ನಾಟಕ ಭಾಗದ ಜನರಿಗಾಗಿ ಒಂದು ಭವನ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು, ಮುಂಬರುವ ಜನವರಿ 14 ಕ್ಕೆ ಶಂಕು ಸ್ಥಾಪನೆ ಕಾರ್ಯ ನೆರವೇರಿಸಲು ಯೋಜಿಸಲಾಗಿದೆ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಡಿಎಕ್ಸ್ ಮ್ಯಾಕ್ಸ್ ನಿರ್ದೇಶಕ ದಯಾನಂದ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಉತ್ತರ ಕರ್ನಾಟಕ ನಾಗರಿಕರ ಸಂಘದ ಅಧ್ಯಕ್ಷ ಮುರುಗೇಶ್ ಜವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನ್ಯಾಯಮೂರ್ತಿ ವಿ.ಎಸ್. ಸಾಂಬ್ರಾಣಿ, ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ ಮೇಟಿ, ಸಾಹಿತಿ ಸಂಗಮೇಶ್ ಬಾದವಾಡಗಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ಉತ್ತರ ಕರ್ನಾಟಕ ನಾಗರಿಕರ ಸಂಘದ ಗೌರವ ಕಾರ್ಯದರ್ಶಿ ಶಂಕರ ಪಾಟೀಲ್ ಸ್ವಾಗತಿಸಿದರು. ಸಂಘದ ನಿರ್ದೇಶಕರಾದ ದಯಾನಂದ ಪಾಟೀಲ್ ವಂದನಾರ್ಪಣೆ ಮಾಡಿದರು. ಪತ್ರಕರ್ತ ಹಾಗೂ ಸಂಘದ ನಿರ್ದೇಶಕ ಶಂಕರ ಪಾಗೋಜಿ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಹಿಂದೂಸ್ತಾನಿ ಸಂಗೀತ ಗಾಯಕಿ ಸಂಗೀತಾ ಕಟ್ಟಿ ಅವರ ಗಾಯನ ಕಾರ್ಯಕ್ರಮ ನಡೆಯಿತು. ಕೊಪ್ಪಳದ ವಿದೂಶಿ ರೇಖಾ ಜಗದೀಶ ನೇತೃತ್ವದ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ದಸರಾ ವೈಭವ ನೃತ್ಯ ರೂಪಕ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next