Advertisement

ಸಂವಿಧಾನವನ್ನು ಜನರಿಗೆ ಅರ್ಥೈಸುವಲ್ಲಿ ವಿಫ‌ಲ

03:35 PM Mar 11, 2018 | Team Udayavani |

ಮಂಡ್ಯ: ರಾಷ್ಟ್ರದ ಎಲ್ಲ ಜಾತಿ, ಧರ್ಮ, ಜನಾಂಗಗಳ ಧರ್ಮ ಗ್ರಂಥವಾಗಿರುವ ಸಂವಿಧಾನವನ್ನು ಜನರಿಗೆ
ಅರ್ಥೈಸುವಲ್ಲಿ ಜನಪ್ರತಿನಿಧಿಗಳು, ವಿಶ್ವವಿದ್ಯಾಲಯಗಳು ಹಾಗೂ ಸಾಕ್ಷರರು ವಿಫ‌ಲರಾಗಿದ್ದೇವೆ ಎಂದು ಮಾಜಿ ಸಚಿವ ಎಚ್‌. ವಿಶ್ವನಾಥ್‌ ವಿಷಾದಿಸಿದರು. ನಗರದ ರೈತ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ದಲಿತ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ವಿಚಾರ ಸಂಕಿರಣ ಹಾಗೂ
ಡಾ.ಕೆ.ಪಿ.ಮಹಾಲಿಂಗು ಕಲ್ಕುಂದ ಕೃತಿಗಳಾದ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು, ಹೊಲದೊಡೆಯ ಆತ್ಮಕಥನ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. 

Advertisement

ಅಂಬೇಡ್ಕರ್‌ ಆಶಯಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿದ್ದರೆ ದೇಶ ಇನ್ನಷ್ಟು ಬಲಿಷ್ಠವಾಗುತ್ತಿತ್ತು. ಅವರು ರಚಿಸಿದ ಸಂವಿಧಾನ ನೆಲೆಯಲ್ಲಿ ವಿವಿಧ ಧರ್ಮ, ಜಾತಿ-ಜನಾಂಗದ ಜನರೆಲ್ಲರೂ ಒಗ್ಗೂಡಿ ಬಾಳ್ವೆ ನಡೆಸುತ್ತಿದ್ದಾರೆ. ನಮ್ಮ ಸಂವಿಧಾನದ ಮಹತ್ವ ನಮಗೇ ಗೊತ್ತಿಲ್ಲದಿರುವುದು ವಿಷಾದಕರ ಸಂಗತಿ ಎಂದರು.

ಸಂವಿಧಾನ ಕೊಲೆ: ವೈವಿಧ್ಯಮಯ ಭಾಷೆ, ಸಂಸ್ಕೃತಿ ಹೊಂದಿರುವ ಬಾರತಕ್ಕೆ ಅಂಬೇಡ್ಕರ್‌ ಸಾರ್ವಕಾಲಿಕವೆನಿಸುವ ಸಂವಿಧಾನ ನೀಡಿದರು. ಈ ಸಂವಿಧಾನವನ್ನು ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಕೊಲೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಚಳವಳಿಗಳು ನಾಡಿಗೆ ಹೊಸ ಮೂರ್ತ ರೂಪವನ್ನು ನೀಡಿದವು. ಆದರೆ, ಇಂದಿನ ಯುವಕರಿಗೆ ಚಳವಳಿಗಳ ಮಹತ್ವವೇ ತಿಳಿದಿಲ್ಲ. ಚಳವಳಿಗಳು, ಹೋರಾಟಗಳಿಗೆ ಹೊಸ ಶಕ್ತಿ ಬರಬೇಕಾದರೆ ಅವುಗಳ ಹಿಂದಿನ ಮಹತ್ವ ತಿಳಿದಿರಬೇಕು ಎಂದರು.

ಚಳವಳಿಗಳ ದಮನ: ಚಳವಳಿಗಳನ್ನು ದಮನ ಮಾಡುವ ಪ್ರಕ್ರಿಯೆ ರಾಮಕೃಷ್ಣ ಹೆಗಡೆ ಅವರ ಕಾಲದಿಂದ ಶುರುವಾಯಿತು. ಚಳವಳಿಗಳನ್ನು ದಮನ ಮಾಡುವ ಸರ್ಕಾರ ಪ್ರಜಾತಂತ್ರ ವಿರೋಧಿ ಯಾಗಿರುತ್ತದೆ. ಯಾವುದೇ ಸರ್ಕಾರವಾಗಲೀ ಚಳವಳಿಗಳನ್ನು ಪೋಷಿಸಬೇಕು. ಅದರ ಆಶಯವನ್ನು ಈಡೇರಿಸಬೇಕು ಎಂದು ಸಲಹೆ ನೀಡಿದರು.

ಸಿದ್ಧಾಂತ ಕೆಡವಲು ಸಾಧ್ಯವಿಲ್ಲ: ಇಂದು ಲೆನಿನ್‌, ಪೆರಿಯಾರ್‌ ಪ್ರತಿಮೆಗಳನ್ನು ಕೆಡವಲಾಗುತ್ತಿದೆ. ಅಂಬೇಡ್ಕರ್‌ ಪ್ರತಿಮೆಗಳನ್ನು ವಿರೂಪಗೊಳಿಸಲಾಗುತ್ತಿದೆ. ಆದರೆ, ಇದರಿಂದ ಮಹತ್ತರವಾದುದನ್ನು ಸಾಧಿಸಲಾಗುವುದಿಲ್ಲ.
ಮಹನೀಯರ ಸಿದ್ಧಾಂತ, ಮಾನವತಾವಾದವನ್ನು ಕೆಡವಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

Advertisement

ಅಂಬೇಡ್ಕರ್‌ ದಲಿತರಿಗೆ ಹೋರಾಟದ ಮನಸ್ಥಿತಿಯನ್ನು ತುಂಬಿದರು. ಇಲ್ಲದಿದ್ದರೆ ದೇಶದಲ್ಲಿ ಕೊಲೆ-ಸುಲಿಗೆ ನಡೆದು ಸ್ವಾತಂತ್ರ್ಯ ಹಾಳಾಗುತ್ತಿತ್ತು. ಇಂದು ಎಲ್ಲಾ ಜಾತಿ-ಧರ್ಮಗಳಲ್ಲಿ ಹೋರಾಟ ನಡೆಯುತ್ತಿದೆ. ಜಾತಿ ಕಚ್ಚಾಟ ತೀವ್ರವಾಗಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನವನ್ನು ಅರ್ಥೈಸುವ ಕೆಲಸವನ್ನು ಸರ್ಕಾರಗಳು ಮಾಡಬೇಕಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಎಂ.ಶ್ರೀನಿವಾಸ್‌, ಕರಾದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್‌, ಜಿಪಂ ಪ್ರಭಾರ ಅಧ್ಯಕ್ಷೆ ಗಾಯತ್ರಿ, ನಗರಸಭಾ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಜೆಡಿಎಸ್‌ ಪರಿಶಿಷ್ಟ ವಿಭಾಗದ ಜಿಲ್ಲಾಧ್ಯಕ್ಷ ಎಸ್‌.ಡಿ.ಜಯರಾಂ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುನಾವರ್‌ ಖಾನ್‌, ಹಿರಿಯ ದಸಂಸ ನಾಯಕ ಹರಿಹರ
ಆನಂದಸ್ವಾಮಿ, ಜೆಡಿಎಸ್‌ ಮುಖಂಡ ಕೀಲಾರ ರಾಧಾಕೃಷ್ಣ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಹೇಶ್‌ಚಂದ್ರಗುರು, ಎಂ.ವಿ.ಕೃಷ್ಣ ಇತರರಿದ್ದರು

ವಿಶ್ವಜ್ಞಾನಿ ಅಂಬೇಡ್ಕರ್‌ ನೀಡಿದ ಸಂವಿಧಾನವನ್ನೇ ಬದಲಾಯಿಸುವಷ್ಟರ ಮಟ್ಟಿಗೆ ಇಂದು ರಾಜಕಾರಣ ಕಲುಷಿತಗೊಂಡಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲಾ ಜಾತಿ, ಜನಾಂಗ, ಧರ್ಮದವರು ಸರಿಸಮನಾಗಿ ಬಾಳಬಹುದು ಎನ್ನುವುದನ್ನು ಸಂವಿಧಾನದಲ್ಲಿ ಅಂಬೇಡ್ಕರ್‌ ತೋರಿಸಿಕೊಟ್ಟಿದ್ದಾರೆ. ಎಲ್ಲೋ ಶೇ.1, 2ರಷ್ಟಿರುವ ಬುದ್ಧಿವಂತರು ನಾವೇ ಸರ್ವಶ್ರೇಷ್ಠರು ಎಂದು ಭಾವಿಸಿಕೊಂಡು ಸಮಾಜವನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಸಂವಿಧಾನವನ್ನು ತಿದ್ದುಪಡಿ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಅದಕ್ಕೆ ನಾವೆಂದಿಗೂ ಅವಕಾಶ ನೀಡಬಾರದು.
ಪುಟ್ಟರಾಜು, ಸಂಸದ

ಹಿಂದೆಲ್ಲಾ ಬಲಿಷ್ಠ ಹಾಗೂ ಸರ್ಕಾರಗಳಿಗೆ ಸಿಂಹಸ್ವಪ್ನವಾಗಿದ್ದ ದಲಿತ ಚಳವಳಿಗಳು ಇಂದು ಹರಿದು ಹಂಚಿಹೋಗಿದೆ. ದಲಿತ ಎಂಬ ಪದದ ವಿಶ್ಲೇಷಣೆಯೇ ಬೇರೆಯಾಗಿದೆ. ದಲಿತ ಎಂದರೆ ಅದು ಜಾತಿಯಲ್ಲ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಎಂದರ್ಥ. ಶಿಕ್ಷಣದಿಂದ ದಲಿತ ಜನಾಂಗದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಕ್ಷರಜ್ಞಾನದಿಂದ ಅನಿಷ್ಠಗಳು ದೂರವಾಗಿವೆ. ಪೂರ್ವಿಕರು ಸಾಕ್ಷರರಾಗಿಲ್ಲದಿದ್ದರೂ ವಿವೇಕವಂತರಾಗಿದ್ದರು. ಅಂಬೇಡ್ಕರ್‌ ಅಕ್ಷರವಂತರಾಗಿ ವಿಶ್ವಜ್ಞಾನಿಯಾದರು. ಅಂತಹವರನ್ನು ನಾವಿಂದು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು.
ವಿಶ್ವನಾಥ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next