Advertisement

ರೈತರ ಗೋಳು; ದೇಶಿ ಅನ್ನಕ್ಕೆ ಗುನ್ನ ಇಟ್ಟ ಫಂಗಸ್‌

12:10 PM Jan 08, 2022 | Team Udayavani |

ಧಾರವಾಡ: ಮನೆ ಮಂದಿಯಲ್ಲ ವರ್ಷಪೂರ್ತಿ ಊಟ ಮಾಡುವಷ್ಟು ಭತ್ತವಿದ್ದರೂ ಅದು ಅನ್ನವಾಗುತ್ತಿಲ್ಲ, ಕಪ್ಪಿಟ್ಟ ಭತ್ತವನ್ನು ವ್ಯಾಪಾರಿಗಳು ಕೊಳ್ಳುವುದಕ್ಕೆ ಮುಂದೆ ಬರುತ್ತಿಲ್ಲ, ಕೆಂಪಾದ ಭತ್ತದ ಹುಲ್ಲನ್ನು ದನಗಳು ತಿನ್ನುತ್ತಿಲ್ಲ. ಒಟ್ಟಿನಲ್ಲಿ 2021ರ ಮುಂಗಾರಿನಲ್ಲಿ ದೇಶಿ ಭತ್ತ ಬೆಳೆದ ರೈತರ ಕಥೆ ಅಯೋಮಯ. ಹೌದು, ಧಾರವಾಡ, ಬೆಳಗಾವಿ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಯಥೇತ್ಛವಾಗಿ ಬೆಳೆದ 50ಕ್ಕೂ ಅಧಿಕ ತಳಿಯ ದೇಶಿ ಭತ್ತ ನವೆಂಬರ್‌ನಲ್ಲಿ
ಸುರಿದ ಅಕಾಲಿಕ ಮಳೆಗೆ ಸಿಲುಕಿ ಮುಗ್ಗಿ (ಫಂಗಸ್‌ ಬಂದಿದೆ) ಹೋಗಿದ್ದು, ಭತ್ತದಿಂದ ಕಳಪೆ ಗುಣಮಟ್ಟದ ಅಕ್ಕಿ ಬರುತ್ತಿದೆ.

Advertisement

2100 ರೂ.ಗಳವರೆಗೂ ಪ್ರತಿವರ್ಷ ಮಾರಾಟವಾಗುತ್ತಿದ್ದ ದೇಶಿ ಭತ್ತವನ್ನು ಈ ವರ್ಷ ವ್ಯಾಪಾರಸ್ಥರು ಕೊಳ್ಳಲು ಮುಂದೆ ಬರುತ್ತಿಲ್ಲ. ಹೀಗಾಗಿ ಅನ್ನ ಬೆಳೆದ ಅನ್ನದಾತರು ಕಣ್ಣೀರು ಹಾಕುವಂತಾಗಿದೆ. ಪ್ರತಿವರ್ಷ ಜೂನ್‌, ಜುಲೈ ತಿಂಗಳಿನಲ್ಲಿ ಕೂರಿಗೆಯಲ್ಲಿ ಬಿತ್ತಿ ಬೆಳೆಯುವ ದೇಶಿ ತಳಿಗಳಾದ ದೊಡಗ್ಯಾ, ಚಂಪಾಕಲಿ, ಸಾಳಿ, ಇಂಟಾನ್‌, ಅಂಬೇಮೂರಿ, ಬಂಗಾರಕಡ್ಡಿ, ಕೆಂಪಕ್ಕಿ, ಕುಚಲಕ್ಕಿ, ಹುಗ್ಗಿ ಭತ್ತ, ಗಿನ್ನಸಾಳಿ, ಅಂತರಸಾಳಿ ಸೇರಿದಂತೆ ಪ್ರಮುಖ ತಳಿಯ ಭತ್ತ ಈ ಭಾಗದ ಜನರ ಪ್ರತಿನಿತ್ಯದ ಸಾತ್ವಿಕ ಆಹಾರ.

ಭತ್ತ ಮುಗ್ಗಲು ಕಾರಣ?: ಎಷ್ಟೇ ಕಬ್ಬು ಬೆಳೆ ಈ ದೇಶಿ ಭತ್ತದ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದರೂ ಮನೆಗೆ ಊಟಕ್ಕಾಗಿಯಾದರೂ ಸರಿ ರೈತರು ಇಂದಿಗೂ
ಒಂದಿಷ್ಟು ದೇಸಿ ಭತ್ತ ಬೆಳೆದಿಟ್ಟುಕೊಳ್ಳುತ್ತಾರೆ. ಆದರೆ ಕಳೆದ ವರ್ಷ ನ.16ರಿಂದ 20ರವರೆಗೂ ಸುರಿದ ಅಕಾಲಿಕ ಮಳೆಯ ಹೊಡೆತಕ್ಕೆ ಈ ಭತ್ತವೆಲ್ಲ ನೀರಿನಲ್ಲಿ ನಿಂತು ಹೋಯಿತು. ಸತತ ಒಂದು ವಾರಗಳ ಕಾಲ ಮಳೆಯಲ್ಲಿ ಭತ್ತ ಮುಳುಗಿದ್ದರಿಂದ ಅಲ್ಲಿಯೇ ಮೊಳಕೆ ಒಡೆಯುವ ಸ್ಥಿತಿಗೆ ಹೋಯಿತು.

ತೋಯ್ದ ಭತ್ತವನ್ನು ಒಣಗಿಸಲು ಅವಕಾಶವೇ ಇಲ್ಲದಂತಾಗಿ ಹಾಗೆ ಬಣವಿ ಒಟ್ಟಲಾಯಿತು. ಇದೀಗ ಬಣವಿ ತೆಗೆದು ಭತ್ತ ಒಕ್ಕಲು ಮಾಡುತ್ತಿದ್ದು, ಬಣವಿಗಳಲ್ಲಿ ಫಂಗಸ್‌ ಬಂದಿದ್ದು, ಮೊಳಕೆ ಒಡೆದಿವೆ. ಮಳೆಯ ರಭಸಕ್ಕೆ ಕೆಲವು ರೈತರ ಭತ್ತವೇ ತೇಲಿಕೊಂಡು ಹಳ್ಳ, ಕೆರೆ ಕೋಡಿಗಳಿಗೆ ಹರಿದು ಹೋಯಿತು. ಕಷ್ಟಪಟ್ಟು ಕೆಲವಷ್ಟು ರೈತರು ಭತ್ತವನ್ನು ನೀರಿನಿಂದ ಎತ್ತಿ ರಕ್ಷಿಸಿಕೊಂಡು ಕಾಯ್ದುಕೊಂಡರು. ಆದರೆ ಇದೀಗ ಹೀಗೆ ಕಾಯ್ದುಕೊಂಡ ಭತ್ತದೊಳಗಿನ ಅಕ್ಕಿ ಕಳಪೆ
ಗುಣಮಟ್ಟಕ್ಕೆ ತಿರುಗಿ ಮುಗ್ಗಿ ಹೋಗಿದ್ದು, ಊಟಕ್ಕೆ ಹೋಗಲಿ ಅದರ ತವಡು ದನಗಳು ಕೂಡ ತಿನ್ನದಂತಹ ಸ್ಥಿತಿ ಬಂದೊದಗಿದೆ.

ಅವಲಕ್ಕಿಗೂ ಇಲ್ಲ ಭತ್ತ: ಸಾಮಾನ್ಯವಾಗಿ ಈ ಭತ್ತಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಬೆಳಗಾವಿ ಜಿಲ್ಲೆಯ ಖಾನಾಪೂರ ದೊಡ್ಡ ಮಾರುಕಟ್ಟೆ. ಇಲ್ಲಿನ ವ್ಯಾಪಾರಸ್ಥರು ಈ ಭತ್ತ ಖರೀದಿಸಿ ಕುಚಲಕ್ಕಿ, ಅವಲಕ್ಕಿ ತಯಾರಿಸಿ ಕರ್ನಾಟಕ ಕರಾವಳಿ, ಗೋವಾ ಮತ್ತು ಕೊಂಕಣ ತೀರಗಳತ್ತ ಮಾರಾಟಕ್ಕೆ ಸಾಗಿಸುತ್ತಿದ್ದರು. ಈ ವರ್ಷ ಕಳಪೆ ಅಕ್ಕಿ ಬರುತ್ತಿರುವುದರಿಂದ ಇದನ್ನು ಕೊಳ್ಳುತ್ತಲೇ ಇಲ್ಲ. ಅಕ್ಕಿಯ ಮಿಲ್‌ಗ‌ಳಲ್ಲಿ ಭತ್ತದ ಗುಣಮಟ್ಟ ಪರೀಕ್ಷಿಸಿದ ವ್ಯಾಪಾರಸ್ಥರು ಮರಳಿ ಮನೆಗೆ ಒಯ್ಯುವಂತೆ ಹೇಳುತ್ತಿದ್ದು, ಭತ್ತ ಹೇರಿಕೊಂಡು ಹೋದ ವಾಹನಗಳ ಬಾಡಿಗೆ ಕೂಡ ರೈತರ ಮೇಲೆ ಬರುತ್ತಿದೆ.

Advertisement

ದನಗಳು ತಿನ್ನದಂತಾದ ಹುಲ್ಲು: ದೇಶಿ ಭತ್ತದ ಹುಲ್ಲು ರಾಸುಗಳಿಗೆ ವರ್ಷಪೂರ್ತಿ ಆಹಾರ. ಮಲೆನಾಡ ತಳಿ ದೇಸಿ ಹಸುಗಳಂತೂ ಈ ಹುಲ್ಲನ್ನು ಇಷ್ಟಪಟ್ಟು ತಿನ್ನುತ್ತವೆ. ಆದರೆ ಈ ವರ್ಷ ಮಳೆಗೆ ಸಿಲುಕಿದ ಭತ್ತದ ಹುಲ್ಲು ಸಂಪೂರ್ಣ ಕಪ್ಪು ಮತ್ತು ಕಂದು ಬಣ್ಣಕ್ಕೆ ತಿರುಗಿದ್ದು, ಇದನ್ನು ದನಗಳು ಕೂಡ ತಿನ್ನುತ್ತಿಲ್ಲ. ಅದೂ ಅಲ್ಲದೇ ಬೆಳವಲ ನಾಡಿಗೆ ಈ ಹುಲ್ಲು ಕನಕಿ ಒಣವೆಗಳ ರಕ್ಷಣೆಗೆ ಮಾರಾಟವಾಗುತ್ತಿತ್ತು. ಈ ವರ್ಷ ಈ ಹುಲ್ಲನ್ನು ಅರೆಮಲೆನಾಡ ರೈತರು ಮಾರಾಟ ಮಾಡದಂತಾಗಿದೆ.

ಭತ್ತಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ಘೋಷಿಸಿದರೆ ಸಾಲದು. ಈ ಮೂರು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದ ಹಾನಿ ಅನುಭವಿಸಿದ ದೇಶಿ ಭತ್ತ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕೆನ್ನುವ ಒತ್ತಾಯ ರೈತರಿಂದ ಕೇಳಿ ಬರುತ್ತಿದೆ.

4 ಲಕ್ಷದಿಂದ 40 ಸಾವಿರ ಹೆಕ್ಟೇ ರ್‌ಗೆ ಕುಸಿದ ಬೆಳೆ
1950-1975ರ ಮಧ್ಯೆ ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ 4.17 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 50ಕ್ಕೂ ಅಧಿಕ ತಳಿಯ ದೇಶಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ 2000ನೇ ವರ್ಷಕ್ಕೆ ಇದು 1.79 ಲಕ್ಷ ಹೆಕ್ಟೇರ್‌ಗೆ ಇಳಿದಿತ್ತು. 2020ಕ್ಕೆ ಜಿಲ್ಲೆಯಲ್ಲಿ ಬರೀ 41 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿದೆ.

50 ದೇಸಿ ತಳಿ ಭತ್ತಗಳ ಪೈಕಿ 12 ತಳಿಗಳು ಮಾತ್ರ ಪ್ರಚಲಿತದಲ್ಲಿವೆ. ಬದಲಾದ ವಾತಾವರಣ, ಅಕಾಲಿಕ ಮಳೆ, ಕೂಲಿಯಾಳಿನ ಸಮಸ್ಯೆಯಿಂದಾಗಿ ಹಾಗೂ ಕಬ್ಬು ಬೆಳೆಗೆ ಭಾರೀ ಬೇಡಿಕೆ ಹೆಚ್ಚಾಗಿದ್ದರಿಂದ ದೇಶಿ ಭತ್ತ ನೆಲಕಚ್ಚುತ್ತಿದೆ. ಇನ್ನು ಹತ್ತು ವರ್ಷಗಳಲ್ಲಿ ಭತ್ತದ ಬೆಳೆ ಈ ಮೂರು ಜಿಲ್ಲೆಗಳಿಂದ ಕಣ್ಮರೆಯಾಗುವ ಆತಂಕವನ್ನು ಕೃಷಿ ತಜ್ಞರು ಹೊರ ಹಾಕಿದ್ದಾರೆ.

ಭತ್ತ ಮಳೆಯಲ್ಲಿ ತೋಯ್ದಿದ್ದರಿಂದ ಅಕ್ಕಿ ಸರಿಯಾಗಿ ಹೊಂಡುತ್ತಿಲ್ಲ. ಹೀಗಾಗಿ ಹಳಿಯಾಳದ ದೊಡ್ಡ ಮಾರುಕಟ್ಟೆಯಲ್ಲೇ ದೇಶಿ ಭತ್ತ ಕೊಳ್ಳುತ್ತಿಲ್ಲ. ನನ್ನ 8 ಚೀಲ ಭತ್ತವನ್ನು ಅಲ್ಲಿಯೇ ಚೆಲ್ಲಿ ಬಂದಿದ್ದೇನೆ.
ಶಿವಾನಂದ ನಾಗಪ್ಪನವರ, ಮಂಡಿಹಾಳ ರೈತ

ಅಕಾಲಿಕ ಮಳೆಗೆ ದೇಶಿ ಭತ್ತ ಸೇರಿದಂತೆ ಹಾನಿಗೊಳಗಾದ ಎಲ್ಲಾ ಬೆಳೆಗಳಿಗೂ ಈಗಾಗಲೇ ಪರಿಹಾರ ಘೋಷಣೆ ಮಾಡಲಾಗಿದೆ. ಈವರೆಗೂ ಧಾರವಾಡ ಜಿಲ್ಲೆಯ ರೈತರಿಗೆ 90 ಕೋಟಿ ರೂ. ಪರಿಹಾರ ನೀಡಲಾಗಿದೆ. ಎಷ್ಟೇ ಬೆಳೆಗಳು ನಾಶವಾಗಿದ್ದರೂ ಒಂದು ಬೆಳೆಗೆ ಮಾತ್ರ ಪರಿಹಾರ ಲಭ್ಯ.
ರಾಜಶೇಖರ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ,ಧಾರವಾಡ

ಪ್ರತಿವರ್ಷ 50 ಸಾವಿರ ಕ್ವಿಂಟಲ್‌ನಷ್ಟು ಭತ್ತ ಖರೀದಿಸಿ ಮಾರಾಟ ಮಾಡುತ್ತೇನೆ. ಈ ವರ್ಷದ ದೇಶಿ ಭತ್ತ ಮಳೆಗೆ ಸಿಲುಕಿ ಅಕ್ಕಿ ಗುಣಮಟ್ಟ ಕುಸಿದಿದ್ದು, ಮಹಾರಾಷ್ಟ್ರ ಮತ್ತು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬೇಡಿಕೆ ಕುಸಿದಿದೆ. ಹೀಗಾಗಿ ಕಳಪೆ ಗುಣಮಟ್ಟದ ಭತ್ತ ಖರೀದಿ ಕೈ ಬಿಟ್ಟಿದ್ದೇವೆ.
ವಿನಾಯಕ ಚಂದಗಡಕರ, ದೇಶಿ ಭತ್ತದ ವ್ಯಾಪಾರಿ

ಬಸವರಾಜ ಹೊಂಗಲ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next