Advertisement

ಶಾಸಕರ ಶಾಂತಿ ಕದಡಿದೆ ಪುತ್ರನ ಪಟಾಲಂ ಪುಂಡಾಟ

11:43 AM Mar 19, 2018 | |

ಬೆಂಗಳೂರು: ಫ‌ರ್ಜಿ ಕೆಫೆ ಪ್ರಕರಣದ ನಂತರ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾದ ಕ್ಷೇತ್ರ ಶಾಂತಿನಗರ. ಕ್ಷೇತ್ರದ ಗಲ್ಲಿ ಗಲ್ಲಿಯಲ್ಲೂ ಶಾಸಕ  ಎನ್‌.ಎ. ಹ್ಯಾರಿಸ್‌ರ ಪುತ್ರ  ನಲಪಾಡ್‌ ಪ್ರಕರಣದ್ದೇ ಮಾತು. 1967ರಲ್ಲಿ ಅಸ್ತಿತ್ವಕ್ಕೆ ಬಂದ ಶಾಂತಿನಗರ ವಿಧಾನಸಭಾ ಕ್ಷೇತ್ರ ಮೊದಲ ಎರಡು ಅವಧಿ ಹೊರತುಪಡಿಸಿ 2004ರವರೆಗೆ ಎಸ್ಸಿ ಮೀಸಲು ಕ್ಷೇತ್ರವಾಗಿತ್ತು.

Advertisement

ಮುನಿಸ್ವಾಮಿ ಮೂರು ಬಾರಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು. ಮೀಸಲು ಕ್ಷೇತ್ರದ ಕೊನೆಯ ಅವಧಿಯಾಗಿದ್ದ 2004ರಲ್ಲಿ ಬಿಜೆಪಿಯ ಸಿ.ರಘು ಗೆದ್ದಿದ್ದರು. ಕ್ಷೇತ್ರ ಪುನರ್‌ವಿಂಗಡಣೆ ನಂತರ 2008 ಹಾಗೂ 2013ರ ಚುನಾವಣೆಯಲ್ಲಿ ಸತತ ಜಯಗಳಿಸಿರುವ ಹ್ಯಾರಿಸ್‌ ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿದ್ದಾರೆ. ಆದರೆ ಪುತ್ರನ ಪ್ರಕರಣದ ನಂತರ ಹ್ಯಾರಿಸ್‌ಗೆ ಟಿಕೆಟ್‌ ಸಿಗುವುದು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ.

ಹೀಗಾಗಿ, ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಪುತ್ರ ನಿವೇದಿತ್‌ ಅಳ್ವಾ, ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಹರ್ಷದ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಆರ್‌.ವಿ.ವೆಂಕಟೇಶ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಕ್ಷೇತ್ರದಲ್ಲಿ ಕ್ರಿಶ್ಚಿಯನ್‌ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ನಿವೇದಿತ್‌ ಆಳ್ವಾ ಹೈಕಮಾಂಡ್‌ ಮಟ್ಟದಲ್ಲಿ ಟಿಕೆಟ್‌ಗಾಗಿ ಪ್ರಬಲ ಲಾಬಿ ನಡೆಸುತ್ತಿದ್ದಾರೆ.

ಕ್ಷೇತ್ರದ ವ್ಯಾಪ್ತಿಗೆ ಶಾಂತಿನಗರ, ನೀಲಸಂದ್ರ, ವನ್ನಾರ್‌ಪೇಟೆ, ಅಗರ, ದೊಮ್ಮಲೂರು, ಶಾಂತಲಾನಗರ ಮತ್ತು ಜೋಗುಪಾಳ್ಯ ವಾರ್ಡ್‌ಗಳಿದ್ದು, ಬಿಜೆಪಿ, ಇಬ್ಬರು ಕಾಂಗ್ರೆಸ್‌ ಹಾಗೂ ಒಬ್ಬರು ಪಕ್ಷೇತರ ಪಾಲಿಕೆ ಸದಸ್ಯರಿದ್ದಾರೆ. ಹಳೆಯ ಬೆಂಗಳೂರಿನ ಛಾಯೆ ಜತೆಗೆ ಆಧುನಿಕ ಸಿಲಿಕಾನ್‌ ವ್ಯಾಲಿಯನ್ನೂ ಪ್ರತಿನಿಧಿಸುವುದು ಶಾಂತಿನಗರದ ಹೆಗ್ಗಳಿಕೆ. ತೆಲುಗು, ಮಲೆಯಾಳಿ ಭಾಷಿಕರು ಹೆಚ್ಚಾಗಿದ್ದರೂ ತಮಿಳು, ಮುಸ್ಲಿಂ ಹಾಗೂ ಕ್ರಿಶ್ಚಿಯನ್‌ ಮತದಾರರೇ ಇಲ್ಲಿ ನಿರ್ಣಾಯಕ.

ಪ್ರತಿಷ್ಠಿತ ಬಡಾವಣೆಗಳಲ್ಲಿ ಕಣ್ಣಿಗೆ ಕಾಣಿಸುವ ಅಭಿವೃದ್ಧಿ ಕೆಲಸಗಳಾಗಿವೆ. ಆದರೆ, ಕೊಳೆಗೇರಿಗಳ ಸ್ಥಿತಿ ಸುಧಾರಿಸಿಲ್ಲ. ಕುಡಿಯುವ ನೀರಿಗಾಗಿ ಬೇಸಿಗೆಯಲ್ಲಿ ಜನರು ಸಂಕಷ್ಟ ಎದುರಿಸುತ್ತಿದ್ದು, ಎರಡು ವರ್ಷದ ಹಿಂದೆ ಭಾರೀ ಮಳೆಯಿಂದ ಈಜಿಪುರ ಸಂಪರ್ಕಿಸಿರುವ ರಾಜಕಾಲುವೆ ಉಕ್ಕಿ ಹರಿದು ಅಕ್ಕ ಪಕ್ಕದ ಕೊಳೆಗೇರಿಗಳು ಜಲಾವೃತವಾಗಿದ್ದವು. ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಆ ಕಾಲುವೆ ಹೂಳು ತೆಗೆದು ಅಭಿವೃದ್ಧಿಪಡಿಸಿರುವ ಕಾರಣ ಈ ಭಾಗದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
 
ಹಿಂದಿನ ಫ‌ಲಿತಾಂಶ
-ಎನ್‌.ಎ. ಹ್ಯಾರಿಸ್‌ (ಕಾಂಗ್ರೆಸ್‌) 54,342
-ಕೆ. ವಾಸುದೇವಮೂರ್ತಿ (ಜೆಡಿಎಸ್‌) 43,155
-ಡಿ. ವೆಂಕಟೇಶ್‌ಮೂರ್ತಿ (ಬಿಜೆಪಿ) 10,930

Advertisement

ಟಿಕೆಟ್‌ ಆಕಾಂಕ್ಷಿಗಳು
-ಕಾಂಗ್ರೆಸ್‌- ಎನ್‌.ಎ.ಹ್ಯಾರಿಸ್‌, ಆರ್‌.ವಿ. ವೆಂಕಟೇಶ್‌, ನಿವೇದಿತ್‌ ಆಳ್ವ, ರಿಜ್ವಾನ್‌ ಹರ್ಷದ್‌
-ಬಿಜೆಪಿ- ಕೆ.ವಾಸುದೇವ ಮೂರ್ತಿ
-ಆಮ್‌ ಆದ್ಮಿ ಪಾರ್ಟಿ- ರೇಣುಕಾ ವಿಶ್ವನಾಥ್‌
-ಜೆಡಿಎಸ್‌- ಅಭ್ಯರ್ಥಿಗೆ ಹುಡುಕಾಟ

ಕ್ಷೇತ್ರದ ಮಹಿಮೆ: ವಿವೇಕನಗರದಲ್ಲಿ ಇನ್‌ಫ‌ಂಟ್‌ ಜೀಸಸ್‌ ಚರ್ಚ್‌ ಇದ್ದು, ಪ್ರತಿ ವರ್ಷ ನಡೆಯುವ ವಾರ್ಷಿಕ ಉತ್ಸವದಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಬೆಂಗಳೂರಿನ ಹೆಗ್ಗುತುಗಳಲ್ಲಿ ಒಂದಾದ ಮೆಯೋ ಹಾಲ್‌, ಶಂಕರ್‌ನಾಗ್‌ ಚಿತ್ರಮಂದಿರ ಹಾಗೂ 24 ಅಂತಸ್ತಿನ ಪಬ್ಲಿಕ್‌ ಯುಟಿಲಿಟಿ ಬಿಲ್ಡಿಂಗ್‌ ಇರುವುದು ಇದೇ ಕ್ಷೇತ್ರದಲ್ಲಿ.

ಕಾಸ್ಮೋಪಾಲಿಟನ್‌ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್‌ ರಸ್ತೆಗಳು ಕ್ಷೇತ್ರದ ಆಕರ್ಷಣೆ. ಬ್ರಿಟೀಷರ ಕಾಲ ನೆನಪಿಸುವ ಬಡಾವಣೆಗಳು, ವಿವೇಕನಗರದ ಇನ್‌ಫೆಂಟ್‌ ಜೀಸಸ್‌ ಚರ್ಚ್‌, ರಕ್ಷಣಾ ಇಲಾಖೆ ಕಚೇರಿ, ವಸತಿ ಗೃಹಗಳು ಸೇರಿದಂತೆ ವಾಣಿಜ್ಯ ಪ್ರದೇಶ ಜತೆಗೆ ಕೊಳಗೇರಿಗಳನ್ನು ಒಳಗೊಂಡಿರುವ ಶಾಂತಿನಗರ ವೈವಿಧ್ಯಮಯ ಕ್ಷೇತ್ರ.

ಕ್ಷೇತ್ರದ ದೊಡ್ಡ ಸಮಸ್ಯೆ?: ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಇಲ್ಲಿಯೂ ಕಸ ವಿಲೇವಾರಿಯದ್ದೇ ದೊಡ್ಡ ಸಮಸ್ಯೆ. ಕ್ಷೇತ್ರದ ಬಹುತೇಕ ಕಡೆ ಕುಡಿಯುವ ನೀರಿನ ಮತ್ತು ಒಳಚರಂಡಿ ಸಂಪರ್ಕದ ವ್ಯವಸ್ಥೆ ಇನ್ನೂ ಹಳೇ ಮಾದರಿಯಲ್ಲಿದೆ. ಜತೆಗೆ ಮಳೆಗಾಲದಲ್ಲಿ ಶಾಂತಿನಗರ ಬಿಎಂಟಿಸಿ ಕ್ವಾಟ್ರಸ್‌ ಹಿಂಭಾಗದ ರಾಜಕಾಲುವೆಯಲ್ಲಿ ಮಳೆ ನೀರು ತುಂಬಿ ಸೃಷ್ಟಿಸುವ ಆವಾಂತರಗಳಿಗೆ ಈ ಕ್ಷೇತ್ರ ನಲುಗಿದೆ. ಆದರೆ, ಈ ಬಾರಿ ಒಂದಿಷ್ಟು ಕೆಲಸ ಮಾಡಿದ್ದು ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಿಸಿದೆ. ಇದಲ್ಲದೇ ಕೆಲವು ಕಡೆ ಕುಡಿಯುವ ನೀರು, ವಿದ್ಯುತ್‌ದೀಪ ಮತ್ತು ರಸ್ತೆ ಸಮಸ್ಯೆಯೂ ಇದೆ. ಆಗಾಗ ಸರಗಳ್ಳತನ ಪ್ರಕರಣಗಳು ಇಲ್ಲಿ ನಡೆಯುತ್ತಿರುತ್ತವೆ.

ಕ್ಷೇತ್ರದ ಬೆಸ್ಟ್‌ ಏನು?: ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಬಡವರಿಗೆ ಆರು ಸಾವಿರ ಮನೆ ನಿರ್ಮಿಸಿಕೊಟ್ಟಿರುವುದು. ಟೆಂಡರ್‌ಶ್ಯೂರ್‌ ಯೋಜನೆಯಡಿ ಚ‌ರ್ಚ್‌ ಸ್ಟ್ರೀಟ್‌, ಸೇಂಟ್‌ಮಾರ್ಕ್ಸ್ ಹಾಗೂ ರೆಸಿಡೆನ್ಸಿ ರಸ್ತೆಗಳನ್ನು ಮಾದರಿ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಿರುವುದು, ಕೊಳಗೇರಿಗಳಲ್ಲೂ ಮೂಲ ಸೌಕರ್ಯ ಕಲ್ಪಿಸಿರುವುದು. ಮಳೆ ನೀರು ಕಾಲುವೆ ಅಭಿವೃದ್ಧಿಪಡಿಸಿರುವುದು. ಈ ಕ್ಷೇತ್ರದಲ್ಲಿ ಈವರೆಗೆ ಆಗಿರುವ ಉತ್ತಮ ಕೆಲಸಗಳು.

ಶಾಸಕರು ಏನಂತಾರೆ?: ಕ್ಷೇತ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಟೆಂಡರ್‌ ಶ್ಯೂರ್‌ ಅಡಿ ರಸ್ತೆಗಳು ಹಾಗೂ ಪಾದಚಾರಿ ಮಾರ್ಗವನ್ನು ವಿಶೇಷ ವಾಗಿ ರೂಪಿಸಲಾಗಿದೆ. ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಆರು ಸಾವಿರ ಮನೆ ನಿರ್ಮಿಸಿಕೊಟ್ಟ ತೃಪ್ತಿಯಿದೆ. ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮತ್ತಷ್ಟು ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಬೇಕೆಂಬ ಬಯಕೆಯಿದೆ.

ಜನದನಿ
ರಸ್ತೆ, ಕುಡಿಯುವ ನೀರು, ವಿದ್ಯುತ್‌ ದೀಪ, ಕಸ ವಿಲೇವಾರಿ ಸೇರಿ ನಾಗರೀಕ ಸೌಲಭ್ಯಗಳ ಬಗ್ಗೆ ಶಾಸಕರು ತಕ್ಕಮಟ್ಟಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಅವರ ಮಗನ ಗಲಾಟೆ ಪ್ರಕರಣದಿಂದಾಗಿ ಸಂಕಷ್ಟ ಎದುರಾಗಿದೆ.
-ನಾರಾಯಣ ಸಿಂಗ್‌

ಕ್ಷೇತ್ರದಲ್ಲಿ ಸಮಸ್ಯೆ ಇಲ್ಲ ಎಂದು ಹೇಳುವಂತಿಲ್ಲ. ಪ್ರತಿಷ್ಠಿತ ಪ್ರದೇಶಗಳಲ್ಲಿ ಎಲ್ಲವೂ ಸರಿ ಕಂಡರೆ, ಬಡವರು ವಾಸಿಸುವ ಕಡೆ ಸಮಸ್ಯೆಗಳು ಕಾಣುತ್ತವೆ. ಚುನಾವಣೆ ಬಂದಿದ್ದರಿಂದ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಹೆಚ್ಚಾಗಿವೆ.
-ರಮೇಶ್‌

ಹೊಟ್ಟೆಪಾಡಿಗಾಗಿ ಇಡೀ ದಿನ ಮನೆಯಿಂದ ಹೊರಗಿದ್ದು ಕೆಲಸ ಮಾಡಬೇಕು. ಪ್ರಾಬ್ಲಿಂ ಯಾರೂ ಕೇಳಲ್ಲ. ಯ್ನಾರ್ಯಾರೋ ಬಂದು ಊಟ ಹಾಕಿಸ್ತಾರೆ. ಸೀರೆ ಹಂಚಾ¤ರೆ. ಆಡುಗೆ ಪಾತ್ರೆ ಕೊಡ್ತಾರೆ. ಯಾರು ಹೆಂಗೇ ಅಂತ ನಮ್ಗೆ ಗೊತ್ತಿಲ್ಲ.
-ಮಾದಮ್ಮ

ಎಲೆಕ್ಷನ್‌ ಬಂದಾಗ ಜನರ ಪ್ರಾಬ್ಲಿಂ ಏನೆಂದು ಕೇಳ್ತಾರೆ. ಆಮೇಲೆ ಯಾರೂ ಕೇರ್‌ ಮಾಡಲ್ಲ. ಯಾರ್‌ ಕರೆದ್ರೂ ಈಗ ಲೀಡರ್‌ಗಳು ಬರ್ತಾರೆ, ಎಲೆಕ್ಷನ್‌ ಆದ್ಮೇಲೆ ಯಾರೂ ಕೈಗೆ ಸಿಗಲ್ಲ. ನಮ್‌ ಪ್ರಾಬ್ಲಿಂ ನಾವೇ ಫೇಸ್‌ ಮಾಡ್ಬೇಕು.
-ವಿನೋದ್‌

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next