ಬೆಂಗಳೂರು: 2021-22ನೇ ಸಾಲಿನ ವಿದ್ಯಾರ್ಥಿ ಪಾಸುಗಳಿಗೆ ಸಂಬಂಧಿಸಿದಂತೆ ಬಿಎಂಟಿಸಿಯು ಶುಕ್ರವಾರದಿಂದ (ನ. 12ರಿಂದ) ಆನ್‌ಲೈನ್ ಮೂಲಕ ಸ್ವೀಕರಿಸಲಿದೆ. ಆನ್‌ಲೈನ್ ಅರ್ಜಿಯು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ಹಾಗೂ https://mybmtc.karnataka.gov.in ನಲ್ಲಿ ಲಭ್ಯವಿದೆ.
ಪಾಸಿನ ಅರ್ಜಿಗಳನ್ನು ಆಯಾ ಶಿಕ್ಷಣ ಸಂಸ್ಥೆಗಳಿಂದ ಮತ್ತು ಬಿಎಂಟಿಸಿಯಿಂದ ಅನುಮೋದಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪಾಸು ವಿತರಣೆಗಾಗಿ ಬೆಂಗಳೂರು ಒನ್ ಕೇಂದ್ರ, ದಿನಾಂಕ ಮತ್ತು ಸಮಯ ನಿಗದಿಪಡಿಸಿಕೊಳ್ಳಬೇಕು. ಪಾಸು ವಿತರಣಾ ಕೇಂದ್ರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸ್ವೀಕೃತಿ ಪತ್ರ, ಶಿಕ್ಷಣ ಸಂಸ್ಥೆಯ ಗುರುತಿನಚೀಟಿ, ಶುಲ್ಕ ರಸೀದಿ, ಶಾಲಾ ಮುಖ್ಯಸ್ಥರಿಂದ ದೃಢೀಕರಿಸಿದ ಪತ್ರವನ್ನು ಹಾಜರುಪಡಿಸಬೇಕು.
ಇದನ್ನೂ ಓದಿ:- ಕುಟುಂಬ ರಾಜಕಾರಣದ ಚಿತ್ರಣ ಸಂಪೂರ್ಣ ಬದಲಾಗಿದೆ: ತೇಜಸ್ವಿ ಸೂರ್ಯ
ಸ್ಮಾರ್ಟ್‌ಕಾರ್ಡ್ ವಿದ್ಯಾರ್ಥಿ ಪಾಸುಗಳನ್ನು ನ. 14ರಿಂದ ಬೆಂಗಳೂರು ಒನ್ ಕೇಂದ್ರಗಳಲ್ಲಿ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪಾಸುಗಳನ್ನು ಬೆಳಿಗ್ಗೆ 8ರಿಂದ ಸಂಜೆ 6.30ರವರೆಗೆ ಎಲ್ಲ ದಿನಗಳಲ್ಲಿ 95 ಬೆಂಗಳೂರು ಒನ್ ಕೇಂದ್ರಗಳಲ್ಲಿ ವಿತರಿಸಲಾಗುವುದು. ಪಾಸು ವಿತರಣಾ ಬೆಂಗಳೂರು ಒನ್ ಕೇಂದ್ರಗಳ ಪಟ್ಟಿಯು ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿಗಳ ಅರ್ಜಿ ಅನುಮೋದಿಸಲು ಶಿಕ್ಷಣ ಸಂಸ್ಥೆಗಳು ನೋಂದಣಿಯಾಗದೆ ಇದ್ದಲ್ಲಿ (ರಾಜ್ಯ ಪಠ್ಯಕ್ರಮ 1ರಿಂದ 10ನೇ ತರಗತಿವರೆಗಿನ ಶಾಲೆಗಳನ್ನು ಹೊರತುಪಡಿಸಿ), ಬಿಎಂಟಿಸಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.