ನಂಜನಗೂಡು: ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಪಕ್ಷದ ಪಾಲಿಗೆ ಅತ್ಯಂತ ಮಹತ್ವ ಚುನಾವಣೆ ಆಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್ ತಿಳಿಸಿದರು. ಉಪಚುನಾವಣೆ ನಿಮಿತ್ತ ಮಾ.12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಉಪ ಚುನಾವಣೆ ರಾಜ್ಯ ರಾಜಕಾರಣದ ದಿಕ್ಸೂಚಿ ಯಾಗಲಿದೆ. ಆದಕಾರಣ ಪಕ್ಷ ಇದನ್ನೂ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಇದೀಗ ಏ.9ಕ್ಕೆ ಮತದಾನ ನಿಗದಿಯಾಗಿದೆ ಎಂದರು. ಚುನಾವಣೆಗೆ ಕೆಲವೇ ದಿನಗಳು ಉಳಿದಿದೆ. ಆದ್ದರಿಂದ ಕಾರ್ಯಕರ್ತರು ಇನ್ನು ವಿಶ್ರಾಂತಿ ಪಡೆಯುವಂತಿಲ್ಲ ಎಂದ ಅವರು, ದಕ್ಷಿಣ ಕಾಶಿಯ ಮತದಾರರು ನಮ್ಮನ್ನು ಕೈ ಬಿಡಲಾರರು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಪಕ್ಷದ ಕಾರ್ಯಕರ್ತರು ರಾಜ್ಯ ಸರ್ಕಾರ ಮಾಡಿರುವ ಸಾಧನೆಗಳನ್ನು ಕ್ಷೇತ್ರದ ಮತದಾರರಿಗೆ ಮುಟ್ಟಿಸಬೇಕು. ಈ ಮೂಲಕ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದರು,ನಗರದ ವಿದ್ಯಾವರ್ಧಕ ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಸಂಸದ ಆರ್. ಧ್ರುವನಾರಾಯಣ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಭಾಗವಹಿಸಲಿದ್ದಾರೆ. ಸಭೆಯನ್ನು ಅಚ್ಚುಕಟ್ಟಾಗಿ ಸಂಘಟಿಸಲು ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಕೆಪಿಸಿಸಿ ಸದಸ್ಯ ಎಚ್.ಪಿ. ಬಸವರಾಜು, ಮುಖಂಡ ರಾದ ಅನ್ಸಾರ್ ಅಹ್ಮದ್, ದೀಪಕ್, ಬಸವಣ್ಣ, ಗಿರೀಶ, ಬಸವರಾಜ ನಾಯಕ, ಪದ್ಮನಾಭ್, ಪ್ರಭಾಕರ, ಕುರಹಟ್ಟಿ ಮಹೇಶ, ನಂದಕುಮಾರ, ಕೆ.ಬಿ. ಸ್ವಾಮಿ, ಸಂಗರಾಜು, ರಾಚನಾಯ್ಕ, ಮಂಜುನಾಥ್, ಗುರುಮಲ್ಲಪ್ಪ, ನಾಗೇಶ ರಾಜು, ನೂರ್ ಅಹ್ಮದ ಮುಂತಾವರು ಉಪಸ್ಥಿತರಿದ್ದರು. ಇದೇ ವೇಳೆ ಸ್ವಗ್ರಾಮಕ್ಕೆ ತೆರಳಿದ ಕೇಶವಮೂರ್ತಿ ಮನೆ ಮನೆಗೆ ತೆರಳಿ ಮತಯಾಚಿಸಿದರು.