Advertisement

ಪಕ್ಷ ಬಯಸಿದ್ರೆ ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ

11:46 AM May 02, 2017 | Team Udayavani |

ಶಿವಮೊಗ್ಗ: ಜವಾಬ್ದಾರಿಯಿಂದ ವಿಮುಕ್ತಿಗೊಳಿಸುವುದರಿಂದ ಪಕ್ಷ ಸದೃಢಗೊಳ್ಳುತ್ತದೆ ಎಂದಾದರೆ ಯಾವ ತ್ಯಾಗಕ್ಕೂ ಸಿದ್ಧ. ಪಕ್ಷದ ಹಿತಕ್ಕಾಗಿ ಎಂಎಲ್‌ಸಿ ಸ್ಥಾನಕ್ಕೆ ಬೇಕಾದರೂ ರಾಜೀನಾಮೆ ಸಲ್ಲಿಸುವೆ ಎಂದು ವಿಧಾನಪರಿಷತ್‌ ಸದಸ್ಯ ಎಂ.ಬಿ. ಭಾನುಪ್ರಕಾಶ್‌ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರಲ್ಲದೆ, ಬ್ರಿಟೀಷರು ಮಧ್ಯರಾತ್ರಿಯಲ್ಲಿ ದೇಶಕ್ಕೆ ಸ್ವಾತಂತ್ರಕೊಟ್ಟಂತೆ ರಾತ್ರಿ 12:30ಕ್ಕೆ ಹುದ್ದೆಯಿಂದ ಬಿಡುಗಡೆಗೊಳಿಸಿರುವುದಾಗಿ ಪತ್ರ ಕಳುಹಿಸಿದ್ದಾರೆ. ಪಕ್ಷದಲ್ಲಿ ಆಂತರಿಕ ಭಿನ್ನಮತ ಇದ್ದಾಗ ಈ ರೀತಿ ಮುಕ್ತಗೊಳಿಸುವುದು ಪಕ್ಷಕ್ಕೆ ಶಕ್ತಿ ಕೊಡಲಿದೆಯೇ ಅಥವಾ ಪಕ್ಷವನ್ನು ದುರ್ಬಲಗೊಳಿಸಲಿದೆಯೇ ಎನ್ನುವುದನ್ನು ರಾಜ್ಯಾಧ್ಯಕ್ಷರು ಯೋಚಿಸಬೇಕು. ಜವಾಬ್ದಾರಿ ವಾಪಸ್‌ ಪಡೆದು ಇವರು ಮಾಡುವ ಸಾಧನೆಯಾದರೂ ಏನು ಎಂದು ಪ್ರಶ್ನಿಸಿದರು. ನಾನು 30 ವರ್ಷ ಪಕ್ಷಕ್ಕಾಗಿ ದುಡಿದಿದ್ದೇನೆ.

Advertisement

ಹುದ್ದೆಯಿಂದ ಬಿಡುಗಡೆಗೊಳಿಸುವ ಮೊದಲು ನಿಮ್ಮ ಸೇವೆ ಸದ್ಯಕ್ಕೆ ಅವಶ್ಯಕತೆ ಇಲ್ಲ ಎಂದು ತಮಗೆ ದೂರವಾಣಿ ಕರೆ ಮಾಡಿದ್ದರೂ ಸಾಕಿತ್ತು ಅಥವಾ ಸೆಕ್ಯುರಿಟಿಯವರ ಮೂಲಕ ಹೇಳಿ ಕಳುಹಿಸಿದ್ದರೂ ಒಪ್ಪಿಗೆ ಕೊಡುತ್ತಿದ್ದೆ. ಅದನ್ನು ಬಿಟ್ಟು ಪತ್ರಿಕೆಗಳಿಗೆ ಮೊದಲು ವಿಷಯ ಬಹಿರಂಗಗೊಳಿಸಿ, ಆನಂತರ ತನಗೆ ಮಾಹಿತಿ ಕೊಟ್ಟಿರುವುದು ಎಷ್ಟರಮಟ್ಟಿಗೆ ಸರಿ? ಉಗುರಿನಿಂದ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವ ಅವಶ್ಯಕತೆ ಇತ್ತೆ ಎಂದು ಪ್ರಶ್ನಿಸಿದರು.

ಬಿಜೆಪಿ ಗೆಲ್ಲಲು ಸಂತೋಷ್‌ ಕಾರಣ
ಯಡಿಯೂರಪ್ಪನವರು ಈ ಹಿಂದೆ ಪಕ್ಷ ಬಿಟ್ಟು ಹೊರಹೋದ ಸಂದರ್ಭದಲ್ಲಿ ಇದೇ ಸಂತೋಷ್‌ ಪಕ್ಷದ ಸಂಘಟನೆಯನ್ನು ಸದೃಢಗೊಳಿಸಲು ತಮ್ಮದೇ ಆದ ರೀತಿಯಲ್ಲಿ ಕಾರ್ಯತಂತ್ರ ರೂಪಿಸಿದ್ದರು. ಆ ಮೂಲಕ ಚುನಾವಣೆಯಲ್ಲಿ 40 ಸ್ಥಾನ ತಂದು ಕೊಟ್ಟಿದ್ದಾರೆ. ಈಗ ಪಕ್ಷದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿಗೆ ಸಂತೋಷ್‌ ಹೆಸರನ್ನು ತಳುಕು ಹಾಕಿ ಆರೋಪ
ಮಾಡಲಾಗಿದೆ. ಇದು ಸರಿಯಲ್ಲ ಎಂದರು.

ಸಮಸ್ಯೆ ಬಗೆಹರಿಸದಿದ್ರೆ ಮತ್ತೆ ಸಭೆ: “ನಾವು ಯಾವತ್ತೂ ಯಡಿಯೂರಪ್ಪನವರಿಗೆ ಸ್ಪರ್ಧಿಗಳಲ್ಲ. ಬದಲಾಗಿ ಸಹಕಾರಿಗಳು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪಕ್ಷದಲ್ಲಿ ಉಂಟಾಗಿರುವ ಗೊಂದಲವನ್ನು ಪಕ್ಷದ ರಾಷ್ಟ್ರೀಯ
ಮುಖಂಡರು ಬಗೆಹರಿಸಬೇಕು. ಇದು ಕೇವಲ ಬಿಎಸ್‌ವೈ-ಕೆಎಸ್‌ಈ ನಡುವಿನ ಸಮಸ್ಯೆ ಅಲ್ಲ. ಸಂಘಟನೆ ವಿಚಾರದಲ್ಲಿ ಬಿಕ್ಕಟ್ಟು ಉಂಟಾಗಿದೆ ಎಂಬುದನ್ನು ಗುರುತಿಸಿ ಪರಿಹಾರಕ್ಕೆ ಮುಂದಾಗುವು ದಿಲ್ಲವೋ ಅಲ್ಲಿಯವರೆಗೂ ಇದು ಹೀಗೆಯೇ
ಮುಂದುವರಿಯುತ್ತದೆ. ಮೇ 10ರೊಳಗೆ ಗೊಂದಲ ನಿವಾರಣೆಯಾಗದಿದ್ದರೆ ಮತ್ತೆ ಸಭೆ ಸೇರುತ್ತೇವೆಂದು ಭಾನುಪ್ರಕಾಶ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next