Advertisement

ಪಾಲಿಕೆಯಲ್ಲಿನ್ನು ಸಂಪತ್‌ ರಾಜ್‌

10:14 AM Sep 30, 2017 | |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 51ನೇ ಮೇಯರ್‌ ಆಗಿ ಕಾಂಗ್ರೆಸ್‌ನ ಸಂಪತ್‌ ರಾಜ್‌ ಹಾಗೂ 50ನೇ ಉಪಮೇಯರ್‌ ಆಗಿ ಜೆಡಿಎಸ್‌ನ ಪದ್ಮಾವತಿ ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ.

Advertisement

ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ದೇವರಜೀವನಹಳ್ಳಿ ವಾರ್ಡ್‌ನ ಸಂಪತ್‌ರಾಜ್‌, ರಾಜಗೋಪಾಲ ನಗರ ವಾರ್ಡ್‌ನ ಪದ್ಮಾವತಿ ನರಸಿಂಹಮೂರ್ತಿ ಅವರು ಮೇಯರ್‌-ಉಪ ಮೇಯರ್‌ ಆಗಿ ಆಯ್ಕೆಗೊಂಡರು.

ಸಂಪತ್‌ರಾಜ್‌ 139 ಮತಗಳು ಪಡೆದರೆ ಪದ್ಮಾವತಿ ನರಸಿಂಹಮೂರ್ತಿ ಅವರಿಗೆ 138 ಮತ ಪಡೆದರು. ಕಾಂಗ್ರೆಸ್‌ನ ವಿಧಾನಪರಿಷತ್‌ ಸದಸ್ಯ ಪಿ.ಆರ್‌.ರಮೇಶ್‌ ಅವರ ಮತ ಉಪ ಮೇಯರ್‌ಗೆ ಲಭ್ಯವಾಗಲಿಲ್ಲ. ಹೀಗಾಗಿ, ಒಂದು ಮತ ಕಡಿಮೆ ಯಾಯಿತು. ವಿಪ್‌ ಕೊಟ್ಟಿದ್ದರೂ ಕಾಂಗ್ರೆಸ್‌ನ ವಿಧಾನಪರಿಷತ್‌ ಸದಸ್ಯ ರಿಜ್ವಾನ್‌ ಹರ್ಷದ್‌ ಗೈರು ಹಾಜರಾಗಿದ್ದರು.

ಮೇಯರ್‌-ಉಪ ಮೇಯರ್‌ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಸದಸ್ಯರು ಕೊನೇ ಕ್ಷಣದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಸಭಾತ್ಯಾಗ ಮಾಡಿದರು. ಬಿಜೆಪಿ ವತಿಯಿಂದ ಮೇಯರ್‌ ಸ್ಥಾನಕ್ಕೆ ಸ್ಪರ್ಧಿಸಿದ್ದ ಮುನಿಸ್ವಾಮಿ ಹಾಗೂ ಉಪ ಮೇಯರ್‌ ಸ್ಥಾನಕ್ಕೆ ಮಮತಾ ವಾಸುದೇವ್‌ ನಾಮಪತ್ರ ಸಲ್ಲಿಸಿದರೂ ಚುನಾವಣೆ ಪ್ರಕ್ರಿಯೆ ವೇಳೆ ಸಭಾಂಗಣದಲ್ಲಿ ಇರಲಿಲ್ಲ.

ರಾಜ್ಯಸಭೆ ಸದಸ್ಯರಾದ ಆಸ್ಕರ್‌ ಫ‌ರ್ನಾಂಡಿಸ್‌, ಜೈರಾಂ ರಮೇಶ್‌, ರೆಹಮಾನ್‌ ಖಾನ್‌, ಸಂಸದರಾದ ವೀರಪ್ಪಮೊಯಿಲಿ, ಡಿ.ಕೆ.ಸುರೇಶ್‌, ಸಚಿವರಾದ ಕೆ.ಜೆ. ಜಾರ್ಜ್‌, ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಎಚ್‌. ಎಂ.ರೇವಣ್ಣ, ಸೀತಾರಾಂ, ದಿನೇಶ್‌ಗುಂಡೂರಾವ್‌ ಮತದಾನದಲ್ಲಿ ಪಾಲ್ಗೊಂಡಿದ್ದ ಪ್ರಮುಖರು. ಬಿಜೆಪಿಯ ರಾಜ್ಯಸಭೆ ಸದಸ್ಯರಾದ ನಿರ್ಮಲ ಸೀತಾರಾಮನ್‌, ಕೇಂದ್ರ ಸಚಿವರಾದ ಅನಂತಕುಮಾರ್‌, ಸದಾನಂದಗೌಡ ಗೈರು ಹಾಜರಾಗಿದ್ದರು.

Advertisement

ಭತ್ಯೆ ಬೇರೆಡೆ, ಮತದಾನ ಇಲ್ಲಿ!: ಚುನಾವಣೆ ಪ್ರಕ್ರಿಯೆ ಆರಂಭ ವಾ ಗು ತ್ತಿದ್ದಂತೆ ಮೇಯರ್‌ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್‌ನ ಸಂಪತ್‌ರಾಜ್‌ ಪರ ಇರುವವರು ಕೈ ಎತ್ತಿ ಎಂದಾಗ, ಬಿಜೆಪಿ ಸದಸ್ಯರು ಚುನಾವಣೆ ಕಾನೂನು ಬಾಹಿರ. ಬೇರೆಡೆ ಪ್ರಯಾಣ ಭತ್ಯೆ ಪಡೆಯುವವರು ಇಲ್ಲಿ ಮತದಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಕೊನೆಗೆ ಬಿಜೆಪಿ ಸದಸ್ಯರು ಚುನಾವಣೆ ಬಹಿಷ್ಕರಿಸಿ ಸಭಾತ್ಯಾಗ ಮಾಡಿದರು.

ಬಿಜೆಪಿ ಸದಸ್ಯರು ನಾಮಪತ್ರ ಹಿಂಪಡೆಯದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಯವರು ನಿಗಿದಿತ ವೇಳಾಪಟ್ಟಿಯಂತೆ ಚುನಾವಣೆ ಪ್ರಕ್ರಿಯೆ ಮುಂದುವರಿಸಿ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು. ನೂತನ ಮೇಯರ್‌ ಹಾಗೂ ಉಪ ಮೇಯರ್‌ಗಳು ಸೆ.28ರಿಂದ 2018ರ ಸೆ.27ರವರೆಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಿದರು.

ಈ ಮಧ್ಯೆ, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್‌ ಅವರು, ಬಿಜೆಪಿ ಅಭ್ಯರ್ಥಿಗಳ ನಾಮಪತ್ರಗಳನ್ನು ಹಿಂಪಡೆದು ಅವಿರೋಧ ಆಯ್ಕೆಗೆ ಸಹಕರಿಸುವಂತೆ ಮನವಿ ಮಾಡಿದರಾದರೂ ಬಿಜೆಪಿ ನಾಯಕರು ಒಪ್ಪಲಿಲ್ಲ. ಚುನಾವಣೆ ನಿಯಮ ಬಾಹಿರವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಸಭಾತ್ಯಾಗ ಮಾಡಿದ ಬಿಜೆಪಿ ಸದಸ್ಯರು ಪ್ರವೇಶ ದ್ವಾರದ ಬಳಿ ಕುಳಿತಿದ್ದ ಸಂಪತ್‌ ರಾಜ್‌ ಅವರ ಕೈಕುಲುಕಿ ಶುಭಾಶಯ ತಿಳಿಸಿದ್ದು ವಿಶೇಷವಾಗಿತ್ತು

Advertisement

Udayavani is now on Telegram. Click here to join our channel and stay updated with the latest news.

Next