Advertisement

ಅಂಗೈಯಗಲ ಹೊಲ ಆಕಾಶದಷ್ಟು ಮನೋಬಲ

07:42 PM Sep 01, 2019 | Sriram |

ಮೀನಾಕ್ಷಮ್ಮನಿಗೆ ಇರುವುದು ಬರೇ ಅರ್ಧ ಎಕರೆ ಹೊಲ. ಅದನ್ನೇ ಒಂದು ಕೃಷಿ ಪಾಠಶಾಲೆಯಂತೆ ಮಾಡಿದ್ದಾರೆ. ಅಲ್ಲಿ ಬೇಸಾಯದ ಸಲಹೆಗಳ ಜೊತೆಗೆ ಬದುಕಿನ ಕಲಿಕೆಗಳೂ ಸಿಗುತ್ತವೆ. ಅಲ್ಲಿ ಒಬ್ಬಂಟಿ ಹೆಣ್ಣು ಮಗಳಾದ ಮೀನಾಕ್ಷಮ್ಮನವರ ದುಡಿದೇ ಉಣ್ಣಬೇಕೆಂಬ ಛಲ ಕಾಣಿಸುತ್ತದೆ. ಅರ್ಧ ಎಕರೆಯಲ್ಲಿ ಏನೆಲ್ಲಾ ಸಂಯೋಜಿಸಬಹುದೆಂಬ ಜಾಣ್ಮೆ ಗಮನ ಸೆಳೆಯುತ್ತದೆ. ಕೃಷಿ ಜೊತೆಗೆ, ಅದಕ್ಕೆ ಪೂರಕ ಉಪಕಸುಬುಗಳ ಜೋಡಣೆಯ ಮಹತ್ವವೂ ತಿಳಿಯುತ್ತದೆ.

Advertisement

ಭದ್ರಾವತಿ ತಾಲ್ಲೂಕು ಅಗಸನಹಳ್ಳಿಯ ಮೀನಾಕ್ಷಮ್ಮನವರಿಗೆ ಈಗ 58 ವರ್ಷ. ಬದುಕಿನ ಹಲವು ಘಟ್ಟಗಳಲ್ಲಿ ಆಘಾತಗಳನ್ನು ಅನುಭವಿಸಿದವರು. ಚಿಕ್ಕ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು ತಂದೆಯ ಆರೈಕೆಯಲ್ಲಿ ಬೆಳೆದರು. 2ನೇ ತರಗತಿಗೇ ವಿದ್ಯಾಭ್ಯಾಸ ಮೊಟಕು. 13ನೇ ವಯಸ್ಸಿಗೇ ಮದುವೆ. ನಂತರ ತಂದೆಗೆ ಕ್ಯಾನ್ಸರ್‌ ಖಾಯಿಲೆಯಾಗಿ ಅವರೂ ಇಲ್ಲವಾದರು. ಗಂಡ- ಹೆಂಡತಿ ಸೇರಿ ಮೂರು ಎಕರೆ ಅಡಿಕೆ ತೋಟ ಕಟ್ಟಿದರು. ಇಬ್ಬರು ಮಕ್ಕಳು. ಒಂದು ಗಂಡು, ಒಂದು ಹೆಣ್ಣು.

ಮಗಳ ಮದುವೆಗೆ ಒಂದು ಎಕರೆ ತೋಟ ಮಾರಾಟ. ಸ್ವಲ್ಪ ವರ್ಷಕ್ಕೆ ಮಗನ ಮದುವೆ ಆಯಿತು. ಎರಡು ಎಕರೆ ತೋಟದಿಂದ ಬರುತ್ತಿದ್ದ ಆದಾಯದಲ್ಲಿ ಮೂವರ ಜೀವನ ಚೆನ್ನಾಗಿ ನಡೆಯುತ್ತಿತ್ತು. ಮೊಮ್ಮಗನೂ ಹುಟ್ಟಿದ. ಈ ಮಧ್ಯೆ ಮಗ ಆಕಸ್ಮಿಕವಾಗಿ ಮರಣ ಹೊಂದಿದ್ದು ಮೀನಾಕ್ಷಮ್ಮನಿಗೆ ಬಹುದೊಡ್ಡ ಆಘಾತವಾಗಿತ್ತು. ಇದ್ದ ಮನೆ ಹಾಗೂ ಎರಡೆಕರೆ ತೋಟವನ್ನು ಸೊಸೆಗೆ ಕೊಟ್ಟುಬಿಟ್ಟರು.

ನೈಸರ್ಗಿಕ ಗೊಬ್ಬರ ಬಳಕೆ
ಹತ್ತಾರು ವರ್ಷ ಬದುಕಿ ಬಾಳಿದ ಊರಿನಲ್ಲಿ ಬರಿಗೈ. ಮಗಳು ತಮ್ಮ ಮನೆಗೆ ಬಂದು ಇರಲು ಕರೆದರೂ ಮೀನಾಕ್ಷಮ್ಮ ಒಪ್ಪಲಿಲ್ಲ. ಸಾಲ ಮಾಡಿ ಊರ ಹೊರಗೆ ಈಗಿರುವ ಅರ್ಧ ಎಕರೆ ಜಮೀನು ಖರೀದಿಸಿದರು. ಹೊಲದಲ್ಲೇ ವಾಸಕ್ಕೆ ತಗಡಿನ ಮನೆ ಕಟ್ಟಿಕೊಂಡರು. ಅಕ್ಷರಶಃ ಶೂನ್ಯದಿಂದ ಬದುಕು ಆರಂಭ. ಆದರೆ ಅಧೈರ್ಯ ತೋರಲಿಲ್ಲ. ಏಕಾಂಗಿಯಾಗಿ ವ್ಯವಸಾಯ ಶುರು ಮಾಡಿದರು. ಖರ್ಚು ಕಡಿಮೆ ಮಾಡಿಕೊಳ್ಳಲು ಸಾವಯವ ಕೃಷಿಯೇ ಸೂಕ್ತ ಎಂದರಿತು ಎರೆ ಗೊಬ್ಬರ ಘಟಕ, ಜೀವಾಮೃತಗಳ ಬಳಕೆಗೆ ಆದ್ಯತೆ ನೀಡಿದರು. ಕಾಲು ಎಕರೆಗೆ 200 ಅಡಕೆ ಸಸಿಗಳನ್ನು ನೆಟ್ಟರು. ಉಳಿದ ಜಮೀನಿನಲ್ಲಿ ಸ್ವಲ್ಪ ಭತ್ತ, ತರಕಾರಿ ಹಾಗೂ ಅಡಕೆ ಸಸಿ ನರ್ಸರಿ ಅಳವಡಿಸಿದರು.

ಆಯಾ ಋತುಮಾನಕ್ಕೆ ತಕ್ಕಂತೆ ಪ್ರತಿವರ್ಷ ಹೂವು ಹಾಗೂ ತರಕಾರಿಗಳ ಬೆಳೆಗಳನ್ನು ಬದಲಾಯಿಸುತ್ತಾರೆ. ಅದರಂತೆ ಕಳೆದ ವರ್ಷ 250 ನುಗ್ಗೆ ಹಾಕಿದ್ದಾರೆ. ವೇಸ್ಟ್‌ ಡಿಕಂಪೋಸರ್‌ ತಯಾರಿಸಿ ಬಳಸುತ್ತಿದ್ದಾರೆ. 6 ಜೇನುಪೆಟ್ಟಿಗೆ ಕೂರಿಸಿದ್ದಾರೆ. ಗೊಬ್ಬರ ಹಾಗೂ ಹಾಲಿಗಾಗಿ ಮಲೆನಾಡು ಗಿಡ್ಡ ಹಸು ಕೊಂಡಿದ್ದಾರೆ.

Advertisement

ಕೃಷಿಯಿಂದ ಬರುವ ಆದಾಯ ಹೊಟ್ಟೆ- ಬಟ್ಟೆಗೆ ಸರಿ ಹೋಗುತ್ತಿತ್ತು. ಆದರೆ ಹೊಲ ಕೊಂಡ ಸಾಲವನ್ನು ತೀರಿಸಲೇಬೇಕಿತ್ತು. ಅದಕ್ಕಾಗಿ, ಇತರೆ ಆದಾಯದ ಮಾರ್ಗಗಳನ್ನು ಹುಡುಕುವ ಅನಿವಾರ್ಯತೆ. ಆಗಲೇ ಶ್ಯಾವಿಗೆ ತಯಾರಿಸುವ ಉಪಕಸುಬಿಗೆ ಕೈಹಾಕಿದರು. ಜೊತೆಗೆ, ಹಿಟ್ಟು ಮಾಡುವ ಗಿರಣಿಯೂ ಸೇರಿತು. ಇದರಿಂದ ತುಸು ಆರ್ಥಿಕ ನೆಮ್ಮದಿ ದೊರೆಯಿತು.

ಹಸಿರು ಸಿರಿಯಲ್ಲೇ ನೆಮ್ಮದಿ
ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಗೊಂದಿ ಆಧುನೀಕರಣ ಯೋಜನೆಗಳು ಇವರಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿವೆ. ಸಂಪನ್ಮೂಲ ವ್ಯಕ್ತಿಯಾಗಿ ಹಲವು ಜಿಲ್ಲೆಗಳಿಗೆ ಹೋಗಿ ತಮ್ಮ ಬದುಕು ಹಾಗೂ ಕೃಷಿ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಬೆಂಗಳೂರು ಕೃಷಿವಿಶ್ವದ್ಯಾಲಯ “ಜಿಲ್ಲಾ ಮಟ್ಟದ ಪ್ರಗತಿಶೀಲ ರೈತ ಮಹಿಳೆ’ ಎಂಬ ಗೌರವ ಪ್ರಶಸ್ತಿ ನೀಡಿದೆ.

ಮನೆಗೆ ಯಾರೇ ಬಂದರೂ ಖುಷಿ ಖುಷಿಯಾಗಿ ತಮ್ಮ ಪುಟ್ಟ ಜಮೀನು ಅಡ್ಡಾಡಿಸುತ್ತಾರೆ, ಹಸು ತೋರಿಸುತ್ತಾರೆ. ಅಂಗೈಗೆ ಎರಡು ಹನಿ ತಾಜಾ ಜೇನು ತುಪ್ಪ ಹಾಕಿ ನೆಕ್ಕಿಸುತ್ತಾರೆ. ತಾವು ಮುಂದೆ ಮಾಡಬೇಕೆಂದಿರುವ ಹೊಸ ಯೋಜನೆಗಳ ಬಗ್ಗೆ ವಿವರಿಸುತ್ತಾರೆ. ಆದರೆ ತಮ್ಮ ಇಂದಿನ ಕಷ್ಟಗಳನ್ನು ಹೇಳಿಕೊಂಡು ಮರುಗುವುದಿಲ್ಲ. “ನಮ್‌ ಕಷ್ಟ ನಮ್‌ ಹೊಟ್ಟೆ ಒಳಗಿರಬೇಕು’ ಎಂಬ ಧ್ಯೇಯ ಇವರದು.

ಸೋಲಾರ್‌ ರೊಟ್ಟಿ ತಯಾರಿಕಾ ಘಟಕ
ಈ ಎಲ್ಲಾ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡು ಅಷ್ಟಕ್ಕೇ ಸುಮ್ಮನಾಗಿಬಿಡಬಹುದಿತ್ತು. ಆದರೆ ಹಾಗೆ ಸುಮ್ಮನಿರುವ ಜೀವವಲ್ಲ ಮೀನಾಕ್ಷಮ್ಮನದು. ಇದರ ಜೊತೆಗೆ ತಮ್ಮೂರಿನ ಸುತ್ತಮುತ್ತಲ ಹಳ್ಳಿಗಳಲ್ಲಿ ಜೋಳದ ರೊಟ್ಟಿಗೆ ವಿಪರೀತ ಬೇಡಿಕೆ ಇರುವುದನ್ನು ಮನಗಂಡು ರೊಟ್ಟಿ ತಯಾರಿಕೆಯನ್ನೂ ಶುರು ಮಾಡಿದ್ದಾರೆ. ನಾಲ್ಕು ಜನ ಮಹಿಳೆಯರ ಸಹಾಯದಿಂದ ಪ್ರತಿ ತಿಂಗಳು ಅಂದಾಜು ಐದು ಸಾವಿರ ರೊಟ್ಟಿ ತಯಾರಿಸುತ್ತಿದ್ದಾರೆ. ಬೇಡಿಕೆಯನ್ನು ಪೂರೈಸುವ ಸಲುವಾಗಿ ಸೋಲಾರ್‌ ರೊಟ್ಟಿ ತಯಾರಿಕಾ ಯಂತ್ರವನ್ನು ಖರೀದಿಸಲು ಪ್ರಯತ್ನ ನಡೆದಿದೆ.

– ಮಲ್ಲಿಕಾರ್ಜುನ ಹೊಸಪಾಳ್ಯ

Advertisement

Udayavani is now on Telegram. Click here to join our channel and stay updated with the latest news.

Next