ಮೈಸೂರು: ಮೈಸೂರಿನಲ್ಲಿ ನ.24ರಿಂದ ಮೂರು ದಿನಗಳ ಕಾಲ ನಡೆಯಲಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರಚಾರ ಸಮಿತಿ ವತಿಯಿಂದ ಸೋಮವಾರ ಅರಮನೆ ಮುಂಭಾಗ ಎರಡು ಸಾವಿರ ವಿದ್ಯಾರ್ಥಿಗಳಿಂದ ಅಕ್ಷರ ಸಂರಚನೆ ಮಾಡಲಾಯಿತು.
ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ಉದ್ದೇಶದಿಂದ ಮೈಸೂರು ಅರಮನೆ ಆವರಣದಲ್ಲಿ ಕನ್ನಡ ಬಾವುಟ ಹೋಲುವಂತೆ ಕೆಂಪು ಮತ್ತು ಹಳದಿ ಕಾರ್ಡ್ ಬೋರ್ಡ್ ಹಿಡಿದ ವಿದ್ಯಾರ್ಥಿಗಳು 83ನೇ ಕನ್ನಡ ಸಾಹಿತ್ಯ ಸಮ್ಮೇಳನ ಎಂಬ ವಾಕ್ಯ ರಚನೆ ಮಾಡಿದರು.
ಜತೆಗೆ ಕುವೆಂಪುರವರ ಶ್ರೀರಾಮಾಯಣ ದರ್ಶನಂ ಕೃತಿಗೆ ಜಾnನಪೀಠ ಪ್ರಶಸ್ತಿ ಬಂದು 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಶ್ರೀರಾಮಾಯಣ ದರ್ಶನಂ-50 ಎಂಬ ವಾಕ್ಯ ಸಂರಚನೆಯನ್ನು ವಿದ್ಯಾರ್ಥಿಗಳು ಮಾಡಿದರು. ಈ ಎರಡೂ ವಾಕ್ಯ ಸಂರಚನೆಯನ್ನು ಡ್ರೋಣ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಯಿತು. ಈ ಎರಡೂ ಛಾಯಾಚಿತ್ರಗಳನ್ನು ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಬಳಸಿಕೊಳ್ಳಲಾಗುವುದು.
ಜಿಲ್ಲಾಡಳಿತ, ಮೈಸೂರು ಅರಮನೆ ಮಂಡಳಿ ಹಾಗೂ ಸಾಹಿತ್ಯ ಸಮ್ಮೇಳನದ ಪ್ರಚಾರ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಅಕ್ಷರ ಸಂರಚನೆ ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾಧಿಕಾರಿ ರಂದೀಪ್ ಡಿ. ಕನ್ನಡ ಬಾವುಟ ಹಿಡಿದು ಚಾಲನೆ ನೀಡಿದರು.
ಮೈಸೂರು ನಗರದ ವಿವಿಧ ಶಾಲೆಯ ಎರಡು ಸಾವಿರ ಮಕ್ಕಳು 83ನೇ ಕನ್ನಡ ಸಾಹಿತ್ಯ ಸಮ್ಮೇಳನ-ಮೈಸೂರು ಮತ್ತು ಶ್ರೀರಾಮಾಯಣ ದರ್ಶನಂ-50 ಅಕ್ಷರ ಸಂರಚನೆಯ ಮೇಲೆ ಕೆಂಪು ಹಾಗೂ ಹಳದಿ ಬಣ್ಣದ ಕಾರ್ಡ್‌ಬೋರ್ಡ್ ಶೀಟ್ ಹಿಡಿದು ಆಕಾಶಕ್ಕೆ ತೋರುತ್ತಾ ಕನ್ನಡ ನಾಡಿನ ಹಿರಿಮೆ ಮೆರೆದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್, ಕಸಾಪ ಜಿಲ್ಲಾ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ, ಡಿಡಿಪಿಐ ಮಂಜುಳಾ, ಶಿಕ್ಷಣ ಅಧಿಕಾರಿ ಶಿವರಾಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪಇನ್ನಿತರರು ಹಾಜರಿದ್ದರು.