ನಿರ್ದೇಶಕ ದಯಾಳ್ ಅವರ “ಆ ಕರಾಳ ರಾತ್ರಿ’ ಚಿತ್ರಕ್ಕೆ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಇತ್ತೀಚಿನ ದಿನಗಳಲ್ಲಿ ಬಂದು ಹೊಸ ಬಗೆಯ ಚಿತ್ರ ಎಂಬ ಹೆಗ್ಗಳಿಕೆಗೂ ಆ ಚಿತ್ರ ಪಾತ್ರವಾಗಿತ್ತು. ಈಗ ದಯಾಳ್ ಮತ್ತೂಂದು ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಅದು “ಪುಟ 109′. ದಯಾಳ್ “ಆ ಕರಾಳ ರಾತ್ರಿ’ ಹಾಗೂ “ಪುಟ 109′ ಚಿತ್ರವನ್ನು ಒಟ್ಟಿಗೆ ಆರಂಭಿಸಿದ್ದರು.
ಈಗ “ಪುಟ 109′ ಚಿತ್ರೀಕರಣ ಮುಗಿದಿದ್ದು, ಸೆಪ್ಟೆಂಬರ್ 5 ರಂದು ತೆರೆ ಕಾಣುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಚಿತ್ರ ಬಿಡುಗಡೆಯಾದ ನಂತರ ಚಿತ್ರತಂಡದವರು ಖುಷಿಯಾಗಿರುತ್ತಾರೆ. ಆದರೆ, ದಯಾಳ್ ಚಿತ್ರ ಬಿಡುಗಡೆ ಮುನ್ನವೇ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ನಟ ಸುದೀಪ್. ಈಗಾಗಲೇ ಚಿತ್ರ ವೀಕ್ಷಿಸಿರುವ ಸುದೀಪ್, ತೆಲುಗು ಹಾಗೂ ತಮಿಳಿನಲ್ಲಿ ಈ ಚಿತ್ರ ಮಾಡಲು ಆಸಕ್ತಿ ತೋರಿಸಿದ್ದಾರಂತೆ. ಇದು ದಯಾಳ್‌ಗೆ ಸಿನಿಮಾ ಮೇಲಿನ ವಿಶ್ವಾಸ ಹೆಚ್ಚಿಸಿದೆ.
ಅಂದಹಾಗೆ, ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾವಾಗಿದ್ದು ಒಂದು ಕೊಲೆಯ ಸುತ್ತ ಸಾಗುತ್ತದೆ. ಚಿತ್ರದಲ್ಲಿ ಜೆ.ಕೆ ಹಾಗೂ ನವೀನ್ ಕೃಷ್ಣ ಅವರ ಪಾತ್ರ ಹೈಲೈಟ್ ಎಂಬ ಮಾಹಿತಿ ನೀಡುತ್ತಾರೆ ದಯಾಳ್. 90 ನಿಮಿಷದಲ್ಲಿ ದಯಾಳ್ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ಒಟ್ಟು 25 ಸನ್ನಿವೇಶಗಳಿದ್ದು, 28 ನಿಮಿಷದಲ್ಲಿ 24 ಸನ್ನಿವೇಶಗಳು ಬಂದು ಹೋದರೆ ಚಿತ್ರದ ಒಂದು ಸನ್ನಿವೇಶ ಬರೋಬ್ಬರಿ 62 ನಿಮಿಷ ನಡೆಯುತ್ತದೆಯಂತೆ.
ಈ ಚಿತ್ರ ಆರಂಭವಾದ ಬಗ್ಗೆ ಮಾತನಾಡುವ ದಯಾಳ್, “ಕರಾಳ ರಾತ್ರಿ’ ಚಿತ್ರಕ್ಕೆ ಲೊಕೇಶನ್ ನೋಡಲು ಮೂಡಿಗೆರೆಗೆ ಹೋಗಿದ್ದೆವು. ಅಲ್ಲಿನ ಬಂಗಲೆ ನೋಡಿ, ಇದು ಅರವಿಂದ್ ಅವರು ಬರೆದ ಕಥೆಗೆ ಸೂಕ್ತವಾಗುತ್ತದೆ ಎಂದು ಮಾತನಾಡಿಕೊಂಡೆವು. ಮುಂದೆ ನಾನು, ನವೀನ್ ಕೃಷ್ಣ ಬೆಂಗಳೂರಿಗೆ ಬರುವಷ್ಟರಲ್ಲಿ ಚಿತ್ರಕತೆ ಸಿದ್ಧಪಡಿಸಿದೆವು. ಇಡೀ ಸಿನಿಮಾವನ್ನು 10 ದಿವಸ ಚಿತ್ರೀಕರಿಸಲಾಗಿದೆ.
ಕಥೆ ಕೊಲೆಯೊಂದರ ಸುತ್ತ ಸಾಗಲಿದ್ದು, ಪುಸ್ತಕದ ಪುಟ 109 ಕಾಣೆಯಾಗಿರುವ ಮೂಲಕ ಕಥೆಗೆ ಹೊಸ ತಿರುವು ಸಿಗಲಿದೆ’ ಎಂದು ಸಿನಿಮಾ ಬಗ್ಗೆ ವಿವರ ನೀಡಿದರು. ಚಿತ್ರದಲ್ಲಿ ವೈಷ್ಣವಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ಕೃಷ್ಣ ಸಂಭಾಷಣೆ ಇದ್ದು, ಶ್ರೀ ಸಂಕಲನ, ಗಣೇಶ್ ನಾರಾಯಣ್ ಸಂಗೀತವಿದೆ. ಅವಿನಾಶ್ ಈ ಚಿತ್ರದ ಸಹ ನಿರ್ಮಾಪಕರು.