Advertisement

ದಣಿದವರ ಬಾಯಾರಿಕೆ ತಣಿಸುವ ಕೋಟೇಶ್ವರದ ಪದ್ಮಮ್ಮ

12:15 AM Jan 07, 2020 | Sriram |

ಕುಂದಾಪುರ: ನಾಗಮಂಡಲ, ವಾರ್ಷಿಕ ಜಾತ್ರೋತ್ಸವ, ಹಿಂದೂ ಸಮಾಜೋತ್ಸವ, ಉಡುಪಿಯಲ್ಲಿ ನಡೆದ ಧರ್ಮಸಂಸದ್‌, ಪರ್ಯಾಯ ಮಹೋತ್ಸವದಂತಹ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ, ಅಲ್ಲಿಗೆ ಬರುವ ಬರುವ ಜನರ ಬಾಯಾರಿಕೆಯನ್ನು ತಣಿಸುವ ಪುಣ್ಯದ ಕಾಯಕದಲ್ಲಿ ತೊಡಗಿಸಿಕೊಂಡವರು ಕೋಟೇಶ್ವರದ ಹೊದ್ರಾಳಿಯ ಎಚ್‌. ಪದ್ಮಮ್ಮ. ಇವರ ಈ ಅಪರೂಪದ ಸೇವೆಗೆ ಭಾಗದಲ್ಲಿ ಜನರಿಂದ “ನೀರಮ್ಮ’ ಎಂದೇ ಕರೆಯಿಸಿ ಕೊಂಡಿದ್ದಾರೆ.

Advertisement

ಕುಂದಾಪುರ, ಕೋಟೇಶ್ವರ, ಆನೆಗುಡ್ಡೆ, ಕುಂಭಾಸಿ, ತೆಕ್ಕಟ್ಟೆ, ಕಾಳಾವರ ಹೀಗೆ ಎಲ್ಲಿಯೇ ಕಾರ್ಯಕ್ರಮಗಳು ನಡೆಯಲಿ. ಅಲ್ಲಿ ಒಂದು ಬಕೆಟ್‌ ಹಾಗೂ ಒಂದಿಷ್ಟು ಗ್ಲಾಸ್‌ಗಳೊಂದಿಗೆ ನೀರು ಕೊಡಲು ಪದ್ಮಮ್ಮ ಅವರು ಹಾಜರಿರುತ್ತಾರೆ.

ಇದನ್ನು ಅವರು ಒಂದು ರೀತಿಯ ದೇವರ ಸೇವೆ ಎನ್ನುವಂತೆ ನಿಷ್ಠೆಯಿಂದ ಮಾಡುತ್ತಾ ಬರುತ್ತಿರುವುದು ವಿಶೇಷ. 51 ವರ್ಷದ ಪದ್ಮಮ್ಮ ಅವರು 1995 ರಿಂದ ಅಂದರೆ ಕಳೆದ 20 ವರ್ಷಗಳಿಗೂ ಹೆಚ್ಚು ಸಮಯದಿಂದ ಇವರು ಇಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ ಬರುವ ಜನರ, ದಣಿದವರ ದಾಹವನ್ನು ತಣಿ ಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅಪ್ಪ- ಅಮ್ಮ ಎಂದು ಕರೆದೇ ಗೊತ್ತಿರದ ಪದ್ಮಮ್ಮ ಅವರು ತಾಯಿಯ ಅಮ್ಮ ಅಂದರೆ ಅಜ್ಜಿಯ ಆಸರೆ ಯಲ್ಲಿ ಬೆಳೆ ದವರು.

ಯಾವುದೇ ಜಾತಿ, ಸಮುದಾಯದ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು, ಕೋಟೇಶ್ವರದ ಕೊಡಿ ಹಬ್ಬ, ಹಿಂದೂಸಮಾಜೋತ್ಸವ ಸೇರಿದಂತೆ ಸಾವಿರಾರು ಜನ ಸೇರುವಂತಹ ಎಲ್ಲ ಕಾರ್ಯಕ್ರಮಗಳಿಗೆ ಹೋಗಿ ನೀರು ಕೊಡುತ್ತಾರೆ. ನೀರು ಎಲ್ಲರಿಗೂ, ಎಲ್ಲ ಸಮಯದಲ್ಲಿಯೂ ಅವಶ್ಯಕ. ಕಾರ್ಯಕ್ರಮ ನಡೆಯುವ ವೇಳೆ, ದೂರದಿಂದ ಬಂದವರಿಗೆ ನೀರು ಎಲ್ಲಿದೆ ಎಂದು ಗೊತ್ತಿರುವುದಿಲ್ಲ.

ಅಂತವರಿಗೆ ಸಮಸ್ಯೆಯಾಗದಿರಲಿ ಎಂದು ನಾನು ಈ ಸೇವೆ ಮಾಡುತ್ತಿದ್ದೇನೆ ಎನ್ನುತ್ತಾರೆ ಪದ್ಮಮ್ಮ ಅವರು.

Advertisement

ಲೆಕ್ಕವಿಲ್ಲದಷ್ಟು ಕಾರ್ಯಕ್ರಮ
ಈವರೆಗೆ ನೀವು ನೀರು ಕೊಟ್ಟಿರುವ ಕಾರ್ಯಕ್ರಮಗಳ ಸಂಖ್ಯೆ ಎಷ್ಟು ಎಂದು ಕೇಳಿದರೆ, ಲೆಕ್ಕವೇ ಇಲ್ಲದಷ್ಟು ಅಂತಾ ಹೇಳುತ್ತಾರೆ ಪದ್ಮಮ್ಮ. ದಿನಕ್ಕೆ ಒಂದು ಕೆಲವೊಮ್ಮೆ 2-3 ಕಾರ್ಯಕ್ರಮಗಳಾದರೂ ಆಯಿತು. ಸಾವಿರಾರು ಕಾರ್ಯಕ್ರಮಗಳಲ್ಲಿ ಅಲ್ಲಿಗೆ ಬಂದು, ಸಭಿಕರ ಸಾಲ್ಲಿ ಕುಳಿತಿದ್ದವರಿಗೆ ನೀರು ನೀಡಿ, ಬಾಯಾರಿಕೆಯನ್ನು ತಣಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ 2016ರಲ್ಲಿ ನಡೆದ ಪೇಜಾವರ ಶ್ರೀಗಳ ಪಂಚಮ ಪರ್ಯಯದ ದರ್ಬಾರ್‌, 2017ರಲ್ಲಿ ನಡೆದ ಧರ್ಮಸಂಸದ್‌, ಇತ್ತೀಚೆಗಷ್ಟೇ ನಡೆದ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನದಲ್ಲಿ ಬಂದಂತವರಿಗೆ ನೀರು ಕೊಟ್ಟದ್ದು ವಿಶೇಷವಾಗಿ ಖುಷಿ ಕೊಟ್ಟಿದೆ ಎನ್ನುತ್ತಾರವರು.

ದೇವರ ಸೇವೆ
ಇದು ನಾನು ಕೊಡುತ್ತಿರುವುದಲ್ಲ. ದೇವರೇ ನನ್ನಿಂದ ಈ ಮೂಲಕ ಜನರ ಸೇವೆ ಮಾಡಿಸುತ್ತಿದ್ದಾನೆ. ಎಲ್ಲಿಯವರೆಗೂ ನಾನು ಆರೋಗ್ಯವಾಗಿದ್ದೇನೋ, ಅಲ್ಲಿಯವರೆಗೂ ಈ ಸೇವೆಯನ್ನು ಮಾಡಿಕೊಂಡು ಬರುತ್ತೇನೆ.

ನಾನು ಮಾಡುತ್ತಿರುವ ಈ ಕಾರ್ಯದಲ್ಲಿ ಸಂತೃಪ್ತಿಯಿದೆ. ಜನರು ನೀರು ಕುಡಿದು, ಹೊರಡುವಾಗ ಬಂದು ಮನಸಾರೆ ಖುಷಿಯಾಯಿತು ಎಂದು ಹಾರೈಸಿ ಹೋಗುತ್ತಾರೆ. ಇದಕ್ಕಿಂತ ಸಂತೋಷದ ಸಂಗತಿ ಯಾವುದಿಲ್ಲ.
– ಎಚ್‌. ಪದ್ಮಮ್ಮ,, ಕೋಟೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next