Advertisement

ಅಂಡಾಶಯದಲ್ಲಿ ಬೆಳೆದರೂ ಉಳಿದ ಶಿಶು

07:15 AM Mar 10, 2019 | |

ದಾವಣಗೆರೆ: ಮಹಿಳೆಯ ಗರ್ಭಚೀಲದ ಬದಲು ಅಂಡಾಶಯದಲ್ಲಿ ಬೆಳೆದ 32 ವಾರಗಳ ಹೆಣ್ಣು ಶಿಶುವಿನ ಜೀವ ಉಳಿಸುವಲ್ಲಿ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ಗರ್ಭಚೀಲದ ಬದಲಿ ಅಂಡಾಶಯದಲ್ಲಿ 32 ವಾರಗಳ ಕಾಲ ಇದ್ದ ಶಿಶು ಬದುಕುಳಿದಿರುವುದು ವಿಶ್ವದಲ್ಲೇ ಅತಿ ವಿರಳ ಎಂದು ವೈದ್ಯರು ಹೇಳಿದ್ದಾರೆ.

Advertisement

ಪ್ರಕರಣ ವಿವರ: ಜಗಳೂರು ತಾಲೂಕಿನ ತಿಮ್ಮಾಲಾಪುರದ ಕರಿಬಸಮ್ಮ (24) ಗರ್ಭವತಿಯಾದ ನಂತರ ಜಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಕೊಳ್ಳುತ್ತಿದ್ದರು. 7ನೇ ತಿಂಗಳಲ್ಲಿ ಪರೀಕ್ಷೆ ಮಾಡಿದಾಗ ಮಗುವಿನ ಮೇಲೆ ಮಾಂಸ ಬೆಳೆದಿದೆ ಎಂಬ ಕಾರಣದಿಂದ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಯಲ್ಲಿ ತೋರಿಸಲು ಸಲಹೆ ನೀಡಿದ್ದರು. 

ಕೂಲಿಯಿಂದ ಕುಟುಂಬ ನಿಭಾಯಿಸುತ್ತಿದ್ದ ಆಕೆಯ ಪತಿ ರಾಜಕುಮಾರ್‌ ಕೆಲವು ದಿನಗಳ ಬಳಿಕ ಪತ್ನಿಯನ್ನು ರಾಣೆಬೆನ್ನೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದರು. ಅದಕ್ಕೆ ಹಣ ಹೊಂದಿಸಲಾಗದೇ ಆತ ಕಳೆದ 27ರಂದು ತನ್ನ ಪತ್ನಿಯನ್ನು ದಾವಣಗೆರೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕೆರೆ ತಂದರು. 

ಆಸ್ಪತ್ರೆಯ ಡಾ| ಅನಿತಾ ರವಿ, ಕರಿಬಸಮ್ಮನನ್ನು ತಪಾಸಣೆ ಮಾಡಿದಾಗ ಆಕೆಯ ಅಂಡಾಶಯದಲ್ಲಿ ಶಿಶು ಬೆಳೆದಿರುವುದು ಪತ್ತೆಯಾಯಿತು. ವಿಳಂಬ ಮಾಡಿದರೆ ತಾಯಿ-ಮಗು ಇಬ್ಬರ ಜೀವಕ್ಕೂ ಅಪಾಯ ಇರುವುದನ್ನು ಮನಗಂಡ ಡಾ| ಅನಿತಾ ರವಿ, ಅದೇ ದಿನ ಡಾ| ಲತಾ, ಡಾ|ಚಾಂದಿನಿ, ಡಾ|ಹರ್ಷಿತಾ ಅವರ ಸಹಕಾರದಿಂದ ಶಸ್ತ್ರಚಿಕಿತ್ಸೆ ನಡೆಸಿ, ಉಭಯರ ಪ್ರಾಣ ಉಳಿಸಿದ್ದಾರೆ. 

ಅವಧಿಪೂರ್ವದಲ್ಲಿ ಜನಿಸಿದ ಮಗು 1.85 ಕೆಜಿ ತೂಕವಿದ್ದುದ್ದರಿಂದ ಅದನ್ನು ನವಜಾತ ಶಿಶುಗಳ ತುರ್ತು ನಿಗಾ ಘಟಕದಲ್ಲಿಟ್ಟು ಆರೈಕೆ ಮಾಡಲಾಗುತ್ತಿದ್ದು, ಸದ್ಯ ತಾಯಿ-ಮಗು ಇಬ್ಬರೂ ಆರೋಗ್ಯದಿಂದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಗರ್ಭಧರಿಸುವ ಪ್ರಕರಣಗಳಲ್ಲಿ ಶೇ.1ರಷ್ಟು ಮಾತ್ರ ಗರ್ಭನಾಳ ಇಲ್ಲವೇ ಅಂಡಾಶಯದಲ್ಲಿ ಭ್ರೂಣ ಬೆಳೆಯುತ್ತದೆ. ಅಂಡಾಶಯದಲ್ಲಿ ಜಾಗ ಕಡಿಮೆ ಇರುವುದರಿಂದ ಬೆಳೆಯುವ ಭ್ರೂಣ ತಾನಾಗಿಯೇ ಒಡೆದು ಹೋಗಲಿದೆ. ಸ್ಕ್ಯಾನಿಂಗ್‌ ಮಾಡಿದಾಗ ಶಿಶು ಅಂಡಾಶಯದಲ್ಲಿ ಬೆಳೆಯುತ್ತಿರುವುದು ಗೊತ್ತಾಗುತ್ತದೆ. 32 ವಾರಗಳ ಕಾಲ ಅಂಡಾಶಯದಲ್ಲಿ ಬೆಳೆದಿರುವ ಶಿಶು ಉಳಿದಿರುವ ಪ್ರಕರಣ ನಿಜಕ್ಕೂ ವಿಸ್ಮಯ ಎಂದು ಡಾ| ಅನಿತಾ ರವಿ ಹೇಳುತ್ತಾರೆ. ರಾಜ್‌ಕುಮಾರ್‌ ಮದುವೆಯಾಗಿರುವುದು ತನ್ನ ಸೋದರ ಮಾವನ ಮಗಳನ್ನೇ. ಆ ದಂಪತಿಗೆ ಈಗಾಗಲೇ ಮೂರು ವರ್ಷದ ಮಗಳಿದ್ದಾಳೆ.  

Advertisement

Udayavani is now on Telegram. Click here to join our channel and stay updated with the latest news.

Next