Advertisement
ಇದರಿಂದ ಮೂಲ ಕಾಂಗ್ರೆಸ್ಸಿಗರು ಪಕ್ಷ ಬಿಡುವ ನಿರ್ಧಾರಕ್ಕೆ ಬರುವಂತಾಗಿದೆ. ಸದ್ಯಕ್ಕೆ ಕೋಲಾರ ಜಿಲ್ಲೆಯ ಮೂಲ ಕಾಂಗ್ರೆಸ್ಸಿಗರ ಮಾತಿಗೆ ಕಿವಿಗೊಡಲು ಕಾಂಗ್ರೆಸ್ ಹಿರಿಯ ಮುಖಂಡರಾರು ಸಿದ್ಧರಿಲ್ಲವಾದ್ದರಿಂದ, ಕೆ.ಎಚ್. ಮುನಿಯಪ್ಪ ಮತ್ತವರ ಬೆಂಬಲಿಗರು ಅತಂತ್ರ ಸ್ಥಿತಿ ಅನುಭವಿಸುವಂತಾಗಿದೆ.
Related Articles
Advertisement
ರಮೇಶ್ ಕುಮಾರ್ ಸೇರಿದಂತೆ ಹಲವು ವಲಸಿಗ ಮುಖಂಡರು ಮೂಲ ವಲಸಿಗ ಸಂಘರ್ಷದಲ್ಲಿ ಸೋಲು ಗೆಲುವುಗಳನ್ನು ಕಾಣುವಂತಾಗಿತ್ತು. ಕೃಷ್ಣಬೈರೇಗೌಡರು ಬೆಂಗಳೂರು ಸೇರಿ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು.
ಕೆಎಚ್‌ಎಂ ಸೋಲಿಸಲು ಪಣ: ಕೋಲಾರ ಜಿಲ್ಲೆಯಲ್ಲಿ ಕೆ.ಎಚ್.ಮುನಿಯಪ್ಪರ ಕೈಯಲ್ಲಿ ಅಧಿಕಾರ ಇರುವವರೆಗೂ ಪಕ್ಷದಲ್ಲಿ ತಮ್ಮದೇನು ಆಟ ಸಾಗದು ಎಂಬು ದನ್ನು ವಲಸಿಗ ಮುಖಂಡರು ಅರ್ಥಮಾಡಿಕೊಂಡಿದ್ದರು. ಇದೇ ಕಾರಣಕ್ಕಾಗಿಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಕೆ.ಎಚ್. ಮುನಿಯಪ್ಪ ವಿರುದ್ಧವಾಗಿ ಬಿಜೆಪಿಯ ಎಸ್.ಮುನಿ ಸ್ವಾಮಿಯನ್ನು ಬೆಂಬಲಿಸಿ ಗೆಲ್ಲಿಸಿದ್ದರು. ಕೆ.ಎಚ್.ಮುನಿಯಪ್ಪ ಅಧಿಕಾರ ಕಳೆದುಕೊಂಡ ನಂತರ ಒಂದೊಂದೇ ತಂತ್ರಗಳನ್ನು ಬಳಸುತ್ತಿರುವ ವಲಸಿಗರು ಮೂಲ ಕಾಂಗ್ರೆಸ್ಸಿಗರಾದ ಕೆ.ಎಚ್.ಮುನಿಯಪ್ಪ, ಅವರ ಬೆಂಬಲಿಗರ ಯಾವುದೇ ಮಾತು ಪಕ್ಷದಲ್ಲಿ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ.
ಕೆಎಚ್‌ಎಂರಿಂದ ದೂರು ಮಾಡಿದ್ರು: ಕೆ.ಎಚ್.ಮುನಿ ಯಪ್ಪರೊಂದಿಗೆ ರಾಜಕೀಯವಾಗಿ ಸಖ್ಯಹೊಂದಿದ್ದ ಮುಳಬಾಗಿಲಿನ ಕೊತ್ತೂರು ಮಂಜುನಾಥ್, ಕೋಲಾರದ ವರ್ತೂರು ಪ್ರಕಾಶ್ ಇತರರನ್ನು ವಲಸಿಗ ಮುಖಂಡರು ಕಾಂಗ್ರೆಸ್ ಪಕ್ಷದಿಂದ ಮತ್ತು ಕೆ.ಎಚ್.ಮುನಿ ಯಪ್ಪರಿಂದ ದೂರ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಹಂತದಲ್ಲಿಯೇ ಕೆ.ಎಚ್.ಮುನಿಯಪ್ಪ ಎಚ್ಚೆತ್ತುಕೊಳ್ಳ ಬೇಕಿತ್ತು. ಆದರೆ, ಮೂರು ದಶಕಗಳ ಅಧಿಕಾರದಲ್ಲಿದ್ದ ಮುನಿಯಪ್ಪ ಈ ಬೆಳವಣಿಗೆಗಳನ್ನು ನಿರ್ಲಕ್ಷಿಸಿದ್ದರು. ಇದರ ಪರಿಣಾಮ ಕೆ.ಎಚ್.ಮುನಿಯಪ್ಪರೊಂದಿಗೆ ಸಖ್ಯ ಹೊಂದಿದ್ದ ಬಂಗಾರಪೇಟೆಯ ಎಸ್.ಎನ್.ನಾರಾ ಯಣಸ್ವಾಮಿ, ಮಾಲೂರಿನ ಶಾಸಕ ಕೆ.ವೈ.ನಂಜೇಗೌಡರು ಇದೀಗ ಅವರಿಂದ ದೂರವಾಗುವಂತಾಗಿದೆ.
ಕೆ.ಎಚ್.ಎಂ ವಿರೋಧಿ ಶಾಸಕರ ಕೂಟ: ಕೆ.ಎಚ್. ಮುನಿಯಪ್ಪ ಕಾಂಗ್ರೆಸ್ ಪಕ್ಷದ ಆಂತರಿಕ ವಿವಿಧ ಘಟಕಗಳಲ್ಲಿ ತಮ್ಮ ನೆಚ್ಚಿನ ಶಿಷ್ಯರನ್ನೇ ಅಧ್ಯಕ್ಷರನ್ನಾಗಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ಸೇರಿದಂತೆ ವಿವಿಧ ಬ್ಲಾಕ್, ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಘಟಕಗಳ ಕಾಂಗ್ರೆಸ್ ಅಧ್ಯಕ್ಷರು ಈಗಲೂ ಕೆ.ಎಚ್.ಮುನಿ ಯಪ್ಪರ ಬೆಂಬಲಿಗರೇ ಆಗಿದ್ದಾರೆ. ಆದರೆ, ಕೆ.ಎಚ್. ಮುನಿಯಪ್ಪರನ್ನು ವಿರೋಧಿಸಿಕೊಂಡೇ ಬರುತ್ತಿದ್ದ ವಲಸಿಗ ಮುಖಂಡರಾದ ರಮೇಶ್‌ಕುಮಾರ್, ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ಕೆ.ಶ್ರೀನಿವಾಸಗೌಡ ಶಾಸಕರಾಗಿದ್ದಾರೆ.
ಸಮಾನ ಮನಸ್ಕರ ಗುಂಪು ರಚನೆ: ಶಾಸಕರ ಈ ಗುಂಪು ಕಳೆದ ಲೋಕಸಭಾ ಚುನಾವಣೆಯಲ್ಲಿ ಸಮಾನ ಮನಸ್ಕರ ಗುಂಪೊಂದನ್ನು ರಚಿಸಿಕೊಂಡಿತ್ತು. ಇದೇ ಗುಂಪಿನ ತಂತ್ರಗಾರಿಕೆಯಿಂದ ಕೆ.ಎಚ್.ಮುನಿಯಪ್ಪರಿಗೆ ಸೋಲಿನ ರುಚಿಯನ್ನು ತೋರಿಸಲಾಗಿತ್ತು. ಸೋಲಿನ ನಂತರ ಕಾಂಗ್ರೆಸ್ ಪಕ್ಷದ ಯಾವುದೇ ತೀರ್ಮಾನದಲ್ಲೂ ಕೆ.ಎಚ್.ಮುನಿಯಪ್ಪರ ಕೈ ಮೇಲಾಗದಂತೆ ವಲಸಿಗರು ತಮ್ಮ ಒಗ್ಗಟ್ಟಿನ ಮೂಲಕ ನೋಡಿಕೊಂಡಿದ್ದರು. ಕಾಂಗ್ರೆಸ್‌ನಲ್ಲಿ ವಲಸಿಗ ಮುಖಂಡರ ಕೈ ಬಲಪಡುತ್ತಿರುವುದರಿಂದಲೇ ಜೆಡಿಎಸ್‌ಗೆ ಹೋಗಿದ್ದ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಮತ್ತೆ ಕಾಂಗ್ರೆಸ್ ಹೊಸ್ತಿಲಲ್ಲಿ ಬಂದು ನಿಲ್ಲುವಂತಾಯಿತು.
ಕೆಎಚ್‌ಎಂ ಕೈಹಿಡಿಯದ ಡಿಕೆಶಿ: ವಲಸಿಗ ಕಾಂಗ್ರೆಸ್ಸಿಗರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೂಲಕ ಮೂಲ ಕಾಂಗ್ರೆಸ್ಸಿಗರನ್ನು ಎಲ್ಲಾ ಹಂತದಲ್ಲಿಯೂ ಮೂಲೆಗುಂಪಾಗಿಸುತ್ತಿದ್ದರೆ, ಇವರನ್ನು ಕಾಪಾಡಬೇಕಾದ ಮೂಲ ಕಾಂಗ್ರೆಸ್ಸಿಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಕೆ.ಎಚ್.ಮುನಿಯಪ್ಪ ಬಣದ ಬೆಂಬಲಕ್ಕೆ ನಿಲ್ಲದಂತೆ ಮಾಡಿದ್ದರು. ಇದರಿಂದ ಸ್ವಪಕ್ಷದಲ್ಲಿಯೇ ಅತಂತ್ರರಾಗಿರುವ ಕೆ.ಎಚ್. ಮುನಿಯಪ್ಪರ ಶಿಷ್ಯ ಬಳಗದ ಅಗ್ರಗಣ್ಯ ನಾಯಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಇತರರು ಈಗ ಬಿಜೆಪಿ ಸೇರುವ ಸಿದ್ಧತೆ ನಡೆಸುತ್ತಿದ್ದಾರೆ.
ಚಂದ್ರಾರೆಡ್ಡಿ ಮತ್ತಿತರರು ಬಿಜೆಪಿ ಸೇರುವ ಸುದ್ದಿ ವಲಸಿಗ ಕಾಂಗ್ರೆಸ್ ಮುಖಂಡರಿಗೆ ತಿಳಿದಿದ್ದರೂ ಜಾಣ ಮೌನಕ್ಕೆ ಶರಣಾಗಿದ್ದಾರೆ. ಆದರೆ, ಮೂಲ ಕಾಂಗ್ರೆಸ್ಸಿಗರೇ ಆಗಿದ್ದು ಇದೀಗ ವಲಸಿಗರೊಂದಿಗೆ ಗುರುತಿಸಿಕೊಂಡಿರುವ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಅನಿಲ್‌ಕುಮಾರ್ ಮಾತ್ರ ಚಂದ್ರಾರೆಡ್ಡಿ ಇತರರ ಮನವೊಲಿಸುವ ಪ್ರಯತ್ನ ನಡೆಸಿ ವಿಫಲರಾಗಿದ್ದಾರೆ.
ಕೆ.ಎಚ್.ಮುನಿಯಪ್ಪ ಈಗ ಏಕಾಂಗಿ
ಒಟ್ಟಾರೆ ವಲಸಿಗ ಕಾಂಗ್ರೆಸ್ ಶಾಸಕರು ಚಂದ್ರಾರೆಡ್ಡಿ ಮತ್ತಿತರರು ಬಿಜೆಪಿ ಸೇರುವ ಕುರಿತು ನಡೆಸುತ್ತಿರುವ ಪ್ರಯತ್ನಗಳನ್ನು ತಡೆಯುವ ಪ್ರಯತ್ನ ಮಾಡದೆ ಮೌನಕ್ಕೆ ಶರಣಾಗಿ ಗಮನಿಸುತ್ತಿದ್ದಾರೆ. ಹಿಂದೊಮ್ಮೆ 2019ರಲ್ಲಿ ಕೆ.ಎಚ್.ಮುನಿಯಪ್ಪ ಶಿಷ್ಯರು ನಡೆಸಿದ ಸುದ್ದಿಗೋಷ್ಠಿ ಆಧಾರದ ಮೇಲೆಯೇ ಎಲ್ಲರನ್ನು ಪಕ್ಷದಿಂದ ಉಚ್ಛಾಟಿಸುವ ಕೆಲಸವನ್ನು ಮಾಡಲಾಗಿತ್ತು. ಆನಂತರ ಎಚ್ಚೆತ್ತುಕೊಂಡಿದ್ದ ಕೆ.ಎಚ್. ಮುನಿಯಪ್ಪ ಉಚ್ಛಾಟನೆ ಆದೇಶವನ್ನು ರದ್ದುಪಡಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ ವಾರವಷ್ಟೇ ಇದೇ ಮುಖಂಡರು ಕಾಂಗ್ರೆಸ್ ಪಕ್ಷವು ಅನಿಲ್‌ಕುಮಾರ್‌ಗೆ ವಿಧಾನಪರಿಷತ್ ಟಿಕೆಟ್ ನೀಡಬಾರದೆಂದು ಪಕ್ಷದ ಮುಖಂಡರನ್ನು ಆಗ್ರಹಿಸಿದ್ದರು.
ಆದರೆ, ಇದಕ್ಕೆ ಸೊಪ್ಪು ಹಾಕದ ಕಾಂಗ್ರೆಸ್ ಪಕ್ಷವು ಅನಿಲ್‌ಕುಮಾರ್‌ಗೆ ಟಿಕೆಟ್ ಖಾತ್ರಿ ಪಡಿಸುವ ಮೂಲಕ ಕೆ.ಎಚ್.ಮುನಿಯಪ್ಪ ಮತ್ತವರ ಶಿಷ್ಯರ ಗುಂಪನ್ನು ಕಡೆಗಣಿಸಿತ್ತು. ಇದರಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಇತರರು ಅಸಮಾಧಾನಗೊಂಡಿದ್ದರು.
ಆದರೆ, ಈಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ಅಸಮಾಧಾನ ಹೊಂದಿ ಸ್ವತಃ ಪಕ್ಷ ಬಿಡುವ ಪ್ರಯತ್ನ ನಡೆಸುತ್ತಿರು ವಾಗಲೂ ಅವರನ್ನು ಕಾಪಾಡಿಕೊಳ್ಳುವ ಕೆಲಸವನ್ನು ವಲಸಿಗ ಶಾಸಕರೂ ಮಾಡು ತ್ತಿಲ್ಲ, ಪಕ್ಷದಲ್ಲಿ ತಮ್ಮ ಮಾತಿಗೆ ಮನ್ನಣೆ ಸಿಗುತ್ತಿಲ್ಲವೆಂಬ ಕಾರಣಕ್ಕೆ ಕೆ.ಎಚ್.ಮುನಿಯಪ್ಪರೂ ಅವರನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ. ಇತ್ತೀಚಿನ ಎಲ್ಲಾ ಬೆಳವಣಿಗೆಗಳು ಕೋಲಾರ ಜಿಲ್ಲಾ ಕಾಂಗ್ರೆಸ್‌ನ ಹೈಕಮಾಂಡ್‌ನಂತಿದ್ದ ಕೆ.ಎಚ್.ಮುನಿ ಯಪ್ಪರ ಭವಿಷ್ಯವನ್ನು ಪಕ್ಷದಲ್ಲಿಯೇ ಮಸುಕಾಗಿಸುತ್ತಿದೆ.
ರಾಜಕೀಯವಾಗಿ ಅಧಿಕಾರ ಹೆಸರು ನೀಡಿದ ಕಾಂಗ್ರೆಸ್ ಪಕ್ಷವನ್ನು ಬಿಡುವಂತೆಯೂ ಇಲ್ಲ, ಪಕ್ಷದಲ್ಲಿದ್ದು ವಲಸಿಗರ ಕಾಟವನ್ನು ತಾಳು ವಂತೆಯೂ ಇಲ್ಲ ಎಂಬಂತಾಗಿದೆ ಸದ್ಯದ ಕೆ.ಎಚ್.ಮುನಿಯಪ್ಪರ ಸ್ಥಿತಿ. ರಾಜಕೀಯವಾಗಿ ಸಾಕಷ್ಟು ಅನುಭವ ಹೊಂದಿರುವ ಕೆಎಚ್ ವಿರೋಧಿಗಳ ತಂತ್ರಗಾರಿಕೆಯನ್ನು ಹೇಗೆ ಎದುರಿಸಿ ಹೊರಬರುತ್ತಾರೆ, ತಮ್ಮ ಬೆಂಬಲಿಗರ ಗುಂಪನ್ನು ಹೇಗೆ ಪಕ್ಷದಲ್ಲಿಯೇ ಉಳಿಸಿಕೊಳ್ಳುತ್ತಾರೆ ಎಂಬುದೇ ಸದ್ಯದ ಕುತೂಹಲ.
– ಕೆ.ಎಸ್.ಗಣೇಶ್