Advertisement

ಆದೇಶ ಬಂದು ವಾರವಾದರೂ ಕುಂಟುತ್ತಿದೆ ಕೆಲಸ

11:30 AM Apr 29, 2017 | Team Udayavani |

ಬೆಂಗಳೂರು: ಬೆಳ್ಳಂದೂರು ಕೆರೆಯನ್ನು ಒಂದು ತಿಂಗಳೊಳಗೆ ಸ್ವತ್ಛಗೊಳಿಸಬೇಕು ಎಂಬ ರಾಷ್ಟ್ರೀಯ ಹಸಿರು ಪೀಠದ ಆದೇಶ ಹೊರಬಿದ್ದು ವಾರದ ಮೇಲಾಯಿತು. ಆದರೆ, ಕೆರೆ ಪುನಶ್ಚೇತನ ಕಾರ್ಯ ಮಾತ್ರ ಇಲ್ಲಿಯ ವರೆಗೆ ಕುಂಟುತ್ತಲೇ ಸಾಗಿದೆ. 

Advertisement

ಕೆರೆಯನ್ನು ಶುದ್ಧೀಕರಿಸಲು ಮುಂಬೈನಿಂದ ಬರುತ್ತಿರುವ ಬೃಹತ್‌ ಯಂತ್ರಗಳು ಕೆರೆಯನ್ನು ಪ್ರವೇಶಿಸಲು ಬೇಕಾದ ವ್ಯವಸ್ಥೆಗಳನ್ನಷ್ಟೇ ಈ ವರೆಗೆ ಮಾಡಿಕೊಳ್ಳಲಾಗಿದೆ. ಅದು ಬಿಟ್ಟರೆ ಕೆರೆಗೆ ತ್ಯಾಜ್ಯ ಸೇರಿಸುವವರನ್ನು ಪತ್ತೆ ಹಚ್ಚಲು ಎರಡು ಸಿಸಿ ಟಿವಿ ಕ್ಯಾಮೆರಾಗಳನ್ನು ಕೆರೆಯ ಬಳಿ ಅಳವಡಿಸಲಾಗಿದೆ. 

ಕೆರೆ ಶುದ್ಧೀಕರಿಸುವ ಯಂತ್ರಗಳು ಒಂದು ಬಾರಿ ಕೆರೆ ಪ್ರವೇಶಿಸಿದರೆ ಕಾಮಗಾರಿಗೆ ವೇಗ ಸಿಗುತ್ತದೆ ಎಂದು ಸ್ಥಳೀಯಾಡಳಿತ ಹೇಳುತ್ತಿದೆ. ಈ ನಡುವೆ ಶುಕ್ರವಾರ ಕೆರೆಯ ಪರಿಶೀಲನೆ ನಡೆಸಿದ ರಾಜ್ಯಸದಸ್ಯ ರಾಜೀವ್‌ ಚಂದ್ರಶೇಖರ್‌, ಸಂಸದ ಪಿ.ಸಿ ಮೋಹನ್‌ ಮತ್ತು ಶಾಸಕ ಅರವಿಂದ ಲಿಂಬಾವಳಿ, ಕಾಮಗಾರಿಯ ವೇಗ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. 

“ಕೆರೆಯನ್ನು ತಿಂಗಳೊಳಗೆ ಸ್ವತ್ಛಗೊಳಿಸುವಂತೆ ಎನ್‌ಜಿಟಿ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಿದೆ. ಆದರೆ, ಅಧಿಕಾರಿಗಳು ಕೇವಲ ಎರಡು ಹಿಟಾಚಿ ಮತ್ತು ಒಂದು ಜೆಸಿಬಿಯಿಂದ ಕಾಮಗಾರಿ ಮಾಡುತ್ತಿದ್ದಾರೆ. ಇದರೊಂದಿಗೆ ಕೆರೆ ಸ್ವತ್ಛತೆಗೆ ಯಾವುದೇ ಯೋಜನೆಗಳನ್ನು ರೂಪಿಸದೆ ಸ್ಥಳೀಯ ಸಂಸ್ಥೆಗಳು ಕೇವಲ ಲಾಭದ ಉದ್ದೇಶಕ್ಕಾಗಿ ಕಾರ್ಯ ನಿರ್ವಹಿಸುತ್ತಿವೆ,’ ಎಂದು ಸಂಸದ ರಾಜೀವ್‌ ಚಂದ್ರ ಶೇಖರ್‌ ಆರೋಪಿಸಿದರು. 

ಸೋಮವಾರದಿಂದ ಕಾಮಗಾರಿ ಚುರುಕು: ಈ ವರೆಗೆ ಎರಡು ಹಿಟಾಚಿ ಮತ್ತು ಒಂದು ಜೆಸಿಬಿ ಕೆರೆಯ ಅಂಗಳದಲ್ಲಿ ಸಂಪರ್ಕ ರಸ್ತೆ ನಿರ್ಮಿಸುವಲ್ಲಿ ಮಾತ್ರ ನಿರತವಾಗಿವೆ. ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಕೆರೆ ಸ್ವತ್ಛಗೊಳಿಸುವ ಕಾರ್ಯಕ್ಕೆ ಬಿಡಿಎ ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ. 

Advertisement

ಕೆರೆಯನ್ನು ಸ್ವತ್ಛಗೊಳಿಸುವ ಗುತ್ತಿಗೆ ಪಡೆದಿರುವ ಹಾರ್ಮನ್ಸ್‌ ಸಂಸ್ಥೆ ಕೆರೆಯಲ್ಲಿ ಜೊಂಡು ತೆರವುಗೊಳಿಸಲು ಮುಂಬೈನಿಂದ ಎರಡು ಬೃಹತ್‌ ಯಂತ್ರಗಳನ್ನು ತರಲು ಮುಂದಾಗಿದ್ದಾರೆ. ಶನಿವಾರ ಬೆಳಗ್ಗೆ ವೇಳೆಗೆ ಯಂತ್ರಗಳು ನಗರ ತಲುಪಲಿದ್ದು, ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಗುತ್ತಿಗೆದಾರರು ಕೆಲಸ ಆರಂಭಿಸಲಾಗಿದ್ದಾರೆ. 

ಯಂತ್ರಗಳು ಕೆರೆಯನ್ನು ಪ್ರವೇಶಿಸಲು ಅಗತ್ಯವಾದ ವ್ಯವಸ್ಥೆಯನ್ನು ಬಿಡಿಎ ಅಧಿಕಾರಿಗಳು  ಕಳೆದ ವಾರದಿಂದ ಮಾಡಿದ್ದಾರೆ. ಶನಿವಾರ ನಗರಕ್ಕೆ ಟ್ರಕ್‌ ಮೂಲಕ ಬರಲಿರುವ ಯಂತ್ರಗಳನ್ನು ಸಿಬ್ಬಂದಿ ಶನಿವಾರ ಸಂಜೆ ಅಥವಾ ಭಾನುವಾರ ಬೆಳಗ್ಗೆ ವೇಳೆ ಕಾರ್ಯಾಚರಣೆಗೆ ಸಿದ್ಧಪಡಿಸಲಿದ್ದಾರೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಒಂದು ಬಾರಿಗೆ 10 ಟನ್‌ ಜೊಂಡು ತೆರವು!: ಸದ್ಯ ಮುಂಬೈನಿಂದ ನಗರಕ್ಕೆ ಬರುತ್ತಿರುವ ಜೊಂಡು ತೆರವುಗೊಳಿಸುವ (ಡೀವಿಡಿಂಗ್‌) ಯಂತ್ರಗಳು ಒಮ್ಮೆ ಕೆರೆಯನ್ನು ಪ್ರವೇಶಿಸಿದರೆ 10-12 ಟನ್‌ ಜೊಂಡು ತೆರವುಗೊಳಿಸಲಿವೆ. ಇದರೊಂದಿಗೆ ತೆರವುಗೊಳಿಸಿದ ಜೊಂಡು ಸಮೇತ ದಡಕ್ಕೆ ಬರಲಿವೆ. ಬೆಳ್ಳಂದೂರು ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿ ಜೊಂಡು ಬೆಳೆದಿರುವುದರಿಂದ ಈ ಯಂತ್ರಗಳನ್ನು ಬಳಸಲು ಗುತ್ತಿಗೆದಾರರು ಮುಂದಾಗಿದ್ದಾರೆ. ಈ ಯಂತ್ರಗಳು ಪ್ರತಿ ಗಂಟೆಗೆ 2 ರಿಂದ 3 ಎಕರೆಯಷ್ಟು ಪ್ರದೇಶದಲ್ಲಿನ ಜೊಂಡನ್ನು ತೆರವುಗೊಳಿಸಲಿದ್ದು, ಮೂರು ತಿಂಗಳಲ್ಲಿ ಕೆರೆಯನ್ನು ಜೊಂಡು ಮುಕ್ತಗೊಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕೆರೆ ಸಂರಕ್ಷಣೆಗಾಗಿ ಹೋರಾಟ ನಿರಂತರ 
ಕೆರೆ ಸ್ವತ್ಛಗೊಳಿಸಲು ಎನ್‌ಜಿಟಿ ಆದೇಶ ಮಾಡಿದ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರು ಶುಕ್ರವಾರ ಸಂಸದ ಪಿ.ಸಿ. ಮೋಹನ್‌ ಹಾಗೂ ಶಾಸಕ ಅರವಿಂದ ಲಿಂಬಾವಳಿ ಅವರೊಂದಿಗೆ ಬೆಳ್ಳಂದೂರು, ವರ್ತೂರು ಹಾಗೂ ರಾಂಪುರ ಕೆರೆಗಳ ಪರಿಶೀಲನೆ ಕೈಗೊಂಡರು. ಈ ವೇಳೆ ಮಾತನಾಡಿದ ಅವರು, “ಜಲ ಮೂಲಗಳ ಸಂರಕ್ಷಣೆ, ಒತ್ತುವರಿ ತೆರವು ಕಾರ್ಯಾಚರಣೆ ಮತ್ತು ಮಾಲಿನ್ಯ ನಿಯಂತ್ರಣ ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಸರ್ಕಾರ ಸಂಪೂರ್ಣ ವಿಫ‌ಲವಾಗಿದೆ. ಇದರ ವಿರುದ್ದ ಹೋರಾಟ ಮುಂದುವರಿಯಲಿದೆ,’ ಎಂದರು. 

ಎನ್‌ಜಿಟಿ ಆದೇಶದ ನಂತರದಲ್ಲಿ ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಕೈಗೊಂಡಿರುವ ಕ್ರಮಗಳು ಮತ್ತು ಯೋಜನೆಗಳ ಕುರಿತು ಶೀಘ್ರದಲ್ಲಿಯೇ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆ ನಡೆಸಲಾಗುವುದು. ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳೀಯ ನಿವಾಸಿಗಳು, ತಜ್ಞರು ಸಹ ಪಾಲ್ಗೊಳ್ಳಲಿದ್ದಾರೆ,’ ಎಂದು ತಿಳಿಸಿದರು.

ಸಂಸದ ಪಿ.ಸಿ.ಮೋಹನ್‌ ಮಾತನಾಡಿ, “ಕೆರೆಯ ಸಂರಕ್ಷಣೆಗೆ ಸರ್ಕಾರ ಕೈಗೊಂಡಿರುವ ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳ ಮಾಹಿತಿಯನ್ನು ವೆಬ್‌ಸೈಟ್‌ಲ್ಲಿ ಪ್ರಕಟಿಸಬೇಕು. ಘನ ತ್ಯಾಜ್ಯ ಸುರಿಯುತ್ತಿರುವವರಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ದಕ್ಷತೆ ಪ್ರದರ್ಶಿಸುವ ಅಗತ್ಯವಿದೆ,’ ಎಂದು ಸೂಚಿಸಿದರು. 

ಮಾಜಿ ಸಚಿವ ಅರವಿಂದ ಲಿಂಬಾವಳಿ, ನಾಗರಿಕ ಕ್ರಿಯಾ ಸಮಿತಿ ಸದಸ್ಯರಾದ ಮುಕುಂದ, ನಮ್ಮ ಬೆಂಗಳೂರು ಪ್ರತಿಷ್ಠಾನ ಸಿಇಒ ಶ್ರೀಧರ್‌ ಪಬ್ಬಿಸೆಟ್ಟಿ ಸೇರಿದಂತೆ ಪ್ರಮುಖರು ಹಾಜರಿದ್ದರು. 

ಕೆರೆ ಒತ್ತುವರಿಗೆ ಆಕ್ರೋಶ: ವರ್ತೂರು ಕೆರೆಯ ಸುತ್ತಲೂ ರಾತ್ರೋರಾತ್ರಿ ಕಟ್ಟಡದ ತ್ಯಾಜ್ಯವನ್ನು ಲಾರಿಗಳಲ್ಲಿ ತಂದು ಸುರಿಯುವ ಮೂಲಕ ಒತ್ತುವರಿ ಮಾಡಲಾಗುತ್ತಿದೆ ಎಂದು ಸ್ಥಳೀಯರು ಸಂಸದರಿಗೆ ದೂರಿದರು. ಇದಕ್ಕೆ ಆಕ್ರೋಶಗೊಂಡ ಸಂಸದರು, ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಲಾರಿಗಳು, ಟ್ರ್ಯಾಕ್ಟರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕೆರೆಯಂಚಿಗೆ ಬರುವ ಪ್ರಮುಖ ದಾರಿಯಲ್ಲಿ ಸಿಬ್ಬಂದಿ ನೇಮಿಸಿ ನಂಬರ್‌ ನೋಂದಾಯಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳುವಂತೆ ಸ್ಥಳದಲ್ಲೇ ಇದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ಸೂಚಿಸಿದರು.

ಸಿಸಿಟಿವಿ ಕ್ಯಾಮರಾ ಅಳವಡಿಕೆ!
ಬೆಳ್ಳಂದೂರು ಮತ್ತು ವರ್ತೂರು ಕೆರೆಯ ಸುತ್ತಮುತ್ತಲಿನ ಭಾಗಗಳಲ್ಲಿ ತ್ಯಾಜ್ಯ ಸುರಿಯುವುದನ್ನು ತಡೆಯುವ ಉದ್ದೇಶದಿಂದ ಬಿಬಿಎಂಪಿ ವತಿಯಿಂದ ನಾಲ್ಕು ಭಾಗಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದರು. ಆದರೆ ಕೆರೆಯ ವಿಸ್ತೀರ್ಣ ಹೆಚ್ಚಿರುವುದರಿಂದಾಗಿ ಕೆರೆಯ ಸುತ್ತಮುತ್ತ 8 ಎಂಟು ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. 

ಬೆಳ್ಳಂದೂರು ಕೆರೆಯ ಸ್ವಚ್ಚತೆ ಕಾಪಾಡುವಲ್ಲಿ ವಿಫ‌ಲವಾಗಿರುವ ಸರ್ಕಾರ ಎನ್‌ಜಿಟಿ ಚಾಟಿ ಬೀಸಿದ ನಂತರವೂ ಪಾಠಕಲಿತಿಲ್ಲ. ಸ್ವಚ್ಚತಾ ಕಾರ್ಯ ಕೈಗೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸಿದೆ. ವರ್ತೂರು ಕೆರೆ ಮತ್ತು ರಾಂಪುರ ಕೆರೆಯ ಕುರಿತು ಸರ್ಕಾರ ಇಂದಿಗೂ ತಲೆ ಕೆಡಿಸಿಕೊಂಡಿಲ್ಲ, ನ್ಯಾಯಾಲಯದ ಆದೇಶ ಬಂದ ಹಿನ್ನೆಲೆಯಲ್ಲಿ ಸ್ವಚ್ಚತೆ ಕಾರ್ಯವನ್ನು ತೋರ್ಪಡಿಕೆಗಾಗಿ ಮಾಡುತ್ತಿದೆ. 
-ಅರವಿಂದ ಲಿಂಬಾವಳಿ, ಮಹದೇವಪುರ ಕ್ಷೇತ ಶಾಸಕ 

ಮಹದೇವಪುರ ಕೆರೆಗಳನ್ನು ಸ್ವಚ್ಚಗೊಳಿಸುವ ವಿಚಾರದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಎನ್‌ಜಿಟಿ ಆದೇಶದಂತೆ ಸರ್ಕಾರ ಸ್ವಚ್ಚತಾ ಕಾರ್ಯ ಕೈಗೊಂಡಿಲ್ಲ.  ನೆಪಕ್ಕೆ ಮಾತ್ರ ಕೇವಲ ಎರಡು ಹಿಟಾಚಿ, ಒಂದು ಜೆಸಿಬಿಯಿಂದ ಸ್ವಚ್ಚತೆ ಮಾಡಿಸಲಾಗುತ್ತಿದೆ. ಕೆರೆ ಸ್ವಚ್ಚತೆಗೆ ವಿಳಂಬ ಮಾಡಿ ಕೋರ್ಟ್‌ ಆದೇಶವನ್ನು ಉಲ್ಲಂ ಸಿದರೆ ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ
-ರಾಜೀವ್‌ ಚಂದ್ರಶೇಖರ್‌, ರಾಜ್ಯಸಭೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next