Advertisement
ದ.ಕ. ಜಿಲ್ಲೆಯ ಕರಾವಳಿಯಲ್ಲಿ ಆತ್ಮನಿರ್ಭರ್ ಪರಿಕಲ್ಪನೆ ಅಡಿಯಲ್ಲಿ ಅಂದಾಜು 1,755 ಕೋಟಿ ರೂ.ವೆಚ್ಚದಲ್ಲಿ ಕೇಂದ್ರ ಶಿಪ್ಪಿಂಗ್ ಸಚಿವಾಲಯ ವತಿಯಿಂದ 21 ವಿವಿಧ ಯೋಜನೆಗಳು ಅನುಷ್ಠಾನಗೊಳ್ಳಲಿದ್ದು, ವಾಟರ್ ನ್ಪೋರ್ಟ್ಸ್ ಜೆಟ್ಟಿಗಳ ನಿರ್ಮಾಣ, ನವಮಂಗಳೂರು ಬಂದರಿನಲ್ಲಿ ಗ್ಯಾಸ್ ಟರ್ಮಿನಲ್, ಎಲ್‌ಎನ್‌ಜಿ ಟೆರ್ಮಿನಲ್, ಪೆಟ್ರೋ ಕೆಮಿಕಲ್ಸ್ ಕಾಂಪ್ಲೆಕ್ಸ್, ಆಹಾರ ಧಾನ್ಯ ಗೋದಾಮು, ಸೀಫುಡ್ ಪಾರ್ಕ್, ಬಂದರು ಆಸ್ಪತ್ರೆ ನಿರ್ಮಾಣ ಹಾಗೂ ವಿವಿಧ ಬೀಚ್‌ಗಳ ಅಭಿವೃದ್ಧಿ ಮುಂತಾದ ಯೋಜನೆಗಳು ಇದರಲ್ಲಿ ಸೇರಿವೆ. ಕೇಂದ್ರ ಶಿಪ್ಪಿಂಗ್ ರಾಜ್ಯ ಸಚಿವ ಸುಖ್ ಮಾಂಡವೀಯ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಕರಾವಳಿ ಜಿಲ್ಲೆಗಳ ಸಂಸದರೊಂದಿಗೆ ಇತ್ತೀಚೆಗೆ ನಡೆಸಿದ್ದ ವೀಡಿಯೋ ಕಾನ್ಫೆರೆನ್ಸ್‌ನಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
ಕೇಂದ್ರ ಸರಕಾರದ ಶಿಪ್ಪಿಂಗ್ ಸಚಿವಾಲಯದ ವತಿಯಿಂದ ಗುರುಪುರ (ಫಲ್ಗುಣಿ) ಹಾಗೂ ನೇತ್ರಾವತಿ ನದಿಗಳಲ್ಲಿ ಅನುಷ್ಠಾನಗೊಳ್ಳುವ ವಾಟರ್‌ನ್ಪೋರ್ಟ್ಸ್ ಸುಸಜ್ಜಿತ ಜೆಟ್ಟಿಗಳ ನಿರ್ಮಾಣ ಪ್ರಸ್ತಾ ವನೆ 100 ಕೋ.ರೂ.ವೆಚ್ಚವನ್ನು ಹೊಂದಿದೆ. ಜಲ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಮಂಗಳೂರಿನ ಫಲ್ಗುಣಿ, ನೇತ್ರಾವತಿ ನದಿ ತೀರದಲ್ಲಿ ಹಾಗೂ ಸಸಿಹಿತ್ಲು ಕಡಲ ತೀರದ ಬಳಿ ನಂದಿನಿ ನದಿ ತಟದ ಸಹಿತ 13 ಕಡೆಗಳಲ್ಲಿ ತೇಲುವ ಜೆಟ್ಟಿಗಳನ್ನು ನಿರ್ಮಿಸುವ ಒಟ್ಟು 26 ಕೋ.ರೂ. ವೆಚ್ಚದ ಪ್ರಸ್ತಾವನೆಯನ್ನು ಕೆಲವು ವರ್ಷಗಳ ಹಿಂದೆ ದ.ಕ.ಜಿಲ್ಲಾಡಳಿತ ವತಿಯಿಂದ ರೂಪಿಸಿ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಲಾಗಿತ್ತು. ಫಲ್ಗುಣಿ ನದಿಯಲ್ಲಿ ಕೂಳೂರು ಸೇತುವೆ ಬಳಿ, ಬಂಗ್ರಕೂಳೂರು ನದಿ ತೀರ, ಸುಲ್ತಾನ್ ಬತ್ತೇರಿ, ತಣ್ಣೀರುಬಾವಿ ಸಮೀಪ, ಕೂಳೂರು ಉತ್ತರ ಮರುಳು ಮಿಶ್ರಿತ ಪ್ರದೇಶ, ಹಳೆ ಬಂದರು, ಕಸ್ಬಾ ಬೆಂಗ್ರೆ, ಹಳೆ ಬಂದರು ಫೆರಿ ಸಮೀಪ, ಬೆಂಗ್ರೆ ಸ್ಯಾಂಡ್ ಫೀಟ್ ಬಳಿ ಹಾಗೂ ನೇತ್ರಾವತಿ ನದಿ ತೀರದಲ್ಲಿ ಜಪ್ಪಿನಮೊಗರು ಹಳೆಯ ಫೆರಿ ಸಮೀಪ, ಉಳ್ಳಾಲ ಹಳೆಯ ಫೆರಿ ಬಳಿ, ಸಸಿಹಿತ್ಲು ಕಡಲ ತೀರದ ಬಳಿ ನಂದಿನಿ ನದಿ ತಟದ ಬಳಿ ಸುವ್ಯವಸ್ಥಿತ ಜೆಟ್ಟಿಗಳ ನಿರ್ಮಾಣ ಇದರಲ್ಲಿ ಸೇರಿದೆ.
Related Articles
ಮಂಗಳೂರಿನಲ್ಲಿ ಗುರುಪುರ, ನೇತ್ರಾವತಿ ಫಲ್ಗುಣಿ ನದಿಗಳಲ್ಲಿ ಜಲಕ್ರೀಡೆಗಳಿಗೆ ವಿಫುಲ ಅವಕಾಶವಿದ್ದು ಕಳೆದ ವರ್ಷ ಜನವರಿಯಲ್ಲಿ ನಡೆದಿದ್ದ ನದಿ ಉತ್ಸವ ಇದನ್ನು ತೆರೆದಿಟ್ಟಿತ್ತು. ನದಿ ಉತ್ಸವದಲ್ಲಿ ರೋಯಿಂಗ್, ಸ್ಟಾಂಡ್ ಆಫ್ ಫೆಡಲಿಂಗ್, ವಿಂಡ್ ಸರ್ಫಿಂಗ್ ಜೆಟ್ಸೆಕಿ, ಸ್ಪೀಡ್‌ಬೋಟು ಸಹಿತ ವಿವಿಧ ಜಲಕ್ರೀಡೆಗಳು ಜನಾಕರ್ಷಣೆ ಗಳಿಸಿದ್ದವು. ಅನಂತರ ಜಲಕ್ರೀಡೆ ಗಳನ್ನು ನಡೆಸಲು ಎರಡು ಸಂಸ್ಥೆಗಳಿಗೂ ಅನುಮತಿಯನ್ನು ಕೂಡ ನೀಡಲಾಗಿದೆ. ಆದರೆ ಸುಸಜ್ಜಿತವಾದ ತೇಲುವ ಜೆಟ್ಟಿಗಳ ನಿರ್ಮಾಣವಾಗದೆ ನದಿಯಲ್ಲಿ ವ್ಯವಸ್ಥಿತವಾಗಿ ಜಲ ಕ್ರೀಡೆಗಳನ್ನು ನಡೆಸಲು ಸಮಸ್ಯೆಯಾಗಿದೆ. ಜಲಕ್ರೀಡೆಗಳಿಗೆ ಮೂಲಸೌಕರ್ಯಗಳ ಉತ್ತೇಜನದಿಂದ ಜಲ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಲಭಿಸಲಿದ್ದು ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ.
Advertisement
ಶಿಪ್ಪಿಂಗ್ ಸಚಿವಾಲಯದಿಂದ ಅನುಷ್ಠಾನದಕ್ಷಿಣ ಕನ್ನಡದ ಕರಾವಳಿಯಲ್ಲಿ ಆತ್ಮನಿರ್ಭರ ಪರಿಕಲ್ಪನೆಯಡಿ ಕೇಂದ್ರ ಶಿಪ್ಪಿಂಗ್ ಸಚಿವಾಲಯ ವತಿಯಿಂದ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳಲಿದ್ದು ಇದರಲ್ಲಿ ವಾಟರ್ ನ್ಪೋರ್ಟ್ಸ್ ಜೆಟ್ಟಿಗಳ ನಿರ್ಮಾಣವೂ ಸೇರಿದೆ. ಕೇಂದ್ರ ಶಿಪ್ಪಿಂಗ್ ರಾಜ್ಯ ಸಚಿವ ಸುಖ್ ಮಾಂಡವೀಯ ಅವರು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಕರಾವಳಿ ಜಿಲ್ಲೆಗಳ ಸಂಸದರೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
-ನಳಿನ್ ಕುಮಾರ್ ಕಟೀಲು, ಸಂಸದರು