Advertisement

ಬಯಲು ಬಹಿರ್ದೆಸೆ ಮುಕ್ತ: ಹುಬ್ಬಳ್ಳಿ ಲಾಸ್ಟ್‌

02:15 PM Oct 16, 2017 | |

ಹುಬ್ಬಳ್ಳಿ: ಧಾರವಾಡ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿಸುವ ಯತ್ನಗಳು ಸಾಗಿವೆ. ಈಗಾಗಲೇ ಜಿಲ್ಲೆಯ ಕಲಘಟಗಿ ಹಾಗೂ ಕುಂದಗೋಳದಲ್ಲಿ ಶೇ.100ರಷ್ಟು ಶೌಚಾಲಯ ನಿರ್ಮಾಣವಾಗಿದ್ದು, ಇನ್ನು ಮೂರು ತಾಲೂಕುಗಳಲ್ಲಿ ಶೌಚಾಲಯ ನಿರ್ಮಾಣ ಪೂರ್ಣಗೊಳ್ಳಬೇಕಿದೆ. 

Advertisement

ಶೌಚಾಲಯ ನಿರ್ಮಾಣದಲ್ಲಿ ಹುಬ್ಬಳ್ಳಿ ತಾಲೂಕು ಕೊನೆ ಸ್ಥಾನದಲ್ಲಿದೆ. ಶೈಕ್ಷಣಿಕ, ಸಾಂಸ್ಕೃತಿಕ ತವರು ಎಂದೇ ಪರಿಗಣಿಸಲ್ಪಟ್ಟ ಧಾರವಾಡ ಜಿಲ್ಲೆ ಇದುವರೆಗೂ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಣೆ ಆಗದಿರುವುದು ಮುಜುಗರದ ಸಂಗತಿಯಾಗಿದ್ದು, ಆದಷ್ಟು ಬೇಗ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸುವ ಚಿಂತನೆ ಗ್ರಾಮೀಣಾಭಿವೃದ್ಧಿ ಇಲಾಖೆಯದ್ದಾಗಿದೆ.

ಆದರೆ, ಶೌಚಾಲಯಗಳ ನಿರ್ಮಾಣ ಹಾಗೂ ಬಳಕೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬುದು ವಾಸ್ತವ. ಅಕ್ಟೋಬರ್‌ 2ರಂದು ರಾಜ್ಯದಲ್ಲಿ ಆರು ಜಿಲ್ಲೆಗಳು ಬಯಲು ಬಹಿರ್ದೆಸೆ ಜಿಲ್ಲೆಗಳು ಘೋಷಣೆಯಾದವು. ಅದೇ ವೇಳೆಗೆ ಧಾರವಾಡ ಘೋಷಣೆ ಉದ್ದೇಶ ಹೊಂದಲಾಗಿತ್ತಾದರೂ, ಸಾಧ್ಯವಾಗಲಿಲ್ಲ.

ಇದೀಗ ನವೆಂಬರ್‌ 1ರೊಳಗೆ ಜಿಲ್ಲೆಯಲ್ಲಿ ಶೇ.100ರಷ್ಟು ಶೌಚಾಲಯ ನಿರ್ಮಾಣ ಗುರಿ ಹೊಂದಲಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು, ಕಲಘಟಗಿ ತಾಲೂಕು ಶೇ.100 ರಷ್ಟು ಕಾರ್ಯ ಸಾಧನೆ ಮಾಡಿವೆ. ಅಕ್ಟೋಬರ್‌ 2ರೊಳಗೆ ತಾಲೂಕಿನಲ್ಲಿ ಸುಮಾರು 27,310 ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿತ್ತು.

ಆದರೆ ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇನ್ನು 17 ಗ್ರಾಮ ಪಂಚಾಯತಿಯಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಅಪೂರ್ಣವಾಗಿದೆ. 9 ಗ್ರಾಮ ಪಂಚಾಯತಿಗಳಲ್ಲಿ ಶೌಚಾಲಯ ನಿರ್ಮಾಣ ಪೂರ್ಣಗೊಂಡಿದೆ. ಧಾರವಾಡ ತಾಲೂಕಿನಲ್ಲಿ ಒಟ್ಟು 39 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 31 ಗ್ರಾಮ ಪಂಚಾಯತಿಗಳು ಶೇ.100 ರಷ್ಟು ಶೌಚಾಲಯ ನಿರ್ಮಾಣ ಕಾರ್ಯ ಮಾಡಿದ್ದು, ಇನ್ನುಳಿದ 8 ಗ್ರಾಮ ಪಂಚಾಯತಿಯಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ನಡೆಯಬೇಕಾಗಿದೆ.

Advertisement

ಕಲಘಟಗಿ ತಾಲೂಕಿನ ವ್ಯಾಪ್ತಿಯಲ್ಲಿ 28 ಗ್ರಾಮ ಪಂಚಾಯತಿಗಳು ಬರುತ್ತಿದ್ದು ಎಲ್ಲ ಗ್ರಾಮ ಪಂಚಾಯತಿಯಲ್ಲೂ ಶೌಚಾಲಯ ನಿರ್ಮಾಣ ಕಾರ್ಯ ಶೇ.100ರಷ್ಟಾಗಿದೆ. ಕುಂದಗೋಳ ತಾಲೂಕು ವ್ಯಾಪ್ತಿಯಲ್ಲಿ 26 ಗ್ರಾಮ ಪಂಚಾಯತಿ ಬರುತ್ತಿದ್ದು ಅದರಲ್ಲಿ ಎಲ್ಲ ಗ್ರಾಮ ಪಂಚಾಯತಿಗಳಲ್ಲೂ ಶೌಚಾಲಯ ನಿರ್ಮಿಸಲಾಗಿದೆ.

ನವಲಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 25 ಗ್ರಾಮಗಳು ಬರುತ್ತಿದ್ದು, ಅದರಲ್ಲಿ 16 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಿಸಲಾಗಿದ್ದು ಇನ್ನುಳಿದ 9 ಗ್ರಾಮ ಪಂಚಾಯತಿಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಜಿಲ್ಲೆಯ ವಿವಿಧ ಕಾಲೇಜುಗಳ ಎನ್‌ಎಸ್‌ಎಸ್‌ ಘಟಕದ ವಿದ್ಯಾರ್ಥಿಗಳಿಂದ ವಿಶೇಷ ಶಿಬಿರ ಮಾಡುವ ಮೂಲಕ ಶೌಚಾಲಯ ನಿರ್ಮಾಣ ಕಾರ್ಯ, ಪ್ರತಿ ಮನೆಗಳಿಂದ ದಾಖಲಾತಿ ಪಡೆಯುವ ಕಾರ್ಯ ಸೇರಿದಂತೆ ಇನ್ನು ಹಲವಾರು ಕಾರ್ಯ ಮಾಡುವ ಮೂಲಕ ನೂರಾರು ವಿದ್ಯಾರ್ಥಿಗಳು ವಿಶೇಷ ಶ್ರಮದಾನ ಮಾಡಿ ನೂರಾರು ಶೌಚಾಲಯ ನಿರ್ಮಾಣದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.

2012ರ ಬೇಸ್‌ಲೈನ್‌ ಸಮೀಕ್ಷೆ ಪ್ರಕಾರ 1,41,207 ಮನೆಗಳಿದ್ದು, ಅದರಲ್ಲಿ ಈಗಾಗಲೇ ಎಲ್ಲ ಭಾಗದಲ್ಲಿ ಶೌಚಾಲಯ ನಿರ್ಮಿಸಿದ್ದು ಇನ್ನುಳಿದಂತೆ 5719 ಶೌಚಾಲಯ ನಿರ್ಮಾಣ ಮಾಡಿದರೆ ಧಾರವಾಡ ಜಿಲ್ಲೆ ಬಯಲು ಶೌಚಮುಕ್ತ ಜಿಲ್ಲೆಯಾಗಿ ಹೊರ ಹೊಮ್ಮಲಿದೆ ಎಂಬುದು ಅಧಿಕಾರಿಗಳ ಅನಿಸಿಕೆ. 

* ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next