Advertisement

ಸಾಂಕ್ರಾಮಿಕ ಮಹಾಮಾರಿಗಳ ಆಕ್ರಮಣ

09:36 AM Jul 31, 2019 | Suhan S |

ಧಾರವಾಡ: ಮಳೆಗಾಲದ ಜಿಟಿ ಜಿಟಿ ಮಳೆಯೊಂದಿಗೆ ಸಾಂಕ್ರಾಮಿಕ ರೋಗಗಳ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಆತಂಕದ ಛಾಯೆ ಆವರಿಸುವಂತಾಗಿದೆ.

Advertisement

ಜನೇವರಿಯಿಂದ ಜೂ. 7ರ ವರೆಗೆ ಮಲೇರಿಯಾ ರೋಗ 4, ಡೆಂಘೀ 7, ಚಿಕೂನ್‌ಗುನ್ಯಾ 8 ಜನರಲ್ಲಿ ಪತ್ತೆ ಆಗಿತ್ತು. ಈಗ ಬರೀ ಎರಡೇ ತಿಂಗಳಲ್ಲಿ ಮಳೆಗಾಲದ ಹೊಡೆತಕ್ಕೆ ಈ ಸಂಖ್ಯೆ ಐದಾರು ಪಟ್ಟು ಹೆಚ್ಚಳವಾಗಿದೆ. ಜು. 30ರ ವರೆಗೆ 38 ಜನರಲ್ಲಿ ಡೆಂಘಿ, 31 ಜನರಲ್ಲಿ ಚಿಕೂನ್‌ಗುನ್ಯಾ ಹಾಗೂ 5 ಜನರಲ್ಲಿ ಮಲೇರಿಯಾ ದೃಢಪಟ್ಟಿದೆ. ಈ ಸಾಂಕ್ರಾಮಿಕ ರೋಗಗಳಿಂದ ಮೃತಪಟ್ಟಿರುವ ಬಗ್ಗೆ ಯಾವುದೇ ವರದಿಗಳಾಗಿಲ್ಲ. ಆದರೆ ಗ್ರಾಮೀಣಕ್ಕಿಂತ ನಗರ ಪ್ರದೇಶದಲ್ಲಿಯೇ ಹೆಚ್ಚು ಸಾಂಕ್ರಾಮಿಕ ರೋಗಗಳು ಪ್ರತಿವರ್ಷದಂತೆ ಈ ಸಲವೂ ಕಂಡುಬಂದಿವೆ.

ಮಳೆಗಾಲದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಒಡೆದು ಚರಂಡಿ ನೀರು ಸೇರುವಿಕೆ, ಕಸ-ತಾಜ್ಯವಸ್ತುಗಳ ನಿರ್ವಹಣೆ ಕೊರತೆ, ಗ್ರಾಮೀಣ ಪ್ರದೇಶದಲ್ಲಿ ಬಯಲು ಶೌಚಾಲಯ ಸೇರಿದಂತೆ ನಾನಾ ಕಾರಣಗಳಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಾರಣವಾಗಿದೆ. ಮಳೆಗಾಲಕ್ಕೂ ಮುನ್ನ ಫಾಗಿಂಗ್‌ ಮಾಡುವಲ್ಲಿ ಪಾಲಿಕೆ ಲಕ್ಷ್ಯ ವಹಿಸದ ಕಾರಣ ಸಾಂಕ್ರಾಮಿಕ ರೋಗಗಳು ಅವಳಿ ನಗರದಲ್ಲಿ ಹೆಚ್ಚಾಗುವಂತಾಗಿದೆ. ಸದ್ಯ ಪಾಲಿಕೆ ಎಚ್ಚೆತ್ತು ಫಾಗಿಂಗ್‌ ಕೆಲಸ ಮಾಡುತ್ತಿದ್ದು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಹೆಚ್ಚಿನ ಲಕ್ಷ್ಯ ವಹಿಸಬೇಕಿದೆ.

ಹೆಚ್ಚಳವಾದ ಡೆಂಘೀ:

2017ರಲ್ಲಿ 172 ಜನರಲ್ಲಿ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿದ್ದ ಡೆಂಘೀ ಆಗ 3 ಜನರನ್ನು ಬಲಿ ತೆಗೆದುಕೊಂಡಿತ್ತು. ಧಾರವಾಡ ನಗರದಲ್ಲಿ ಇಬ್ಬರು ಹಾಗೂ ಕುಂದಗೋಳದಲ್ಲಿ ಒಬ್ಬ ವ್ಯಕ್ತಿ ಡೆಂಘೀಯಿಂದ ಮೃತಪಟ್ಟಿದ್ದರು. 2018ರಲ್ಲಿ 112 ಜನರಲ್ಲಿ ಕಾಣಿಸಿಕೊಂಡಿದ್ದ ಡೆಂಘೀ ಹುಬ್ಬಳ್ಳಿ ನಗರದಲ್ಲಿ 55 ಹಾಗೂ ಧಾರವಾಡ ನಗರದಲ್ಲಿ 21 ಜನರನ್ನು ಬಾಧಿಸಿತ್ತು. ಇನ್ನೂ ಈ ವರ್ಷ 7 ತಿಂಗಳಲ್ಲಿ 433 ಜನರಲ್ಲಿ ಡೆಂಘೀ ಲಕ್ಷಣಗಳು ಕಂಡು ಬಂದಿದ್ದು, ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 38 ಜನರಲ್ಲಿ ಡೆಂಘೀ ದೃಢಪಟ್ಟಿದೆ. ಧಾರವಾಡ ಹಾಗೂ ಹುಬ್ಬಳ್ಳಿ ಗ್ರಾಮೀಣದಲ್ಲಿ ತಲಾ 2, ಕಲಘಟಗಿಯಲ್ಲಿ 1, ನವಲಗುಂದದಲ್ಲಿ 1, ಧಾರವಾಡ ಶಹರದಲ್ಲಿ 1 ಜನರಲ್ಲಿ ಡೆಂಘೀ ದೃಢಪಟ್ಟಿದ್ದರೆ ಹುಬ್ಬಳ್ಳಿ ಶಹರದಲ್ಲೊಂದೇ 30 ಜನರಲ್ಲಿ ಡೆಂಘೀ ದೃಢಪಟ್ಟಿದ್ದು ವಾಣಿಜ್ಯ ನಗರಿಯ ಜನತೆಯಲ್ಲಿ ಆತಂಕ ಮೂಡಿಸಿದೆ.

ಐವರಲ್ಲಿ ಮಲೇರಿಯಾ:

2010ರಲ್ಲಿ 309 ಜನರಲ್ಲಿ ಕಾಣಿಸಿಕೊಂಡಿದ್ದ ಮಲೇರಿಯಾ ರೋಗ 2018ರಲ್ಲಿ 25ರಲ್ಲಿ ಕಾಣಿಸಿಕೊಂಡಿತ್ತು. ಇನ್ನೂ ಈ ವರ್ಷದ ಜುಲೈ ತಿಂಗಳ ಅಂತ್ಯದಲ್ಲಿ ಧಾರವಾಡ ಗ್ರಾಮೀಣದಲ್ಲಿ 1, ನವಲಗುಂದದಲ್ಲಿ 3, ಹುಬ್ಬಳ್ಳಿ ಶಹರದಲ್ಲಿ 1 ಜನರಲ್ಲಿ ಪತ್ತೆ ಆಗಿದೆ. ಇನ್ನೂ ಮೆದುಳು ಜ್ವರಕ್ಕೆ 2018ರಲ್ಲಿ ಒಬ್ಬ ಬಲಿ ಆಗಿದ್ದು, ಈ ವರ್ಷ ರೋಗದ ಲಕ್ಷಣಗಳು
ಕಂಡುಬಂದಿದ್ದರೂ ದೃಢಪಟ್ಟಿಲ್ಲ.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 38 ಜನರಲ್ಲಿ ಡೆಂಘೀ, 31 ಜನರಲ್ಲಿ ಚಿಕೂನ್‌ಗುನ್ಯಾ ಹಾಗೂ 5 ಜನರಲ್ಲಿ ಮಲೇರಿಯಾ ದೃಢಪಟ್ಟಿದ್ದು, ಈ ಸಾಂಕ್ರಾಮಿಕ ರೋಗಗಳಿಂದ ಯಾರೂ ಮೃತಪಟ್ಟಿಲ್ಲ. • ಡಾ| ಯಶವಂತ ಮದೀನಕರ, ಜಿಲ್ಲಾ ಆರೋಗ್ಯಾಧಿಕಾರಿ.
ಧಾರವಾಡಅವಳಿ ನಗರದಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾದ ಕಾರಣ ಸೊಳ್ಳೆಗಳ ನಿಯಂತ್ರಣಕ್ಕಾಗಿ ಪ್ರತಿನಿತ್ಯ ಫಾಗಿಂಗ್‌ ಹಾಗೂ ಔಷಧಿ ಸಿಂಪಡಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಪಾಲಿಕೆ ಎಲ್ಲ ವಲಯ ಕಚೇರಿ ವ್ಯಾಪ್ತಿಯಲ್ಲಿ ಕೆಲಸ ನಡೆಯುತ್ತಿದೆ. • ಸುರೇಶ ಇಟ್ನಾಳ, ಆಯುಕ್ತ, ಹು-ಧಾ ಮಹಾನಗರ ಪಾಲಿಕೆ
Advertisement

ಗುನ್ನ ಕೊಟ್ಟ ಚಿಕೂನ್‌ಗುನ್ಯಾ:

2009ರಲ್ಲಿ 308 ಜನರಲ್ಲಿ ಕಾಣಿಸಿಕೊಂಡು ಜಿಲ್ಲೆಯಲ್ಲಿ ಆರ್ಭಟ ಮಾಡಿದ್ದ ಚಿಕೂನಗುನ್ಯಾ 2017ರಲ್ಲಿ 11 ಜನರಲ್ಲಿ ಕಾಣಿಸಿಕೊಂಡು ತಣ್ಣಗಾಗಿತ್ತು. ಆದರೆ 2018ರಲ್ಲಿ ವಿಧಾನಸಭಾ ಚುನಾವಣೆ ಗುಂಗಿನಲ್ಲಿ ಜಿಲ್ಲಾಡಳಿತ ಮಗ್ನರಾಗಿದ್ದರಿಂದ 85 ಜನರಲ್ಲಿ ಕಾಣಿಸಿಕೊಂಡಿತ್ತು. ಈ ಪೈಕಿ ಹುಬ್ಬಳ್ಳಿ ನಗರದಲ್ಲಿ 30, ಧಾರವಾಡ ನಗರದಲ್ಲಿಯೇ 21 ಜನರು ಚಿಕೂನ್‌ಗುನ್ಯಾಕ್ಕೆ ತುತ್ತಾಗಿದ್ದರು. ಈಗ ಜುಲೈ ತಿಂಗಳ ಅಂತ್ಯದೊಳಗೆ ರೋಗದ ಲಕ್ಷಣಗಳ ಮೇಲೆ 128 ಜನರ ರಕ್ತ ಪರೀಕ್ಷೆ ಮಾಡಿದ್ದು, ಈ ಪೈಕಿ 31 ಜನರಲ್ಲಿ ರೋಗ ದೃಢಪಟ್ಟಿದೆ. ಈ ಪೈಕಿ ಧಾರವಾಡ-6, ಹುಬ್ಬಳ್ಳಿ-2, ಕಲಘಟಗಿ-3, ಕುಂದಗೋಳ-2, ನವಲಗುಂದ-7, ಧಾರವಾಡ ಶಹರ-6, ಹುಬ್ಬಳ್ಳಿ ಶಹರ-5 ಜನರಲ್ಲಿ ಚಿಕೂನ್‌ಗುನ್ಯಾ ದೃಢಪಟ್ಟಿದೆ.
• ಶಶಿಧರ್‌ ಬುದ್ನಿ
Advertisement

Udayavani is now on Telegram. Click here to join our channel and stay updated with the latest news.

Next