Advertisement

ವಿಜಯಪುರ ಜಿಲ್ಲೆಯ ಏಕೈಕ ಬಲಿದಾನ ಕುಟುಂಬದ ಕಡೆಗಣನೆ

05:41 PM Aug 16, 2022 | Shwetha M |

ವಿಜಯಪುರ: ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೋರಾಟದಲ್ಲಿ ಹುತಾತ್ಮರನ್ನು ಸರ್ಕಾರ ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಸಂದರ್ಭದಲ್ಲಿ ಕಡೆಗಣಿಸಿದೆ ಎಂದು ಆಕ್ಷೇಪಿಸಿ ಕೊಟ್ನಾಳ-ಜಂಬಗಿ ದೇಶಮುಖ ಹುತಾತ್ಮರ ವಂಶಸ್ಥರ ನಿಯೋಗ ಜಿಲ್ಲಾಡಳಿತದ ಎದುರು ಅಸಮಾಧಾನ ಹೊರಹಾಕಿದೆ.

Advertisement

ಜಿಲ್ಲಾಧಿಕಾರಿ ಡಾ| ವಿ.ಬಿ.ದಾನಮ್ಮನವರ ಅವರನ್ನು ಭೇಟಿ ಮಾಡಿ ಅಸಮಾಧಾನದ ಮನವಿ ಸಲ್ಲಿಸಿದ ಕೊಟ್ನಾಳ-ಜಂಬಗಿ ದೇಶಮುಖ ಬಸಲಿಂಗಪ್ಪ ಹಾಗೂ ವೀರಸಂಗಪ್ಪ ಹುತಾತ್ಮರ ವಂಶಸ್ಥರು, ನಮ್ಮ ಕುಟುಂಬದ ಅಪ್ರತಿಮ ವೀರರಾಗಿದ್ದ ಬಸಲಿಂಗಪ್ಪ ಹಾಗೂ ವೀರಸಂಗಪ್ಪ ಎಂಬ ಮಗ-ತಂದೆ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ 1857ರ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೋರಾಟದಲ್ಲಿ ಬಲಿದಾನಗೈದಿದ್ದಾರೆ. ಹುತಾತ್ಮರಾದ ದೇಶಮುಖ ದೇಶಗತಿ ಸಂಸ್ಥಾನದ ಅಮರ ವೀರರ ತ್ಯಾಗ-ಬಲಿದಾನವನ್ನು ಈಚೆಗೆ ಸರ್ಕಾರ ಕಡೆಗಣಿಸುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಅಖಂಡ ವಿಜಯಪುರ ಜಿಲ್ಲೆಯಿಂದ ಭಾರತದ ಸ್ವಾತಂತ್ರ್ಯ ಪ್ರಥಮ ಚಳವಳಿಯಲ್ಲಿ ಹುತಾತ್ಮರಾದ ಪ್ರಥಮ ಹಾಗೂ ಏಕೈಕ ಕ್ರಾಂತಿವೀರರು ಬಹಾದ್ದೂರ್‌ ಬಸಲಿಂಗಪ್ಪ ಮತ್ತು ಅವರ ತಂದೆ ಕ್ರಾಂತಿಕಲಿ ವೀರಸಂಗಪ್ಪ ದೇಶಮುಖರು. ಭಾರತ ಸರ್ಕಾರ ಸ್ವಾತಂತ್ರ್ಯದ ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ ವಿಜಯಪುರ ನಗರದ ಹೃದಯ ಭಾಗದಲ್ಲಿ ಈ ಮಗ-ತಂದೆಯ ಬಲಿದಾನದ ಸ್ಮರಣೆಗಾಗಿ ಬಸಲಿಂಗಪ್ಪ ವೀರಸಂಗಪ್ಪ ದೇಶಮುಖ ಹುತಾತ್ಮ ವೃತ್ತ ನಿರ್ಮಿಸಿ ಗೌರವ ಸಲ್ಲಿಸಿದೆ. ಆದರೆ ಸದರಿ ವೃತ್ತವನ್ನು ಮೀನಾಕ್ಷಿ ಚೌಕ್‌ ಎಂದು ಕರೆಯುವ ಮೂಲಕ ಭಾರತ ಸ್ವಾತಂತ್ರ್ಯ ಸಂಗ್ರಾಮದ ಬಲಿದಾನ ವೀರರಿಗೆ ಅಪಚಾರ ಮಾಡಲಾಗುತ್ತಿದೆ ಎಂದು ದೂರಿದರು.

ಜೋಡು ಬಿಚ್ಚುಗತ್ತಿಯ ಬಹಾದ್ದೂರ್‌ ಬಸಲಿಂಗಪ್ಪ ಮತ್ತು ಅವರ ತಂದೆ ಕ್ರಾಂತಿಕಲಿ ವೀರಸಂಗಪ್ಪ ಅವರು ಜಂಬಗಿ ವಾಡೆದಿಂದ ಆಡಳಿತ ನಡೆಸುತ್ತಿದ್ದು, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮದ್ದು-ಗುಂಡು ತಯಾರಿಸಿ ದಕ್ಷಿಣ ಭಾರತದ ಸ್ವಾತಂತ್ರ್ಯ ಯೋಧರಿಗೆ ಸರಬರಾಜು ಮಾಡುತ್ತಿದ್ದರು. ಇದಕ್ಕಾಗಿಯೇ ಕೊಟ್ನಾಳದಲ್ಲಿ ಮೂರು ಸುತ್ತಿನ ಮಣ್ಣು ಕಲ್ಲಿನ ಕೋಟೆ ನಿರ್ಮಿಸಿಕೊಂಡಿದ್ದರು. ಬ್ರಿಟಿಷರ ದಾಳಿಯ ಮಧ್ಯೆಯೂ ಕೊಟ್ನಾಳ ಕೋಟೆ ಜೀವಂತವಾಗಿದ್ದು, ಇದೀಗ ಅವಸಾನದ ಅಂಚಿಗೆ ಬಂದಿದೆ. ಜಂಬಗಿಯಲ್ಲಿ ಕೋಟೆ ಸಂಪೂರ್ಣ ನಾಶವಾಗಿ ಕುರುಹುಗಳು ಇಲ್ಲದಂತಾಗಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೊಟ್ನಾಳದ ಕೋಟೆ ಮತ್ತು ಜಂಬಗಿ ವಾಡೆಗಳಿಗೆ ಸರ್ಕಾರದಿಂದ ಕಾಯಕಲ್ಪ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದರೂ ಹುತಾತ್ಮ ನಮ್ಮ ಕುಟುಂಬದ ಬಲಿದಾನ ವೀರರ ಸಮಾಧಿಗಳು ಎಲ್ಲಿವೆ ಎಂದೇ ತಿಳಿದಿಲ್ಲ. ಅವರನ್ನು ಗಲ್ಲಿಗೇರಿಸಿದ ದಾಖಲೆಗಳನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ನಮ್ಮ ದೇಶಮುಖ ವಂಶಸ್ಥರಿಗೆ ಹಸ್ತಾಂತರಿಸಿಲ್ಲ. ಕೂಡಲೇ ಸಮಾಧಿಗಳನ್ನು ಹುಡಿಕಿ, ದಾಖಲೆಗಳನ್ನು ವಂಶಸ್ಥರಿಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.

Advertisement

ದೇಶ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮದಲ್ಲಾದರೂ ನಗರದಲ್ಲಿರುವ ಹುತಾತ್ಮ ವೃತ್ತವನ್ನು ನವೀಕರಿಸಿ, ದೇಶಮುಖ ಕುಟುಂಬದ ಹುತಾತ್ಮ ಬಸಲಿಂಗಪ್ಪ ಮತ್ತು ವೀರಸಂಗಪ್ಪ ಇವರ ಅಶ್ವಾರೂಢ ಪುತ್ಥಳಿ ಸ್ಥಾಪಿಸಬೇಕು. ದೇಶಮುಖರ ಎಲ್ಲ ಕಟ್ಟಡಗಳ ಸಂರಕ್ಷಣೆಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ವಿಜಯಪುರ ಜಿಲ್ಲೆಯಲ್ಲಿ ತಂದೆ-ಮಗ ಇಬ್ಬರೂ ಗಲ್ಲಿಗೇರಿದ ಏಕೈಕ ಬಲಿದಾನ ಪ್ರಕರಣದ ಈ ಕ್ರಾಂತಿವೀರರ ಚರಿತ್ರೆಯ ಪುಸ್ತಕ ಹೊರ ತರಬೇಕು ಎಂದು ಆಗ್ರಹಿಸಿದರು.

ಕೊಟ್ನಾಳ-ಜಂಬಗಿ ದೇಶಮುಖ ಹುತಾತ್ಮರ ವಂಶಸ್ಥರಾದ ಬಸವರಾಜ ದೇಶಮುಖ, ಬಸವಂತ್ರಾಯ ದೇಶಮುಖ, ಸಿದ್ದಲಿಂಗಪ್ಪ ದೇಶಮುಖ, ಸಂಗರಾಜ್‌ ದೇಶಮುಖ ಸೇರಿದಂತೆ ಇತರರು ನಿಯೋಗದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next