ಕನ್ನಡದಲ್ಲಿ ಒಂದು ಹೊಸ ಟ್ರೆಂಡ್ ಶುರುವಾಗಿಬಿಟ್ಟಿದೆ. ಹಿಂದೊಮ್ಮೆ ಒಂದು ಚಿತ್ರದ ಹಾಡುಗಳು ಒಟ್ಟಿಗೆ ಒಂದೇ ವೇದಿಕೆಯಲ್ಲಿ, ಒಂದೇ ಸಮಯದಲ್ಲಿ ಬಿಡುಗಡೆಯಾಗುತ್ತಿದ್ದವು. ಈಗ ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡುವುದು ಹೊಸ ಟ್ರೆಂಡ್ ಆಗಿಬಿಟ್ಟಿದೆ. ಹೌದು, ಒಟ್ಟಿಗೇ ಅಷ್ಟೂ ಹಾಡುಗಳನ್ನು ಬಿಟ್ಟು ಒಂದೇ ಸಾರಿ ಪ್ರಚಾರ ತೆಗೆದುಕೊಳ್ಳುವ ಬದಲು, ಚಿತ್ರತಂಡದವರು ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡಿ, ಹಂತಹಂತವಾಗಿ ಪ್ರಚಾರ ಪಡೆಯುವುದಷ್ಟೇ ಅಲ್ಲ, ತಮ್ಮ ಚಿತ್ರದ ಹಾಡುಗಳನ್ನು ಪ್ರಚಾರ ಮಾಡುತ್ತಿದ್ದಾರೆ.
ಇದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ, ಸತೀಶ್ ನೀನಾಸಂ ಅಭಿನಯದ “ಅಯೋಗ್ಯ’ ತಂಡದವರು ಒಂದೊಂದೇ ಹಾಡನ್ನು ಬಿಡುಗಡೆ ಮಾಡುವುದರ ಜೊತೆಗೆ ಒಂದೊಂದು ಹಾಡನ್ನು ಒಬ್ಬೊಬ್ಬರು ಸ್ಟಾರ್‌ಗಳಿಂದ ಬಿಡುಗಡೆ ಮಾಡುತ್ತಿದ್ದಾರೆ. “ಅಯೋಗ್ಯ’ ಚಿತ್ರದ ನಾಲ್ಕು ಹಾಡುಗಳು ಇದುವರೆಗೂ ಬಿಡುಗಡೆಯಾಗಿದ್ದು ಅಂಬರೀಶ್, ಪುನೀತ್ ರಾಜಕುಮಾರ್, ಮುರಳಿ ಮತ್ತು ಧ್ರುವ ಸರ್ಜಾ ಅವರಿಂದ ಒಂದೊಂದು ಹಾಡನ್ನು ಬಿಡುಗಡೆ ಮಾಡಿಸಲಾಗಿದೆ. ಈ ಎಲ್ಲಾ ಹಾಡುಗಳು ಯೂಟ್ಯೂಬ್‌ನಲ್ಲಿ ಹಲವು ಲಕ್ಷ ಹಿಟ್ಸ್‌ಗಳನ್ನು ಸಂಪಾದಿಸಿದೆ.
ಇನ್ನು “ಕಿನಾರೆ’ ಚಿತ್ರದ ಒಂದೊಂದು ಹಾಡನ್ನೂ ಒಬ್ಬೊಬ್ಬ ಸ್ಟಾರ್‌ಗಳಿಂದ ಬಿಡುಗಡೆ ಮಾಡಿಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡು, “ಕಿನಾರೆ ಹಾಡುಗಳ ಹಬ್ಬ’ ಎಂಬ ಶೀರ್ಷಿಕೆಯಡಿ, ಧ್ರುವ ಸರ್ಜಾ, ಧನಂಜಯ್ ಸೇರಿದಂತೆ ಇತರೆ ಕಲಾವಿದರಿಂದ ಹಾಡುಗಳನ್ನು ಬಿಡುಗಡೆ ಮಾಡಿಸಲಾಗಿದೆ. ಬರೀ ಬೇರೆಬೇರೆ ನಟ-ನಟಿಯರು ಹಾಡುಗಳನ್ನು ಬಿಡುಗಡೆ ಮಾಡುವುದಷ್ಟೇ ಅಲ್ಲ, ಒಂದೊಂದು ಹಾಡನ್ನೂ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿ, ಅದು ಹಿಟ್ ಆದ ನಂತರ ಮತ್ತೂಮ್ಮೆ ಸಮಾರಂಭದಲ್ಲಿ ಬಿಡುಗಡೆ ಮಾಡಿಸುವ ಟ್ರೆಂಡ್ ಹೆಚ್ಚುತ್ತಿದೆ.
ರಿಷಭ್ ಶೆಟ್ಟಿ ನಿರ್ದೇಶನದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು – ಕೊಡುಗೆ ರಾಮಣ್ಣ ರೈ’ ಚಿತ್ರದ ಹಾಡುಗಳು ಮೊದಲು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಲಕ್ಷಲಕ್ಷ ಹಿಟ್‌ಗಳನ್ನು ಕಂಡು, ಜನಪ್ರಿಯವಾದ ಮೇಲೆ ಇತ್ತೀಚೆಗೆ ಸುದೀಪ್ ಅವರಿಂದ ಫಾರ್ಮಲ್ ಆಗಿ ಹಾಡುಗಳನ್ನು ಬಿಡುಗಡೆ ಮಾಡಿಸಲಾಗಿದೆ. ಮೊದಲಿಗೆ “ದಡ್ಡ ಪ್ರವೀಣ …’ ಹಾಡು ಬಿಡುಗಡೆಯಾಗಿ ದೊಡ್ಡ ಹವಾ ಸೃಷ್ಟಿಯಾಯಿತು.
ಆ ನಂತರ “ಹೇ ಶಾರದೆ …’ ಮತ್ತು “ಬಲೂನ್ …’ ಹಾಡುಗಳು ಬಿಡುಗಡೆಯಾಗಿ, ಚಿತ್ರದ ಬಗ್ಗೆ ಜನರಲ್ಲಿ ಒಂದು ಕ್ರೇಜ್ ಹುಟ್ಟಿದ ನಂತರ ಕಳೆದ ವಾರ ಹಾಡುಗಳನ್ನು ವೇದಿಕೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಇನ್ನು ಶಿವರಾಜಕುಮಾರ್ ಮತ್ತು ಸುದೀಪ್ ಅಭಿನಯದ “ದಿ ವಿಲನ್’ ಚಿತ್ರದ ಹಾಡುಗಳನ್ನು ಸಹ ಒಂದೊಂದೇ ಬಿಡುಗಡೆ ಮಾಡಲಾಗುತ್ತಿದೆ. ಕೆಲವು ದಿನಗಳ ಹಿಂದೆ “ಐ ಆ್ಯಮ್ ವಿಲನ್ …’ ಎಂಬ ಹಾಡನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಯಿತು.
ಕೆಲವು ದಿನಗಳ ನಂತರ “ಟಿಕ್ ಟಿಕ್ ಟಿಕ್ …’ ಎಂಬ ಇನ್ನೊಂದು ಹಾಡು ಬಿಡುಗಡೆಯಾಗಿ ಹವಾ ಸೃಷ್ಟಿಸಿತು. ಶನಿವಾರ “ಲವ್ ಆಯೆ¤à ನಿನ್ ಮ್ಯಾಲೆ …’ ಎಂಬ ಮೂರನೆಯ ಹಾಡುಗಳನ್ನು ಯೂಟ್ಯೂಬ್ ಮೂಲಕ ಬಿಡುಗಡೆ ಮಾಡಿದ್ದಾರೆ ಪ್ರೇಮ್. ಆ ನಂತರ ಎಲ್ಲಾ ಹಾಡುಗಳನ್ನು ದುಬೈ ಅಥವಾ ಬೆಂಗಳೂರಿನಲ್ಲಿ ದೊಡ್ಡ ಸಮಾರಂಭ ಮಾಡಿ, ಒಟ್ಟಿಗೇ ಬಿಡುಗಡೆ ಮಾಡುವುದು ಪ್ರೇಮ್ ಯೋಚನೆ.
ಬರೀ ಹಾಡುಗಳನ್ನಷ್ಟೇ ಅಲ್ಲ, ಚಿತ್ರದ ಟೀಸರ್ ಮತ್ತು ಟ್ರೇಲರ್‌ಗಳನ್ನು ಸಹ ಯೂಟ್ಯೂಬ್ ಮೂಲಕ ಬಿಡುಗಡೆ ಮಾಡಿ, ಅದನ್ನು ಲಕ್ಷಲಕ್ಷ ಜನ ನೋಡುವಂತೆ ಮಾಡುತ್ತಿರುವುದು ಕನ್ನಡ ಚಿತ್ರರಂಗದ ಹೊಸ ಟ್ರೆಂಡು ಅಂದರೆ ತಪ್ಪಿಲ್ಲ. ಇತ್ತೀಚೆಗೆ ಅಷ್ಟೇ ಅಲ್ಲ, ಪ್ರಚಾರದ ಹೊಸ ವೇದಿಕೆ ಕೂಡಾ. ಸದ್ಯಕ್ಕಂತೂ ಎಲ್ಲರೂ ಈ ಟ್ರೆಂಡ್‌ಗೆ ಮಾರುಹೋಗಿ, ಈ ತಂತ್ರವನ್ನೇ ಎಲ್ಲಾ ಚಿತ್ರತಂಡದವರೂ ಬಳಸಿಕೊಳ್ಳುತ್ತಿರುವುದು ಸುಳ್ಳಲ್ಲ.