Advertisement

ಕೋವಿಡ್ ತುರ್ತು ಸ್ಥಿತಿಯಿದ್ದರೂ ಒಲಿಂಪಿಕ್ಸ್‌ ನಿಲ್ಲದು : ಸ್ಪರ್ಧಿಗಳ ಆರೋಗ್ಯಕ್ಕೆ ಆದ್ಯತೆ

11:47 PM May 22, 2021 | Team Udayavani |

ಟೋಕಿಯೊ: ಕೊರೊನಾ ಪಿಡುಗಿನಿಂದ ಟೋಕಿಯೊದಲ್ಲಿ ತುರ್ತು ಸ್ಥಿತಿ ಜಾರಿಯಲ್ಲಿದ್ದರೂ ಒಲಿಂಪಿಕ್ಸ್‌ ಪಂದ್ಯಾವಳಿ ನಡೆದೇ ನಡೆಯುತ್ತದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ಭರವಸೆ ನೀಡಿದೆ. ಕೋವಿಡ್‌ ಕಾರಣದಿಂದ ಈ ಬಾರಿಯೂ ಒಲಿಂಪಿಕ್ಸ್‌ ಅಸಾಧ್ಯ ಹಾಗೂ ಇದಕ್ಕೆ ಜಪಾನಿನಲ್ಲೇ ವಿರೋಧವಿದೆ ಎಂಬ ವರದಿಗಳು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದೆ.

Advertisement

ಮೂರು ದಿನಗಳ ವರ್ಚುವಲ್‌ ಸಭೆಯ ಬಳಿಕ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯ ಉಪಾಧ್ಯಕ್ಷ ಜಾನ್‌ ಕೋಟ್ಸ್‌ ಸುದ್ದಿಗೋಷ್ಠಿಯಲ್ಲಿ ಮಾತಾಡಿದರು. “ಜಪಾನ್‌ನಲ್ಲಿ ಪ್ರತಿನಿತ್ಯ ಏರುತ್ತಿರುವ ಕೊರೊನಾ ಕೇಸ್‌ಗಳಿಂದ ಒಲಿಂಪಿಕ್ಸ್‌ ರದ್ದುಗೊಳಿಸುವಂತೆ ಕೆಲವು ಸ್ಥಳೀಯ ಸಂಘಟನೆಗಳು ಒತ್ತಾಯಿಸಿವೆ. ಜತೆಗೆ ಶೇ. 50-60ರಷ್ಟು ಜನಾಭಿಪ್ರಾಯವೂ ಕೂಟಕ್ಕೆ ವಿರುದ್ಧವಾಗಿದೆ. ಆದರೆ ಒಲಿಂಪಿಕ್ಸ್‌ ಆರಂಭಗೊಳ್ಳುವ ವೇಳೆ ಕೊರೊನಾ ತುರ್ತುಸ್ಥಿತಿ ಅಥವಾ ಬೇರೇನೇ ಪರಿಸ್ಥಿತಿ ಇದ್ದರೂ ನಾವು ನಮ್ಮ ಕಾರ್ಯಕ್ಕೆ ಸನ್ನದ್ಧರಾಗಿಯೇ ಇದ್ದೇವೆ. ಅದರಂತೆ ಒಂದು ಬಾರಿ ಮುಂದೂಡಲ್ಪಟ್ಟ ಒಲಿಂಪಿಕ್ಸ್‌ ಕೂಟವನ್ನು ಈ ಬಾರಿ ನಡೆಸುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಜಾನ್‌ ಕೋಟ್ಸ್‌ ಭರವಸೆ ನೀಡಿದ್ದಾರೆ.

“ಸ್ಪರ್ಧಿಗಳ ಆರೋಗ್ಯ ಹಾಗೂ ಸುರಕ್ಷತೆಯನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿರುತ್ತದೆ. ಜತೆಗೆ ಜಪಾನೀ ಪ್ರಜೆಗಳ ಸುರಕ್ಷತೆಯೂ ನಮ್ಮ ಜವಾಬ್ದಾರಿಯಾಗಿದೆ’ ಎಂದು ಕೋಟ್ಸ್‌ ಹೇಳಿದ್ದಾರೆ.

ಡಬ್ಲ್ಯುಎಚ್‌ಒ ಸಮ್ಮತಿ
ಈಗಾಗಲೇ ಒಲಿಂಪಿಕ್ಸ್‌ ಸಂಘಟಿಸುವ ಕುರಿತು ಸಮಿತಿಯು ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್‌ಒ) ಸಂಪೂರ್ಣ ಮಾಹಿತಿ ನೀಡಿದೆ. ಅವರು ಕೂಡ ಈ ಸಲಹೆಯನ್ನು ತೃಪ್ತಿದಾಯಕ ಎಂದಿದ್ದಾರೆ. ಆದ್ದರಿಂದ ನಾವು ಸುರಕ್ಷಿತವಾದ ಮತ್ತು ಆರೋಗ್ಯಕರ ಕೂಟವನ್ನು ಏರ್ಪಡಿಸಲು ಬದ್ಧರಾಗಿದ್ದೇವೆ ಎಂದು ಕೋಟ್ಸ್‌ ತಿಳಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ ಖಚಿತ: ಥಾಮಸ್‌ ಬಾಕ್‌ ಭರವಸೆ
ಜುಲೈ 23ರಿಂದ ಆರಂಭವಾಗಲಿರುವ ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಜಪಾನಿನ ಜನತೆ ವಿರೋಧ ವ್ಯಕ್ತಪಡಿಸಿದರೂ ಪೂರ್ವ ನಿಗದಿತ ವೇಳಾಪಟ್ಟಿಯಂತೆ ಕೂಟ ನಡೆಯುವುದು ಖಚಿತ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯ ಅಧ್ಯಕ್ಷ ಥಾಮಸ್‌ ಬಾಕ್‌ ಹೇಳಿದ್ದಾರೆ.

Advertisement

“ಒಲಿಂಪಿಕ್ಸ್‌ ಆರಂಭಕ್ಕೆ ಇನ್ನೂ 9 ವಾರ ಬಾಕಿ ಇದೆ. ಈ ಮಧ್ಯೆ ಜಪಾನ್‌ ನಾಗರಿಕರು ಕೂಟವನ್ನು ರದ್ದುಗೊಳಿಸುವಂತೆ ಒತ್ತಾಯಿಸುತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಾವು ಕೂಟವನ್ನು ಮುಂದೂಡಲು ಅಥವಾ ರದ್ದುಗೊಳಿಸುವ ಯೋಜನೆಯನ್ನು ರೂಪಿಸಿಲ್ಲ, ಇಂಥ ಆಲೋಚನೆ ಯನ್ನೂ ಮಾಡಿಲ್ಲ. ವೇಳಾಪಟ್ಟಿಯಂತೆ ಪಂದ್ಯಾವಳಿ ನಡೆಯಲಿದೆ’ ಎಂದು ಬಾಕ್‌ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next