Advertisement

ಪ್ರದರ್ಶನದಲ್ಲಿ ಕಣ್ಮನ ಸೆಳೆದ ಹಳೆಯ ಸ್ಕೂಟರ್‌ಗಳು

11:19 PM Sep 22, 2019 | Team Udayavani |

ಮಹಾನಗರ: ನಗರದ ಕುದ್ರೋಳಿ ಅಳಕೆಯ ಸಿಟಿ ಅರೇನಾ ಫುಟ್‌ಬಾಲ್‌ ಮೈದಾನದ ಸಮೀಪದ ವಾದಿರಾಜ ನಗರದಲ್ಲಿ ರವಿವಾರ ನಡೆದ ಸ್ಕೂಟರ್‌ ಡೇ ಕಾರ್ಯಕ್ರಮವು ನಮ್ಮ ಹಳೆಯ ಸ್ಕೂಟರ್‌ಗಳ ಪ್ರದರ್ಶನಕ್ಕೆ ವೇದಿಕೆಯಾಯಿತು.

Advertisement

ದೇಶದಲ್ಲಿಯೇ ಮೊದಲ ಬಾರಿಗೆ ನಡೆದ ದಕ್ಷಿಣ ಭಾರತ ಮಟ್ಟದ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಕುಂದಾಪುರದಿಂದ ಕೇರಳದ ಕೊಟ್ಟಾಯಂ ವರೆಗಿನ ಪ್ರದೇಶದ 70 ಮಂದಿ ತಮ್ಮ ಹಳೆಯ ಕ್ಲಾಸಿಕ್‌ ಮತ್ತು ರೆಟ್ರೋ 2- ಸ್ಟ್ರೋಕ್‌ ಸ್ಕೂಟರ್‌ಗಳನ್ನು ಪ್ರದರ್ಶಿಸಿದರು.

70-80ರ ದಶಕಗಳಲ್ಲಿದ್ದ ಲ್ಯಾಂಬ್ರೆಟ್ಟಾ, ವೆಸ್ಪಾ, ವಿಜಯ್‌ಸೂಪರ್‌ ಮತ್ತಿತರ ಬ್ರಾಂಡ್‌ಗಳ ಸ್ಕೂಟರ್‌ಗಳನ್ನು ಪ್ರದರ್ಶಿಸಲಾಗಿದ್ದು, ಆಧುನಿಕ ತಲೆ ಮಾರಿನ ಯುವಜನರೂ ಸಹಿತ ಹಲವಾರು ಮಂದಿ ಸಾರ್ವಜನಿಕರು ವೀಕ್ಷಿಸಿದರು. ಸ್ಕೂಟರ್‌ಗಳ ಮಾಲಕರು 30- 40 ವರ್ಷಗಳಷ್ಟು ಹಳೆಯ ಸ್ಕೂಟರ್‌ಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಮಂಗಳೂರು ಕ್ಲಾಸಿಕ್‌ ಸ್ಕೂಟರ್‌ ಕ್ಲಬ್‌ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಕರ್ನಾಟಕ ಮತ್ತು ಕೇರಳದ ಸ್ಕೂಟರ್‌ ಮಾಲಕರು ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ, ಗೋವಾ ಮತ್ತಿತರ ರಾಜ್ಯಗಳನ್ನು ಸ್ಕೂಟರ್‌ ಮಾಲಕರನ್ನು ಸೇರಿಸಿಕೊಂಡು ದೊಡ್ಡ ಮಟ್ಟದ ಪ್ರದರ್ಶನವನ್ನು ಏರ್ಪಡಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.ಹಳೆಯ ಸ್ಕೂಟರ್‌ಗಳು ನಮ್ಮ ಪರಂಪರೆಯ ಸಂಕೇತ. ಅದನ್ನು ಇಂದಿನ ತಲೆಮಾರಿಗೆ ಪರಿಚಯಿಸುವುದು ಇದರ ಉದ್ದೇಶ ಎಂದವರು ವಿವರಿಸಿದ್ದಾರೆ.

ವಿವಿಧ ಸ್ಪರ್ಧೆಗಳು
ಪ್ರದರ್ಶನದಲ್ಲಿ ಭಾಗವಹಿಸಿದ ಹಳೆಯ ಸ್ಕೂಟರ್‌ಗಳ ಮಾಲಕರಿಗಾಗಿ ನಿಧಾನ ಸ್ಕೂಟರ್‌ ಸ್ಪರ್ಧೆ, ಸ್ಕೂಟರನ್ನು ವೇಗವಾಗಿ ದೂಡಿಕೊಂಡು ಹೋಗುವುದು, ಬಾಯಿಯಲ್ಲಿ ಚಮಚ ಲಿಂಬೆ ಹುಳಿ ಇರಿಸಿ ಸ್ಕೂಟರ್‌ ಚಲಾಯಿಸುವುದು, ಆತ್ಯಂತ ಹಳೆಯ ಸ್ಕೂಟರ್‌, ಅತ್ಯುತ್ತಮವಾಗಿ ನಿರ್ವಹಣೆ ಮಾಡಿಕೊಂಡು ಬಂದಿರುವ ಸ್ಕೂಟರ್‌ ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಸೆ. 16ರಿಂದ 22ರ ವರೆಗೆ “ಮೊಬಿಲಿಟಿ ಸಪ್ತಾಹ’ವನ್ನು ಆಚರಿಸುತ್ತಿದ್ದು, ಇದರ ಭಾಗವಾಗಿ ಕೊನೆಯ ದಿನ ಸ್ಕೂಟರ್‌ ದಿನವನ್ನು ಆಚರಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next