Advertisement

ಪುರಸಭೆ ಹಳೆ ಕಟ್ಟಡ ಹಾಳು; ಕೇಳ್ಳೋರಿಲ್ವೇ ಯಾರೂ?

05:49 PM Oct 02, 2022 | Team Udayavani |

ತೇರದಾಳ: ಪಟ್ಟಣದ ಪುರಸಭೆಯ ನೂತನ ಕಟ್ಟಡ ಉದ್ಘಾಟನೆ ನಂತರ ಬ್ರಿಟಿಷ್‌ ಕಾಲದ ಸುಸಜ್ಜಿತವಾಗಿದ್ದ ಹಳೆಯ ಕಟ್ಟಡವನ್ನು ಹಾಳು ಕೆಡವಿರುವುದು ಮಾತ್ರ ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ಎಂಟು ತಿಂಗಳ ಹಿಂದೆ 2022ರ ಜ.14ರಂದು ಪುರಸಭೆಯ ನೂತನ ಕಟ್ಟಡ ಉದ್ಘಾಟನೆಗೊಂಡಿದ್ದರಿಂದ ಹಳೆ ಕಟ್ಟಡವನ್ನು ಹಾಳುಗೆಡವಲಾಗಿದೆ. ಈ ಕಟ್ಟಡ ಈಗ ಪಾರ್ಕಿಂಗ್‌ ಜಾಗದ ಜತೆಗೆ ಹರಟೆ ಕಟ್ಟೆಯಾಗಿದೆ.

ಉಪವಿಭಾಗಾಧಿಕಾರಿ ಡಾ| ಸಿದ್ದು ಹುಲ್ಲೊಳಿ ಅವರು ಪುರಸಭೆ ಹೊಸ ಕಟ್ಟಡ ಉದ್ಘಾಟನೆ ವೇಳೆ ಪ್ರಾಸ್ತಾವಿಕ ಮಾತನಾಡಿ, ಹಳೇ ಕಟ್ಟಡವನ್ನು ಕಂದಾಯ ಇಲಾಖೆಗೆ ನೀಡಿ, ಇಲ್ಲವೇ ನಾಡ ಕಚೇರಿಯಲ್ಲಿನ ಉಪನೋಂದಣಿ ಕಚೇರಿಗೆ ಸ್ಥಳಾಂತರಿಸಿ ಎಂದು ಹೇಳಿದ್ದರು. ಪುರಸಭೆ ಸದಸ್ಯರು, ಮುಖಂಡರು ಉಪನೋಂದಣಿ ಕಚೇರಿ ಸ್ಥಳಾಂತರಿಸುವ ಬಗ್ಗೆ ನಿರ್ಧರಿಸಿದ ಮೇಲೂ ಸ್ಥಳಾಂತರಗೊಳ್ಳದ ಕಾರಣ ಎಸಿ ಅವರು ಪುರಸಭೆ ಅಧಿಕಾರಿಗಳಿಗೆ, ಉಪನೋಂದಣಿ ಅಧಿಕಾರಿಗಳಿಗೆ ಚಾಟಿ ಬೀಸಿ ಕೂಡಲೇ ಉಪನೋಂದಣಿ ಕಚೇರಿ ಸ್ಥಳಾಂತರಿಸುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಖಡಕ್‌ ಸೂಚನೆ ನೀಡಿದ್ದರು. ಅವರು ಹೇಳಿ ನಾಲ್ಕಾರು ತಿಂಗಳು ಗತಿಸಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಗಪ್‌ ಚುಪ್‌ ಕುಳಿತಿದ್ದಾರೆ. ಆ ಮೂಲಕ ಸುಂದರ, ಐತಿಹಾಸಿಕ ಕಟ್ಟಡ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆಂದು ಜನರು ಆರೋಪಿಸಿದ್ದಾರೆ.

ಹಳೇ ಕಟ್ಟಡದ ಹಿಂಬದಿ ಅಭಿಯಂತರರಿದ್ದ ಕೊಠಡಿಯನ್ನು ಮಾತ್ರ ಗೃಹ ರಕ್ಷಕ ಕಚೇರಿಗೆ ನೀಡಲಾಗಿದೆ. ಇನ್ನುಳಿದ ಎಲ್ಲ ಕೊಠಡಿಗಳು ಸಂಪೂìಣ ಖಾಲಿ ಬಿದ್ದಿದ್ದು, ದಿನೇ ದಿನೆ ಕಟ್ಟಡ, ಆವರಣದ ಗಲೀಜು ಪ್ರಮಾಣ ಹೆಚ್ಚುತ್ತಲೇ ಇದೆ.

ಹಲವು ಕಟ್ಟಡಗಳು ಹಾಳು:

Advertisement

ಪಟ್ಟಣದಲ್ಲಿ ಪುರಸಭೆ ಹಳೆಯ ಕಟ್ಟಡವಷ್ಟೇ ಹಾಳು ಬಿದ್ದಿಲ್ಲ, ಸರಕಾರಿ ಆಸ್ಪತ್ರೆ ಹಳೇ ಕಟ್ಟಡ, ಅಲ್ಲಿನ ವಸತಿ ಗೃಹಗಳು, ಸರಕಾರಿ ಮರಾಠಿ ಶಾಲೆ, ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರ ಅಧಿಕಾರಿ ವಸತಿ ಗೃಹ, ಗ್ರಾಮ ಲೆಕ್ಕಾಧಿಕಾರಿಗಳ ವಸತಿ ಗೃಹ, ಹೆಸ್ಕಾಂ ಸಿಬ್ಬಂದಿಯ ವಸತಿ ಗೃಹಗಳು, ಲೋಕೋಪಯೋಗಿ ಇಲಾಖೆ ಕೊಠಡಿ ಹೀಗೆ ಹಲವು ಸರಕಾರಿ ಕಟ್ಟಡಗಳು ಹಾಳು ಬಿದ್ದಿವೆ.

ಹೇಳ್ಳೋರಿಲ್ಲ, ಕೇಳ್ಳೋರಿಲ್ಲ: ಐತಿಹಾಸಿಕ ತೇರದಾಳ ಪಟ್ಟಣ ಮತಕ್ಷೇತ್ರದಲ್ಲಿ ಇಂತಹ ಸರಕಾರಿ ಕಟ್ಟಡಗಳು ಹಾಳು ಬಿದ್ದಿರುವುದು ಸಾಮಾನ್ಯವಾಗಿದೆ. ಪಟ್ಟಣದ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ಇದ್ದು,ಇಲ್ಲಿ ಯಾರೂ ಹೇಳ್ಳೋರಿಲ್ಲ ಕೇಳ್ಳೋರಿಲ್ಲ ಎಂಬಂತಾಗಿದೆ ಎಂದು ಖೇದ ವ್ಯಕ್ತಪಡಿಸುತ್ತಾರೆ ಸಾರ್ವಜನಿಕರು.

ತೇರದಾಳದಲ್ಲಿ ಬ್ರಿಟಿಷರ್‌ ಕಾಲದ ಇತಿಹಾಸ ಸಾರುವ ಹಲವು ಕಟ್ಟಡಗಳಿವೆ. ಅದರಲ್ಲಿ ಪುರಸಭೆ ಕಟ್ಟಡ ಕೂಡ ಒಂದಾಗಿದೆ. ಹೊಸ ಕಟ್ಟಡ ನಿರ್ಮಾಣಗೊಂಡ ಬಳಿಕ ಹಳೇ ಕಟ್ಟಡ ಹಾಳು ಕೆಡವಬಾರದು. ಈಗಾಗಲೇ ಪಟ್ಟಣದಲ್ಲಿ ಸಾಕಷ್ಟು ಕಟ್ಟಡಗಳು ಹಾಳು ಬಿದ್ದಿವೆ. ಇದು ಹೀಗೆ ಮುಂದುವರಿದರೆ ಈ ಕಟ್ಟಡ ಬೇನಾಮಿ ಆಸ್ತಿಯಾಗಿ ಕಂಡವರ ಪಾಲಾಗಬಹುದು. ಈ ಕುರಿತು ಸಂಬಂಧಿ ಸಿದ ಅ ಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಕಾರಣ ಹಾಳು ಬಿದ್ದಿರುವ ಕಟ್ಟಡಗಳನ್ನು ದುರಸ್ತಿ ಮಾಡಿಸಲು ಶಾಸಕರು ಕ್ರಮ ಕೈಗೊಳ್ಳಬೇಕಾಗಿದೆ. –ಪ್ರವೀಣಧಣಿ ನಾಡಗೌಡ, ಪುರಸಭೆ ಮಾಜಿ ಅಧ್ಯಕ್ಷ, ತೇರದಾಳ

ಮಾನ್ಯ ಉಪವಿಭಾಗಾಧಿಕಾರಿಗಳ ಸೂಚನೆ ಮೇರೆಗೆ ನಮ್ಮ ಕಾರ್ಯಾಲಯ ಸ್ಥಳಾಂತರಕ್ಕೆ ಅನುಮತಿ ಕೋರಿ ನಾವು ಮಾನ್ಯ ಜಿಲ್ಲಾ ನೋಂದಣಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅವರು ಸಹ ಬೆಂಗಳೂರಿನ ನೋಂದಣಿ ಮಹಾಪರಿವೀಕ್ಷಕರಿಗೆ ವಿನಂತಿ ಪತ್ರ ಕಳುಹಿಸಿದ್ದಾರೆ. ಸದ್ಯದರಲ್ಲೇ ಮೇಲಧಿಕಾರಿಗಳಿಂದ ಸ್ಥಳಾಂತರ ಆದೇಶ ಪತ್ರ ಬರಬಹುದು. ಬಂದ ಕೂಡಲೇ ನಾವು ಪುರಸಭೆಯ ಹಳೆ ಕಟ್ಟಡಕ್ಕೆ ನಮ್ಮ ಕಚೇರಿ ಸ್ಥಳಾಂತರಿತ್ತೇವೆ.  -ಎಸ್‌.ಪಿ. ಮುತ್ತಪ್ಪಗೋಳ, ಉಪನೋಂದಣಾಧಿಕಾರಿಗಳು, ತೇರದಾಳ

Advertisement

Udayavani is now on Telegram. Click here to join our channel and stay updated with the latest news.

Next