Advertisement

ಹಡಗಲ್ಲಿ ಕಂಡ ಹಳೆಯ ರೂಪದರ್ಶಿಯ ಕತೆ

07:30 PM Oct 12, 2019 | mahesh |

ಸುಮಾರು ಇನ್ನೂರೈವತ್ತು ನಾಟಿಕಲ್‌ ಮೈಲಿ ದೂರ ಕಡಲಲ್ಲಿ ಚಲಿಸಿ ತಲುಪಬಹುದಾದ ಮಾಮೂಲಿ ಹಡಗನ್ನು ಬಿಟ್ಟು ನಾನೂರೈವತ್ತು ಮೈಲು ಕಡಲಲ್ಲಿ ಸುತ್ತಿ ಬಳಸಿ ಎರಡು ದ್ವೀಪಗಳನ್ನು ಹಾದು ನನ್ನ ದ್ವೀಪವನ್ನು ತಲುಪುವ ಪ್ರವಾಸಿಗರ ಹಡಗೊಂದರಲ್ಲಿ ಹತ್ತಿ ಕುಳಿತಿದ್ದೆ. ಎರಡೂವರೆ ಹಗಲು ಮತ್ತು ಬರೋಬ್ಬರಿ ಮೂರು ಇರುಳು ಕಡಲೊಳಗೆ ಕಳೆಯುವ ಒಂದು ಅತ್ಯಪೂರ್ವ ಸೋಮಾರಿ ಅವಕಾಶ. ಮಾತಿಲ್ಲದೆಯೇ ಕತೆಯಿಲ್ಲದೆಯೇ ಬಕಾಸುರ ರಾಕ್ಷಸನ ಹೊಟ್ಟೆಯ ಹಾಗಿರುವ ಈ ಬೃಹತ್‌ ಹಡಗಿನ ಒಳಗಡೆ ಅಪರಿಚಿತ ಪ್ರವಾಸಿಗರ ನಡುವೆ ದಿಕ್ಕುತಪ್ಪಿದವನಂತೆ ಅಲೆಯುವ ಸುಖ. ಪ್ರವಾಸಿಗರು ಕೇಳಿದರೆ ನಾನು ಪ್ರವಾಸಿಯಲ್ಲ. ದ್ವೀಪವಾಸಿಗಳು ಕೇಳಿದರೆ ನಾನು ದ್ವೀಪವಾಸಿಯೂ ಅಲ್ಲ. ಒಂದು ವೇಳೆ ಆ ಸಾಕ್ಷಾತ್‌ ಶ್ರೀಹರಿಯೇ ಎದುರಿಗೆ ಬಂದು ನೀನು ಯಾರೆಂದು ಕೇಳಿದರೆ, “ನಿನ್ನ ಅರಿವಿಗೆ ಬಾರದೇ ಇರುವುದು ಈ ವ್ಯೋಮದಲ್ಲಿ ಯಾವುದಿದೆ ಪ್ರಭುವೇ’ ಎಂದು ಆತನಿಂದಲೂ ಬಚಾವಾಗಬಹುದು. ಮೊದಲ ಬಾರಿಗೆ ಬೃಹತ್‌ ಶಿಶುವಿಹಾರಕ್ಕೆ ದಾಖಲಾದ ಬಾಲಕನ ಹಾಗೆ ಹಡಗಿನ ಇಂಚಿಂಚೂ ಕಣ್ಣೊಳಗೆ ತುಂಬಿಕೊಳ್ಳುತ್ತ ಎಲ್ಲಿಯೂ ನಿಲ್ಲದೆಯೇ ನಡೆಯುತ್ತಿದ್ದೆ.

Advertisement

ಒಂದು ದೊಡ್ಡ ಚಕ್ರವ್ಯೂಹದಂತಹ ಹಡಗಿನೊಳಗಿನ ಒಳದಾರಿಗಳು, ಏಣಿಗಳು, ಮೆಟ್ಟಲುಗಳು, ಉಪಾಹಾರ ಗೃಹಗಳು, ಪ್ರಾರ್ಥನೆಯ ಕೊಠಡಿಗಳು, ಉನ್ನತ ದರ್ಜೆಯ ಪ್ರವಾಸಿಗರ ಕ್ಯಾಬಿನ್ನುಗಳು, ತಳದಲ್ಲಿರುವ ಸಾಮಾನ್ಯ ಪ್ರಯಾಣಿಕರ ರೇಲ್ವೆ ಬೋಗಿಗಳಂತಿರುವ ಕಿಕ್ಕಿರಿದ ಡೆಕ್ಕುಗಳು ಮತ್ತು ಅವೆಲ್ಲಕ್ಕೂ ಮಿಗಿಲಾಗಿ ಹಡಗಿನ ಎರಡೂ ಪಾರ್ಶ್ವಗಳಲ್ಲಿ ನಡೆಯಲು, ನಿಲ್ಲಲು, ಕೂರಲು ಇರುವ ಅಗಾಧ ಅವಕಾಶ. ನೀಲ ಕಡಲಿನಲ್ಲಿ ಸ್ವಪ್ನ ನೌಕೆಯಂತೆ ಎಳ್ಳಷ್ಟೂ ಅಲುಗಾಡದೆ ಮಂದಗಮನೆಯಂತೆ ಚಲಿಸುವ ಹಡಗು. ಕಣ್ಣೆದುರೇ ಕಡಲಲ್ಲಿ ರವಿ ಉದಯಿಸಿ ಬೆಳಕಾಗುವುದು, ಸೂರ್ಯ ಮೇಲೇರುತ್ತ ಕಡಲು ಬೆಳಗಲು ತೊಡಗುವುದು. ಹಗಲು ನಿಚ್ಚಳವಾಗುತ್ತ ಸೂರ್ಯನ ಉರಿ ಅರಿವಾಗದಂತೆ ಬೀಸುವ ಕಡಲ ಮೇಲಿನ ತಣ್ಣನೆಯ ಗಾಳಿ. ಹಡಗನ್ನು ಹಿಂಬಾಲಿಸುತ್ತ ಬೆಳ್ಳಿಯ ಆಭರಣಗಳಂತೆ ಆಗಾಗ ಮೇಲಕ್ಕೆ ಚಿಮ್ಮಿ ಮರೆಯಾಗುವ ಅಪರಿಚಿತ ಮೀನುಗಳು. ಅಲ್ಲಲ್ಲಿ ಅನ್ಯಮನಸ್ಕರಾಗಿ ಕುಳಿತು ಕಳೆದುಕೊಂಡದ್ದೇನನ್ನೋ ಕಡಲಲ್ಲಿ ಹುಡುಕುತ್ತಿರುವಂತೆ ನೀಲ ಗಗನವನ್ನು ನಿರುಕಿಸುತ್ತಿರುವ ನನ್ನಂತಹುದೇ ಕೆಲವು ಮನುಷ್ಯರು. ಸಂಜೆ ಯಾಗುತ್ತಿದ್ದಂತೆ ಸೂರ್ಯ ಪಡುವಣದಲ್ಲಿ ಮುಳುಗಿ ಆನಂತರ ರಕ್ತ ರಾಕ್ಷಸಿಯರಂತೆ ನಾನಾ ಬಣ್ಣಗಳಲ್ಲಿ ತಮ್ಮ ಬಾಹುಗಳನ್ನು ಬೀಸಿ ಹಡಗನ್ನೂ ನಮ್ಮನ್ನೂ ಹಿಡಿದಿಡಲು ಚಾಚಿ ಬರುತ್ತಿರುವ ಮೇಘರಾಶಿ. ಆಮೇಲೆ ನಿಧಾನಕ್ಕೆ ಕಡಲಲ್ಲಿ ಕತ್ತಲಾಗುವುದು. ಅಷ್ಟು ಹೊತ್ತಿಗಾಗಲೇ ನವಮಿಯ ಚಂದ್ರನೂ, ಅದರ ಪಕ್ಕದಲ್ಲಿ ಒಂದು ಬೆಳ್ಳಿ ನಕ್ಷತ್ರವೂ ಆಕಾಶದಲ್ಲಿ ಹೊಳೆಯಲು ತೊಡಗುವುದು. ಮಡುಗಟ್ಟಿದ ಆ ಏಕಾಂತ ರಾತ್ರಿಯಲ್ಲಿ, ಅಲೆಗಳನ್ನು ಸೀಳಿ ಚಲಿಸುತ್ತಿರುವ ಹಡಗಿನ ಸಣ್ಣಗಿನ ಸದ್ದಲ್ಲಿ ಆ ಚಂದ್ರನೂ ನಕ್ಷತ್ರವೂ ಮೋಡಗಳ ನಡುವೆ ಇನ್ನಷ್ಟು ಹೊಳೆಯುತ್ತ ಯಾಕೋ ಮನುಷ್ಯ ಇನ್ನಷ್ಟು ಒಂಟಿ ಅನಿಸುವುದು.

ಅಷ್ಟು ಹೊತ್ತಿಗೆ ಖಾಲಿ ಟೀಯನ್ನೂ ಬಿಸ್ಕತ್ತುಗಳನ್ನೂ ಸಿಗರೇಟನ್ನೂ ಮುಗಿಸಿ ಖಾಲಿಯಾಗಿ ಕೂತಿದ್ದೆ. ಬದುಕಿನಲ್ಲಿ ಮಾಡಲು ಇನ್ನೇನೂ ಉಳಿದಿಲ್ಲ ಅಂತ ಅನ್ನಿಸುವ ಸಮಯವದು. ಪಕ್ಕದ ಬೆಂಚಿನಲ್ಲಿ ಕುಳಿತಿದ್ದ ಪ್ರವಾಸೀ ಸ್ತ್ರೀಯೊಬ್ಬಳು, “ಇಲ್ಲಿ ನೀವು ಸಿಗರೇಟು ಸೇದಬಹುದೇ?’ ಎಂದು ಇಂಗ್ಲಿಷಿನಲ್ಲಿ ಕೇಳಿದಳು. “ಇದು ಸಿಗರೇಟು ಸೇದುವವರಿಗೆ ಮೀಸಲಿಟ್ಟಿರುವ ಜಾಗ. “ಸೇದಬಹುದು’ ಅಂದೆ. “ನಾನು ನಿಮ್ಮನ್ನು ಗಮನಿಸುತ್ತಲೇ ಇರುವೆನು. ಹಡಗೆಲ್ಲ ಸುತ್ತಿ ಬಂದು ಇಲ್ಲಿ ನೀವು ಗಂಟೆಗಟ್ಟಲೆ ಕುಳಿತಿರುತ್ತೀರಿ. ನೀವು ಪ್ರವಾಸಿಗರೇ?’ ಎಂದು ಆಕೆ ಕೇಳಿದಳು. ನನಗೇ ಗೊತ್ತಿರದ ಸಂಗತಿಯನ್ನು ನಾನು ಏನೆಂದು ಉತ್ತರಿಸಲಿ? “ಇಲ್ಲ. ನಾನೊಬ್ಬ ಸರಕಾರೀ ನೌಕರ. ಕಚೇರಿಯ ಕಾರ್ಯನಿಮಿತ್ತ ಕೊಚ್ಚಿಗೆ ಹೋಗಿದ್ದೆ. ಇನ್ನು ಮೂರು ದಿನ ನವರಾತ್ರಿಯ ರಜಾ ದಿನಗಳು. ಹಾಗಾಗಿ, ಸುತ್ತಿ ಬಳಸಿ ಹೋಗುವ ಈ ಹಡಗನ್ನು ಆಯ್ದುಕೊಂಡೆ’ ಎಂದು ಉತ್ತರಿಸಿದೆ. “ನಾನೊಬ್ಬಳು ಬೆಂಗಳೂರು ಮೂಲದ ರೂಪದರ್ಶಿ, ಕೆಲವು ಕನ್ನಡ ಸಿನೆಮಾಗಳಲ್ಲೂ ಅಭಿನಯಿಸಿದ್ದೇನೆ. ಈಗ ಅವೆಲ್ಲವನ್ನೂ ಬಿಟ್ಟು ಮದುವೆಯಾಗಿ ಕೊಚ್ಚಿಯಲ್ಲಿ ನೆಲೆಸಿದ್ದೇನೆ. ಯಾಕೋ ಬದುಕು ನೀರಸವೆನಿಸಿತು. ಹಾಗಾಗಿ, ಟಿಕೇಟು ಖರೀದಿಸಿ ಇದರೊಳಗೆ ಕುಳಿತುಕೊಂಡಿರುವೆ’ ಎಂದಳು. ಆ ಕತ್ತಲಲ್ಲಿ ಬೀಸುವ ಗಾಳಿಯ ಸದ್ದಿನಲ್ಲಿ ಆಕೆಯ ಮಾತುಗಳನ್ನು ಕಷ್ಟಪಟ್ಟು ಕೇಳಬೇಕಿತ್ತು.

ಒಂದು ಕಾಲದಲ್ಲಿ ನಟಿ, ರೂಪದರ್ಶಿಯಾಗಿದ್ದ ಯಾವ ಕುರುಹುಗಳೂ ಆಕೆಯ ಮುಖದಲ್ಲಿ ಕಾಣಿಸುತ್ತಿರಲಿಲ್ಲ. ಆದರೆ, ಆಕೆಯ ಕಣ್ಣುಗಳು ಮಾತ್ರ ಹೊಳಪಾಗಿ, ಚುರುಕಾಗಿ ಆ ಅರೆಬರೆ ಬೆಳಕಲ್ಲೂ ಗೋಚರಿಸುತ್ತಿದ್ದವು. ಆಕೆ ಮಾತನಾಡುವಾಗಲೆಲ್ಲ ಆಕೆಯ ಕಣ್ಣುಗಳು ತುಂಬಿಕೊಳ್ಳುತ್ತಿದ್ದವು. “ಕ್ಷಮಿಸಿ, ನಾನು ಆಗಾಗ ಭಾವುಕಳಾಗಿ ಬಿಡುತ್ತೇನೆ’ ಎಂದು ಕನ್ನಡಕ ತೆಗೆದು ಆಕಾಶವನ್ನೊಮ್ಮೆ ದಿಟ್ಟಿಸಿ ನಿಟ್ಟುಸಿರಿಟ್ಟು ಮಾತು ಮುಂದುವರಿಸುತ್ತಿದ್ದಳು. ಆಕೆಗೆ ಎಲ್ಲದರ ಮೇಲೂ ಸಕಾರಣವಾದ ಸಾತ್ವಿಕ ಸಿಟ್ಟಿತ್ತು. ಸಂಪಾದನೆಯ ಕಾರಣಕ್ಕಾಗಿ ವಯಸ್ಸಾಗಿದ್ದರೂ ತನ್ನನ್ನು ಮದುವೆಯಾಗಲು ಬಿಡದ ಜಿಪುಣಿ ಅಮ್ಮನ ಬಗ್ಗೆ , ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದ ಹಲ್ಲಿನ ವೈದ್ಯನೊಬ್ಬನನ್ನು ಮದುವೆಯಾಗಬೇಕಾಗಿ ಬಂದ ತನ್ನ ಅಸಹಾಯಕತೆಯ ಬಗ್ಗೆ, ಈಗಲೂ ಹಳೆಯ ಗಂಡನ ಜೊತೆ ಮಲಗಲು ಬರುವ ಆ ವಿಚ್ಛೇದಿತ ಮೊದಲ ಪತ್ನಿಯ ಬಗ್ಗೆ, ತನ್ನ ಗಂಡನೊಡನೆ ಹಾಸಿಗೆ ಹಂಚಿಕೊಳ್ಳುವ ಇನ್ನೊಂದು ಗಂಡಸಿನ ಬಗ್ಗೆ… ಆಕೆ ಮಾತನಾಡುತ್ತಲೇ ಇದ್ದಳು. ಇದೀಗ ತಾನೇ ಅಚಾನಕ್ಕಾಗಿ ಪರಿಚಿತನಾಗಿರುವ ಅಪರಿಚಿತ ಗಂಡಸೊಬ್ಬನ ಜೊತೆ ಹಂಚಿಕೊಳ್ಳಲು ಸಾಧಾರಣವಾಗಿ ಮುಜುಗರ ಪಟ್ಟುಕೊಳ್ಳಬೇಕಾದ ಸಂಗತಿಗಳು. ನಾನೂ ಇದನ್ನೆಲ್ಲ ಕೇಳಿಸಿಕೊಳ್ಳಬಾರದು ಎಂಬ ಸಾಮಾನ್ಯ ಜ್ಞಾನವಿಲ್ಲದವನಂತೆ ಕೇಳಿಸಿಕೊಳ್ಳುತ್ತಿದ್ದೆ. ಆಕೆ ಮಾತನಾಡುತ್ತಲೇ ಇದ್ದಳು. ನೋಡಿ ನಾನು ರೂಪದರ್ಶಿಯಾಗಿದ್ದಾಗಲೂ ತುಂಡು ಲಂಗ ಹಾಕಿಕೊಳ್ಳಲೂ ಸಂಕೋಚಪಡುತ್ತಿದ್ದೆ. ಅಮ್ಮನ ಒತ್ತಾಯಕ್ಕಾಗಿ ಹಾಕಿಕೊಳ್ಳುತ್ತಿದ್ದೆ. ಮದುವೆಯಾದರೆ ಸಾಧಾರಣ ಗೃಹಿಣಿಯಂತೆ ಹೆಂಡತಿಯಾಗಿ, ತಾಯಿಯಾಗಿ, ಸೀರೆ ಉಟ್ಟುಕೊಂಡು ಬದುಕಬಹುದು ಅಂದುಕೊಂಡಿದ್ದೆ. ಆದರೆ, ಮದುವೆಯಾದ ಹಲ್ಲಿನ ವೈದ್ಯ, “ನಾನು ರೂಪದರ್ಶಿಯೊಬ್ಬಳನ್ನು ಮದುವೆಯಾಗಿರುವುದು ನಿನ್ನನ್ನು ಸೀರೆಯಲ್ಲಿ ನೋಡಲು ಅಲ್ಲ’ ಎಂದು ಚಿತ್ರಹಿಂಸೆ ನೀಡುತ್ತಿದ್ದ. “ಬಗೆಬಗೆಯ ಅರೆನಗ್ನ ತೆಳು ವಸ್ತ್ರಗಳನ್ನು ತಂದು ಮುಖಕ್ಕೆ ಬಿಸಾಕುತ್ತಿದ್ದ’ ಆಕೆ ಎಗ್ಗಿಲ್ಲದೇ ಹೇಳುತ್ತಿದ್ದಳು. ನಾನೂ ಕೇಳಿಸಿಕೊಳ್ಳುತ್ತಿದ್ದೆ.

ಬರಬರುತ್ತ ನಾವು ನಮಗೇ ಗೊತ್ತಿಲ್ಲದ ಹಾಗೆ ಕನ್ನಡದಲ್ಲಿ ಮಾತನಾಡುತ್ತಿದ್ದೆವು. ಆಕೆಯ ತಮಿಳು ಮೂಲ ಗೊತ್ತಾಗುವ ಹಾಗಿರುವ ಕನ್ನಡ. “ನೀನು ಗಂಡಸು ಅನ್ನುವ ಕಾರಣಕ್ಕಾಗಿ ನಿನ್ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದೇನೆ’ ಎಂದು ಗಂಡಸರ ಕುರಿತಾದ ಕೆಲವು ಸಂದೇಹಗಳನ್ನು ನನ್ನಲ್ಲಿ ಕೇಳುತ್ತಿದ್ದಳು. ನಾನು “ಹೌದು’ ಅಥವಾ “ಅಲ್ಲ’ ಎಂದಷ್ಟೇ ಉತ್ತರಿಸುತ್ತಿದ್ದೆ. ಆಕೆ ಅವುಗಳನ್ನೆಲ್ಲ ಕೂಡಿ ಕಳೆದು ತನ್ನ ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದಳು. “ನೀನು ಯಾವತ್ತಾದರೂ ಇನ್ನೊಬ್ಬ ಗಂಡಸಿನ ಒಳ ಉಡುಪುಗಳನ್ನು ಒಗೆದು ಕೊಟ್ಟಿದ್ದೀಯಾ?’ ಎಂದು ಕೇಳಿದಳು. “ಇಲ್ಲ’ ಅಂದೆ. “ನನ್ನ ಗಂಡನ ಒಳ ಉಡುಪುಗಳನ್ನು ಆತನ ಸ್ನೇಹಿತ ಒಗೆದು ಕೊಡುತ್ತಿದ್ದ. ಇದನ್ನು ಸಹಿಸಿಕೊಂಡೆ. ನಾನು ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ ಅವರಿಬ್ಬರೂ ನನ್ನ ಹಾಸಿಗೆಯಲ್ಲಿ ಬಾಗಿಲು ಹಾಕಿಕೊಂಡಿರುತ್ತಿದ್ದರು. ಇದೂ ಸಹಿಸಿಕೊಂಡೆ. ಆದರೆ ಈಗ ನೋಡಿದರೆ ಆತನ ವಿಚ್ಛೇದಿತ ಪತ್ನಿಯೂ ಮನೆಗೆ ಬರುತ್ತಾಳೆ. ಅವರಿಬ್ಬರೂ ನನ್ನ ಎದುರೇ ಅಂಗಸಂಗ ನಡೆಸುತ್ತಾರೆ. ಒಮ್ಮೊಮ್ಮೆ ಅವರು ಮೂವರೂ ಜೊತೆಗಿರುತ್ತಾರೆ. ನನಗೆ ಸಹಿಸಲಾಗುತ್ತಿಲ್ಲ. ಹಾಗಾಗಿ, ಪೊಲೀಸು ಠಾಣೆಯಲ್ಲಿ ಒಂದು ದೂರು ಒಗೆದು ಯಾರಿಗೂ ಗೊತ್ತಿಲ್ಲದ ಹಾಗೆ ಹಡಗು ಹತ್ತಿ ಕುಳಿತಿರುವೆ’ ಎಂದು ಇನ್ನೊಮ್ಮೆ ಕನ್ನಡಕ ಮೂಗಿನಿಂದ ಎತ್ತಿಕೊಂಡು ಕಣ್ಣುಗಳನ್ನು ಒರೆಸಿಕೊಂಡಳು.

Advertisement

ಯಾಕಾದರೂ ಜನರು ನನ್ನ ಬಳಿ ತಮ್ಮ ಕಥೆಗಳನ್ನು ಹೇಳಿಕೊಳ್ಳುತ್ತಾರೋ, ನಾನು ಯಾಕಾದರೋ ಅವುಗಳಿಗೆ ಈಡಾಗುತ್ತೇನೋ ಎಂದು ನನ್ನ ವಿಧಿಯ ಕುರಿತು ನನಗೇ ಬೇಸರವೆನಿಸಿತು. “ನೀವು ರಾತ್ರಿಯ ಭೋಜನದ ನಂತರ ಇಲ್ಲೇ ಬಂದು ಕುಳಿತುಕೊಳ್ಳುವುದಾದರೆ ನಾನೂ ಊಟ ಮುಗಿಸಿ ಬರುತ್ತೇನೆ. ಇದುವರೆಗೆ ನನ್ನ ಕಥೆ ಹೇಳಿದೆ. ಇನ್ನು ನಿಮ್ಮ ಕಥೆ ಹೇಳಬಹುದು. ನಾನು ಭಾವುಕಳಾದೆ. ಎಲ್ಲವನ್ನೂ ಹೇಳಿಕೊಂಡೆ. ಭೋಜನದ ನಂತರ ನಿಮ್ಮ ಸರದಿ’ ಎಂದು ಆಕೆ ಎದ್ದು ನಿಂತಳು. ಎದ್ದು ನಿಂತಾಗ ಆಕೆ ನೀಳವಾಗಿ ಲಕ್ಷಣವಾಗಿ ಕಾಣಿಸುತ್ತಿದ್ದಳು. ಆಕೆ ಹೇಳಿದ್ದೆಲ್ಲ ನಿಜವಿರಬಹುದು ಎಂದು ಅನಿಸುವ ಹಾಗಿರುವ ಅವಳ ನಿಷ್ಠುರ ಕಣ್ಣುಗಳು. “ನನ್ನದೇನಿದೆ ಕಥೆ ಅಂತಹದ್ದು. ನಾನೊಬ್ಬ ಸಾಮಾನ್ಯ ಸರಕಾರೀ ಉದ್ಯೋಗಿ. ಬೆಳಗೆ ಏಳುವುದು, ರಾತ್ರಿ ಮಲಗುವುದು. ನಡುವಲ್ಲಿ ಕಚೇರಿಯ ಕೆಲಸ ಮಾಡುವುದು’ ಎಂದು ಸುಳ್ಳು ಹೇಳಿ ಎದ್ದು ನಿಂತು ಆಕಾಶವನ್ನೊಮ್ಮೆ ಕಡಲನ್ನೊಮ್ಮೆ ನೋಡಿ ಹಡಗಿನ ಒಳಹೊಕ್ಕು ನನ್ನ ಕ್ಯಾಬಿನ್ನು ಸೇರಿ ಸ್ನಾನದ ಕೋಣೆ ಸೇರಿಕೊಂಡೆ.

ಹೊರಬಂದಾಗ ಹಡಗಿನ ಎಚ್ಚರಿಸುವ ಧ್ವನಿವರ್ಧಕದಲ್ಲಿ ಆಸ್ಪತ್ರೆಯ ಶುಶ್ರೂಷಕರು ಎಲ್ಲಿದ್ದರೂ ಕೂಡಲೇ ತಮ್ಮ ಕೋಣೆಗೆ ಆಗಮಿಸಬೇಕೆಂದು ಮತ್ತೆ ಮತ್ತೆ ಕರೆಯುತ್ತಿದ್ದರು. ಯಾರೋ ಪ್ರವಾಸಿಗರು ಕಡಲ ಪಯಣದ ಬೇನೆಯಿಂದ ಬವಳಿ ಬಂದು ತೀವ್ರವಾಗಿ ಅಸ್ವಸ್ಥಗೊಂಡಿರಬಹುದು ಎನಿಸಿತು.

ಭೋಜನದ ನಂತರ ಎಲ್ಲೂ ಹೋಗದೆ ಸುಮ್ಮನೇ ಮಲಗಿಕೊಂಡೆ. ಯಾಕೋ ಕಥೆ ಹೇಳುವ, ಕೇಳುವ ರೇಜಿಗೆ ಬೇಡವೆನ್ನಿಸಿತು.

ಮರುದಿನ ಬೆಳಗಿನ ಉಪಾಹಾರಕ್ಕಾಗಿ ಹಡಗಿನ ಭೋಜನಗೃಹಕ್ಕೆ ಹೋದರೆ ಆಕೆ ಯಾಕೋ ಪೇಲವವಾಗಿ ಕುಳಿತುಕೊಂಡಿದ್ದಳು. ಆಕೆಯ ಪಕ್ಕದಲ್ಲಿ ಆಸ್ಪತ್ರೆಯ ಶುಶ್ರೂಷಕ ಕುಳಿತು ಆಕೆಯ ಬಾಯಿಗೆ ತಿನ್ನಿಸುತ್ತಿದ್ದ. “ಎಲ್ಲ ಇವರಿಂದಾಗಿ’ ಎಂದು ಆಕೆ ಪುಟ್ಟ ಶಾಲಾ ಬಾಲಕಿಯಂತೆ ನನ್ನೆಡೆಗೆ ಬೆರಳು ತೋರಿಸಿ ದೂರು ಹೇಳುತ್ತಿದ್ದಳು. “ಇವರು ಅಲ್ಲಿರದಿದ್ದರೆ ನಾನು ಮಾತನಾಡುತ್ತಲೇ ಇರಲಿಲ್ಲ. ಮಾತನಾಡುತ್ತ ಮಾತನಾಡುತ್ತ ನನ್ನ ಗಂಡನ ಮುಖ ಕಣ್ಣೆದುರು ಬಂದು ಅಸ್ವಸ್ಥಗೊಂಡೆ. ನೀವು ನೋಡಿಕೊಳ್ಳದಿದ್ದರೆ ನಾನು ಹಡಗಲ್ಲೇ ಸತ್ತು ಹೋಗುತ್ತಿದ್ದೆ’ ಎಂದು ಆಕೆ ಆ ಕ್ಷೀಣತೆಯಲ್ಲೂ ನನ್ನನ್ನು ತೆಗಳುತ್ತಲೂ ಶುಶ್ರೂ ಷಕನನ್ನು ಹೊಗಳುತ್ತಲೂ ಕಾಫಿಗೆ ಮುಳುಗಿಸಿದ ಬ್ರೆಡ್ಡನ್ನು ಬಾಯಿಗೆ ಬರಿಸಿಕೊಳ್ಳುತ್ತಿದ್ದಳು. ಇನ್ನು ಮುಂದೆ ಖಾಸಗಿ ವಿಷಯಗಳನ್ನು ನಾವು ಮಾತನಾಡಬಾರದು. ಆದರೆ, ನೀವು ನನ್ನ ಸಿನೆಮಾ ದಿನಗಳ ಬಗ್ಗೆ ಬರೆಯಬೇಕು. ನಾನು ಮತ್ತೆ ನಟಿಯಾಗಿ ಗಂಡನ ಮೇಲೆ ಸೇಡು ತೀರಿಸಿಕೊಳ್ಳಬೇಕು’ ಎಂದು ಆಕೆ ನಿಷ್ಠುರವಾಗಿ ಅಂದಳು.

“ನೀನು ಹೋಗುವ ಹಾದಿ ಕಡಲಿನಂತೆ ವಿಶಾಲವಾಗಿಯೂ ದುರ್ಲಭವಾಗಿಯೂ ಇರಬಹುದು. ಆದರೆ ನಿನ್ನ ಕರ್ಮಗಳು ಮನಸು ಮಾಡಿದರೆ ಅವು ನೀ ಎಲ್ಲಿದ್ದರೂ ಬೆನ್ನು ಹತ್ತಿ ಬರುವವು’ ಎಂದು ಖುರಾನು ಕಲಿಸುವ ಮಹಾನುಭಾವರು ತಮ್ಮ ಜೀವನದ ಹಲವು ಘಟನೆಗಳನ್ನು ಉದಾಹರಿಸಿ ನಮಗೆ ಹೇಳಿದ್ದರು. ಅವರು ಆ ಕಾಲದಲ್ಲಿ ಹೇಳಿದ್ದು ನಿಜವಾಗಿಯೂ ನಿಜ ಅನ್ನುವ ಹಾಗೆ ನನ್ನ ಕಣ್ಣ ಮುಂದೆಯೇ ಆ ರೂಪದರ್ಶಿ ನಟಿ ಹಡಗಿನ ಉಪಾಹಾರ ಗೃಹದಲ್ಲಿ ಕುಳಿತುಕೊಂಡಿದ್ದಳು. ನನ್ನದೇ ದೊಡ್ಡ ಕಥೆ ಅಂದುಕೊಂಡರೆ ಇವಳು ತನ್ನದು ಅದಕ್ಕಿಂತ ದೊಡ್ಡದು ಅಂದುಕೊಂಡಿದ್ದಾಳೆ ಸುಂದರಿ ಎಂದು ಮನಸೊಳಗೆ ನಕ್ಕೆ.

ಅಬ್ದುಲ್‌ ರಶೀದ್‌

Advertisement

Udayavani is now on Telegram. Click here to join our channel and stay updated with the latest news.

Next