Advertisement
ವಿಶಾಲವಾದ ಪುಸ್ತಕದಂಗಡಿಯನ್ನು ಹೊಕ್ಕು, ಪುಸ್ತಕಗಳ ಪುಟ ತಿರುವುತ್ತ ಸಮಯ ಕಳೆಯುವ ಅನುಭವ ಬಹು ಆಪ್ಯಾಯಮಾನವಾದದ್ದು. ಪುಸ್ತಕದ ಬೀರುಗಳ ನಡುವೆ ಸಾಗುತ್ತಿದ್ದರೆ, ದೇಶ-ವಿದೇಶಗಳ ಕತೆ-ಕಾದಂಬರಿಗಳು, ಎಂದಿಗೂ ಸಲ್ಲುವ ಕಾಲಾತೀತಗಳು, ಇಂದಿಗೆ ಮೆರೆದು ನಾಳೆ ಮಾಯವಾಗುವ “ಜನಪ್ರಿಯ’ ಪ್ರಕಾರಗಳು, ಜ್ಞಾನ-ವಿಜ್ಞಾನ-ಕಲೆಗಳ ಹೊತ್ತಿಗೆಗಳು, ತರತರದ ಕೈಪಿಡಿಗಳು- ತಮ್ಮ ಹೆಸರುಗಳಿಂದಲೇ ನಮ್ಮನ್ನು ತಮ್ಮ ಲೋಕಕ್ಕೆ ಸೆಳೆದೊಯ್ಯಬಲ್ಲಂಥವು. ಭಾವನೆಗಳನ್ನು ಹರಿಯಬಿಟ್ಟರೆ, ಮನುಕುಲದ ಸತ್ವ ಸಾಗರದಲ್ಲಿ ತೇಲಿ ಹೋಗುವ ಅನುಭವ. ಸಾಲದ್ದಕ್ಕೆ ಹೊಸ/ಹಳೆ ಪುಸ್ತಕಗಳ ಅದಮ್ಯ ಪರಿಮಳದ ಸೆಳೆತ ಬೇರೆ. ಹಾಗಾಗಿ, ಮುಂಬಯಿಯಲ್ಲಿ ಮಾತ್ರವಲ್ಲ , ಪರಊರಿಗೆ ಹೋದಾಗಲೂ ಅಲ್ಲಿನ ಪುಸ್ತಕದಂಗಡಿಯಲ್ಲಿ ಸ್ವಲ್ಪ ಸಮಯವನ್ನಾದರೂ ಕಳೆಯುವ ಹಂಬಲ.
Related Articles
Advertisement
ಬಟ್ರ್ಯಾಂಡ್ ಪುಸ್ತಕಾಲಯದ ವೃತ್ತಾಂತವಾದ ಮೇಲೆ ಭಾರತದ ಅತ್ಯಂತ ಹಳೆಯ ಪುಸ್ತಕದಂಗಡಿಗೆ ಹೋದ ಕತೆಯನ್ನು ಬಿಡುವುದು ಹೇಗೆ? ದೇಶದ ಸಾಂಸ್ಕೃತಿಕ ಪುನರುತ್ಥಾನದ ತಾಣವಾಗಿದ್ದ ಕೊಲ್ಕತ್ತವು ಪುಸ್ತಕದಂಗಡಿಗಳ ತವರುಮನೆ. 1886ರಲ್ಲಿ ಆರಂಭವಾಗಿದ್ದ ದಾಸ್‌ಗುಪ್ತ ಎಂಡ್ ಕೊ ಅಂಗಡಿಯು ಕೊಲ್ಕತ್ತದ ಕಾಲೇಜು ರಸ್ತೆಯಲ್ಲಿದೆ. ಅಂಗಡಿಯ ಈಗಿನ ಮಾಲಿಕ ಅರಬಿಂದೊ ದಾಸ್‌ಗುಪ್ತ ಐದನೆಯ ಪೀಳಿಗೆಯವನು. ಇಂಚಿಂಚೂ ಪುಸ್ತಕಗಳಿಂದ ತುಂಬಿದ, ದಿನಪ್ರತಿ 300-400 ಗಿರಾಕಿಗಳು ಕಾಲಿಡುವ ಅಂಗಡಿಯಲ್ಲಿ, ಆತ ಗಿರಾಕಿಗಳಿಗಾಗಿ, ಪುಸ್ತಕಗಳನ್ನು ಅಗೆದು, ತೆಗೆದು ಹುಡುಕುವುದರಲ್ಲಿ ಮಗ್ನನಾಗಿದ್ದ. ಹಿಂದೆ ಆತನ ಅಜ್ಜನ ಕಾಲದಲ್ಲಿ ಜಗದೀಶಚಂದ್ರ ಬೋಸರೂ ಅಲ್ಲಿಗೆ ಬರುತ್ತಿದ್ದರಂತೆ. ಈಗಲೂ ಅಮರ್ತ್ಯ ಸೇನ್, ಗೋಪಾಲ್ ಗಾಂಧಿಯಂಥವರೂ ತನ್ನ ಗಿರಾಕಿಗಳೆಂದು ಹೆಮ್ಮೆಯಿಂದ ಹೇಳಿದ.
ಈ ಅಂಗಡಿಯಿರುವ ರಸ್ತೆಯ ವೈಶಿಷ್ಟ್ಯವೆಂದರೆ, ರಸ್ತೆಯ ಒಂದೂವರೆ ಕಿ. ಮೀ. ಉದ್ದಕ್ಕೂ ಸಾಲು ಸಾಲು ಪುಸ್ತಕದಂಗಡಿಗಳೇ- ಗೂಡಂಗಡಿಗಳಿಂದ ಹಿಡಿದು ಪ್ರಸಿದ್ಧ ಪ್ರಕಾಶನ ಸಂಸ್ಥೆಗಳವರೆಗೆ; ರಸ್ತೆಯ ಮೇಲೆ ಅಕ್ಷರಶಃ ಉಕ್ಕಿ ಹರಿಯುವ ಪುಸ್ತಕಗಳು. ಬಂಗಾಲಿಗಳು ಈ ರಸ್ತೆಯನ್ನು ಬೌಪಾರಾ (ಪುಸ್ತಕಗಳ ವಠಾರ) ಎನ್ನುತ್ತಾರೆ. ಇದು ಜಗತ್ತಿನಲ್ಲೇ ಅತಿ ದೊಡ್ಡ ಹಳೆಯ ಪುಸ್ತಕಗಳ ಮಾರುಕಟ್ಟೆಯೂ ಹೌದು. ದಶಕಗಳಿಂದ ಬುದ್ಧಿಜೀವಿಗಳನ್ನು, ಚಿಂತಕರನ್ನು ಆಕರ್ಷಿಸುತ್ತಿರುವ ಇಂಡಿಯನ್ ಕಾಫಿ ಹೌಸ್ ಇರುವುದು ಇಲ್ಲಿಯೇ.
ಹಿಂದೆ ಅಮೆರಿಕಕ್ಕೆ ಹೋದಾಗಲೆಲ್ಲ ಗಂಟೆಗಟ್ಟಲೆ, ಕೆಲವೊಮ್ಮೆ ಹಗಲಿಡೀ ಬಾರ್ಡರ್ ಇಲ್ಲವೇ ಬಾರ್ನ್ಸ್ ಎಂಡ್ ನೋಬಲ್ ಅಂಗಡಿಗಳಲ್ಲಿ ಪುಸ್ತಕ ರಾಶಿಯಲ್ಲಿ ಮುಖ ಹುದುಗಿಸಿ ಕುಳಿತುಬಿಡುತ್ತಿದ್ದೆವು. ಈಗ ಬಾರ್ಡರ್‌ನ ಅಂಗಡಿಗಳದು ಹೇಳಹೆಸರಿಲ್ಲ; ಬಾರ್ನ್ಸ್ ಅಂಡ್ ನೋಬಲ್ ನ ಅಂಗಡಿಗಳೂ ಒಂದೊಂದಾಗಿ ಮುಚ್ಚಲ್ಪಡುವ ದುಃಸ್ಥಿತಿ!
ನಮ್ಮ ಮುಂಬಯಿಯಲ್ಲೂ ಎಷ್ಟೋ ಪ್ರಸಿದ್ಧ ಪುಸ್ತಕದಂಗಡಿಗಳು, ಗ್ರಂಥಾಲಯಗಳು- ಫೋರ್ಟ್‌ನ ಮಾರುತಿ ಬೀದಿಯಲ್ಲಿದ್ದ ವಿದ್ಯಾನಿಧಿ ಪುಸ್ತಕದಂಗಡಿ, ಪಿ.ಎಂ. ರಸ್ತೆಯಲ್ಲಿದ್ದ “ಸ್ಟ್ರೇಂಡ್’ ಪುಸ್ತಕಾಲಯ, ನರಿಮನ್ ಪೌಂಟಿನಲ್ಲಿದ್ದ ಬ್ರಿಟಿಷ್ ಕೌನ್ಸಿಲ್ಲೆ„ ಬ್ರೆರಿ- ಮುಚ್ಚಲ್ಪಟ್ಟಾಗ, ಏನನ್ನೋ ಕಳಕೊಂಡ ನೋವು.
ಅಮೆಜಾನಿನಂತಹ ಆನ್‌ಲೈನ್ ಕಂಪೆನಿಗಳು, ಪುಸ್ತಕಗಳ ಡಿಜಿಟಲ್ ಅವತಾರಗಳು, ನಗರಗಳಲ್ಲಿ ಏರುತ್ತಿರುವ ಬಾಡಿಗೆ ದರ, ಅಲ್ಲದೆ, ಮಾಧ್ಯಮಗಳ ಒತ್ತಡದಿಂದಾಗಿ ಕಡಿಮೆಯಾಗುತ್ತಿರುವ ಓದುಗರ ಸಂಖ್ಯೆ- ಹೀಗೆ ಹತ್ತುಹಲವು ಕಾರಣಗಳಿಂದಾಗಿ ಪುಸ್ತಕದಂಗಡಿಗಳು ಮುಚ್ಚುತ್ತಿರಬಹುದು. ಆದರೆ ಬಟ್ರ್ಯಾಂನಂತಹ ಕ್ರಿಯಾಶೀಲ ಅಂಗಡಿಗಳು, ಕಾಲೇಜು ರಸ್ತೆಯಂತಹ ಗುಜು ಗುಡುವ ಪುಸ್ತಕ-ವಠಾರಗಳು ನಮ್ಮನ್ನು ನಿರಾಶಾದಾಯಕರಾಗಲು ಬಿಡಲೊಲ್ಲವು.
ಕಾಲೇಜು ರಸ್ತೆಯಿಂದ ಹೊರಟ ಎಷ್ಟೋ ಹೊತ್ತಿನವರೆಗೆ ಮೂಗಿಗಡರಿದ, ಮನಸ್ಸನ್ನು ಆವರಿಸಿದ ಪುಸ್ತಕಗಳ ಸಮ್ಮೊàಹಕ ಸುಗಂಧವು ನಮ್ಮೊಂದಿಗೇ ಬರುತ್ತಿತ್ತು. ಆ ಮರ-ಕಾಗದ-ಶಾಯಿ ಮಿಶ್ರಿತ ಸುವಾಸನೆಯು ಮನಸ್ಸಿಗೆ ಕೊಡುವ ಆತ್ಮೀಯ ಒಡನಾಟದ ನೆಮ್ಮದಿಗೆ, ಏನೋ ಹೊಸತಿನ, ಮತ್ತೇನೋ ತಾಜಾತನದ ಭರವಸೆಗೆ ಸರಿಸಾಟಿಯಾದುದು ಜಗತ್ತಿನಲ್ಲಿ ಬೇರಾವುದೂ ಇಲ್ಲವೆನಿಸುತ್ತದೆ.
ಮಿತ್ರಾ ವೆಂಕಟ್ರಾಜ್