Advertisement

ಈ ಅಪಾರ್ಟ್‌ಮೆಂಟ್ ವಾಸಿಗಳೀಗ ಜಲಸಾಕ್ಷರರು

11:36 PM Jun 25, 2019 | Team Udayavani |

ಮಹಾನಗರ: ಜಲ ಸಾಕ್ಷರತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ‘ಉದಯವಾಣಿ’ ಹಮ್ಮಿಕೊಂಡ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ತಮ್ಮ ಮನೆ, ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿ ಉಳಿದವರಲ್ಲಿ ಸ್ಫೂರ್ತಿ ತುಂಬುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.

Advertisement

ಅಭಿಯಾನ ಆರಂಭವಾದ ಎರಡು ವಾರದಲ್ಲೇ ಹಲವರು ಮಳೆಕೊಯ್ಲು ಅಳವಡಿಸಿಕೊಂಡಿರುವುದು ಗಮನಾರ್ಹ. ಪ್ರತಿ ದಿನವೂ ಮಳೆಕೊಯ್ಲು ಅಳವಡಿ ಸುವ ಬಗ್ಗೆ ತಾಂತ್ರಿಕ ಮಾಹಿತಿ ಕೋರಿ ಕರೆ ಮಾಡುತ್ತಿರುವ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ಅಭಿಯಾನಕ್ಕೆ ಸ್ಪಂದಿಸಿ ಮಳೆಕೊಯ್ಲು ವ್ಯವಸ್ಥೆ ಯನ್ನು ಅಳವಡಿಸಿಕೊಂಡವರು ಮಾಹಿತಿಯನ್ನೂ ಇತರರಿಗೆ ಹಂಚಿಕೊಳ್ಳುತ್ತಿದ್ದಾರೆ. ಆ ಮೂಲಕ, ಅಭಿಯಾನದ ಆಶಯವನ್ನು ಬೆಂಬಲಿಸುವುದರ ಜತೆ, ಭವಿಷ್ಯದಲ್ಲಿ ನಗರದಲ್ಲಿ ಉದ್ಭವಿಸಬಹುದಾದ ನೀರಿನ ಸಮಸ್ಯೆಗೆ ತಾವೇ ಸ್ವಯಂ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ.

ಹೆಚ್ಚಿದ ಜಾಗೃತಿ
ಸಂಘ- ಸಂಸ್ಥೆಗಳು, ಶಾಲಾ- ಕಾಲೇಜುಗಳಲ್ಲಿ ಮಳೆಕೊಯ್ಲಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲು ಮುಂದಾಗಿವೆ. ಕೆಲವು ಅಪಾರ್ಟ್‌ ಮೆಂಟ್‌ಗಳಲ್ಲೂ ಮಳೆಕೊಯ್ಲು ಅಳವಡಿಸುವ ಬಗ್ಗೆ ಅಲ್ಲಿನ ಮಾಲಕರ ಸಂಘದ ಸಭೆಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಸ್ವಯಂ ಸೇವಾ ಸಂಸ್ಥೆಗಳು ಸ್ಥಳೀಯವಾಗಿ ತಮ್ಮ ಸಂಘಟನೆ ಮೂಲಕ ಮಳೆಕೊಯ್ಲಿನ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಈ ಮಧ್ಯೆ, ಮುಂಗಾರು ಪ್ರಾರಂಭಗೊಂಡು ಮೂರು ವಾರ ಕಳೆಯುತ್ತಿದ್ದರೂ, ಮಳೆ ಇನ್ನೂ ಚುರುಕುಗೊಂಡಿಲ್ಲ. ಇದು ಜನ ರನ್ನು ಆತಂಕಕ್ಕೆ ದೂಡಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ, ಮುಂದಿನ ಬೇಸಗೆಯಲ್ಲಿ ನೀರಿನ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳಬಹುದು. ಹೀಗಾಗಿ, ಮಳೆಕೊಯ್ಲು ಅಳವಡಿಸಿಕೊಳ್ಳುವುದು ಸಮಯೋಚಿತ ಹಾಗು ತುರ್ತು ಅಗತ್ಯ ಎಂದು ಎಲ್ಲರಿಗೂ ಮನದಟ್ಟಾಗುತ್ತಿರುವುದು ಸ್ಪಷ್ಟ.

ಮಳೆ ನೀರು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಎದುರಾಯಿತು..
ಎಪ್ರಿಲ್, ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಆ ಸಂದರ್ಭದಲ್ಲಿ ತಲೆಕೆಡಿಸಿಕೊಳ್ಳುತ್ತೇವೆ. ಆದರೆ ಪರಿಹಾರದ ಬಗ್ಗೆ ಯೋಚಿಸುವುದಿಲ್ಲ. ಉದಯವಾಣಿ ಅಭಿಯಾನದ ಕುರಿತು ಪತ್ರಿಕೆಯಲ್ಲಿ ಓದಿದ ಬಳಿಕ ನಾನು ಮಳೆಕೊಯ್ಲು ಅಳವಡಿಸಿದ್ದೇನೆ ಎಂದು ಪುಂಜಾಲಕಟ್ಟೆಯ ಚಂದಪ್ಪ ತಿಳಿಸಿದ್ದಾರೆ. ಈ ಹಿಂದೆ ಹಲವು ಬಾರಿ ಬಾವಿ ತೋಡಿಸಿದ್ದೇನೆ. ಆದರೆ ನೀರು ಸಮರ್ಪಕವಾಗಿ ದೊರೆತಿರಲಿಲ್ಲ. ಈಗ ಬೋರ್‌ವೆಲ್ ತೆಗೆಸಿದ್ದೇನೆ. ಹಾಗಾಗಿ ನೀರಿನ ಸಮಸ್ಯೆ ಎದುರಾದರೆ ತುಂಬಾ ಕಷ್ಟ. ಅದಕ್ಕಾಗಿ ಮಳೆ ಕೊಯ್ಲು ಅಳವಡಿಸಿದ್ದೇನೆ. ಮನೆಯ ತಾರಸಿಯ ಶೀಟ್ ಮೇಲೆ ಬೀಳುವ ನೀರನ್ನು ಪೈಪ್‌ ಮೂಲಕ ಬೋರ್‌ ಸಮೀಪದ ಇಂಗು ಗುಂಡಿಗೆ ಬಿಡಲಾಗಿದೆ. ಬೋರ್‌ ಸಮೀಪ ಜಲ್ಲಿ, ಹೊಗೆ, ನೆಟ್ ಹಾಕಿ ಮಾಡಿದ ಇಂಗು ಗುಂಡಿಗೆ ಮಳೆ ನೀರು ಬಿಡಲಾಗುತ್ತಿದೆ. ಇದಕ್ಕಾಗಿ 25,000 ರೂ. ಖರ್ಚಾಗಿದೆ ಎನ್ನುತ್ತಾರೆ ಚಂದಪ್ಪ.
ಮಳೆಕೊಯ್ಲು ಜಾಗೃತಿಯೇ ಪ್ರೇರಣೆ
ಉದಯವಾಣಿಯ ಮಳೆಕೊಯ್ಲು ಜಾಗೃತಿ ಕಾರ್ಯಕ್ರಮಕ್ಕೆ ತೆರಳಿದ ಬಳಿಕ ಮಳೆಕೊಯ್ಲು ಬಗ್ಗೆ ಅರಿವಾಯಿತು. ಅಲ್ಲಿಂದ ಬಂದ ಬಳಿಕ ಮನೆಯಲ್ಲಿ ಮಳೆಕೊಯ್ಲು ಆಳವಡಿಸಿದೆವು ಎಂದು ಕುದ್ರೋಳಿ ನಿವಾಸಿ ಸುನೀಲ್ ಹೇಳುತ್ತಾರೆ. ಮನೆಯ ಸಮೀಪವಿರುವ ಬಾವಿಗೆ ತಾರಸಿಯ ನೀರನ್ನು ಫಿಲ್ಟರ್‌ ಮಾಡಿ ಬಿಡಲಾಗುತ್ತಿದೆ. ವೃತ್ತಿಯಲ್ಲಿ ಪ್ಲಂಬರ್‌ ಆಗಿರುವುದರಿಂದ ನಾನೇ ಅಳವಡಿಸಿದೆ. ಬಳಿಕ ಹಲವರು ಮಳೆ ಕೊಯ್ಲು ಅಳವಡಿಸಲು ಕರೆದರು. ಜನರಿಗೆ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಅಗತ್ಯ ಹಾಗೂ ನೀರಿನ ಅನಿವಾರ್ಯತೆ ಅರಿವಾಗಿದೆ. ಹಾಗಾಗಿ ಜನರು ಮಳೆಕೊಯ್ಲು ಆಳವಡಿಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ಪತ್ರಿಕೆ ಕಾರ್ಯ ಶ್ಲಾಘನೀಯ ಎಂದರು.

ಟ್ಯಾಂಕರ್‌ ನೀರಿಗೆ ಬೇಸತ್ತು ಮಳೆಕೊಯ್ಲು
ಎರಡು- ಮೂರು ವರ್ಷಗಳಿಂದ ಬೇಸಗೆಯಲ್ಲಿ ಟ್ಯಾಂಕರ್‌ಗಳಿಗೆ ದುಬಾರಿ ಬೆಲೆ ನೀಡಿ ನೀರು ತರಿಸಿಕೊಳ್ಳುವುದು ಅಭ್ಯಾಸವಾಗಿತ್ತು. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ವಸತಿ ಸಮುಚ್ಛಯದ ನಿವಾಸಿಗಳು ಯೋಚಿಸಿದ್ದೆವು.ಆ ಸಮಯದಲ್ಲಿ ಪತ್ರಿಕೆಯ ಮಳೆಕೊಯ್ಲು ಅಭಿಯಾನ ಆರಂಭವಾಯಿತು. ಅದನ್ನು ನೋಡಿ ಮಳೆಕೊಯ್ಲು ಮಾಡಿದೆವು ಎನ್ನುತ್ತಾರೆ ಮಣ್ಣಗುಡ್ಡೆ ಅಭಿಮಾನ್‌ ಪ್ಯಾಲೇಸ್‌ನ ನಿವಾಸಿಗಳು. ವಸತಿ ಸಮುಚ್ಛಯದಲ್ಲಿ 61 ಮನೆಗಳಿದ್ದು ಬೇಸಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಈಗ ನಾವೆಲ್ಲಾ ಒಂದಾಗಿ ಮಳೆಕೊಯ್ಲು ಅಳವಡಿಸಿದ್ದೇವೆ. ತಾರಸಿಗೆ ಪೈಪ್‌ ಅಳವಡಿಸಿ ಅದನ್ನು ಕೆಳಗಿರುವ ಬೋರ್‌ವೆಲ್ನ ಬದಿಯಲ್ಲಿ ಇಂಗುಗುಂಡಿ ಮಾಡಿ ಬಿಡಲಾಗುತ್ತಿದೆ. ಸುಮಾರು 63,000 ರೂ. ಖರ್ಚಾಗಿದೆ. ಮುಂದಿನ ಬೇಸಗೆಯಲ್ಲಿ ನೀರಿನ ಸಮಸ್ಯೆ ಎದುರಾಗದು ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

ಉದಯವಾಣಿಯ ಮನೆ ಮನೆಗೆ ಮಳೆ ಕೊಯ್ಲು ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ. ನೀವೂ ನಮ್ಮ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆ ಅಳವಡಿಸಿದ್ದರೆ ಫೋಟೊ ಸಮೇತ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪ್ರಕಟಿಸುತ್ತೇವೆ. 9900567000

Advertisement

Udayavani is now on Telegram. Click here to join our channel and stay updated with the latest news.

Next