Advertisement

ಮಹಾಧಿವೇಶನ ರಾಜಕೀಯೇತರ ಉದ್ದೇಶದ್ದು; ಡಾ|ಶಿವಾನಂದ ಜಾಮದಾರ

04:33 PM Feb 06, 2023 | Team Udayavani |

ಧಾರವಾಡ: ಬಸವಕಲ್ಯಾಣದಲ್ಲಿ ನಡೆಯಲಿರುವ ರಾಷ್ಟ್ರೀಯ ಪ್ರಥಮ ಲಿಂಗಾಯತ ಮಹಾ ಧಿವೇಶನವು ರಾಜಕೀಯೇತರವಾಗಿದ್ದು, ಇದು ಸರ್ಕಾರದ ಪರ ಮತ್ತು ವಿರೋಧವಲ್ಲ ಎಂದು ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ| ಶಿವಾನಂದ ಜಾಮದಾರ ಹೇಳಿದರು.

Advertisement

ನಗರದ ಮುರುಘಾಮಠದ ಸಭಾಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಸರ್ವಾಧ್ಯಕ್ಷತೆಯಲ್ಲಿ ರಾಷ್ಟ್ರೀಯ ಪ್ರಥಮ ಲಿಂಗಾಯತ ಮಹಾಧಿವೇಶನವು ಮಾ.4 ಹಾಗೂ 5ರಂದು ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಜರುಗಲಿದೆ. ಈ ಅಧಿವೇಶನದಲ್ಲಿ ಲಿಂಗಾಯತ ಸಂಘಟನೆ ಕುರಿತು ಚಿಂತನ-ಮಂಥನ ನಡೆಸಿ, ಸಂಘಟನೆ ಬಲಪಡಿಸುವ ಕೆಲಸ ಮಾಡಲಾಗುವುದು. ಜತೆಗೆ ಸರಕಾರದ ಮುಂದೆ ಬೇಡಿಕೆ ಈಡೇರಿಸಲು ಒತ್ತಾಯಿಸಲಾಗುವುದು. ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೆಂದು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಲಿಂಗಾಯತ ಸಿದ್ಧಾಂತ ಸಮಾಜ ಚರಿತ್ರೆಗಳ ನಿಜ ಸ್ವರೂಪ ಶೋಧಿಸಿ ಸಮಾಜದ ಮುಂದಿಡುವುದು ಇಂದಿನ ಅಗತ್ಯವಾಗಿದೆ. ಇದನ್ನು ಪೂರೈಸಲು ಲಿಂಗಾಯತರು ತಮ್ಮ ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಮಹಾಧಿವೇಶನಗಳು ಪೂರಕವಾಗಿವೆ. ಈ ನಿಟ್ಟಿನಲ್ಲಿ ನಡೆಯುವ ಅಧಿವೇಶನದಲ್ಲಿ 200ಕ್ಕೂ ಹೆಚ್ಚು ಮಠಾ ಧೀಶರು, ಸಾಹಿತಿಗಳು, ಸಂಶೋಧಕರು, ಅನುಭಾವಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಹಿರಿಯ ಸಾಹಿತಿ ರಂಜಾನ ದರ್ಗಾ ಮಾತನಾಡಿ, ಧರ್ಮಗಳ ಸಾಮ್ಯ ಸಂಬಂಧಗಳ ಬಗ್ಗೆ ವಿಚಾರ ಮಾಡುವಾಗ ಅವುಗಳ ತತ್ವ ಮತ್ತು ಆಚಾರಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು. ರಾಜಕೀಯ, ಆರ್ಥಿಕ, ಸಾಮಾಜಿಕ ಲಾಭ-ಹಾನಿ ಗಣನೆಗೆ ತೆಗೆದುಕೊಳ್ಳುವುದು ಸರಿಯಲ್ಲ. ಜೈನ, ಬೌದ್ಧ, ಸಿಖ್‌ ಧರ್ಮಗಳು ಹಿಂದೂ ಅಥವಾ ವೈದಿಕ ಧರ್ಮದಿಂದ ಪ್ರತ್ಯೇಕಗೊಂಡು ಪ್ರಬುದ್ಧವಾಗಿ ಬೆಳೆದಿವೆ. ಅದೇ ತರಹ ಬಸವಾದಿ ಶರಣರ ವಿಚಾರಧಾರೆ, ವಚನ ಸಾಹಿತ್ಯ ಮತ್ತು ಸಂಸ್ಕೃತಿ ಆಧಾರದ ಮೇರೆಗೆ ಲಿಂಗಾಯತ ಕೂಡ ಸ್ವತಂತ್ರ ಧರ್ಮವಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಮಾನ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ನಮ್ಮ ಹಕ್ಕೊತ್ತಾಯ ಮುಂದುವರಿಯಲಿದೆ ಎಂದರು.

Advertisement

ಹಿರಿಯ ಸಾಹಿತಿ ಡಾ| ವೀರಣ್ಣ ರಾಜೂರ, ಡಾ| ಎಸ್‌.ಆರ್‌. ಗುಂಜಾಳ, ಡಾ| ಎನ್‌.ಜಿ. ಮಹಾದೇವಪ್ಪ, ಪಿ.ಎಸ್‌. ಕೋದಾನಪುರ, ಬಿ.ಬಿ. ಚಕ್ರಸಾಲಿ, ಶಿವಾನಂದ ಶೆಟ್ಟೆಣ್ಣವರ, ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ ಇದ್ದರು. ಎಂ.ವಿ.ಗೊಂಗಡಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಬಾಗೇವಾಡಿ ನಿರೂಪಿಸಿದರು. ಪ್ರಭು ನಡಕಟ್ಟಿ ಸ್ವಾಗತಿಸಿದರು. ಬಸವಂತ ತೋಟದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next