Advertisement

ಪಶ್ವಿಮ ಶಿಕ್ಷಕರ ಕ್ಷೇತ್ರದ ಮತದಾರರ ಸಂಖ್ಯೆ ಕ್ಷೀಣ!

04:20 PM Jun 12, 2022 | Team Udayavani |

ಗದಗ: ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಅಂತಿಮ ಘಟ್ಟ ತಲುಪಿದೆ. ಆದರೆ ಕಳೆದ ಕೆಲ ವರ್ಷಗಳಿಂದ ಸರ್ಕಾರ ಶಿಕ್ಷಕರ ನೇಮಕಾತಿಯಲ್ಲಿ ಹಿನ್ನಡೆ ಅನುಭವಿಸಿರುವುದು ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಶಿಕ್ಷಕರು ಹಿಂದೇಟು ಹಾಕಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 600 ಮತದಾರರ ಸಂಖ್ಯೆ ಕುಸಿತ ಕಂಡಿದೆ.

Advertisement

ಕಳೆದ 2016ರ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ 2987 ಪುರುಷರು, 911 ಮಹಿಳೆಯರು ಸೇರಿ 3898 ಮತದಾರರಿದ್ದರು. ಪ್ರಸ್ತುತ ಚುನಾವಣೆಯಲ್ಲಿ 2262 ಪುರುಷರು, 1038 ಮಹಿಳೆಯರು ಸೇರಿ 3300 ಮತದಾರರಿದ್ದು, 600 ಮತದಾರರು ಮತಪಟ್ಟಿಯಿಂದ ಹೊರ ಬಿದ್ದಿದ್ದಾರೆ.

ಕಳೆದ 6 ವರ್ಷಗಳಲ್ಲಿ ನಿವೃತ್ತಿ, ನಿಧನ ಮತ್ತು ವರ್ಗಾವಣೆ ಹಿನ್ನೆಲೆಯಲ್ಲಿ ಪ್ರಸಕ್ತ ಚುನಾವಣೆಯಲ್ಲಿ 600 ಮತದಾರರು ಕಡಿತಗೊಂಡಿದ್ದಾರೆ. ಆದರೆ ಹೊಸ ಮತದಾರರು ಸೇರ್ಪಡೆಯಾಗದಿರುವುದು ಚುನಾವಣೆಯನ್ನು ರೋಚಕತೆಗೆ ದೂಡಿದೆ. ಕಳೆದ 42 ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸುತ್ತ ಬಂದಿರುವ ಬಸವರಾಜ ಹೊರಟ್ಟಿಯವರು ಒಂದೆಡೆಯಾದರೆ, ಸದ್ಯ ಇರುವ ಮತದಾರರು ಹಳಬರೇ ಎನ್ನುವುದು ವಿಶೇಷ.

ಒಂದೆಡೆ ಸರ್ಕಾರ ಹಲವಾರು ವರ್ಷಗಳಿಂದ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಿಂದ ದೂರವಿದೆ. ಇನ್ನೊಂದೆಡೆ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಹಾಗೂ ಶಿಕ್ಷಕರು ಚುನಾವಣೆ ಗೊಡವೆಗೆ ಹೋಗಲು ಇಚ್ಛಿಸದೇ ಚುನಾವಣಾ ಪ್ರಕ್ರಿಯೆಯಿಂದಲೇ ದೂರ ಉಳಿದಿರುವುದರಿಂದ ಮತದಾರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಮುಂದಾಗುತ್ತಿಲ್ಲ.

ಕಾಲ್ಪನಿಕ ವೇತನ ಸಮಸ್ಯೆ: ಕಳೆದ ಹಲವಾರು ವರ್ಷ ಗಳಿಂದ ಶಿಕ್ಷಕರು ಕಾಲ್ಪನಿಕ ವೇತನ ಸಮಸ್ಯೆ ಅನುಭವಿಸುತ್ತಿ ದ್ದಾರೆ. ಯಾವ ಜನಪ್ರತಿನಿಧಿ ಹಾಗೂ ಸರ್ಕಾರಗಳು ಶಿಕ್ಷಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮತದಾನ ಮಾಡುವುದರಿಂದ ಸಮಸ್ಯೆ ದೂರವಾಗಲ್ಲ ಎಂಬ ಆಲೋಚನೆಗೆ ಬಂದಿರುವ ಶಿಕ್ಷಕರು ಚುನಾವಣೆ ಮತದಾನ ಪ್ರಕ್ರಿಯೆಯಿಂದ ದೂರವಾಗುತ್ತಿದ್ದಾರೆ ಎನ್ನುವುದು ಹೆಸರು ಹೇಳಲಿಚ್ಛಿಸದ ಶಿಕ್ಷಕರ ಅಭಿಪ್ರಾಯ.

Advertisement

2016ರಲ್ಲಿ ಶೇ.69.60 ಮತದಾನ: 2016ರಲ್ಲಿ ನಡೆದ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಗದಗ ಜಿಲ್ಲೆಯಲ್ಲಿ ಕೇವಲ ಶೇ.69.60 ಮತದಾನವಾಗಿತ್ತು. 3898 ಮತದಾರರ ಪೈಕಿ 2713 ಮತದಾರರು ಮಾತ್ರ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಪ್ರಸ್ತುತ ಚುನಾವಣೆಯಲ್ಲಿ 3300 ಮತದಾರರಿದ್ದು, ಶೇಕಡಾವಾರು ಮತದಾನ ಹೆಚ್ಚಾಗಲಿದೆಯೇ ಎಂಬ ಕುತೂಹಲ ಮೂಡಿಸಿದೆ.

ಸೇವೆ ಸಲ್ಲಿಸುತ್ತಿರುವ ಹಾಗೂ ವಾಸಿಸುವ ಸ್ಥಳ ಮತ್ತು ಮತದಾರರ ಚೀಟಿಯಲ್ಲಿನ ಸ್ಥಳ ಒಂದೇ ಇರಬೇಕೆನ್ನುವ ನಿಯಮಾವಳಿಗಳ ಹಿನ್ನೆಲೆಯಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿದ್ದರಿಂದ ಮತದಾರರ ಪಟ್ಟಿಯಲ್ಲಿ ಶಿಕ್ಷಕರ ಹೆಸರು ಸೇರ್ಪಡೆ ಕುಂಠಿತವಾಗಿದೆ. –ಬಸವರಾಜ ಧಾರವಾಡ, ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಗೌರವಾಧ್ಯಕ್ಷ.

ಕಳೆದ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಖೊಟ್ಟಿ ಮತದಾರರ ಸಂಖ್ಯೆ ಹೆಚ್ಚಿತ್ತು. ಈ ಬಾರಿ ಚುನಾವಣಾಧಿಕಾರಿಗಳು ಮತದಾರರ ಪಟ್ಟಿಯಲ್ಲಿದ್ದ ಖೊಟ್ಟಿ ಮತದಾರರನ್ನು ಕೈಬಿಟ್ಟಿದ್ದರಿಂದ ಮತದಾರರ ಸಂಖ್ಯೆ ಕಡಿಮೆಯಾಗಿದೆ. –ವೆಂಕನಗೌಡ ಗೋವಿಂದಗೌಡ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಬೆಂಬಲಿತ ಅಭ್ಯರ್ಥಿ

-ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next