ಕನ್ನಡದಲ್ಲಿ ದಿನಕಳೆದಂತೆ ಕಾದಂಬರಿ ಆಧಾರಿತ ಚಿತ್ರಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆ ಸಾಲಿಗೆ “ದನಗಳು’ ಎಂಬ ಚಿತ್ರವೂ ಸೇರಿದೆ. ಇದು ಕಥೆಗಾರ ಡಾ.ಬಿ.ಎಲ್.ವೇಣು ಅವರ ಕಾದಂಬರಿ ಆಧರಿಸಿ ಮಾಡಿದ ಚಿತ್ರ. ಈ ಚಿತ್ರಕ್ಕೆ ಬಾಲಾಜಿ ಪೋಳ್ ನಿರ್ದೇಶಕರು. ನಿರ್ಮಾಣದ ಜವಾಬ್ದಾರಿಯೂ ಇವರದೇ. ಇನ್ನು, ಈ ಚಿತ್ರದ ಮೂಲಕ ಮಧು ಮಂದಗೆರೆ ನಾಯಕರಾಗಿ ನಟಿಸುತ್ತಿದ್ದಾರೆ. ಮಧು ಮಂದಗೆರೆ ಈವರೆಗೂ ಸುಮಾರು 48 ಚಿತ್ರಗಳಲ್ಲಿ ನಟಿಸಿದ್ದಾರೆ.
ವಿಶೇಷವೆಂದರೆ, ಮಧು ನಟಿಸಿರುವ ಸುಮಾರು 40 ಚಿತ್ರಗಳಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ. ಈಗ “ದನಗಳು’ ಚಿತ್ರದಲ್ಲೂ ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಶೀರ್ಷಿಕೆಯೇ ಹೇಳುವಂತೆ, ಇದು ಕಲಾತ್ಮಕ ಚಿತ್ರ. ನೈಜ ಘಟನೆಯನ್ನು ಲೇಖಕರು ಕಾದಂಬರಿಗೆ ಅಳವಡಿಸಿದ್ದು, ಅದನ್ನು ನೈಜವಾಗಿಯೇ ಚಿತ್ರೀಕರಿಸಿರುವ ಖುಷಿ ಚಿತ್ರತಂಡದ್ದು.
“ದನಗಳು’ ಕಥೆ ಬಗ್ಗೆ ಹೇಳುವುದಾದರೆ, ರಾತ್ರಿ ವೇಳೆಯಲ್ಲಿ ದನ, ಹಸುಗಳನ್ನು ವಾಹನಗಳಲ್ಲಿ ಸಾಗಿಸುವ ಮೂಲಕ ಅವುಗಳನ್ನು ಕಸಾಯಿ ಖಾನೆಗೆ ತಳ್ಳುವ ಗುಂಪಿನ ಕಥೆ ಹೊಂದಿದೆ. ಆ ದುಷ್ಟ ಗುಂಪನ್ನು ಹಿಡಿದು, ಬಗ್ಗುಬಡಿಯುವ ಪೊಲೀಸ್ ಅಧಿಕಾರಿ, ರೈತರ ಗೋವುಗಳನ್ನು ರಕ್ಷಣೆ ಮಾಡುವುದರೊಂದಿಗೆ ಕಥೆ ಸಾಗಲಿದೆ. ಬಹುತೇಕ ಕೆ.ಆರ್.ಪೇಟೆ, ಕಿಕ್ಕೇರಿ, ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಿಸಲಾಗಿದೆ.
ಈಗಾಗಲೇ “ದನಗಳು’ ಚಿತ್ರ ಡಬ್ಬಿಂಗ್ ಕಾರ್ಯವನ್ನೂ ಪೂರ್ಣಗೊಳಿಸಿದೆ. ಈ ಚಿತ್ರದಲ್ಲಿ ಮಧು ಮಂದಗೆರೆ ಅವರೊಂದಿಗೆ ಸಂಗೀತಾ ಕಾಣಿಸಿಕೊಂಡರೆ, ವಿವನ್‌ಕೃಷ್ಣ, ಅಶೋಕ್ ಜಂಬೆ, ಸಂಪತ್, ಪ್ರಿಯಾ, ಚಂದ್ರು, ಹರಿಚರಣ ತಿಲಕ್, ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಶ್ವನಾಥ್ ಛಾಯಾಗ್ರಹಣವಿದೆ. ಸ್ವಾಮಿ ಅವರ ಸಂಕಲನವಿದೆ.