ಬದಿಯಡ್ಕ: ಕಾಸರಗೋಡು ಜಿಲ್ಲೆಯಲ್ಲಿ ಕನ್ನಡದ ಪರಂಪರೆಗೆ ದೀರ್ಘ ಇತಿಹಾಸವಿದೆ. ಜಿಲ್ಲೆಯ ಅನೇಕ ಪ್ರದೇಶಗಳ ಕನ್ನಡ ಭಾಷೆಯ ಸ್ಥಳನಾಮಗಳನ್ನು ವಿಕೃತಗೊಳಿಸಿ ಅದನ್ನೇ ರೂಢಿ ಮಾಡಿಕೊಳ್ಳುವ ಆತಂಕವಿದೆ. ಈ ಹಿನ್ನೆ°ಲೆಯಲ್ಲಿ ಕನ್ನಡ ಸ್ಥಳನಾಮಗಳನ್ನು ಹಾಗೇ ಉಳಿಸಿಕೊಳ್ಳುವಲ್ಲಿ ಕನ್ನಡಿಗರು ಕಟು ಸ್ವಾಭಿಮಾನಿಗಳಾಗಬೇಕು ಎಂದು ನಿವೃತ್ತ ಪ್ರಾಂಶುಪಾಲ ಡಾ| ಬೇ.ಸಿ. ಗೋಪಾಲಕೃಷ್ಣ ಭಟ್ ಹೇಳಿದರು.
ಅವರು ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಬದಿಯಡ್ಕದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ದಸರಾ ನಾಡಹಬ್ಬ ಆಚರಣೆಯ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ಪುಂಡೂರು ಪ್ರಭಾವತಿ ಕೆದಿಲಾಯ ವಹಿಸಿದ್ದರು. ಶಿಕ್ಷಕರಾದ ದಿನೇಶ ಬೊಳಂಬು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಡೆದ ಭಕ್ತಿ ಕವಿಗೋಷ್ಠಿಯಲ್ಲಿ ಅಭಿಜ್ಞಾ ಭಟ್ ಬೊಳಂಬು, ಶಾರದಾ ಭಟ್ ಕಾಡಮನೆ, ವಿರಾಜ್ ಅಡೂರು, ಪ್ರಮೀಳಾ ಟಿ ಕೆ ಚುಳ್ಳಿಕ್ಕಾನ, ನರಸಿಂಹ ಭಟ್ ಏತಡ್ಕ, ಬಿ ಗಣೇಶ್ ಪೈ, ನಿರ್ಮಲಾ ಶೇಷಪ್ಪ ಪೆರ್ಲ, ಪ್ರಭಾವತಿ ಕೆದಿಲಾಯ ಪುಂಡೂರು, ಶ್ರೀಶ ಪಂಜಿತ್ತಡ್ಕ ಮೊದಲಾದವರು ಭಾಗವಹಿಸಿದ್ದರು.
ಶಾರದಾ ಎಸ್. ಭಟ್ ಕಾಡಮನೆ ಸ್ವಾಗತಿಸಿದರು. ಪತ್ರಕರ್ತ ವಿರಾಜ್ ಅಡೂರು ವಂದಿಸಿದರು. ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಶ್ರೀಶಕುಮಾರ ಪಂಜಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಾಹಿತ್ಯಾಸಕ್ತರಲ್ಲಿ ದೈವಭಕ್ತಿ ಪ್ರಚೋದಿತವಾದ ಕವನಗಳು ಹೊಸತನದ ಅನುಭವವನ್ನು ಸೃಷ್ಟಿಸಿದುವು.